ʻಅಪೌಷ್ಠಿಕ ನಿವಾರಣೆಗೆ ಮೊಟ್ಟೆ ಕೊಡಿʼ ʻಕೇಸರಿ ಬಣ್ಣ ಹೊಡೆಸುವ ಬದಲು ಶಾಲೆಗಳಲ್ಲಿ ಶೌಚಾಲಯ ಮಾಡ್ಸಿ ಸಿಎಂ ಅಂಕಲ್‌ʼ

ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ ಬಳೆಯುವ ಸರ್ಕಾರದ ತೀರ್ಮಾನದ ಬಗ್ಗೆ ವಿವಿಧ ರೀತಿಯಲ್ಲಿ ಚರ್ಚೆಗೆ ಒಳಪಟ್ಟಿದ್ದು, ಶೈಕ್ಷಣಿಕ ವಲಯದ ಮೂಲ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕಾದ ಸರ್ಕಾರ ಅವುಗಳೆಲ್ಲವನ್ನೂ ಬದಿಗೆಸರಿಸಿ ಕೇಸರಿ ಬಣ್ಣ ಬಳೆಯುವುದೇ ಮುಖ್ಯ ವಿಚಾರ ಎಂಬಂತೆ ವರ್ತಿಸುತ್ತಿದೆ.

ಇದೀಗ, ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪಕ್ಷವು, ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಸಿಎಂಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ, ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ ಎಂದಿದೆ.

ಅಪೌಷ್ಟಿಕತೆಯ ನಿವಾರಣೆಗಾಗಿ ಶಾಲೆ ಮಕ್ಕಳಿಗೆ ಮೊಟ್ಟೆ ವಿತರಣೆಯ ಯೋಜನೆಗೆ ಗ್ರಹಣ ಹಿಡಿಸಿದೆ ಸರ್ಕಾರ. ಸಿಎಂ ಅಂಕಲ್ ಸಮರ್ಪಕವಾಗಿ ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳಿ, ಅನುದಾನ ಬಿಡುಗಡೆ ಮಾಡಿ, ಮೊಟ್ಟೆಯಲ್ಲೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ಟ್ವೀಟ್‌ ಮಾಡಿದೆ.

ಕೋವಿಡ್ ನಂತರ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಬಾಲಕಾರ್ಮಿಕರ ಸಂಖ್ಯೆ ಏರಿಕೆಯಾಗಿದೆ, ಬಾಲ್ಯವಿವಾಹವೂ ಏರಿಕೆಯಾಗಿದೆ. ಸಿಎಂಅಂಕಲ್, ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಯೋಜನೆ ರೂಪಿಸುವುದನ್ನು ಬಿಟ್ಟು ಬಣ್ಣ ಬಳಿಯುವ ಬಣ್ಣ ಬಣ್ಣದ ಮಾತಾಡಿಕೊಂಡು ಕುಳಿತಿರುವುದೇಕೆ? ಎಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪಕ್ಷವು, ಹಲವು ಪ್ರಶ್ನೆಗಳನ್ನು ಕೇಳಿದೆ.

ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಸರ್ಕಾರ. ಒಳ್ಳೆಯ ಪಾಠವೂ ಇಲ್ಲ, ಬಿಸಿ ಊಟವೂ ಇಲ್ಲ, ಊಟ, ಪಾಠದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳುವಿರಿ ಸಿಎಂಅಂಕಲ್‌.

ಕರೋನಾನಂತರದ ಶೈಕ್ಷಣಿಕ ಬಿಕ್ಕಟ್ಟುಗಳನ್ನು ಗಮನಿಸುವುದನ್ನು ಬಿಟ್ಟು ಪಠ್ಯಪುಸ್ತಕದಲ್ಲಿ ಅವಾಂತರ ಸೃಷ್ಟಿಸಿತ್ತು ಸರ್ಕಾರ. ಶಾಲೆ ಶುರುವಾಗಿ ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕದ ಗೊಂದಲ ಬಗೆಹರಿಸಲಿಲ್ಲ, ಮಕ್ಕಳಿಗೆ ಪಠ್ಯಪುಸ್ತಕ ನೀಡಲಿಲ್ಲ. ಸಿಎಂಅಂಕಲ್ ಮಕ್ಕಳು ಏನನ್ನ ಓದಬೇಕು, ಪರೀಕ್ಷೆಗೆ ಹೇಗೆ ಸಜ್ಜಾಗಬೇಕು? ನೀವು ಪುಸ್ತಕ ಕೊಡುವುದೆಂದು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಶಾಲೆ ಶುರುವಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಮವಸ್ತ್ರ ಪೂರೈಕೆಯಾಗಿಲ್ಲ. ಮಕ್ಕಳು ಎರಡು ವರ್ಷ ಹಳೆಯದಾದ ಹರಿದುಹೋದ ಸಮವಸ್ತ್ರ ಹಾಕಿಕೊಂಡು ಬರ್ತಿದ್ದಾರೆ, ಮಕ್ಕಳಿಗೆ ಸಮವಸ್ತ್ರ ನೀಡುವಲ್ಲೂ ವಿಳಂಬವೇಕೆ, ಸಮವಸ್ತ್ರ ನೀಡುವುದು ಯಾವಾಗ? ಸಿಎಂಅಂಕಲ್ ? ಎಂದು ಕರ್ನಾಟಕ ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿದೆ.

ಸೈಕಲ್‌ಗಳಲ್ಲೂ ಹಗರಣ ನಡೆಸಿ ಕಳಪೆ ಸೈಕಲ್ ವಿತರಿಸಿದರೂ ಸರ್ಕಾರದ ಸೈಕಲ್‌ಗಳಿಂದ ಶಾಲಾ ಮಕ್ಕಳಿಗೆ ಅನುಕೂಲವಿತ್ತು. ಈಗ ಸೈಕಲ್ ಕೊಡುವುದನ್ನೇ ನಿಲ್ಲಿಸಿದ್ದೇಕೆ ಸಿಎಂಅಂಕಲ್? ದೂರದಿಂದ ಸಮಯಕ್ಕೆ ಸರಿಯಾಗಿ ಶಾಲೆ ತಲುಪುವುದು ಹೇಗೆ? ಹಲವು ಸವಾಲುಗಳನ್ನು ಮುಂದಿಟ್ಟರೆ ಮಕ್ಕಳು ಶಿಕ್ಷಣದತ್ತ ಆಕರ್ಷಿತರಾಗುವುದು ಹೇಗೆ?ʼʼ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

“ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ ಹೇಳುವ ಸರ್ಕಾರ ವಿವೇಕಾನಂದರ ನೈಜ ತತ್ವಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ? ಜೇಮ್‌ಶೇಟ್ ಜಿ ಟಾಟಾ ಅವರ ಮೂಲಕ ಭಾರತದ ಕೈಗಾರಿಕೆ & ವೈಜ್ಞಾನಿಕ ಕ್ರಾಂತಿಗೆ ವಿವೇಕಾನಂದರು ಕಾರಣರಾಗಿದ್ದರು. ಸಿಎಂ ಅಂಕಲ್ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ತಾವು ಕೆಲಸ ಮಾಡ್ತಿಲ್ಲವೇಕೆ?ʼʼ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *