ಟಿಪ್ಪು ದೇಗುಲ ದಾಳಿಯೇ ಒಂದು ಸಂಭ್ರಮ..!

ನವೀನ್ ಸೂರಿಂಜೆ

ಟಿಪ್ಪು ದಾಳಿ ಮಾಡಿದ್ದಾನೆ ಎಂದು ಹೇಳಲಾಗುವ ದೇವಸ್ಥಾನಗಳ ಪೈಕಿ ಇತಿಹಾಸ ಪ್ರಸಿದ್ದ ಕಾಸರಗೋಡಿನ  ಮದೂರು ಗಣಪತಿ ದೇವಸ್ಥಾನವೂ ಒಂದು. ಇಲ್ಲಿ ಅಪ್ಪ ಪ್ರಸಾದವನ್ನು ಕೊಡುತ್ತಾರೆ. ಎಷ್ಟು ರುಚಿಕರ ಅಪ್ಪ ಪ್ರಸಾದವೆಂದರೆ ತಿಂದರೆ ತಿಂತಾನೇ ಇರಬೇಕು ಅನ್ನಿಸುವಷ್ಟು. ನಾನು ಪ್ರಸಾದಕ್ಕಾಗಿಯೇ ಅದೆಷ್ಟು ಬಾರಿ ಬೈಕಿನಲ್ಲಿ ಕೇರಳದ ಈ ದೇವಸ್ಥಾನಕ್ಕೆ ಹೋಗಿದ್ದೇನೋ ಗೊತ್ತಿಲ್ಲ. ಇದು ಜನಪದರ ಪ್ರಕಾರ ಟಿಪ್ಪು ಆಕ್ರಮಣಕ್ಕೆ ಒಳಗಾದ ದೇವಸ್ಥಾನ.

ಮಲಬಾರಿನ ಅರಸರು, ಕುಂಬಳೆಯರ ಅರಸರು ಬ್ರಿಟೀಷರ ಪರವಾಗಿದ್ದರು ಮತ್ತು ದಲಿತ, ಬಿಲ್ಲವ ಸಮುದಾಯವನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂಬ ಕೋಪ ಟಿಪ್ಪುವಿಗಿತ್ತು. ಆವಾಗೆಲ್ಲಾ ಟಿಪ್ಪು ಈ ಅರಸರ ವಿರುದ್ದ ಸಮರ ಸಾರಿ ಬುದ್ದಿ ಕಲಿಸುತ್ತಿದ್ದ. ಕುಂಬಳೆ ಅರಸನಂತೂ ಬ್ರಿಟೀಷರ ಪರವಾಗಿದ್ದ ಎಂಬ ಕಾರಣಕ್ಕೆ ಟಿಪ್ಪು ಆತನನ್ನು ಓಡಿಸಿದ್ದ. ಇಷ್ಟಾದರೂ ದೇವರ ಸ್ವಂತ ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ಈಗಿನ ಕೇರಳದ ಒಂದೇ ಒಂದು ದೇವಸ್ಥಾನವನ್ನು ಆಗ ಟಿಪ್ಪು ದ್ವಂಸ ಮಾಡಲಿಲ್ಲ. ಕೇರಳದ (ಆಗ ಕರ್ನಾಟಕ) ಕುಂಬಳೆ ಸೀಮೆಗೆ ದಾಳಿ ಮಾಡಿದ್ದ ಕೊಡಗಿನ ಅರಸ ರಾಜೇಂದ್ರ ಒಡೆಯ ಅಲ್ಲಿನ ದೇವಸ್ಥಾನಗಳನ್ನು ಲೂಟಿ ಮಾಡಿದ್ದ.

