ಕೈಗಾರಿಕೆಗಳಲ್ಲಿನ ಹೊಸ ಬದಲಾವಣೆಗಳು ಮತ್ತು ಕಾರ್ಮಿಕರು

ಕೆ.ಎನ್.ಉಮೇಶ್

ಜಗತ್ತಿನಾದ್ಯಂತ ಬಂಡವಾಳಾಹಿಯು ಸನ್ನದ್ದಾಗುತ್ತಿರುವ ಕೈಗಾರಿಕಾ ಕ್ರಾಂತಿ 4.0, IR4 ಗಾಗಿ ರಾಷ್ಟ್ರದ ಹಾಗು ರಾಜ್ಯದ ಕೈಗಾರಿಕ ರಂಗವು ಸಹಾ ಸಜ್ಜುಗೊಳ್ಳುತ್ತಿದೆ. ಅದರಂತೆ 2030 ರ ವೇಳೆಗೆ ತಯಾರಿಕಾ ವಲಯದಲ್ಲಿ ಇಂಡ್ರಸ್ಟ್ರೀಯಲ್ ಇಂಟರ್‌ನೆಟ್ ಆಫ್ ಥಿಂಗ್ಸ್ (IIoT) ಮತ್ತು ರೋಬೊಟಿಕ್ಸ್ ಹಾಗು COBATS ಆಧಾರಿತ ಉತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅದಕ್ಕಾಗಿ ಹಾಲಿ ITI ತರಬೇತಿ ಆಧಾರಿತ ಕಾರ್ಮಿಕರ ಜಾಗದಲ್ಲಿ ಕನಿಷ್ಟ ಡಿಪ್ಲೋಮಾ ಅಥವಾ ಕೃತಕ ಬುದ್ದಿಮತ್ತೆ ಹಾಗು ರೋಬೊಟಿಕ್ಸ್ ಇಂಜನಿಯರಿಂಗ್ ಅಥವಾ ಇತರೆ ಇಂಜನಿಯರಿಂಗ್ ಪದವಿಧರರ ನೇಮಕಾತಿಯನ್ನು ಉತ್ತೇಜಿಸಲಾಗುತ್ತಿದೆ. ಅವರನ್ನು ಸಹಾ ಬಹುತೇಕ ನಿಶ್ಚಿತ ಕಾಲಾವಧಿಯ ಕಾರ್ಮಿಕರನ್ನಾಗಿ (FTE) ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಅನುವುಗೊಳಿಸಲು ಹಾಲಿ ಕಾಯಂ ಕಾರ್ಮಿಕರನ್ನು ಸ್ವಯಂ ನಿವೃತ್ತಿ ಮೂಲಕ ಹೊರದಬ್ಬಲಾಗುತ್ತಿದೆ. ಕಾರ್ಖಾನೆಗಳ ವಿಲೀನ, ಅವಿಲೀನ, ಮುಚ್ಚುವಿಕೆ ಅಥವಾ ಲೇಆಫ್, ರಿಟ್ರೇಚಮೆಂಟ್ ಮೂಲಕವು ಖಾಯಂ ಕಾರ್ಮಿಕರನ್ನು ಹೊರಹಾಕಲಾಗುತ್ತಿದೆ. ಆ ಮೂಲಕ ನಿಶ್ಚಿತ ಕಾಲಾವಧಿಯ ಕಾರ್ಮಿಕರ ನೇಮಕಕ್ಕೆ ಅನುವುಗೊಳಿಸಲಾಗುತ್ತಿದೆ. ಕಾಯಂ ಕಾರ್ಮಿಕರು ಮಾತ್ರವಲ್ಲದೆ ಗುತ್ತಿಗೆ ಕಾರ್ಮಿಕರನ್ನು ಸಹಾ ಹೊರ ದಬ್ಬಲಾಗುತ್ತಿದೆ.

ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೌಲ್ಯ ಸೇರ್ಪಡೆಗೊಳಿಸಲು ಕೆಲಸಗಳನ್ನು ಹೊರಗುತ್ತಿಗೆ ನೀಡಲು, ರಿಮೋಟ್ ವರ್ಕಿಂಗ್ (ಕೆಲಸದ ಸ್ಥಳವನ್ನು ಮನೆಯಿಂದಲೇ ಕೆಲಸ ಮಾಡುವವರನ್ನು) ನಿರ್ವಹಿಸಲು ಮುಂದಾಗುತ್ತಿದೆ. ಆ ಮೂಲಕ ಮಿಗುತಾಯ ಹೆಚ್ಚಿಸಿಕೊಳ್ಳಲು ಬಂಡವಾಳವು ಯತ್ನಿಸಿದೆ. ರಿಮೋಟ್ ವರ್ಕಿಂಗ್ (ಮನೆಯಿಂದಲೆ ಕೆಲಸ) ವಿಧಾನವು ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ತೀವ್ರಗೊಂಡಿದೆ.

ಮೂರು ದಶಕಗಳ ನವಉದಾರವಾದ: ಖಾಸಗೀಕರಣದ ನೂತನ ಹಾದಿ – NMP:

ನಮ್ಮ ದೇಶದ ಹಾಗೂ ರಾಜ್ಯವು ನವಉದಾರವಾದಿ ನೀತಿಗಳಿಗೆ ತೆರದುಕೊಂಡು ಮೂರು ದಶಕಗಳನ್ನು ಪೂರೈಸುತ್ತಿರುವಾಗ, ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯು ಸಂರಚನಾತ್ಮಕ ಬಿಕ್ಕಟ್ಟಿಗೆ (Structural Crisis) ಒಳಪಟ್ಟಿದೆ. ಇದರಿಂದ ಹೊರ ಬರಲು ಸಾರ್ವಜನಿಕ ಆಸ್ತಿಯನ್ನು, ಸಾರ್ವಜನಿಕ ಉದ್ದಿಮೆಗಳನ್ನು ನಗದಿಕರಿಸಲು ರಾಷ್ಟ್ರೀಯ ನಗದಿಕರಣ ಕೊಳುವೆ ಮಾರ್ಗ (NMP) ವನ್ನು ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ರೂಪಿಸಿ ಜಾರಿಗೆ ಮುಂದಾಗಿದೆ.

