ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಏಕೆ?

ಗೋಪಾಲಕೃಷ್ಣ ಹರಳಹಳ್ಳಿ

ದೇಶದಲ್ಲಿ ದಲಿತರ ಪ್ರಜ್ಞೆ ಜಾಗೃತಗೊಳ್ಳುತ್ತಿದಂತೆ ವೈಚಾರಕತೆ, ಸಮಾನತೆ, ಸೈದಾಂತಿಕ ಚಿಂತನೆಗಳು ಮುನ್ನೆಲ್ಲೆಗೆ ಬರುತ್ತಿದ್ದು, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಬಂಡೇಳುತ್ತಿರುವ ಚಳುವಳಿ ಪ್ರಜ್ಞೆ, ಸಂಘಟನಾ ಸಾಮರ್ಥ್ಯಗಳು ವಿಸ್ತಾರಗೊಳ್ಳುತ್ತಿವೆ.

ಎಂಟು ವರ್ಷಗಳ ಬಿಜೆಪಿ-ಮೋದಿಯವರ ಅಧಿಕಾರ ಅವಧಿಯನ್ನು ಗಮನಿಸುವಂತಾದರೆ ಆರಂಭದಲ್ಲಿಯೇ ಅಸ್ಪೃಶ್ಯತಾ ಆಚರಣೆಗಳು ತೀವ್ರವಾಗಿ ಗೋಚರಿಸಿ ಕೊಂಡಿವೆ.

ಬೌದಿಕ ಶಿಕ್ಷಣದಿಂದ ವಂಚನೆಗೆ ಒಳಗಾದ ರೋಹಿತ್ ವೆಮುಲ ಆತ್ಮಹತ್ಯೆ ಮಾಡಿಕೊಂಡ ದಲಿತರಿಗೆ ಉನ್ನತ ಶಿಕ್ಷಣವನ್ನು ವಂಚಿಸಲಾಗುತ್ತಿದೆ ಎಂಬುದು ಅರಿವಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಆದಿತ್ಯ ನಾಥ್‌ರು `ಗೋಹತ್ಯೆ ತಡೆ’ಗೆ ಪಡೆಯನ್ನು ಕಟ್ಟಿ ಪೊಲೀಸ್ ನೈತಿಕಗಿರಿಯ ಪ್ರದರ್ಶನವಾಯಿತು. ಹರಿಯಾಣದಲ್ಲಿ ಎರಡು ದಲಿತ ಶಿಶುಗಳನ್ನು ಸೀಮೆಎಣ್ಣೆ ಹಾಕಿ ಸುಟ್ಟರು, ಉತ್ತರ ಪ್ರದೇಶದ ಸಹರತ್ ಪುರದಲ್ಲಿ ಸಬ್ರಿಪುರ 180 ದಲಿತ ಕುಟುಂಬಗಳ ಮೇಲೆ ದಾಳಿ ನಡೆಯಿತು. ರಣ ಪ್ರತಾಪ್ ಸಿಂಹರ್ ಮೆರವಣಿಗೆ ನಡೆಸಿ ಸಂತ ರವಿ ದಾಸರ ಪ್ರತಿಮೆ ಅಂಬೇಡ್ಕರ್ ಮೇಲೆ ದಾಳಿ ನಡೆಸಿದರು. ಇದಕ್ಕೆಲ್ಲ ಆರ್.ಎಸ್.ಎಸ್. ಬೆಂಬಲವಾಗಿ ನಿಂತಿತು.

ಗುಜರಾತಿನ ಊನಾದಲ್ಲಿ ಹಸುವಿನ ಮಾಂಸ ಮಾರಾಟ ಮಾಡುತ್ತಿದರು, ತಿನ್ನುತ್ತಿದ್ದಾರೆ ಎಂದು ದಲಿತರ ಮೇಲೆ ದಾಳಿ ದೌರ್ಜನ್ಯ ಗುಜರಾತಿನ ಲಂಬೊಧಿರ ಗ್ರಾಮದಲ್ಲಿ ದಲಿತ ಯುವಕರು ಮೀಸೆ ಬಿಟ್ಟರೆಂದು ದಲಿತ ಯುವಕನನ್ನು ಇರಿದು ಕೊಂದರು. ಹರಿಯಾಣದ ಕುರುಕ್ಷೇತ್ರದ ಝನಾ 15 ವರ್ಷದ ದಲಿತ ಬಾಲಕಿ ಅತ್ಯಾಚಾರ ನಡೆಯಿತು. ದಲಿತ ಯುವಕರು ಗಾರ್ಬ ನೃತ್ಯ ನೋಡಿದ್ದಕ್ಕಾಗಿ ದೌರ್ಜನ್ಯ. ಮೇಲ್ಜಾತಿಯುವರ ಬಕೆಟ್ ಮುಟ್ಟಿದ್ದಕ್ಕಾಗಿ ದಲಿತ ಮಹಿಳೆ ಗರ್ಬಿಣಿ ಸಾವಿತ್ರಿದೇವಿ ಮೇಲೆ ಹಲ್ಲೆ. 2018 ಆಗಸ್ಟ್ 10 ರೊಹಕ್ಸ್ ಎಂಬ ದಲಿತ ಯುವಕನೊಂದಿಗೆ ವಿವಾಹ ಮಾಡಿಕೊಂಡ ವಿನುತಳನ್ನು ನ್ಯಾಯಾಲಯದ ಆವರಣದಲ್ಲೆ ಗುಂಡುಹಾರಿಸಿ ಹತ್ಯೆ ಮಾಡಿದ ಘಟನೆ ಹೈದರಾಬಾದಿನಲ್ಲಿ ನಡೆಯಿತು. ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಒಂದು ಕೊಲೆಗೆ 1 ಕೋಟಿ ಸುಪಾರಿ ನೀಡಿ ಯುವತಿಯ ತಂದೆ ಹೈದರಾಬಾದ್ ಮಿದ್ಯಾಲಗುಡನಗರ ಪರಿಶಿಷ್ಟ ಜಾತಿಗೆ ಸೇರಿದ ಯುವಕ ಪ್ರಣಯ ಮತ್ತು ಅಮೃತ್‌ವರ್ಷಿಣಿರನ್ನು ಹತ್ಯೆ ಮಾಡಲಾಯಿತು.