ಮದೂರು ಗಣಪತಿ ದೇವಸ್ಥಾನಕ್ಕೆ ಟಿಪ್ಪು ದಾಳಿ ಮಾಡಿದ್ದ ಎಂದು ಜನಪದರು ಹೇಳುತ್ತಾರೆ. ಆದರೆ ಜನರ ಬಾಯಿಯಿಂದ ಬಾಯಿಗೆ ಹೊರಟ ಈ ಕತೆಯಲ್ಲಿ ಟಿಪ್ಪು ವಿರುದ್ದ ಆಕ್ರೋಶವಿಲ್ಲ. ಬದಲಿಗೆ ದಾಳಿಯನ್ನೂ ಸಂಭ್ರಮಿಸುತ್ತಾರೆ. ಅದು ಹೇಗೆಂದರೆ, ಸುಲ್ತಾನ್ ಟಿಪ್ಪು ಮದೂರು ದೇವಸ್ಥಾನಕ್ಕೆ ದಾಳಿ ಮಾಡಿದಾಗ ಇಲ್ಲಿನ ಪ್ರಸಾದ ತಿಂದು ನೀರು ಕುಡಿದ ಬಳಿಕ ಮನಃ ಪರಿವರ್ತನೆ ಹೊಂದಿ, ದಾಳಿ ಮಾಡದೇ ವಾಪಸ್ ಹೊರಟ ಎಂದು ಕತೆ ಹೇಳುತ್ತಾರೆ. ದೇವಸ್ಥಾನದಲ್ಲೂ ಅದನ್ನೇ ಬರೆಯಲಾಗಿದೆ. ದಾಳಿಗೆ ಸಾಕ್ಷಿಯಾಗಿ ದೇವಸ್ಥಾನದ ಛಾಚಣಿಯಲ್ಲಿ ಟಿಪ್ಪು ಖಡ್ಗದಲ್ಲಿ ತುಂಡರಿಸಿದ ಜಾಗವನ್ನು ಮುಗ್ದವಾಗಿ ತೋರಿಸುತ್ತಾರೆ. ಹಾರೆ, ಪಿಕ್ಕಾಸು, ಆನೆಗಳನ್ನು ಬಳಸಿ ದೇವಸ್ಥಾನದ ಕಟ್ಟಡವನ್ನು ಉರುಳಿಸಬೇಕೇ ವಿನಹ ಖಡ್ಗದಿಂದ ಕಟ್ಟಡ ಉರುಳಿಸಲು ಸಾಧ್ಯವಾಗುತ್ತೋ ಎಂದು ಜನ ಯೋಚಿಸಲ್ಲ. ಹಾಗಂತ ಇದು ಭಕ್ತರು ಟಿಪ್ಪು ವಿರುದ್ದ ಮಾಡುತ್ತಿರುವ ಆರೋಪವಲ್ಲ. ಟಿಪ್ಪು ಮದೂರು ದೇವಸ್ಥಾನಕ್ಕೆ ಮನಸೋತಿದ್ದ ಎಂದು ಸಂಭ್ರಮಿಸಲು ಈ ಕತೆಯನ್ನು ಹೇಳುತ್ತಾರೆ.