ಕೇಂದ್ರ ಎನ್‌ಡಿಎ ಸರ್ಕಾರ 2ನೇ ಅವಧಿಯ 100 ದಿನಗಳಲ್ಲಿ 46 ಸಾರ್ವಜನಿಕ ಉದ್ದಿಮೆಗಳನ್ನು ಮಾರುವ ಅಥವಾ ಖಾಸಗೀಕರಿಸುವ ನೀತಿ ಆಯೋಗದ ಶಿಫಾರಸ್ಸಿನ ಆಧಾರಿತ ಗುರಿ ಸಾಧಿಸಲಾಗದ ಕಾರಣ  ರಾಷ್ಟ್ರೀಯ  ನಗದಿಕರಣ ಪೈಪ್‌ಲೈನ್ (NMP) ಅನ್ನು ರೂಪಿಸಿ ಜಾರಿಗೆ ಮುಂದಾಗಿದೆ. ಅದರ ಜಾರಿಗಾಗಿ  ರಾಷ್ಟ್ರೀಯ ಭೂ ನಗದೀಕರಣ ನಿಗಮವನ್ನು ಸ್ಥಾಪಿಸಿದೆ.

NMP ಮೂಲಕ 2022 ರಿಂದ 2025 ರೊಳಗೆ

  • ಭಾರತದ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿಯ 26,700 ಕಿ.ಮಿ ರಸ್ತೆಯನ್ನು 1.6 ಲಕ್ಷ ಕೋಟಿಗಳಿಗೆ ನಗದಿಕರಿಸಲು ಮುಂದಾಗಿದೆ. ಇದು ಒಟ್ಟು  ರಾಷ್ಟ್ರೀಯ ಹೆದ್ದಾರಿಗಳ ಶೇಕಡ 22 ರಷ್ಟಾಗಿದೆ.
  • 400 ರೈಲು ನಿಲ್ದಾಣಗಳು, 90 ಪ್ಯಾಸೆಂಜರ್ ಟ್ರೈನ್‌ಗಳು, 1,400 ಕಿಮಿಗಳ ಒಂದು ಮಾರ್ಗದ ರೈಲ್ವೆ ಟ್ರಾಕ್, 741 ಕಿಮಿ ಕೊಂಕಣ ರೈಲ್ವೆ, 15 ರೈಲ್ವೆ ಸ್ಟೇಡಿಯಂಗಳು ಮತ್ತು ಆಯ್ದ ರೈಲ್ವೆ ಕಾಲೋನಿಗಳು, 265 ಗೂಡ್ಸ್ ಶೆಡ್‌ಗಳು, 4 ಪರ್ವತ ರೈಲು ಸೇರಿ ಒಟ್ಟು 1,52,496 ಕೋಟಿ ರೂಗಳ ಆಸ್ತಿ ನಗದಿಕರಣಕ್ಕೆ ಮುಂದಾಗಿದೆ.
  • 137 ಮುಖ್ಯ ವಿಮಾನ ನಿಲ್ದಾಣಗಳಲ್ಲಿ 27 ವಿಮಾನ ನಿಲ್ದಾಣಗಳನ್ನು 20,782 ಕೋಟಿ ರೂಗಳಿಗೆ ನಗದೀಕರಿಸಲು, ಉಳಿದಂತೆ ಮುಂಬಯಿ, ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಹೊಂದಿರುವ ಪಾಲನ್ನು ವಿಕ್ರಯಿಸಲು ಮುಂದಾಗಿದೆ.
  • ಪವರ್ ಗ್ರಿಡ್ ನಿಗಮ ಹೊಂದಿರುವ 28608 ಸರ್ಕ್ಯುಟ್ ಕಿಮಿ ಪ್ರಸರಣ ಲೈನ್‌ಗಳು ಮತ್ತು ಸಂಬಂಧಿತ 262 ಸಬ್ ಸ್ಟೇಷನ್ಸ್ಗಳನ್ನು 42500 ಕೋಟಿ ರೂಗಳಿಗೆ ನಗದೀಕರಿಸಲು ಮುಂದಾಗಿದೆ.
  • 28747 ಕೋಟಿ ರೂಗಳ 160 ಕಲ್ಲಿದ್ದಲು ಗಣಿಗಳನ್ನು ನಗದೀಕರಿಸಲು ಮುಂದಾಗಿದೆ.
  • 35100 ಕೋಟಿ ರೂಗಳ ಟೆಲಿಕಾಂ ಆಸ್ತಿಗಳನ್ನು ನಗದೀಕರಿಸಲು ಗುರುತಿಸಿದೆ. ಇದರಲ್ಲಿ BSNL & MTNL ಒಡೆತನದ 14197 ಟೆಲಿಕಾಂ ಟವರ್‌ಗಳು, 2.86 ಕಿಮಿಗಳ ಭಾರತ್ ನೆಟ್ ಆಫ್ಟಿಕಲ್ ಫೈಬರ್‌ಗಳನ್ನು ಒಳಗೊಂಡಿದೆ.
  • ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಮತ್ತು  ರಾಷ್ಟ್ರೀಯ ಧರ್ಮಲ್ ವಿದ್ಯುತ್ ನಿಗಮದ ಒಡೆತನದ 6 ಗಿಗಾ ವ್ಯಾಟ್ ಜಲ ಮತ್ತು ನವೀಕರಿಸಬಹುದಾದ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದನ ಸಾಮರ್ಥ್ಯವನ್ನು 39832 ಕೋಟಿ ರೂಗಳಿಗೆ ನಗದೀಕರಿಸಲು ಮುಂದಾಗಿದೆ.
  • ಭಾರತೀಯ ತೈಲ ನಿಗಮ ನಿಯಮಿತ (IOCL) ಹಿಂದುಸ್ಥಾನ ತೈಲ ನಿಗಮ ನಿಯಮಿತ (HPCL), ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (GAIL) ಒಡೆತನದ 3930 ಕಿ.ಮೀ.ಗಳ ಪೆಟ್ರೋಲಿಯಂ ಕೊಳವೆ ಮತ್ತು ಉತ್ಪನ್ನಗಳನ್ನು 22,503 ಕೋಟಿ ರೂಗಳಿಗೆ ನಗದೀಕರಿಸಲು ಮುಂದಾಗಿದೆ.
  • 24,462 ಕೋಟಿ ರೂಗಳ 8154 ಕಿ.ಮೀ. ನ್ಯಾಚುರಲ್ ಗ್ಯಾಸ್ ಕೊಳವೆ ಮಾರ್ಗಗಳನ್ನು ನಗದೀಕರಿಸಲು ಮುಂದಾಗಿದೆ.
  • 9 ಪ್ರಮುಖ ಬಂದರುಗಳ 31 ಯೋಜನೆಗಳನ್ನು 12828 ಕೋಟಿ ರೂಗಳಿಗೆ ನಗದೀಕರಿಸಲು ಮುಂದಾಗಿದೆ.
  • ಭಾರತದ ಆಹಾರ ನಿಗಮ (FCI) ಮತ್ತು ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್ ಹೊಂದಿರುವ 210 ಲಕ್ಷ ಟನ್ ಶೇಖರಣ ಸಾಮರ್ಥ್ಯದ ಶೇಕಡ 39 ರಷ್ಟನ್ನು 28900 ಕೋಟಿ ರೂಗಳಿಗೆ ನಗದೀಕರಿಸಲು ಮುಂದಾಗಿದೆ.
  • ರಾಷ್ಟ್ರ ರಾಜಧಾನಿಯ 7 ಗೃಹ ಕಾಲೋನಿಗಳನ್ನು ಮತ್ತು 8 ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ಗಳನ್ನು ನಗದೀಕರಿಸಲು ಮುಂದಾಗಿದೆ.
  • 11,450 ಕೋಟಿ ರೂಗಳಿಗೆ ಜವಾಹರ್‌ಲಾಲ್ ನೆಹರು ಕ್ರೀಡಾಂಗಣ ಮತ್ತು 3 ಭಾರತದ ಕ್ರೀಡಾ ಪ್ರಾಧಿಕಾರದ ಆಸ್ತಿಗಳಾದ ಒಂದು  ರಾಷ್ಟ್ರೀಯ ಸ್ಟೇಡಿಯಂ ಮತ್ತು ಬೆಂಗಳೂರು ಮತ್ತು ಜಿಕರ್‌ಪುರ್‌ನ ಒಟ್ಟು 2 ಪ್ರಾದೇಶಿಕ ಕೇಂದ್ರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ನಗದೀಕರಿಸಲು ಮುಂದಾಗಿದೆ.