ಮನುವಾದಿಗಳು ದೆಹಲಿಯ ಜಂತರ್-ಮಂತರ್ ಬಳಿ ಸಂವಿಧಾನದ ಪ್ರತಿಯನ್ನು ಏಪ್ರಿಲ್-11 ರಂದು ಸುಟ್ಟರು. ಇದೇ ಸಂದರ್ಭದಲ್ಲಿ ಧರ್ಮ ಸಂಸದರು ಮೀಸಲಾತಿ ವಿರೋಧಿಸಲು ತೀರ್ಮಾನಿಸಿದರು. ಮುರ್ದಾಬಾದ್ ಎಂದು ಕೂಗಿದರು. ಲೋಕಸಭಾ ಸದಸ್ಯರಾದ ಗಣಪತಿಹೆಗಡೆ ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬೊಬ್ಬೆ ಹೊಡೆದರು. ಇತರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್.ಎಸ್.ಎಸ್. ಸದಸ್ಯರನ್ನು ಸೇರಿಸಿದರು. ಪುಣೆ ಬಳಿ ಕೊರೆಗಾಂವ್ ವಿಜಯೋತ್ಸವದಲ್ಲಿ ಡಾ|| ಆನಂದ್ ತೇಲ್‌ತುಂಬ್ಲೆ, ಸೇರಿದಂತೆ ಅನೇಕ ಚಿಂತಕರನ್ನು, ವಿಚಾರವಾದಿಗಳನ್ನು ಜೈಲಿಗೆ ಹಾಕಿದ್ದಾರೆ. ಕೊರೆಗಾವ್ ಯುದ್ದದಲ್ಲಿ ದಲಿತರು ನಿರ್ವಹಸಿದ ಧೀರೊಧತ ಸ್ಮರಣೆ ಕಾರ್ಯಕ್ರಮದ ಮೇಲೆ ನಡೆಸಿದ ದಾಳಿ ಇದಾಗಿದೆ. ನಾಗಪುರದಲ್ಲಿ ಆರ್.ಎಸ್.ಎಸ್. ಮುಖಂಡ ಮೋಹನ್ ಭಾಗವತ್ ಮೀಸಲಾತಿ ಬಗ್ಗೆ ಚರ್ಚೆ ನಡೆಯಬೇಕೆಂದು ಗುಲು ಎಬ್ಬಿಸಿದ್ದರು.

ಕೋಮುವಾದಿ ಗೋಹತ್ಯೆ ಮಸೂದೆ, ದಲಿತರ ಮೀಸಲಾತಿ ಸೌಲಭ್ಯಗಳ ಬಗ್ಗೆ ತಪ್ಪು ಅಭಿಪ್ರಾಯ ಸಂವಿಧಾನದ ಭದ್ರತೆಯನ್ನು ಸಡಿಲಗೊಳಿಸಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಜಾರಿಗೆ ಕಾಯಿದೆ ಬದಲಿಸಿ ಸೇವಾ ವಲಯಕ್ಕೆ ತಂದರು. ಪಾರ್ಲಿಮೆಂಟ್‌ನಲ್ಲಿ ಪರಿಶಿಷ್ಟ ಜಾತಿ/ಪಂಗಡದ ದೌರ್ಜನ್ಯ ತಡೆ ಕಾಯಿದೆ. ಬಲ ಪಡಿಸುವ ಬದಲು ನ್ಯಾಯಲಯಗಳು ಮೂಲಕ ಸಡಿಲಗೊಳಿಸುವ ಪರಿಸ್ಥಿತಿ ಉಂಟಾಯಿತು. ಲೋಕಸಭೆಯಲ್ಲಿ ಮಂಡಿಸಲೇ ಇಲ್ಲಾ.

ಎರಡು ವರ್ಷಗಳ ಮೋದಿ ಬಿಜೆಪಿ ಸರ್ಕಾರ ಅನುಸರಿಸಿದ ದಲಿತ ವಿರೋಧ ನೀತಿಗಳು ದಲಿತರ ಮೇಲೆ ದೌರ್ಜನ್ಯ ತೀವ್ರವಾಗಲು ಕಾರಣೀ ಬೂತವಾಗಿದೆ ಎಂಬುದು ಕಟು ಸತ್ಯವಾಗಿದೆ.

ರಾಜ್ಯದಲ್ಲಿ ಇತ್ತೀಚಿನ ಎರಡು ವಾರಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವ ಆಘಾತಕಾರಿ ಸಂಗತಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನಡೆದಿರುವ 3 ಅಸ್ಪೃಶ್ಯತೆ ಆಚರಣೆ ಘಟನೆಗಳು ರಾಜ್ಯದ ಎಲ್ಲಾ ಗ್ರಾಮಗಳಿಲ್ಲಿ ಜಾತಿ ತಾರತಮ್ಯ ಬಲವಾಗಿದೆ ಎಂಬುದನ್ನು ದೃಢಕರಿಸುತ್ತದೆ. ಭಾರತ ದೇಶ 75ನೇ ಅಮೃತ ಮಹೋತ್ಸವ ಅದ್ದೂರಿ ಸಂದರ್ಭವನ್ನು ಉಪಯೋಗಿಸಿಕೊಂಡ ದಿನಪತ್ರಿಕೆ, ಮಾಧ್ಯಮಗಳ ಮತ್ತು ಸರ್ಕಾರದ ಪ್ರಚಾರಕ ಮಾಧ್ಯಮಗಳ ಮೂಲಕ ಎಲ್ಲಿಲ್ಲದ ಡೊಂಗಿ ಪ್ರಚಾರ ಮಾಡಿ ದಲಿತರನ್ನು ಒಲೈಸಲು ಪ್ರಯತ್ನಿಸುತ್ತಿದೆ. ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೆರಹಳ್ಳಿಯಲ್ಲಿ ದಲಿತ ಬಾಲಕ ಚೇತನ ಗುಜ್ಜರ ಕೋಲು ಮುಟ್ಟಿದಕ್ಕೆ ಮೈಲಿಗೆ ಆಯಿತೆಂದು ಸವರ್ಣೀಯರು ಎಬ್ಬಿಸಿ ಗಲಾಟೆ, ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಹುಡುಗನ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ 60 ಸಾವಿರ ದಂಡ ವಿಧಿಸಲು ನಿರ್ಧರಿಸಿರುವುದು ದಂಡ ನೀಡದಿದ್ದರೆ ಊರು ಬಿಟ್ಟು ತೊಲಗಬೇಕೆಂದು ಆಜ್ಞೆಪಿಸಿರುವುದು ದೇಶದ ಜಾತಿ ವ್ಯವಸ್ಥೆ ಎಷ್ಟು ಜಟಿಲವಾಗಿದೆ ಎಂಬುದನ್ನು ಸಾಭೀತು ಮಾಡಿದೆ. ಕೂಲಿ ಮಾಡುವ ಈ ದಲಿತ ಪರ ಮಾತನಾಡಲು ಯಾವ ದೇವರು ಬರಲಿಲ್ಲ ಎಂಬುದನ್ನು ಪ್ರಜ್ಞಾವಂತ ಅರಿತುಕೊಳ್ಳಬೇಕು.

ಅಕ್ಟೋಬರ್ ತಿಂಗಳು 2 ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ಗುಟ್ಟೂರು ಮತ್ತು ದೊಡಪುರ ಗ್ರಾಮದ ನಡುವೆ ಇರುವ ಪೆದ್ದಪಲ್ಲಿ ಗಂಗಮ್ಮ ದೇವಸ್ಥಾನ ಪೂಜೆ ಸಲ್ಲಿಸಲು ಹೋದ ಗುಟ್ಟುರಿನ ದಲಿತ ಮುನಿರಾಜ್ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ ಮುನ್ನಿರಾಜ ತಲೆಗೆ ಮಾರಕ ಅಸ್ತ್ರಗಳಿಂದ ದೌರ್ಜನ್ಯ ನಡೆಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕ್‌ನಲ್ಲಿರುವ ಕೆಂಪದೇವನಹಳ್ಳಿಯಲ್ಲಿ ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ದಲಿತ ಚಾಲಕನನ್ನು ಕಂಬಕ್ಕೆ ಕಟ್ಟಿ ದೌರ್ಜನ್ಯ ಮಾಡಲಾಗಿದೆ.

ಕೋಲಾರ ಜಿಲ್ಲೆಯ ದಾನವಹಳ್ಳಿ ದಸರ ಉತ್ಸವ ಊರಿನ ಗ್ರಾಮ ದೇವತೆ ಕಾಟೇರಮ್ಮ ಮತ್ತು ಗಂಗಮ್ಮ ದೇವಿಯರ ದಸರ ಮಹೋತ್ಸವ ಈ ಸಂದರ್ಭದಲ್ಲಿ ದೇವರ ಮೆರವಣಿಗೆ ದಲಿತರ ಕೇರಿಗೆ ಬರುತ್ತಿರಲಿಲ್ಲ. ಬಂದರು ಹೆಚು ಸಮಯವಿರುತ್ತಿರಲಿಲ್ಲ ಇದನ್ನು ಊರಿನ ದಲಿತರು ದೇವರು ಕೇರಿಗೆ ಬರಬೇಕೆಂದು ಒತ್ತಾಯಿಸಿದಾಗ ಮೇಲ್ಜಾತಿ ಜನರು ಇಟ್ಟಿಗೆ ಕಲ್ಲಿನಿಂದ ಭಾರಿಸಿ ದೊಣ್ಣೆಗಳಿಂದ ದಲಿತರ ಕೇರಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಪೊಲೀಸರು ಊರಿಗೆ ಬಂದಾಗ ಪೂಜಾರಿ ಮೇಲೆ ದೇವರು ಬಂದಿದೆ ದೇವರನ್ನು ನನ್ನ ಮೆರವಣಿಗೆ ನಿಲ್ಲಿಸಿದರಲ್ಲೂ ಎಂದು ಕೂಗಾಡಿತೆ ಹೊರತು ದಲಿತರ ಕೇರಿ ಹೋಗಿ ಎಂದು ದೇವರು ಹೇಳಲೇ ಇಲ್ಲ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಮುಳಕಟ್ಟಮ್ಮ ದೇವಸ್ಥಾನದ ಪೂಜಾರಿ ದಲಿತ ಅನಿಲ್ ರಾಜ್ ಕುಟುಂಬಕ್ಕೆ ಪೂಜೆ ಮಾಡಿಕೊಡುವುದಿಲ್ಲವೆಂದು ಪೂಜೆ ಸಾಮಾನು ಹೊರಗಿಟ್ಟಿದ್ದಾರೆ. ದೇವಸ್ಥಾನದ ಸಮಿತಿಯವರನ್ನು ಕೇಳು ಅವರು ಹೇಳಿದ್ದಾರೆ ಎಂದಿದ್ದಾರೆ. ಊರಿನ ಮೇಲ್‌ಜಾತಿಯವರೇ ಇರುವ ಕಮಿಟಿಯ ಕುಮಕ್ಕು ನೀಡಿರುವುದು ಸ್ಪಷ್ಟವಾಗಿದೆ.

ಸರ್ಕಾರದ ದಾಖಲೆಗಳಲ್ಲಿ ದೌರ್ಜನ್ಯದ ಕುರಿತು ಏನು ಹೇಳುತ್ತದೆ

ಕೇಂದ್ರ ಸರ್ಕಾರ ಅಧೀನದಲ್ಲಿರುವ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ಪ್ರಕಾರ 2021 ವಿವರದಂತೆ ಪರಿಶಿಷ್ಟ ಜಾತಿ ಶೇ. 1.2 ಮತ್ತು ಪರಿಶಿಷ್ಟ ಪಂಗಡ ಶೇ. 6.4% ರಷ್ಟು ದೌರ್ಜನ್ಯಗಳು ನಡೆದಿವೆ. ಬಿಜೆಪಿ ಯೋಗಿಂದ್ರನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ದಲಿತರ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆದಿವೆ ಎಂದು ತಿಳಿಸುತ್ತಿದೆ. ಉತ್ತರ ಪ್ರದೇಶ ಶೇ. 25.82% ಅತಿ ಹೆಚ್ಚು ಅಸ್ಪೃಶ್ಯತೆ, ಜಾತಿ ತಾರತಮ್ಯ ಕೇಸುಗಳು ದಾಖಲಾಗಿವೆ, ರಾಜಸ್ಥಾನ 14.7%, ಮಧ್ಯಪ್ರದೇಶ 14.1%. ಇದಲ್ಲದೆ ಎಸ್‌ಸಿ ವಿರುದ್ಧದ ದೌರ್ಜನ್ಯಗಳು 2021 ರಲ್ಲಿ 6.4% ರಷ್ಟು ಎಂದು ಬಹಿರಂಗ ಪಡಿಸುತ್ತವೆ. ಮಧ್ಯಪ್ರದೇಶ 29.8% ಅತಿಹೆಚ್ಚು ಪ್ರಕರಣಗಳು, ರಾಜಸ್ಥಾನ 24%, ಒಡಿಶಾ 7.6% ಅತ್ಯಾಚಾರ(ರೇಪ್)ಕ್ಕೆ ಒಳಗಾದವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮಹಿಳೆಯರು. ಪರಿಶಿಷ್ಟ ಜಾತಿ ಮಹಿಳೆಯರು (ಸಣ್ಣ ವಯಸ್ಸಿನವರು ಸೇರಿ) ಶೇ. 7.64. ಪರಿಶಿಷ್ಟ ಪಂಗಡದಲ್ಲಿ ಶೇ.15% ಆದಿವಾಸಿ ಮಹಿಳೆಯರು. ವರದಿಯು ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ವಿವರವಾದ ಅಂಕಿಅಂಶಗಳನ್ನು ಸಹ ಮಂಡಿಸಿದೆ. ಅತ್ಯಾಚಾರದ ಪ್ರಯತ್ನ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಪ್ರಾಪ್ತ ವಯಸ್ಕರ ಅಪಹರಣದ ಪ್ರಕರಣಗಳು & ಮಹಿಳೆಯರಲ್ಲಿ 16.8% ಮತ್ತು ಮಹಿಳೆಯರಲ್ಲಿ 26.8% ರಷ್ಟಿದೆ.

ಎಸ್.ಸಿ. ಎಸ್.ಟಿ. ಬಲಪಡಿಸುವ ರಾಷ್ಟ್ರೀಯ ಒಕ್ಕೂಟ (POA) ಕಾಯಿದೆ (NCSPA)

