ಸುರತ್ಕಲ್ : ಅಕ್ರಮ ಟೋಲ್ ಕಿಕ್‌ಔಟ್?

ಮಂಗಳೂರು : ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಧಿಕೃತ ಆದೇಶ ಬರುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿರುದ್ದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಅಕ್ಟೋಬರ್ 28ರಂದು ಸುರತ್ಕಲ್ ಟೋಲ್ ಬಳಿ ಧರಣಿ ಆರಂಭಿಸಿತ್ತು. ಅನಿರ್ಧಿಷ್ಟ ಕಾಲ ಹಗಲು-ರಾತ್ರಿ ಧರಣಿ ನಡೆಸಿದ್ದರು. ವಾರದ ಹಿಂದೆಯಷ್ಟೇ ಹೋರಾಟ ಸಮಿತಿ ಟೋಲ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ವಿರುದ್ದ ಸಿಪಿಐಎಂ, ಕಾಂಗ್ರೆಸ್, ಡಿವೈಎಫ್ಐ ಸೇರಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳ ಸಮಿತಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿವೆ.

2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಂಭಗೊಂಡಿದ್ದ ಟೋಲ್ ಗೇಟ್ ಅನಧಿಕೃತ ಎನ್ನುವುದು ಹೋರಾಟಗಾರರ ಆರೋಪ. ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪ ಇದೆ. ಸುರತ್ಕಲ್ ಟೋಲ್ ನಿಂದ ಉಡುಪಿಯ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ ಇದೆ. ಹೀಗಾಗಿ ಸುರತ್ಕಲ್ ನಲ್ಲಿ ಅಕ್ರಮವಾಗಿ ಹಲವು ವರ್ಷಗಳಿಂದ ಟೋಲ್ ಸಂಗ್ರಹ ಮಾಡುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು.

ಟೋಲ್ ಸಂಗ್ರಹ ನಿಲ್ಲುವವರೆಗೂ ಹೋರಾಟ ನಿಲ್ಲಲ್ಲ : ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಇದು ದ‌ಕ್ಷಿಣ ಕ‌ನ್ನಡ, ಉಡುಪಿ ಜಿಲ್ಲೆಯ ಸಮಸ್ಥ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಜನತೆಯ ಅಖಂಡ ಬೆಂಬಲದೊಂದಿಗೆ ಹೋರಾಟ ಸಮಿತಿ ಕಳೆದ ಮೂರು ತಿಂಗಳಿಂದ ನಿರ್ಣಾಯಕ ಹೋರಾಟಗಳನ್ನು ಸಂಘಟಿಸಿತ್ತು. ಅಂತಹ ದಣಿವರಿಯದ ಪ್ರಯತ್ನಗಳು ಇಂದು ಗೆಲುವಿನ ಸನಿಹಕ್ಕೆ ತಲುಪಿಸಿದೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಹಗಲು ರಾತ್ರಿ ಧರಣಿ ನಿರತವಾಗಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೆ ಟೋಲ್ ಗೇಟ್ ತೆರವು ಕುರಿತು ಈವರೆಗೂ ಜಿಲ್ಲಾಡಳಿತದ ಕಡೆಯಿಂದ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ, ಟೋಲ್ ಗೇಟ್ ನಲ್ಲಿ ಸಂಗ್ರಹ ನಿಲ್ಲುವವರೆಗೂ ಧರಣಿ ಮುಂದುವರಿಯಲಿದೆ. ಟೋಲ್ ಸಂಗ್ರಹ ಸ್ಥಗಿತಗೊಂಡ ತರುವಾಯವಷ್ಟೆ ಧರಣಿ ಸ್ಥಗಿತಗೊಳ್ಳಲಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಪ್ರಧಾನಿ ಹಾಗೂ ಸಾರಿಗೆ ಸಚಿವರಿಗೆ ಧನ್ಯವಾದ,ಸಲ್ಲಿಸಿದ್ದಾರೆ. ಬೆಂಬಲಿಗರು ಸಂಸದರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ನಿಜಕ್ಕೂ ಧನ್ಯವಾದ ಸಲ್ಲಬೇಕಾಗಿರುವುದು ಹೋರಾಟದ ಬೆನ್ನೆಲುಬಾಗಿ ನಿಂತ ತುಳುನಾಡಿನ ಸಮಸ್ತ ಜನತೆ ಹಾಗೂ ಸಹಭಾಗಿ ಸಮಾನ ಮನಸ್ಕ ಸಂಘಟನೆಗಳಿಗೆ. ಅದೇ ಸಂದರ್ಭ ಸುರತ್ಕಲ್ ಟೋಲ್ ಗೇಟ್ ನಲ್ಲಿ ಆರು ವರ್ಷಗಳಿಂದ ಸತತವಾಗಿ ಸರಿಸುಮಾರು ಮುನ್ನೂರು ಕೋಟಿ ರೂಪಾಯಿ ನಿಯಮಕ್ಕೆ ವಿರುದ್ದವಾಗಿ ಸಂಗ್ರಹಿಸಲಾಗಿದೆ. ಸಂಸದರು, ಶಾಸಕರುಗಳು ಟೋಲ್ ತೆರವಿನ ದೀರ್ಘ ವಿಳಂಬಕ್ಕಾಗಿ ತುಳುನಾಡಿನ ಜನತೆಯ ಮುಂದೆ ಈಸಂದರ್ಭ ಕನಿಷ್ಟ ವಿಷಾಧವನ್ನಾದರು ವ್ಯಕ್ತಪಡಿಸಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *