ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಳ್ಳುವ ವಾಹನಗಳನ್ನು ಅನಗತ್ಯವಾಗಿ ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸಿಕೊಳ್ಳಬೇಡಿ. ಬದಲಿಗೆ ಶ್ಯೂರಿಟಿ ಪಡೆದು ವಾಹನಗಳನ್ನು ಬಿಡುಗಡೆ ಮಾಡಿ ಎಂದು ಕರ್ನಾಟಹ ಹೈಕೋರ್ಟ್ ಸೂಚಿಸಿದೆ.
ವಾಹನ ಬಿಡುಗಡೆ ಸಂಬಂಧಿಸಿ ಪೊಲೀಸರು ಸಾಕಷ್ಟು ವಿಳಂಬ ಮಾಡುತ್ತಿದ್ದಾರೆ ಎಂದು ಜವ್ವಾಜಿ ಧನತೇಜ ಮತ್ತು ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ನ್ಯಾಯಪೀಠ ಮೇಲಿನಂತೆ ನಿರ್ದೇಶನ ನೀಡಿದೆ.
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ವಾಹನಗಳನ್ನು ವಿನಾಕಾರಣ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿಕೊಂಡರೆ ಏನೂ ಪ್ರಯೋಜನ ಆಗುವುದಿಲ್ಲ. ಹಲವು ವರ್ಷಗಳ ಕಾಲ ಠಾಣೆಯ ಮುಂದೆ ನಿಲ್ಲುವ ವಾಹನಗಳು ನಿಧಾನವಾಗಿ ಹಾಳಾಗುತ್ತವೆ. ದಿನ ಕಳೆದಂತೆ ಅವುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗದು ಮತ್ತು ನ್ಯಾಯಾಲಯಕ್ಕೆ ತರಲಿಕ್ಕೂ ಆಗದ ಸ್ಥಿತಿಗೆ ತಲುಪಲಿದೆ.
ಸುಪ್ರೀಂ ಕೋರ್ಟ್ ಸುಂದರ್ ಬಾಯ್ ಅಂಬಲಾಲ್ ವರ್ಸಸ್ ಗುಜರಾತ್ ಸರ್ಕಾರ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳ ಅನ್ವಯ ವಾಹನಗಳನ್ನು ಅವುಗಳ ಮಾಲಿಕರಿಗೆ ಬಾಂಡ್ ಪಡೆದುಕೊಳ್ಳುವುದು ಸೇರಿದಂತೆ ಅಗತ್ಯ ಷರತ್ತುಗಳನ್ನು ವಿಧಿಸುವ ಮೂಲಕ ಹಿಂದಿರುಗಿಸಬೇಕು. ಅಲ್ಲದೇ, ವಾಹನ ಬಿಡುಗಡೆಗೂ ಮುನ್ನ ಪಂಚರ ಸಮಕ್ಷಮದಲ್ಲಿ ವಿವಿಧ ಕೋನಗಳಲ್ಲಿ ವಾಹನದ ಫೋಟೋಗಳನ್ನು ಚಿತ್ರಿಸಿಕೊಳ್ಳಬೇಕು. ಈ ಫೋಟೋಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ರಾಜರಾಜೇಶ್ವರಿ ನಗರ ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಡಾ ಸಿಟಿ ಕಾರು, ಬೈಕ್ ಹಾಗೂ ಆಟೋ ವಶಕ್ಕೆ ಪಡೆದಿದ್ದರು. ಈ ವಾಹನಗಳ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಮಾಲೀಕರುಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಸ್ತುತ ಪ್ರಕರಣದಲ್ಲಿ ವಾಹನಗಳ ಮಾಲಿಕರು ಅಪರಾಧಿಗಳಲ್ಲ. ವಾಹನಗಳನ್ನಷ್ಟೇ ಅಪರಾಧ ಪ್ರಕರಣದಲ್ಲಿ ಬಳಸಿರುವ ಆರೋಪವಿದೆ. ಹೀಗಾಗಿ ವಾಹನಗಳ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ ಇರುವುದು ಸರಿ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಹೋಂಡಾ ಸಿಟಿ ಕಾರಿಗೆ 3 ಲಕ್ಷ, ಹೋಂಡಾ ಡಿಯೋ ಬೈಕ್ ಗೆ 30 ಸಾವಿರ ಹಾಗೂ ಆಟೋ ರಿಕ್ಷಾಗೆ 75 ಸಾವಿರ ರೂಪಾಯಿ ಮೊತ್ತದ ಬಾಂಡ್ ಪಡೆದು ವಾಹನಗಳನ್ನು ಅವುಗಳ ಮಾಲಿಕರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಸುದ್ದಿ ಮೂಲ: ಲಾಟೈಮ್