ಈ ನಗದೀಕರಣಕ್ಕಾಗಿ ಆಸ್ತಿ ಮೌಲ್ಯಗಳನ್ನು ಅಪಮೌಲ್ಯಗೊಳಿಸಿ, ಕಡಿಮೆ ದರ ನಿಗದಿಪಡಿಸಿ, ವಾರ್ಷಿಕ ಗುರಿಯೊಂದಿಗೆ ನಿರ್ದಿಷ್ಟ ಗುರಿಗಳನ್ನು ಇರಿಸಿಕೊಂಡಿದೆ. ಇದೇ ರೀತಿ ನಗದೀಕರಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಖಾಸಗೀಕರಣದ ನೂತನ ಅವತಾರವಾಗಿ ಆಸ್ತಿ ನಗದೀಕರಣ ಕೊಳವೆ ಮಾರ್ಗವನ್ನು ಕೇಂದ್ರ ಸರ್ಕಾರ ರೂಪಿಸಿ ಜಾರಿಗೊಳಿಸುತ್ತಿದೆ.

ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಅಡಿ (NMP) ರಾಜ್ಯದಲ್ಲಿ 21228.54 ಕೋಟಿ ರೂಗಳ ಸಾರ್ವಜನಿಕ ಉದ್ದಿಮೆಗಳ ಆಸ್ತಿಗಳ ನಗದೀಕರಣಕ್ಕೆ ಯೋಜಿಸಿದೆ. ವಿದ್ಯುತ್ ಪ್ರಸರಣ ಮತ್ತು ವಿತರಣೆ ಸಂಸ್ಥೆಗಳ 7161.70 ಕೋಟಿ ರೂ, ಕೆ.ಎಸ್.ಆರ್.ಟಿ.ಸಿ.ಯ 10413.33 ಕೋಟಿ ರೂ, ವೇರ್ ಹೌಸಿಂಗ್ (ಉಗ್ರಾಣ)ನ 1636.12 ಕೋಟಿ ರೂ, ಇತರೆ ಸಂಸ್ಥೆಗಳ 2017.39 ಕೋಟಿ ರೂಗಳ ಆಸ್ತಿ ನಗರೀಕರಣದ ಅವಕಾಶ ಗುರುತಿಸಿದೆ.

ಭಾರತೀಯ ರಕ್ಷಣಾ ಇಲಾಖೆಯ ಸೈನ್ಯಕ್ಕೂ ಸಹಾ ನಿಶ್ಚಿತ ಕಾಲಾವಧಿಯ ಸೈನಿಕರ ನೇಮಕಕ್ಕೆ ಅಗ್ನಿಪಥ ಯೋಜನೆ ರೂಪಿಸಿ ಅಗ್ನಿವೀರರ ನೇಮಕಾತಿ ಪ್ರಾರಂಭಿಸಿದೆ. ಭಾರತ ರಕ್ಷಣೆಯನ್ನು ಲೆಕ್ಕಿಸದೆ ಇಂತಹ ಯೋಜನೆ ರೂಪಿಸಿ 4 ವರ್ಷ ತರಬೇತಿ ಸೇವೆ ನಂತರ ಪಿಂಚಣಿ ಸಹಾ ಇಲ್ಲದೆ, ಪರಿಹಾರ ನೀಡಿ ಹೊರದೂಡುವ ಯೋಜನೆಯಾಗಿದೆ. ತರಬೇತಿ ಪಡೆದು ಬಂದವರು ಬದುಕಿಗಾಗಿ ಸೆಕ್ಯೂರಿಟಿ ಗಾರ್ಡ್ಗಳು, ಗನ್‌ಮ್ಯಾನ್ ಅಥವಾ ಮಾಲೀಕರ ಬೌನ್ಸರ್‌ಗಳಾಗುವ ಎಲ್ಲಾ ಸಾಧ್ಯತೆಗಳಿವೆ.

ಜೀವ ವಿಮಾ ಕಂಪನಿಯ ಐಪಿಒ ಮಾರಾಟಕ್ಕ ಮುಂದಾಗಿದೆ. ಬ್ಯಾಂಕ್‌ಗಳ ವಿಲೀನ ಮುಂದುವರಿಸಿದೆ. ರಕ್ಷಣ ಇಲಾಖೆಯ 47 ರಕ್ಷಣ ಸಾಮಾಗ್ರಿ ಉತ್ಪಾದನೆಯ ಆರ್ಡಿನೆನ್ಸ್ ಕಾರ್ಖಾನೆಗಳನ್ನು ರಕ್ಷಣಾ ಇಲಾಖೆಯ ಸರ್ಕಾರದ ನೇರ ಒಡೆತನದ ಬದಲು, ನಿಗಮಗಳಾಗಿ ಮಾರ್ಪಡಿಸಿದೆ. ಅವುಗಳೊಂದಿಗೆ ಅವುಗಳ ನೌಕರರ ಮಕ್ಕಳಿಗಾಗಿ ಸ್ಥಾಪಿಸಿದ್ದ ಕೇಂದ್ರೀಯ ವಿದ್ಯಾಲಯಗಳನ್ನು ಮುಚ್ಚಿದೆ.

