ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಾಜಕೀಯ ಪಕ್ಷಗಳು ಚುನಾವಣಾ ಗೆಲುವಿಗಾಗಿ ಈಗಿನಿಂದಲೇ ತಯಾರಿ ಹಮ್ಮಿಕೊಂಡಿದ್ದು, ಈಗಾಗಲೇ ಚುನಾವಣಾ ಪ್ರಚಾರದಂತೆಯೇ ರಾಜ್ಯ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.
ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿಯೇ ಬಳಸಿಕೊಳ್ಳಲು ಸಿದ್ದಗೊಂಡಿರುವ ವಿಶೇಷ ವಾಹನದ ಪರೀಕ್ಷಾರ್ಥ ಸಂಚಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು(ನವೆಂಬರ್ 13) ಚಾಲನೆ ನೀಡಿದರು. ಈ ವಾಹನದಲ್ಲಿ ಅವರು ಕೋಲಾರಕ್ಕೆ ಆಗಮಿಸಿದರು.
ಕೋಲಾರ ನಗರದ ಶಕ್ತಿ ದೇವಾಲಯಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕೋಲಾರಮ್ಮನಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ನೋಡಲು ದೇಗುಲ ಬಳಿ ಜನ ಜಮಾಯಿಸಿದ್ದು ಜನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್, ಶಾಸಕರಾದ ಕೃಷ್ಣಬೈರೇಗೌಡ, ಶರತ್ ಬಜ್ಜೇಗೌಡ, ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶೇಷವಾಗಿ ಸಿದ್ದಗೊಂಡಿರುವ ವಾಹನದಲ್ಲಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ಕೆ ತೆರಳಲಿದ್ದಾರೆ. ಕೆಲ ತಿಂಗಳ ಹಿಂದೆಯೇ ಈ ವಾಹನ ಸಿದ್ದಗೊಂಡಿದ್ದು, ಪ್ರಾಯೋಗಿಕ ಸಂಚಾರ ಎಂಬಂತೆ ಇಂದು ಕೋಲಾರಕ್ಕೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದರು. ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಭೈರತಿ ಸುರೇಶ್, ಎಂ ಆರ್ ಸೀತರಾಮ್ ಜೊತೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದರು.
ಕೋಲಾರ ನಗರಕ್ಕೆ ಸಿದ್ದರಾಮಯ್ಯ ಆಗಮಿಸಿದ್ದಂತೆಯೇ ಬಂಗಾರಪೇಟೆ ವೃತ್ತದಲ್ಲಿ ಕೆ.ಹೆಚ್.ಮುನಿಯಪ್ಪ ಬೆಂಬಲಿಗರು ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದರು. ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅನೇಕರು ಸಿದ್ದರಾಮಯ್ಯರಿಗೆ ಹೂ ಮಳೆ ಗೈದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ.
ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದ ಸಿದ್ದರಾಮಯ್ಯ ಈ ವೇಳೆ ಮಾತನಾಡಿ, ನಾಮಪತ್ರ ಸಲ್ಲಿಸುವುದಕ್ಕೆ ನಾನು ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂದಿದ್ದಾರೆ. ನನಗೆ ವರುಣಾ, ಚಾಮರಾಜನಗರ, ಚಾಮರಾಜಪೇಟೆ, ಸೇರಿ ಹಲವು ಕಡೆ ಸ್ಪರ್ಧೆಗೆ ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಾದಾಮಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಇಂದಿನ ಸರ್ಕಾರ ಜಾತಿ, ಧರ್ಮ ಒಡೆಯುವ ಕೆಲಸ ಮಾಡ್ತಿದೆ. ನಾವು ಎಲ್ಲಾ ಜಾತಿ, ಧರ್ಮಗಳನ್ನು ಸಮನಾಗಿ ಗೌರವಿಸಿದ್ದೇವೆ ಎಂದರು.
ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಂತೆ ಸುಮಾರು 300 ಕೆಜಿ ಆ್ಯಪಲ್ ಹಣ್ಣಿನ ಹಾರ ಹಾಕಿ ಕ್ರಿಶ್ಚಿಯನ್ ಮುಖಂಡರು ಸ್ವಾಗತ ಕೋರಿದ್ದಾರೆ.
ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮುಖಂಡರ ಸಭೆ ನಡೆಸಿರುವ ಸಿದ್ದರಾಮಯ್ಯ ಅಲ್ಲಿಂದ ಡಾ ಕೆ ಸುಧಾಕರ್ ವಿರುದ್ಧ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯರನ್ನು ಕಣಕ್ಕಿಳಿಸಲು ಮುಖಂಡರಿಂದ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.