ಇದು 500 ಕ್ಕೂ ಹೆಚ್ಚು ದಲಿತರು ಮತ್ತು ಆದಿವಾಸಿಗಳು, ನಾಗರೀಕ ಸಮಾಜದ ಸಂಘಟನೆಗಳು, ಸಮುದಾಯಗಳು, ಮುಖಂಡರು ಮತ್ತು ಕಾರ್ಯಕರ್ತರು ಒಳಗೊಂಡ ವೇದಿಕೆಯಾಗಿದೆ. ಈ ವೇದಿಕೆ NCRB 2021 ವರದಿಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ಸಂವಿಧಾನದ ರಕ್ಷಣೆ, ಸಂವಿಧಾನದ ಮಾರ್ಗಸೂಚಿ ನಿಬಂಧನೆಗಳು ಇದ್ದಗ್ಯೂ ದೇಶದ ದಲಿತರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದೆ. ಜಾತಿ ಪದ್ದತಿಗೆ ಬಲಿ ಪಶುವಾಗಿರುವುದು ಮಾತ್ರವಲ್ಲದೆ-ಸಾಮಾಜಿಕ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದಿರುಸುತ್ತಿದೆ. ದೇಶದಲ್ಲಿ ದಲಿತ ಅಪ್ರಾಪ್ತ ಬಾಲಕಿಯೊಬ್ಬಳು ಮಲವಿಸರ್ಜನೆಗೆ ಹೋದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದು ಆಕೆ ಮರಳಿ ಬಾರದೆ ಇರುವ ಪ್ರಕರಣ ನಮ್ಮ ಕಣ್ಣ ಮುಂದಿದೆ.

ಬಾಯರಿಕೆ ನೀಗಿಸಿಕೊಳ್ಳಲು ಶಾಲಾ ಮುಖ್ಯೋಪಾದ್ಯಯರ ಮಡಕೆಯನ್ನು ಮುಟ್ಟಿದಕ್ಕೆ ದಲಿತ ಬಾಲಕ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಿಂದಿನ ವರ್ಷದ ಪ್ರಕರಣಗಳು ಸೇರಿದಂತೆ 2021 ರ ಅಂತ್ಯದ ವೇಳೆಗೆ ಎಸ್.ಸಿ.ಗಳ ಮೇಲಿನ ಒಟ್ಟು 70,818 ದೌರ್ಜನ್ಯ ಪ್ರಕರಣಗಳು ತನಿಖೆ ಬಾಕಿ ಉಳಿದಿದೆ ಎಂದು ವರದಿ ತೋರಿಸುತ್ತಾರೆ. ಅದೇ ರೀತಿ ಎಸ್.ಟಿ.ಗಳ ಮೇಲಿನ 12,159 ದೌರ್ಜನ್ಯ ಪ್ರಕರಣಗಳು ತನಿಖೆಗೆ ಬಾಕಿ ಇದ್ದು ಒಟ್ಟು 2,63,512, ಎಸ್.ಸಿ. ಗಳ ಮೇಲಿನ ದೌರ್ಜನ್ಯ ಪ್ರಕರಣಗಳು. ನ್ಯಾಯಲಯದಲ್ಲಿ ವಿಚಾರಣೆಗೆ ಬಂದಿವೆ. ಭಾರತೀಯ ದಂಡ ಸಂಹಿತೆಯ (IPC) ಜೊತೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಗಳ (POA) ಕಾಯಿದೆಯಡಿಯಲ್ಲಿ ಶಿಕ್ಷೆಯ ಶೇಕಡಾವಾರು ಎಸ್.ಸಿ. ಗಳಿಗೆ 36.0% ಮತ್ತು ಎಸ್‌ಟಿ ಗಳಿಗೆ 28.1% ನಲ್ಲಿ ಉಳಿಯಿತು. ವರ್ಷಾಂತದಲ್ಲಿ ಎಸ್.ಸಿ. ಗಳ ಮೇಲಿನ ದೌರ್ಜನ್ಯದ 96.0% ಪ್ರಕರಣಗಳು ವಿಚಾರಣೆ ಬಾಕಿ ಉಳಿದಿವೆ. ಆದರೆ ಎಸ್.ಟಿ. ಗಳಿಗೆ ಶೇಕಡಾವಾರು 95.5% ರಷ್ಟಿದೆ.

ದಲಿತ ಮತ್ತು ಆದಿವಾಸಿ ಸಂತ್ರಸ್ತರಿಗೆ ತ್ವರಿತ ನ್ಯಾಯ ದೊರಕುವಲ್ಲಿ ಭರವಸೆ ಮೂಡಿಸಿದ ತಿದ್ದುಪಡಿಗಳು 2016 ರಲ್ಲಿ ಜಾರಿಗೆ ಬಂದ ನಂತರವೂ ತಿದ್ದುಪಡಿ ಮಾಡಲಾದ ಎಸ್.ಸಿ. ಮತ್ತು ಎಸ್.ಟಿ. ಗಳ (POA) ತಿದ್ದುಪಡಿ ಕಾಯಿದೆ 2015 ರ ಅನುಷ್ಟಾನವು ಸವಾಲಾಗಿಯೇ ಉಳಿದಿದೆ ಎಂದು NCPSA ನಂಬುತ್ತದೆ.

ತಿದ್ದುಪಡಿ ಮಾಡಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 1989(2015) ರ ಹೊಸ ನಿಬಂದನೆಗಳನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

ಪ್ರಬಲ ಜಾತಿಯ ಅಪರಾಧಿಗಳ ವಿರುದ್ಧ ತ್ವರಿತವಾಗಿ ಮತ್ತು ದೃಢವಾಗಿ ಕ್ರಮವನ್ನು ತೆಗೆದುಕೊಳ್ಳುವುದು ಮತ್ತು ದಲಿತರು ಮತ್ತು ಆದಿವಾಸಿಗಳ ಮಾನವಹಕ್ಕುಗಳು, ಪರಿಶಿಷ್ಟ ಜಾತಿಗಳು ಮತ್ತು ಪಂಗಡದ ಅಡಿಯಲ್ಲಿ ಮುಕ್ತ ಪಾರದರ್ಶಕ ತನಿಖೆಯನ್ನು ನಡೆಸುವುದು ಅಪರಾಧಿಗಳಿಗೆ ಸಹಾಯದ ಮತ್ತು ಕುಮ್ಮಕ್ಕು ನೀಡದ ಸರ್ಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು.