ಕಾರ್ಮಿಕರ ಪಾಲು ಕುಸಿತ – ಲಾಭದ ಪಾಲು ಜಿಗಿತ:

ಭಾರತದಲ್ಲಿ 1981-82 ರಲ್ಲಿ ಪ್ರತಿ 100 ರೂಗಳ ಒಟ್ಟು ಮೌಲ್ಯ ವರ್ಧನೆಯಲ್ಲಿ ಶೇಕಡಾ 30.27 ರಷ್ಟಿದ್ದ ಕಾರ್ಮಿಕರ ವೇತನದ ಪಾಲು 2017-18ರಲ್ಲಿ ಶೇಕಡಾ 15.67 ಕ್ಕೆ ಇಳಿದಿದ್ದರೆ, ಮಾಲೀಕರ ಲಾಭದ ಪಾಲು ಶೇಕಡಾ 46.68 ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಸಹಾ 2018-19 ರಲ್ಲಿ ಪ್ರತಿ 100 ರೂಗಳ ನಿವ್ವಳ ಮೌಲ್ಯವರ್ಧನೆಯಲ್ಲಿ ಶೇ19.17 ರಷ್ಟಿದ್ದ ಕಾರ್ಮಿಕರ ವೇತನದ ಪಾಲು 2019-20ರಲ್ಲಿ ಶೇ 15.04ಕ್ಕೆ ಕುಸಿದಿದೆ. ಆದರೆ ಮಾಲಿಕರ ಲಾಭದ ಪಾಲು ಶೇ 41.98ರಿಂದ ಶೇ 46.11ಕ್ಕೆ ಜಿಗಿದಿದೆ. ರಾಜ್ಯದ ಮಾಲೀಕರ ಸಂಘಗಳು ಕಾರ್ಮಿಕರ ವೇತನ ಪಾಲು ಶೇ 9ಕ್ಕೆ ಇಳಿಸಬೇಕೆಂದು ವಾದ ಮಂಡಿಸುತ್ತಿವೆ. ಈ ವಾದಕ್ಕೆ ಪೂರಕವಾಗಿ ಈ ಬಾರಿ ವಿವಿಧ ಅಧಿಸೂಚಿತ ಉದ್ಯೋಗಗಳ ಕನಿಷ್ಠ ವೇತನ ಪರಿಷ್ಕರಣೆ ವೇಳೆ ಇಂದಿನ ಬೆಲೆ ಏರಿಕೆ, ಆಹಾರ ಕ್ಯಾಲರಿ ಬಳಕೆ ಆಧಾರಿತ ಖರ್ಚು ಮುಂತಾದ ಲೆಕ್ಕಾಚಾರ ಮತ್ತು ರಪ್ತಕೋಸ್ ತೀರ್ಪಿನ ಆಧಾರಿತವಾಗಿ ಕನಿಷ್ಠ ವೇತನ ನಿಗದಿಯ ಬದಲು ಶೇಖಡಾ 10 ಸರಾಸರಿ ಹೆಚ್ಚಳದ ಆಧಾರದಲ್ಲಿ ಕನಿಷ್ಠ ವೇತನ ನಿಗದಿಗೆ ಕ್ರಮವಹಿಸಿದೆ. ಇದನ್ನು ರಾಜ್ಯದ ಕೇಂದ್ರ ಕಾರ್ಮಿಕ ಸಂಘಟನೆಗಳು ವಿರೋಧಿಸಿ ಮಾಸಿಕ ರೂ. 36,000 ಕನಿಷ್ಠ ವೇತನ ನಿಗದಿಗೆ ಒತ್ತಾಯಿಸಿವೆ.

ಕೋವಿಡ್ ಲಾಕ್ಡೌನ್: ಏಕಸ್ವಾಮ್ಯತೆಯೆಡೆಗೆ ವ್ಯಾಪಾರ:

ಈ ಕಾಲಾವಧಿಯಲ್ಲಿ ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ಕೆಲವು ವ್ಯಾಪಾರ, ವಾಣಿಜ್ಯ ಸಂಸ್ಥೆಗಳು ಹಾಗು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಅಂತಹದರಲ್ಲಿ ಕೆಲವನ್ನು ರಿಲಿಯನ್ಸ್ ಕೊಂಡುಕೊಳ್ಳುವ ಪ್ರಕ್ರಿಯೆ ನಡೆದಿದೆ. ಫೂರ‍್ಸ್ ಸಮೂಹದ ಬಿಗ್ ಬಜಾರ್, ಸೆಂಟ್ರಲ್ ಮಾಲ್‌ಗಳನ್ನು ಹಾಗು ಜರ್ಮನ್ ಮೂಲದ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿಯನ್ನು ರಿಲಿಯನ್ಸ್ ಕೊಂಡುಕೊಳ್ಳುತ್ತಿದೆ. ಈ ಪ್ರಕ್ರಿಯೆಗಳಲ್ಲಿ ದೇಶಿಯ ಮತ್ತು ಅವುಗಳಲ್ಲಿ ಶೇರುಗಳನ್ನು ಹೊಂದಿರುವ ಬಹು ರಾಷ್ಟ್ರೀಯ ಕಂಪನಿಗಳ ನಡುವೆ ವಿವಾದಗಳು, ಕೋರ್ಟ್ ಮೊಕದ್ದಮೆಗಳು ಸಹಾ ನಡೆದಿವೆ. ಈ ಪ್ರಕ್ರಿಯೆಗಳಲ್ಲಿ ಅಲ್ಲಿನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ ಒಂದರ ಮೇಲೆ ಮತ್ತೊಂದು ಪೈಪೋಟಿಯಲ್ಲಿ ತೊಡಗಿದ್ದ ವಾಹನೋಧ್ಯಮ ಕೈಗಾರಿಕೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿವೆ. ಬಿಡದಿಯ ಟಯೋಟಾ ಕಾರ್ಖಾನೆಯಲ್ಲಿ ಸುಜುಕಿ ಕಾರ್ ಜೋಡಿಸುವ ಮತ್ತು ಗುಡುಗಾವ್ ಜುಜುಕಿ ಕಾರ್ಖಾನೆಯಲ್ಲಿ ಟಯೋಟಾ ಕಾರ್‌ಗಳನ್ನು ಜೋಡಿಸುವ ಒಪ್ಪಂದಕ್ಕೆ ಮುಂದಾಗಿವೆ. 2030ರ ವೇಳೆಗೆ ಪೆಟ್ರೋಲ್ ಡೀಸಲ್ ವಾಹನ ಉತ್ಪಾದನೆ ನಿಲ್ಲಿಸುವ, ಅದರ ಬದಲು ವಿಧ್ಯುತ್ ವಾಹನ ಉತ್ಪಾಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರವು ಯತ್ನಿಸಿದೆ. ಇದರಿಂದಾಗಿ ವಾಹನ ಉತ್ಪಾಧನೆ ಮತ್ತು ವಾಹನ ಬಿಡಿಬಾಗ ಉತ್ಪಾಧನೆ ಮಾಡುವ ತಯಾರಿಕಾ ವಲಯದ ಕಾರ್ಖಾನೆಗಳ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲಿಕಲಿದ್ದಾರೆ.

