ಹಾಸನ: ಮೂಢನಂಬಿಕೆ, ವ್ಯಕ್ತಿಯ ಹಾಗೂ ಸಮಾಜದ ಬೆಳವಣಿಗೆಗೆ ತೊಡಕಾಗುತ್ತದೆ ಎನ್ನುವದನ್ನು ಅರ್ಥ ಮಾಡಿಸುವ ಕೆಲಸ ಆಗಬೇಕಿದೆ ಎಂದು ದೇಶದ ಹಿರಿಯ ಖಭೌತ ವಿಜ್ಞಾನಿ ಪ್ರೊ.ಪಾಲಹಳ್ಳಿ ವಿಶ್ವನಾಥ್ ಕರೆ ನೀಡಿದರು.
ಅವರು, ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್)ಯ 8ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ವಿಜ್ಞಾನದ ಬೆಳವಣಗೆಗಿಂತ ಹೆಚ್ಚಾಗಿ ಮೌಢ್ಯಾಚರಣೆ ಬೆಳವಣಿಗಿಯಾಗಿದೆ. ಭಾರತದಲ್ಲಿ ಭೌತವಿಜ್ಞಾನ ಹೆಚ್ಚಾಗಿ ಬೆಳೆಯಲಿಲ್ಲ. ಅದು ಗ್ರೀಕಿನಲ್ಲಿ ಬೆಳೆದು ಎಲ್ಲೆಡೆ ಪಸರಿಸಿತು. ಆದರೆ ಭಾರತದಲ್ಲಿ ವಿಜ್ಞಾನ ಇತ್ತು, ತತ್ವ ಚಿಂತನೆ ಇತ್ತು ಆದರೆ ಬೆಳೆಯಲಿಲ್ಲ. ಆರುಣಿ, ಬುದ್ಧ ಪ್ರಶ್ನಿಸುವ ಚಿಂತನೆಯನ್ನು ಬಿತ್ತಿದರು ಆದರೆ ಎಲ್ಲವೂ ನಮ್ಮಲ್ಲೇ ಆಗಲೇ ಆಗಿತ್ತು, ನಾವೇ ಎಲ್ಲ ಕಂಡು ಹಿಡಿದೆವು ಎಂದು ಕ್ರೈಂ ಮಾಡುವುದು ತಪ್ಪು ಮಾತ್ರವಲ್ಲ ವಿಜ್ಞಾನಕ್ಕೆ ಮಾಡುವ ಅಪಮಾನ ಎಂದು ಹೇಳಿದ ವಿಜ್ಞಾನಿಗಳು. ಮೂಢನಂಬಿಕೆ ಮತ್ತು ನಂಬಿಕೆ ನಡುವೆ ಸೂಕ್ಷ್ಮವಾದ ಎಳೆ ಇದೆ ಆ ಎಳೆಯನ್ನ ಬೇರ್ಪಡಿಸಿ ಜನರ ನಂಬಿಕೆಯನ್ನು ವೈಜ್ಞಾನಿಕವಾಗಿ ಧೃಢಪಡಿಸಿಕೊಳ್ಳುವ ಜ್ಞಾನ ಕೊಡಬೇಕು. ಮೂಢನಂಬಿಕೆ ವ್ಯಕ್ತಿಯ ಹಾಗೂ ಸಮಾಜದ ಬೆಳವಣಿಗೆಗೆ ತೊಡಕಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಸುವುದು ಮುಖ್ಯವಾಗಿ ಆಗಬೇಕಾದ ಕೆಲಸ ಎಂದರು.