ತ್ವರಿತ ವಿಚಾರಣೆಗಾಗಿ ತಿದ್ದುಪಡಿ ಮಾಡಲಾದ ಕಾಯಿದೆಯಲ್ಲಿ ಕಡ್ಡಾಯವಾಗಿರುವ ವಿಶೇಷ ನ್ಯಾಯಲಯ ಸರ್ಕಾರ ಜಾರಿಗೊಳಿಸಬೇಕು ಎಂದು ಈಗಾಗಲೆ ದಲಿತ ಸಂಘಟನೆಗಳು ಒತ್ತಾಯಿಸಿದೆ. ರಾಜ್ಯದಲ್ಲಿ ದಲಿತ ಹಕ್ಕುಗಳ ಸಮಿತಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ವಿಶೇಷ ನ್ಯಾಯಾಲಯ ಜಾರಿ ಮಾಡಬೇಕೆಂದು ಒತ್ತಾಯಿಸಿದೆ.

ಎಸ್.ಸಿ. ಗಳ ಮೇಲಿನ ದೌರ್ಜನ್ಯದ ಒಟ್ಟು 52,159 ಪ್ರಕರಣಗಳ ಮತ್ತು ಎಸ್‌ಟಿಗಳ ಮೇಲಿನ 8825 ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ವಿಲೇವಾರಿ ಮಾಡಿದ್ದಾರೆ. ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯಗಳ ಚಾರ್ಜ್ ಶೀಟಿಂಗ್ ಶೇಕಡವಾರು 80.0% ಮತ್ತು ಪರಿಶಿಷ್ಟ ಪಂಗಡಗಳಿಗೆ 81.4% ನೊಂದಿಗೆ ಕೊನೆಗೊಂಡಿದೆ.

ಒಟ್ಟು 2,63,512 ಎಸ್ಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು 42,512 ಎಸ್ಟಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿವೆ. ಈ ಪೈಕಿ 10,108 ಎಸ್.ಸಿ.ಗಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು 1947 ಎಸ್‌ಟಿಗಳಿಗೆ ಸಂಬಂಧಿಸಿದ ಪ್ರಕರಣಗಳು.

ಖುಲಾಸೆಗೊಂಡ ಪ್ರಕರಣಗಳು ಎಸ್.ಸಿ. 5628 ಮತ್ತು ಎಸ್‌ಟಿ 1399 ಪ್ರಕರಣಗಳು. 2015-49,946, 2016-47,369, 2017-50,328, 2018-49,321, 2019-53,531, 2020-58,563, 2021-60,045. ಬಿಜೆಪಿ ಸರ್ಕಾರ ಅಧಿಕಾರವಧಿಯಲ್ಲಿ ಪ್ರತಿ ವರ್ಷ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. 2015 ರಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜ್ಯನ್ಯ ತಡೆ) ಕಾಯಿದೆ ಬಲಪಡಿಸಲು ಹಲವು ನಿಬಂದನೆಗಳಾಗಿ ತಂದರು ಅವು ಜಾರಿಯಾಗುತ್ತಿಲ್ಲ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮೀಸಲಾತಿ ವಿರೋಧಿ ಭಾವನೆಗಳು: ದಲಿತ ನೈಜಸ್ಥಿತಿ ತಿಳಿಸಿಲು ವಿಫಲವಾದ ಸರ್ಕಾರಗಳು

ಭಾರತದ ವರ್ಣ ವ್ಯವಸ್ಥೆಯ ಕ್ರೂರ ನೀತಿಗಳಿಂದಾಗಿ ಅಸ್ಪೃಶ್ಯತೆ, ಜಾರಿ ತಾರತಮ್ಯತೆಯಿಂದ ಮನುಷ್ಯ ಮನುಷ್ಯರ ನಡುವೆ ಅಸಮಾನತೆ ಉಂಟಾಯಿತು ಎಂಬುದು ಸತ್ಯಸಂಗತಿ. ಈ ಕಾರಣದಿಂದ ಜಾತಿ ಬೇದ ವ್ಯವಸ್ಥೆಯಿಂದ ದಲಿತರನ್ನು ಊರ ಹೊರಕ್ಕೆ ತಳ್ಳಲ್ಪಟರು, ಭೂಮಿ, ವಿದ್ಯೆ ಸಿಗದಂತೆ ಕಟ್ಟುವಾಗಿ ಪ್ರಾಣಿಗಳಿಗಿಂತ ಹೀನಾಯ ವ್ಯವಸ್ಥೆ ಉಂಟಾಯಿತು. ಇದರಿಂದ ಶತಮಾನಗಳ ಕಾಲದಿಂದ ಇಂದಿನವರೆಗೆ ಜಾತಿ ಪದ್ಧತಿ ನಡೆದುಕೊಂಡು ಬಂದಿದೆ.

ಸ್ವಾತಂತ್ರ್ಯದ ಭಾರತದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಅಸಮಾನತೆ ವಿರುದ್ಧ ಹೋರಾಟದ ಅನುಭವದಿಂದ ಮೂಡಿ ಬಂದ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯವನ್ನು ಒದಗಿಸಿದರಿಂದ ಇದರಿಂದ ದಲಿತರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು.