ದಿವಾಳಿ ನೆಪ: ಕಾರ್ಮಿಕರ ಹಕ್ಕು ದಮನ:

ದಿವಾಳಿ ಮತ್ತು ಪಾಪರಿಕೆ ಸಂಹಿತೆ-2016 (IBC) ಬಳಸಿ ಒಂದಡೆ ಬ್ಯಾಂಕಗಳಿಂದ ಪಡೆದ ಸಾಲಗಳನ್ನು ತಮ್ಮ ಸಂಸ್ಥೆಯ ಆಸ್ತಿಗಳಿಗೆ ಮನ್ನಾ ಮಾಡಿಸಿಕೊಳ್ಳುವ ಜೊತೆಯಲ್ಲೆ, ಕಾರ್ಮಿಕರಿಗೆ ಕೈಗಾರಿಕಾ ವಿವಾದಗಳ ಕಾಯ್ದೆಯಡಿ ಲಭಿಸಬೇಕಿರುವ ರಿಟ್ರೆಂಚ್‌ಮೆಂಟ್ ಮತ್ತು ಕ್ಲೋಸರ್ ಪರಿಹಾರದಿಂದ ವಂಚಿಸುವ ಯತ್ನಗಳು ರಾಜ್ಯದಲ್ಲಿ ತೀವ್ರಗೊಂಡಿವೆ. ವೇತನ ಕಡಿತ ಮಾಡಿಕೊಳ್ಳಬೇಕೆಂಬ ಅಥವಾ ಕಾರ್ಮಿಕರ ಸಂಖ್ಯೆ ಕಡಿತ ಮಾಡಬೇಕೆಂಬ ಒತ್ತಡವನ್ನು ದಿವಾಳಿಯಾಗಿ ಪುನರ್ ಸ್ಥಾಪನೆಯಾದ ಕಾರ್ಖಾನೆಗಳಿಂದ ಬರುತ್ತಿರುವುದನ್ನು ಗಮನಿಸಬಹುದಾಗಿದೆ.

ಕೋವಿಡ್ ಲಾಕ್ಡೌನ್: ಕಾರ್ಮಿಕ ಕಾನೂನು ತಿದ್ದುಪಡಿ ಯತ್ನಕ್ಕೆ ಸೋಲು:

ಕೈಗಾರಿಕಾ ವಿವಾದಗಳ ಕಾಯ್ದೆ-1948, ಕಾರ್ಖಾನೆ ಕಾಯ್ದೆ-1948 ಕ್ಕೆ ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆ-1970 ಕ್ಕೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಿತು. ಈ ತಿದ್ದುಪಡಿಗಳ ಸುಗ್ರೀವಾಜ್ಞೆ ಮೂಲಕ

ಎ) ಲೇಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರದ ಅನುಮತಿ ಪಡೆಯಬೇಕಿದ್ದ 100ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆಗಳ ಮಿತಿಯನ್ನು 300ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆಗಳಿಗೆ ಎಂದು ಬದಲಾಯಿಸಿತ್ತು. ಪರಿಣಾಮವಾಗಿ ರಾಜ್ಯದ 90.76 ಶೇಕಡ ಕಾರ್ಖಾನೆಗಳು ಸರ್ಕಾರದ ಪೂರ್ವಾನುಮತಿ ಇಲ್ಲದೆ ಲೇ-ಆಫ್, ರಿಟ್ರೆಂಚ್ ಮತ್ತು ಕಾರ್ಖಾನೆ ಮುಚ್ಚಲು ಮುಕ್ತ ಅವಕಾಶ ನೀಡಿತ್ತು.

ಬಿ) ಕಾರ್ಖಾನೆಗಳ ಪರಿಭಾಷೆಯನ್ನು ಬದಲಾಯಿಸಿ ವಿದ್ಯುತ್ ಸಹಿತ ಹಾಲಿ 10 ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಯ ಮೇಲ್ಮಿತಿಯನ್ನು 20 ಕಾರ್ಮಿಕರಿಗೆ ಮತ್ತು ವಿದ್ಯುತ್ ರಹಿತ ಹಾಲಿ 20 ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಯ ಮೇಲ್ಮಿತಿಯನ್ನು 40 ಕಾರ್ಮಿಕರಿಗೆ ಹೆಚ್ಚಿಸಿತು. ಪರಿಣಾಮವಾಗಿ ರಾಜ್ಯದ ಶೇಕಡ 41.16 ವಿದ್ಯುತ್ ಸಹಿತ ಕಾರ್ಖಾನೆಗಳು ಮತ್ತು ಶೇಕಡ 64.34 ವಿದ್ಯುತ್ ರಹಿತ ಕಾರ್ಖಾನೆಗಳನ್ನು, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ನಿರ್ದೇಶನಾಲಯದ ಶಾಸನಬದ್ಧ ತಪಾಸಣೆಯಿಂದ ಹೊರಗುಳಿಸಿತ್ತು.

ಸಿ) ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಶಾಸನಬದ್ಧ ನೊಂದಾವಣಿ ಮತ್ತು ಪರವಾನಗಿಗೆ ಇದ್ದ 20 ಕಾರ್ಮಿಕರ ಕನಿಷ್ಟ ಮಿತಿಯನ್ನು 50ಕ್ಕೆ ಹೆಚ್ಚಿಸಿತ್ತು. ಪರಿಣಾಮವಾಗಿ ಅನಿಯಂತ್ರಿತ ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಅನುವುಗೊಳಿಸಿತು. ಇದರ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಮತ್ತು ಸಿಐಟಿಯು ನಡೆಸಿದ ನಿರಂತರ ಹೋರಾಟ ಪರಿಣಾಮ 2020 ಸೆಪ್ಟೆಂಬರ್ 22 ರಂದು ರಾತ್ರಿ ವಿಧಾನ ಪರಿಷತ್‌ನಲ್ಲಿ ಸುಗ್ರೀವಾಜ್ಞೆಗೆ ಸೋಲುಂಟಾಯಿತು. ಪರಿಣಾಮವಾಗಿ ಸೋಲುಂಡ ಸುಗ್ರೀವಾಜ್ಞೆಯನ್ನು ಮತ್ತೆ ಶಾಸನವಾಗಿ ರೂಪಿಸಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸಿಐಟಿಯು ನಡೆಸಿದ ಪ್ರಚಾರದ ಪರಿಣಾಮ ಕಾರ್ಮಿಕ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ತರುವ ಯತ್ನಗಳಿಗೆ ಸೋಲುಂಟಾಯಿತು.