ನನ್ನ ಪ್ರಕಾರ, ವಾಸ್ತವವಾಗಿ ಟಿಪ್ಪು ಈ ದೇವಸ್ಥಾನಕ್ಕೆ ದಾಳಿ ಮಾಡಲು ಬಂದಾಗ ಪ್ರಸಾದಕ್ಕೆ ಮನಸೋತು ವಾಪಸ್ ಹೋಗಿರುವ ಸಾಧ್ಯತೆಗಳು ಕಡಿಮೆ. ಹಿಂದೂ ರಾಜರೇ ಆಗಿರುವ ಮರಾಠರು, ಕೊಡವ ರಾಜರೇ ಅವರು ನಂಬಿರುವ ದೇವರ ದೇವಸ್ಥಾನ ಲೂಟಿ ಮಾಡಿರುವಾಗ, ಇಸ್ಲಾಂ ಧರ್ಮಕ್ಕೆ ಸೇರಿದ ಟಿಪ್ಪು ಪ್ರಸಾದಕ್ಕೆ ಮರಳಾಗಿ/ಹೆದರಿ ವಾಪಸ್ ಹೋಗುತ್ತಾನೆಯೇ ? ನಿಜ ಏನೆಂದರೆ, ಟಿಪ್ಪುವಿಗೆ ಜಾತಿ ಪ್ರಜ್ಞೆ ಅಗಾಧವಾಗಿತ್ತು. ಮದೂರು ಗಣಪತಿ ದೇವಸ್ಥಾನವು ಮೋಗೇರ ಸಮುದಾಯಕ್ಕೆ ಸೇರಿದ ಮದುರೆ ಎಂಬ ಮಹಿಳೆ ಸ್ಥಾಪನೆ ಮಾಡಿದ್ದು, ಈಗ ಬ್ರಾಹ್ಮಣರ ವಶದಲ್ಲಿದೆ. ದಲಿತ ಮಹಿಳೆ ಮದುರೆ ದೇವಸ್ಥಾನ ಸ್ಥಾಪನೆ ಮಾಡಿದ್ದರಿಂದಲೇ ಈ ದೇವಸ್ಥಾನಕ್ಕೆ ಮದೂರು ದೇವಸ್ಥಾನ ಎಂಬ ಹೆಸರು ಬಂತು ಎಂಬುದು ಟಿಪ್ಪುಗೆ ಮನವರಿಕೆ ಆಗಿದ್ದರಿಂದ ದಾಳಿಯನ್ನು ಮಾಡದೇ ವಾಪಸ್ ಹೋಗಿರಬಹುದು ಎಂಬುದು ನನ್ನ ಗ್ರಹಿಕೆ. ಯಾಕೆಂದರೆ ಈ ರೀತಿ ದೇವಸ್ಥಾನ, ಚರ್ಚ್ ನ ಇತಿಹಾಸ ತಿಳಿದ ಬಳಿಕ ದಾಳಿಗೆ ಬಂದ ಟಿಪ್ಪು ವಾಪಸ್ ಹೋದ ಹಲವು ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ. ಇನ್ನೊಂದು ವಾದದ ಪ್ರಕಾರ ಟಿಪ್ಪು ಮರಣದ ಬಳಿಕ ಟಿಪ್ಪುವಿನ ಶೌರ್ಯ, ಸಾಧನೆ, ಉಪಕಾರಗಳು ಜನರಿಂದ ಹೊಗಳಲ್ಪಡುತ್ತದೆ. ಲಾವಣಿಗಳ ಮೂಲಕ ಹಾಡಲ್ಪಡುತ್ತದೆ. ಆ ಹೊಗಳಿಕೆಗಳಲ್ಲಿ ನಮ್ಮೂರ ದೇವಸ್ಥಾನದ ಪವಾಡವೂ ಸೇರಿರಲಿ ಎಂದು ಟಿಪ್ಪುವಿನಂತಹ ಟಿಪ್ಪುವಿಗೇ ಪವಾಡ ತೋರಿಸಿದ ದೇವಸ್ಥಾನವಿದು ಎಂದೋ, ಟಿಪ್ಪು ಭೇಟಿ ನೀಡಿ ತೀರ್ಥ ಪ್ರಸಾದ ಸೇವಿಸಿ ಹೋಗಿದ್ದ ದೇವಸ್ಥಾನವೆಂದೋ ಕತೆ ಕಟ್ಟಿರಬಹುದಾದ ಸಾಧ್ಯತೆ ಇದೆ.

ಏನೇ ಇದ್ದರೂ ಟಿಪ್ಪು ಯಾವ ಧಾರ್ಮಿಕ ಕೇಂದ್ರಗಳನ್ನು ಒಡೆದು ಹಾಕಿದ್ದ ಎಂಬುದಕ್ಕೆ ಸಾಕ್ಷ್ಯಗಳು ಸಿಗುತ್ತಿಲ್ಲ. ದಾಳಿಗೆ ಸಿಗುವ ಕುರುಹುಗಳು ಮತ್ತು ಕತೆಗಳೆಲ್ಲವೂ ಟಿಪ್ಪು ಮತ್ತು ದೇವಸ್ಥಾನದ ಪವಾಡಗಳನ್ನು ಹೇಳಿ ಸಂಭ್ರಮಿಸುವಂತದ್ದೇ ಹೊರತು ಟಿಪ್ಪು ವಿರುದ್ದದ ಆರೋಪಗಳಲ್ಲ.

Donate Janashakthi Media

Leave a Reply

Your email address will not be published. Required fields are marked *