ಬಿಜಿವಿಎಸ್ ಜನರ ನಡುವೇ ಸೌರವ್ಯೂಹದ ರಚನೆಯನ್ನು ಸರಳವಾಗಿ ವಿವರಿಸಿ ಮೂಲಾ ನಕ್ಷತ್ರದ ಅಪಾಯದ ಕಲ್ಪನೆ, ಶನಿ ಮಂಗಳಗಳ ಅನಿಷ್ಟಗಳ ನಂಬಿಕೆ, ರಾಹುಕೇತುಗಳ ಸುಳ್ಳನ್ನು ತಿಳಿಸಿ ಹೇಳಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಬಶೀರ್ ಮಾತನಾಡಿ, ಗ್ರಹಣದ ಸಂದರ್ಭದಲ್ಲಿ ಆಪರೇಷನ್ ಮಾಡಬೇಡಿ ಎಂದು ನನ್ನನ್ನು ರೋಗಿ ಕಡೆಯವರು ಕೇಳಿಕೊಂಡಾಗ ಈಗ ಆಪರೇಷನ್ ಮಾಡದೇ ಇದ್ದರೆ ನಿಮ್ಮ ಕಾಲಿಗೆ ಗ್ರಹಣವಾಗುತ್ತದೆ ಏನು ಮಾಡಲಿ ಮೌಢ್ಯಕ್ಕೆ ಮಾರು ಹೋಗುವಿರ ಕಾಲು ಉಳಿಸಿಕೊಳ್ಳುವಿರ ಎಂದು ಕೇಳಿದೆ. ಗ್ರಹಣಕಾಲದಲ್ಲಿ ಆಪರೇಷನ್ ಮಾಡಿಸಿಕೊಂಡ ಅವರ ಕಾಲು ಈಗ ಚೆನ್ನಾಗಿದೆ ಹಾಗಾಗಿ ಗ್ರಹಣ, ರಾಹುಕಾಲ ಇವಿಲ್ಲವೂ ಮೂಢನಂಬಿಕೆಗಳೇ ಹೊರತು ಒಳ್ಳೆಯ ನಂಬಿಕೆಗಳಲ್ಲ ಇಂತಹವುದನ್ನೆಲ್ಲ ದೂರಮಾಡಿ ವೈಜ್ಞಾನಿಕವಾಗಿ ಯೋಚಿಸುವ ಚಿಂತನೆ ಬೆಳೆಸಬೇಕು ಎಂದರು.
ಹಿರಿಯ ವೈದ್ಯ ಡಾ.ನಾಗೇಶ್ ಮಾತನಾಡಿ, ಅತಿಹೆಚ್ಚು ಮೌಢ್ಯ ಇರುವ ವೈದ್ಯಕೀಯ ಶಾಸ್ತ್ರ ಎಂದರೆ ಮಾನಸಿಕ ವಿಜ್ಞಾನ ಜನ ಹೆಚ್ಚು ಧರ್ಮ ಮತ್ತು ಮೌಢ್ಯ,, ಧರ್ಮ ಮತ್ತು ಕಂದಾಚಾರ ಬೆರೆಸಿಕೊಂಡ ಕಾರಣ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ ಹಾಗಾಗಿ ಧರ್ಮದೊಳಗಿನ ಮೌಢ್ಯ ಹಾಗೂ ಕಂದಾಚಾರ ಹೊರತೆಗೆದು ಧರ್ಮ ಎನ್ನುವ ಧನಾತ್ಮಕ ಜೀವವಿಧಾನವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟೀಚರ್ ಮಾಸ ಪತ್ರಿಕೆಯ ಸಂಪಾದಕ ರಾಮಕೃಷ್ಣ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜಿವಿಎಸ್ ಜಿಲ್ಲಾಧ್ಯಕ್ಷ ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಕ್ಕೆ ಹಸಿರಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್.ಪಾಷಾ, ಸಮಾಜಸೇವಕ ಡಾ.ವೀರಭದ್ರಪ್ಪ ಉಪಸ್ತಿತರಿದ್ದು ಶುಭಕೋರಿದರು.
ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು, ಪ್ರಮೀಳ ಮೊದಲಿಗೆ ಸ್ವಾಗತ ಕೋರಿದರು. ಸಮ್ಮೇಳನದ ಕಡೆಯಲ್ಲಿ ಖಜಾಂಚಿ ಗೋಪಾಲಕೃಷ್ಣ ವಂದಿಸಿದರು. ಜಾನಕಿ ಮತ್ತು ತಂಡ ವಿಜ್ಞಾನ ಗೀತೆಗಳನ್ನು ಹಾಡಿದರು.
[email protected]
Nice