ಮಾಲೀಕರ ಪರ ನಿಂತ ಸರ್ಕಾರ:

ಬಿಡದಿಯ ಟಯೋಟಾ ಕಿರ್ಲೋಸ್ಕರ್ ಕಾರ್ಮಿಕರ 113 ದಿನಗಳ ಮುಷ್ಕದರಲ್ಲಿ ಸರ್ಕಾರವು ಮಾಲೀಕರ ಪರ ನಿಲುಮೆ ತಾಳಿ, 45 ಕಾರ್ಮಿಕರು ಮತ್ತು ಮುಖಂಡರನ್ನು ಬಲಿಪಶು ಮಾಡಲು ಅನುವುಗೊಳಿಸಿದೆ. ಲಾಕ್ಡೌನ್ ವೇಳೆಯಲ್ಲಿ ಸುಪ್ರೀಂ ಟ್ರೀವ್ಸ್ ಕಾರ್ಮಿಕರನ್ನು ಮಾಲೀಕರು ದೂರದ ಗುಜರಾತ್, ಹರಿಯಾಣ ಮುಂತಾದ ರಾಜ್ಯಗಳಿಗೆ ಕಾನೂನು ಬಾಹಿರವಾಗಿ ವರ್ಗಾಯಿಸಿರುವ ಪ್ರಕರಣದಲ್ಲಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಿಲ್ಲ. ಇಂದಿಗೂ ಕಾರ್ಮಿಕರು ಹೋರಾಟ ನಿರತರಾಗಿದ್ದಾರೆ. ದಿವಾಳಿ ಮತ್ತು ಪಾಪರಿಕೆ ಸಂಹಿತೆ 2016 ಅಡಿ ಇನ್ನೋವೇಟಿವ್ ಫಿಲಿಂ ಸಿಟಿ ಮಾಲೀಕರು ಕಾರ್ಮಿಕರನ್ನು ಹೊರಹಾಕಿ ಮತ್ತೊರ್ವ ಮಾಲೀಕರ ಮೂಲಕ ಫಿಲಿಂ ಸಿಟಿ ಪ್ರಾರಂಭಿಸಿದ್ದರೂ, ಕಾರ್ಮಿಕರಿಗೆ ಕೆಲಸ ಕೊಡಿಸಬೇಕೆಂಬ ಕಾರ್ಮಿಕರ ಅರ್ಜಿಯನ್ನು ಸಕಾರಾತ್ಮಕವಾಗಿ ಪರಿಗಣಿಸದೆ ಕಾರ್ಮಿಕರನ್ನು ವಂಚಿಸಿದೆ. ರಿಕ್ಯಾರೋ ಇಂಡಿಯಾ ಮಾಲೀಕರು ಅಕ್ರಮ ರಿಟ್ರೆಂಚ್‌ಮೆಂಟ್, ಲೇಆಫ್ ಮಾಡಿದರು ಅದರ ತಡೆಗೆ ಸರ್ಕಾರ ಕ್ರಮವಹಿಸಿಲ್ಲ. ಸ್ಮಿಡ್ಜ್ ಕಾರ್ಖಾನೆಯ ಅಕ್ರಮ ಮುಚ್ಚುವಿಕೆ ವಿರುದ್ದ ಕ್ರಮವಹಿಸಲಿಲ್ಲ. ಮೈಸೂರಿನ ರೀಡ್ ಅಂಟ್ ಟೇಲರ್ ಕಾರ್ಖಾನೆಯ ಮಾಲೀಕರು ಸದರಿ ಸಂಹಿತೆಯಡಿ ಲಾಕ್ಡೌನ್ ವೇಳೆ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡಿ, ಆನಂತರ ತನ್ನ ಶರತ್ತುಗಳಿಗೆ ಅನುಗುಣವಾಗಿ ವೇತನ ಕಡಿತ ಸಹಿತ ಕೆಲಸ, ಎಲ್ಲರಿಗೂ ಕೆಲಸ ನೀಡದ ಕ್ರಮಗಳಿಗೆ ಹೊಸ ಮಾಲೀಕ ಮುಂದಾದಾಗ ಸರ್ಕಾರವು ಅದಕ್ಕೆ ಪೂರಕವಾಗಿ ವರ್ತಿಸಿ, ಕಾರ್ಮಿಕರನ್ನು ಅಸಹಾಯಕ ಪರಿಸ್ಥಿತಿಗೆ ದೂಡಿತು. ಕೋಲಾರ ಜಿಲ್ಲೆಯಲ್ಲಿನ ವಿಸ್ಟನ್ ಕಂಪನಿಯಲ್ಲಿನ ಕಾರ್ಮಿಕ ಕಾನೂನುಗಳ ಅನುಷ್ಠಾನ ಕುರಿತು ಸರ್ಕಾರ ಕ್ರಮವಹಿಸದ ಕಾರಣ, ಕಾರ್ಮಿಕರು ಮಾಲೀಕರ ವಿರುದ್ಧ ತಿರುಗಿಬಿದ್ದ ದಿಢೀರ್ ಹೋರಾಟಕ್ಕೆ ಮುಂದಾದ ವೇಳೆ ಸರ್ಕಾರವು ನೇರಾ ಮಾಲೀಕರ ಪರ ನಿಲುವೆ ತಳೆದು, ಕಾರ್ಮಿಕರನ್ನು ಮಾಲೀಕರ ಜೊತೆ ಸೇರಿ ಬಲಿಪಶು ಮಾಡುವ, ಕಾರ್ಮಿಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಕೆಲಸ ಮಾಡಿದೆ.

ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕೈಗಾರಿಕಾ ಸಂಸ್ಥೆಗಳ ಸ್ಥಾಯಿ ಆದೇಶಗಳ ಕಾಯ್ದೆಗೆ ತಿದ್ದುಪಡಿ ತಂದು ನಿಶ್ಚಿತ ಕಾಲಾವಧಿಯ ಕಾರ್ಮಿಕರ (FTE) ನೇಮಕಕ್ಕೆ ಅವಕಾಶ ಕಲ್ಪಿಸಿದ ಕಾರಣ, ಹಲವು ಕಾರ್ಖಾನೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಿಶ್ಚಿತ ಕಾಲಾವಧಿಯ ಕಾರ್ಮಿಕರ (FTE) ನೇಮಕ ವ್ಯಾಪಕವಾಗಿ ನಡೆದಿದೆ. ಅದಕ್ಕೆ ಪೂರ್ವದಲ್ಲಿ ರೂಪಿತವಾದ ಮೇಕ್‌ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಕರ್ನಾಟಕ, ಸ್ಕಿಲ್ ಕರ್ನಾಟಕ ಯೋಜನೆಗಳ ಅಡಿಯ ಟ್ರೈನಿಗಳು ಅನೇಕರು FTE ಗಳಾಗಿ ನೇಮಕವಾಗುತ್ತಿದ್ದಾರೆ. ಅದಕ್ಕಾಗಿ ಖಾಯಂ ಕಾರ್ಮಿಕರು, ಗುತ್ತಿಗೆ ಕಾರ್ಮಿಕರನ್ನು ಸ್ವಯಂ ನಿವೃತ್ತಿ ಮುಂತಾದ ಕ್ರಮಗಳ ಮೂಲಕ ಹೊರದಬ್ಬುವ ಕ್ರಮಗಳು ತೀವ್ರವಾಗಿ ವ್ಯಾಪಕವಾಗಿ ನಡೆದಿವೆ.

