ರಾಮನಗರ: ಬಾಣಂತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ರೂ.6000 ಲಂಚ ಕೇಳಿದ್ದ ಪ್ರಕರಣವೊಂದು ರಾಮನಗರ ಜಿಲ್ಲೆ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ವೈದ್ಯಾಧಿಕಾರಿ ಪ್ರಸೂತಿ ತಜ್ಞೆ ಡಾ. ಶಶಿಕಲಾ ಲಂಚ ಕೇಳಿದ ಆರೋಪ ಎದುರಿಸುತ್ತಿದ್ದಾರೆ.
ಲಂಚದ ಬೇಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿದ್ದು, ಬಿಡದಿಯ ನಿಂಗೇಗೌಡ ದೊಡ್ಡಿಯ ಮಂಜಪ್ಪ ತಮ್ಮ ಪತ್ನಿ ರೂಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರೂಪ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆರೋಗ್ಯವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರ ಬಳಿ ಕೇಳಿದಾಗ ಶಶಿಕಲಾ ರೂ.6 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬುದು ಬಹಿರಂಗಗೊಂಡಿದೆ.
What’s happening @mla_sudhakar ? Caught on cam: #Karnataka PHC doctors suspended for demanding bribe to discharge mother and newborn https://t.co/K5fCqiSG0X @TheSouthfirst @NammaBengaluroo @NammaKarnataka_ @CMofKarnataka @drashwathcn pic.twitter.com/KgoDReDoOB
— Chetana Belagere (@chetanabelagere) November 27, 2022
ಮಗು ಹೆತ್ತ ಬಾಣಂತಿ ರೂಪ ಎನ್ನುವವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯಾಧಿಕಾರಿ ಆರು ಸಾವಿರ ಲಂಚ ಕೇಳಿದ್ದಾರೆ. ಅವರು ಅರು ಸಾವಿರ ರೂಪಾಯಿಗಳಲ್ಲಿ 2,000 ರೂಪಾಯಿ ತೆಗೆದುಕೊಳ್ಳುತ್ತಾರಂತೆ. ಉಳಿದ ನಾಲ್ಕು ಸಾವಿರ ರೂಪಾಯಿಯನ್ನು ಇನ್ನಿಬ್ಬರ ವೈದ್ಯರಿಗೆ ತಲಾ 2,000 ರೂಗಳಂತೆ ಹಂಚುತ್ತಾರಂತೆ ಎನ್ನುವ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ರೂಪ ಅವರ ಪತಿ ಬಳಿ ವೈದ್ಯೆ ಡಾ.ಶಶಿಕಲಾ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಮೇಡಂ, ನನ್ನ ಬಳಿ ಇರೋದೇ 2 ಸಾವಿರ ರೂಪಾಯಿ. ನಾನು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡೋದು, ಇನ್ನೂ ಸಂಬಳ ಕೂಡ ಆಗಿಲ್ಲ. ಇರೋದು 2 ಸಾವಿರ ಮಾತ್ರ, ಹೆಚ್ಚು ಕೊಡಲು ಆಗಲ್ಲ ಮೇಡಂ ಎಂದು ರೂಪಾ ಅವರ ಪತಿ ಹೇಳಿದ್ದಾರೆ.
ಇದಕ್ಕೆ ಒಪ್ಪದ ವೈದ್ಯೆಯರು, ನೀವು ಕೊಡೋ ಹಣವನ್ನು ನಾವು ಎಲ್ಲರಿಗೂ ಹಂಚಬೇಕು. ಪ್ರತಿಯೊಬ್ಬರಿಗೂ ಎರಡು ಸಾವಿರ ರೂ. ಕೊಡಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಲ್ಲ, 6 ಸಾವಿರ ಫಿಕ್ಸ್. 2 ಸಾವಿರ ಅವರಿಗೆ, 2 ಸಾವಿರ ಇವರಿಗೆ, 2 ಸಾವಿರ ನನಗೆ… ಎಂದು ವೈದ್ಯೆ ಹೇಳಿದ್ದಾರೆ. ನೀವು ಕೊಡೋ 2 ಸಾವಿರದಲ್ಲಿ ಎಲ್ಲರಿಗೂ 500 ಕೊಡೋಕೆ ಆಗುತ್ತಾ? ಆಗಲ್ಲ 6 ಸಾವಿರ ಕೊಡಿ, ನಾವು ಕಮ್ಮಿ ತಗೊಂಡ್ರೆ ವಾರ್ಡ್ನಲ್ಲಿ ಬೇರೆಯವರಿಗೆ ಗೊತ್ತಾದ್ರೆ ಎಲ್ಲರೂ ಅಷ್ಟೇ ಕೊಡ್ತಾರೆ… ಎಂದು ಹೇಳಿದ್ದಾರೆ. ಈ ಎಲ್ಲ ದೃಶ್ಯವೂ ರೋಗಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿನ ಲಂಚಾವತಾರದ ದೃಶ್ಯ ವೈರಲ್ ಆಗಿದೆ.
ಆಸ್ಪತ್ರೆಗೆ ಯಾರಾದರೂ ರೋಗಿಗಳು ಬಂದ ಅನೇಕ ವೈದ್ಯರು ಮೊದಲು ಹಣ ಪಾವತಿ ಮಾಡಿದ್ದೀರಾ ಎಂದು ಕೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರ ಜೀವ ಉಳಿಸುವ ಕೆಲವು ವೈದ್ಯರುಗಳು ಲಂಚ ಬೇಡಿಕೆ ಇಡುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ವೈದ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಳ್ಳಿಗಾಡಿನಲ್ಲಿ ಇಂತಹ ಸಂಸ್ಯೆಗಳು ಪ್ರತಿನಿತ್ಯ ಎಂಬಂತೆ ಆಗಿದೆ. ಇಂತಹ ದಂಧೆಗಳು ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವೈದ್ಯರ ಅಮಾನತು
ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಮನಗರ ಜಿಲ್ಲೆ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಮನಗರ ಡಿಎಚ್ಒ ಕಾಂತರಾಜು, ಬಾಣಂತಿ ರೂಪ ಎಂಬುವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಮತ್ತೋಬ್ಬ ವೈದ್ಯನ ಹೆಸರು ಉಲ್ಲೇಖವಾಗಿದ್ದು, ಆ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.