ತ್ರಿಪಕ್ಷೀಯ ಸಮಿತಿಗಳಿಂದ ಸಿಐಟಿಯು ಪ್ರತಿನಿಧಿಗಳನ್ನು ಹೊರಗಿಡುವ ಪ್ರಯತ್ನಗಳನ್ನು ಪ್ರಜ್ಞಾಪೂರ್ವಕವಾಗಿ ನಡೆಸಿದೆ. ಕನಿಷ್ಟ ವೇತನ ನಿಗದಿ ಪ್ರಕ್ರಿಯೆಯಲ್ಲಿ ಮಾಲೀಕರ ವಾದದ ಪರ ವಹಿಸಿ ವೇತನ ನಿಗದಿಗೆ ಮುಂದಾಗಿದೆ. 36000 ರೂಗಳ ಮಾಸಿಕ ಕನಿಷ್ಟ ವೇತನ ನಿಗದಿಗಾಗಿನ ಕಾರ್ಮಿಕ ಸಂಘಟನೆಗಳ ಬೇಡಿಕೆ ಮತ್ತು ವಾದ ಪರಿಗಣಿಸದೆ ನಿರಾಕರಿಸುತ್ತಿದೆ.

ರಾಜ್ಯ ಸರ್ಕಾರದ ಲಕ್ಷಾಂತರ ಖಾಲಿಯಿರುವ ಹುದ್ದೆಗಳ ಭರ್ತಿ ಮಾಡದೆ, ಸದರಿ ಕೆಲಸಗಳನ್ನು ಹೊರಗುತ್ತಿಗೆ ನೀಡುವ ಯತ್ನಗಳು ತೀವ್ರಗೊಂಡಿವೆ. ಪರಿಣಾಮವಾಗಿ ಖಾಯಂ ನೌಕರರ ಸಂಖ್ಯೆ ಮೀರಿ ಹೊರಗುತ್ತಿಗೆ ನೌಕರರ ಸಂಖ್ಯೆ ಕೆಲವೆಡೆ ಬೆಳೆಯುತ್ತಿದೆ.

ಕಾರ್ಮಿಕ ಸಂಹಿತೆಗಳು ಕೇಂದ್ರದ ಯತ್ನ- ಕಾರ್ಮಿಕ ಚಳುವಳಯ ಪ್ರತಿರೋಧ:

2019 ಆಗಸ್ಟ್‌ ನಲ್ಲಿ ರೂಪಿಸಿದ್ದ ವೇತನ ಸಂಹಿತೆ-2019 ಅಡಿ ಕನಿಷ್ಟ ವೇತನ ನಿಗದಿಗೊಳಿಸಲು ವೇತನ ಸಂಹಿತೆ (ಕೇಂದ್ರ ಸಲಹಾ ಮಂಡಳಿ) ನಿಯಮಾವಳಿಗಳು-2021 ಅನ್ನು 1-3-2021 ರಂದು ಅಧಿಸೂಚಿಸಿ ಜಾರಿಗೊಳಿಸಿದೆ.

2020 ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ-2020, ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಶರತ್ತುಗಳ ಸಂಹಿತೆ-2020, ಸಾಮಾಜಿಕ ಭದ್ರತಾ ಸಂಹಿತೆ-2020 ಅನ್ನು ಅಂಗೀಕರಿಸಿ ಜಾರಿಗೆ ಯತ್ನಿಸಿದೆ. ಈ ನಾಲ್ಕು ಸಂಹಿತೆಗಳ ಮೂಲಕ ಹಾಲಿ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿದೆ. ಈ ಸಂಹಿತೆಗಳ ಜಾರಿಗೆ ನಿಯಮಾವಳಿಗಳನ್ನು ರೂಪಿಸಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದೆ. ಕೇಂದ್ರ ಸರ್ಕಾರವು ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ಕಾರಣ ಜಾರಿಗೊಳಿಸಲಾಗದ ಅತಂತ್ರಕ್ಕೆ ಸಿಲುಕಿದೆ.

ಮೂರು ವರ್ಷಗಳಾದರೂ ಕಾರ್ಮಿಕರ ವಿರೋಧ ಮತ್ತು ಮುಷ್ಕರಗಳ ಕಾರಣ ಸಂಹಿತೆಗಳನ್ನು ಜಾರಿಗೊಳಿಸಲಾಗದ ಅಸಹಾಯಕ ಸ್ಥಿತಿಯಿಂದ ಹೊರಬರಲು ಇತ್ತೀಚೆಗೆ ಪ್ರತಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜೊತೆ ಪ್ರತ್ಯೇಕವಾಗಿ ಕೇಂದ್ರ ಕಾರ್ಮಿಕ ಸಚಿವರು ಮಾತುಕತೆ ನಡೆಸಿದ್ದಾರೆ. ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಪ್ರತ್ಯೇಕ ಮಾತುಕತೆ ಹಾಗೂ ಅನಂತರ ಜಂಟಿ ಪತ್ರದ ಮೂಲಕ 4 ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ, ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಕೂಡಲೇ ನಡೆಸಲು ಮತ್ತು ಅದಕ್ಕೂ ಪೂರ್ವದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಪ್ರಾತಿನಿಧ್ಯದ ಸಭೆ ಕರೆದು ಭಾರತೀಯ ಕಾರ್ಮಿಕ ಸಮ್ಮೇಳನದ ಕಾರ್ಯಸೂಚಿ ನಿರ್ಧರಿಸಲು ಒತ್ತಾಯಿಸಿವೆ. ಭಾರತೀಯ ಮಜದೂರ ಸಂಘ (BMS) ಸಾಮಾಜಿಕ ಭದ್ರತಾ ಸಂಹಿತೆ ಮತ್ತು ವೇತನ ಸಂಹಿತೆಯನ್ನು ಬೆಂಬಲಿಸಿದೆ. ಉಳಿದ 2 ಸಂಹಿತೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೆ.

ಏನಾದರೂ ಮಾಡಿ ಕಾರ್ಮಿಕ ಸಂಹಿತೆಗಳನ್ನು ಜಾರಿಮಾಡುವ ಸಲುವಾಗಿ ಪ್ರಪ್ರಥಮ ಜಾರಿಗೆ ರಾಜ್ಯ ಕಾರ್ಮಿಕ ಸಚಿವರು, ಅಧಿಕಾರಿಗಳು ಮತ್ತು ಕೇಂದ್ರ ಕಾರ್ಮಿಕ ಸಚಿವರು ಅಧಿಕಾರಿಗಳನ್ನು ಮಾತ್ರ ಒಳಗೊಂಡು, ಕಾರ್ಮಿಕ ಪ್ರತಿನಿಧಿಗಳನ್ನು ಆಹ್ವಾನಿಸದೆ  ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (NLC) ವನ್ನು ತಿರುಪತಿಯಲ್ಲಿ 2022 ಆಗಸ್ಟ್ 25 ಮತ್ತು 26 ರಂದು ನಡೆಸಿದ್ದಾರೆ. ಅದನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿದ ಪ್ರಧಾನಿಗಳು ಭಾರತ ಸ್ವತಂತ್ರ್ಯೋತ್ಸವ ಅಮೃತ ವರ್ಷದ ವೇಳೆಗೆ ರೂಪಿಸಿರುವ ಕಾರ್ಮಿಕ ಸಂಹಿತೆಗಳು ಸ್ವತಂತ್ರ್ಯೋ ತ್ಸವದ ಶತಮಾನೋತ್ಸವದ ವೇಳೆಗೆ ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಅವರ ಘೋಷಣೆಯಾದ “ಶ್ರಮಮೇವ ಜಯತೆ” ಅನ್ನು ಸಾಕಾರಗೊಳಿಸಲಿದೆ ಎಂದಿದ್ದಾರೆ.

ರೈತರ ವಿರೋಧಿಯಾದ 3 ಕೃಷಿ ಕಾಯ್ದೆಗಳಾದ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಅನುಕೂಲ ಮಾಡಿಕೊಡುವಿಕೆ) ಕಾಯ್ದೆ-2020, ರೈತರ (ಸಶಕ್ತಿಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು 2020 ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿ, ಅಧಿಸೂಚಿಸಿ ಜಾರಿಗೆ ಮುಂದಾಗಿತ್ತು. ಅದರ ವಿರುದ್ಧ ದೆಹಲಿಯ ಗಡಿಗಳಲ್ಲಿ ಮತ್ತು ರಾಷ್ಟ್ರದ ಉದ್ದಗಲಕ್ಕೂ 2020 ನವೆಂಬರ್ 26 ರಿಂದ ನಡೆದ ಸಮರಧೀರ ಹೋರಾಟದ ಕಾರಣ ಮೂರು ಕೃಷಿ ಕಾಯ್ದೆಗಳು ರದ್ದಾಗಿವೆ. ಆದರೆ ಅದರ ಜಾರಿಗೆ ರಾಜ್ಯ ಸರ್ಕಾರಗಳಲ್ಲಿ ಕಾಯ್ದೆ ರೂಪಿಸಿ ಜಾರಿಗೊಳಿಸಲು ಕೇಂದ್ರ ಸರ್ಕಾರವು ಉತ್ತೇಜನ ಮತ್ತು ಒತ್ತಡ ಹೇರುತ್ತಿವೆ. ಕರ್ನಾಟಕದ ರಾಜ್ಯ ಸರ್ಕಾರವು ಅಂಗೀಕರಿಸಿರುವ ಭೂ ಸುಧಾರಣ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಕಂದಾಯ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಮಾದರಿಯಲ್ಲಿ ಇತರೆ ಬಿಜೆಪಿ ಆಡಳಿತದ ರಾಜ್ಯಗಳು ಕಾನೂನುಗಳನ್ನು ರೂಪಿಸಿ ಜಾರಿಗೊಳಿಸುತ್ತಿವೆ.

ಮಾಲೀಕರಿಗೆ ಕೇಂದ್ರದ ಉದಾರ ಕೊಡುಗೆ:

ತಯಾರಿಕಾ ವಲಯದ ಮಾಲೀಕರಿಗೆ ಅನುವು ಮಾಡಿಕೊಡಲು ಉತ್ಪಾದಕತೆ ಆಧಾರಿತ ಇನ್ಸ್ಂಟೀವ್ (PLI) ಹೆಸರಿನಲ್ಲಿ 2 ಲಕ್ಷ ಕೋಟಿ ರೂಗಳನ್ನು ಒದಗಿಸಿ, ಉತ್ಪಾದನ ವೆಚ್ಚಕ್ಕೆ ಸಬ್ಸಿಡಿ ನೀಡಲು ಮುಂದಾಗಿದೆ.

SEZ ಕಾಯ್ದೆಯ ಬದಲಾಗಿ DESH  (ಉದ್ದಿಮೆಗಳ ಅಭಿವೃದ್ಧಿ ಮತ್ತು ಸೇವಾ ಹಬ್‌ಗಳ) ಮಸೂದೆಯನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿದೆ. ಈ ಕಾಯ್ದೆಯ ಮೂಲಕ ರಫ್ತು ಆಧಾರಿತ ಉತ್ಪನ್ನಗಳ ತಯಾರಿಕೆಗಾಗಿ ಮೀಸಲಿದ್ದ ವಿಶೇಷ ಆರ್ಥಿಕ ವಲಯವನ್ನು ಆಂತರಿಕ ದೇಶೀಯ ಉತ್ಪನ್ನ ತಯಾರಿಸುವ ಕಾರ್ಖಾನೆಗಳನ್ನು ಸಹಾ SEZ ವ್ಯಾಪ್ತಿಯಲ್ಲಿ ಸ್ಥಾಪಿಸಲು ಅನುವುಗೊಳಿಸಲು ಉದ್ದೇಶಿಸಲಾಗಿದೆ. ಆ ಮೂಲಕ ಸದರಿ ವಲಯದಲ್ಲಿನ ಕಾರ್ಮಿಕರ ಪ್ರಶ್ನೆಗಳ ಆಧಾರಿತವಾಗಿ ಉದ್ಭವಿಸುವ ವಿವಾದಗಳನ್ನು ನೇರ ಕಾರ್ಮಿಕ ಇಲಾಖೆಯಡಿ ಪರಿಹರಿಸುವ ಬದಲು ಜಿಲ್ಲಾಧಿಕಾರಿಗಳ ಮೂಲಕ ಅನುಮತಿ ಪಡೆಯಬೇಕೆಂಬ ನಿಬಂಧನೆಗೆ ವಲಯದ ಕಾರ್ಖಾನೆಗಳು ಒಳಪಡಲಿವೆ.

Donate Janashakthi Media

Leave a Reply

Your email address will not be published. Required fields are marked *