1947 ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಪರಿಶಿಷ್ಟ ವರ್ಗಕ್ಕೆ ಶೇ. 12.5 ರಷ್ಟು ಮೀಸಲಾತಿ ನೀಡಿತು. ಕರ್ನಾಟಕ ರಾಜ್ಯ ಸರ್ಕಾರ 10-08-1950 ರಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ ಪ.ಜಾ. ಗಳಿಗೆ ಶೇ. 18 ಮೀಸಲಾತಿ ಘೋಷಿಸಿತು. 29-10-1956 ರಲ್ಲಿ ಪ್ರ.ಜಾ. ಶೇ 15% ಮತ್ತು ಶೇ. 3 ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಲಾಯಿತ್ತು. 4-2-1958 ರಲ್ಲಿ ಹಿಂದುಳಿದ ವರ್ಗದವರಿಗೂ ಶೇ. 57 ರಷ್ಟು ಮೀಸಲಾತಿ ಒದಗಿಸಿತು.

ಕರ್ನಾಟಕ ಸರ್ಕಾರವು 103 ನೇ ತಿದ್ದುಪಡಿ ಮಾಡಿ ಸಾಮಾನ್ಯ ವರ್ಷದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ. 10 ರಷ್ಟು ಮೀಸಲಾತಿ ನೀಡಿತು. ನ್ಯಾಯಮೂರ್ತಿ ಹೆಚ್.ಎಸ್. ನಾಗಮೋಹನ್‌ದಾಸ್‌ರವರ ಮೀಸಲಾತಿ ಭ್ರಮೆ ಮತ್ತು ವಾಸ್ತವದ ಪುಸ್ತಕದ ಮಾಹಿತಿಯಂತೆ 2018 ರಲ್ಲಿ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯಂತೆ. ಕೇಂದ್ರದಲ್ಲಿ 37%, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 2.59 ಲಕ್ಷ. ಈ ಹುದ್ದೆಗಳು ಭರ್ತಿಯಾಗಿರುವುದಿಲ್ಲ.

ಇಷ್ಟೆಲ್ಲಾ ಅಂಕಿ ಅಂಶಗಳಿದ್ದರು ಮೀಸಲಾತಿ ಜಾರಿ ಸತ್ಯಾಂಶವನ್ನು ದೇಶದ ಜನರ ಅರ್ಥ ಮಾಡದೆ ಹೊಂದಿದು ವಿಪರ್ಯಾಸವೇ ಸರಿ. ಡಾ|| ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯಗಳನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸಿ ದೇಶದ ಜನರಲ್ಲಿ ಸಮತೋಲನ ಬರಬೇಕೆಂದು ತಿಳಿಸಿದ್ದರು. ಆದರೆ ಆಳುವ ಸರ್ಕಾರಗಳು ಬಂಡವಾಳಶಾಹಿ ಭೂಮಾಲಕರ ಪರ ನೀತಿಗಳನ್ನು ಅನುಸರಿಸಿದ ಫಲವಾಗಿ ಇದು ಸಾರ್ಥಕತೆ ಪಡೆಯಲಿಲ್ಲ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉನ್ನತ ಶಿಕ್ಷಣದಲ್ಲಿ ಇನ್ನೂ ಕೂಡ ಮೀಸಲಾತಿ ಪಡೆಯಲಿಲ್ಲ ಶಕ್ತರಾಗಿಲ್ಲ. ಧೀರ್ಘ ಕಾಲಮೀಸಲಾತಿ ದಲಿತರಿಗೆ ಪೂರ್ಣ ಪ್ರಮಾಣದಲ್ಲಿ ಧಕ್ಕಿರುವುದಿಲ್ಲ ದೇಶದ ಒಟ್ಟು ದಲಿತರಲ್ಲಿ ಶೇ. 82 ರಷ್ಟು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಕೃಷಿ ಕೂಲಿಗಾರರಾಗಿದ್ದಾರೆ. ಅತಿ ಕಡಿಮೆ ಭೂಮಿ 2 ಎಕರೆ ಗಿಂತ ಕಡಿಮೆ ತುಂಡು ಭೂಮಿ ಇರುವವರ ಸಂಖ್ಯೆ ಅಧಿಕವಾಗಿದೆ.

ಜಾತಿ ತಾರತಮ್ಯ-ಅಸ್ಪೃಶ್ಯತೆ ಆಳವಾಗಿ ಬೇರೂರಿದ್ದು ದಲಿತರು ಆತಂಕದ ಬದುಕು ನಡೆಸುತ್ತಿದ್ದಾರೆ.

ದೇಶದಲ್ಲಿ ಹಿಂದುತ್ವದ ವಿಷಮನಸ್ಸುಗಳಿಗೆ ಈ ಪರಿಸ್ಥಿತಿ ಅರ್ಥವಾಗದ ವಿಷಯವಲ್ಲ. ಹಿಂದೂ ಧಾರ್ಮಿಕ ದೇಶವನ್ನು ಮಾಡಬೇಕೆನ್ನುವ ಅವರ ಚಪಲತಕ್ಕೆ ದೇಶದ ದಲಿತರು ಬಲಿಯಾಗುತ್ತಿದ್ದಾರೆ. ಮನುವಾದಿಗಳು ಸನಾತನವಾದಿಗೂ ಕೋಮುದಳ್ಳುರಿಗೆ ತುಪ್ಪಸುರಿಯುತ್ತಿರುವ ಪರಿಸ್ಥಿತಿ ಭಾರತದ್ದು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ದೌರ್ಜನ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ

ರಾಜ್ಯದಲ್ಲಿ ಹಿಂಬಾಗಿಲಿಂದ ಅಧಿಕಾರಕ್ಕೆ ಬಂದ ಯಡೂರಪ್ಪನವರ ಬಿಜೆಪಿ ಸರ್ಕಾರ ಅತಂತ್ರದ ಸರ್ಕಾರವಾಗಿದ್ದಾಗಲೂ-ಕುದುರೆ ವ್ಯಾಪಾರ ನಡೆಸಿ-ಹಣದಿಂದ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದಿತ್ತು. ಇವರ ಅಧಿಕಾರದ ಅಮಲಿನಿಂದ ಜಾತಿ ವೈಷಮ್ಯ, ಜಾತಿ ದೌರ್ಜನ್ಯಕ್ಕೆ ಕುಮಕ್ಕು ಸಿಕ್ಕಿತು. ಈ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದಲಿತ ಮರಣ ಹೋಮ ನಡೆದಿದೆ. ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ, ನಿತ್ಯದ ಸುದ್ದಿಗಳಾಗಿವೆ.

ರಾಜ್ಯದಲ್ಲಿ ವಿಜಯಪುರ ಜಿಲ್ಲೆಯ ದಲಿತ ವಿದ್ಯಾರ್ಥಿನಿ ಧಾನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ, ಇದೇ ಜಿಲ್ಲೆಯಲ್ಲಿ ಸಿಂದಗಿಯಲ್ಲಿ ಅನಿಲ್ ಇಂಗಳಗಿ ಎಂಬ ದಲಿತ ತನ್ನ ಊರಿನ ಜಗಲಿಕಟ್ಟೆ ಮೇಲೆ ಸವರ್ಣಿಯ ಪಕ್ಕದಲ್ಲಿ ಕುಳಿತ ಕಾರಣಕ್ಕೆ ಕೊಲೆ, ವಿಜಯಪುರ ನಗರದಲ್ಲಿ ಅಯ್ಯಪ್ಪನ ಪೂಜೆಗೆ ಇಟ್ಟಿದ್ದ ಪ್ರಸಾದವನ್ನು ಮುಟ್ಟಿದನೆಂದು ಕೊಲೆ ಮಾಡಿದರು. ಸಿಂಧಗಿಯಲ್ಲಿ ಮೇಲ್ ಜಾತಿ ಹುಡುಗಿ ಪ್ರೀತಿಸುತ್ತಿದ ದಲಿತ ಯುವಕನನ್ನು ಹಳ್ಳಕ್ಕೆ ಹಾಕಿ ಹುಡುಗ ತಾಯಿ ಎದುರಿನಲ್ಲಿ ಚಚ್ಚಿ ಸಾಯಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲೂಕಿನ ಪೊಲೀಸ್ ಅಧಿಕಾರಿ ದಲಿತ ಯುವಕನಿಗೆ ಹುಚ್ಛೆ ಕುಡಿಸಿ ದೌರ್ಜನ್ಯ ನಡೆಸಿದ ಘಟನೆ ನಡೆಯಿತು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕ್ ಮಲ್ಲೆಕಾವು ಗ್ರಾಮದಲ್ಲಿ ದೊಡಮ್ಮ ದೇವಿಗೆ ದಲಿತ ಜಗದೀಶ ಕುಟುಂಬ ಪೂಜೆ ಮಾಡಲು ದೇವಸ್ಥಾನಕ್ಕೆ ಪ್ರವೇಶ ಮಾಡಿದಕ್ಕೆ ಊರಿನ ಮೇಲ್ ಜಾತೀಯವರು 25 ಸಾವಿರ ದಂಡ. ದೇವಸ್ಥಾನಕ್ಕೆ ಸುಣ್ಣಬಣ್ಣ ಹೊಡೆಸಕೊಡಬೇಕೆಂದು ಊರಿನಿಂದ ಸಾಮಾಜಿಕ ಬಹಿಷ್ಕಾರ ಹಾಕಿದರು. ಇದೇ ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಾಪುರಲ್ಲಿ ದಲಿತ ಹನುಮಂತಪ್ಪ ತನ್ನ ಜಮೀನ್‌ನಲ್ಲಿ ಬೋರ್‌ವೆಲ್ ಹಾಕಿಸಿದಾಗ ಹೆಚ್ಚು ನೀರು ಬಂತು. ಅದನ್ನು ಸಹಿಸದ ಪಕ್ಕದ ಜಮೀನಿನ ಮೇಲ್ ಜಾತಿಯವರು ಹನುಮಂತಪ್ಪ ನನ್ನು ಅಡ್ಡಗಟ್ಟಿ ಕೈ ಕಾಲು ಮುರಿದು ಹಾಕಿದರು. ಗುಬ್ಬಿ ತಾಲೂಕ್‌ನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರನ್ನು ಅಮಾನುಷವಾಗಿ ಕೊಚ್ಚಿ ಕೆರೆಗೆ ಬಿಸಾಡಿದರು. ಇದೇ ತಾಲ್ಲೂಕ್‌ನ ನಿಟ್ಟೂರು ಗ್ರಾಮದಲ್ಲಿ ಮುಳ್ಳುಕಟ್ಟಿಮ್ಮ ದೇವಸ್ಥಾನದಲ್ಲಿ ದಲಿತರಿಗೆ ಪೂಜೆ ಮಾಡಲು ನಿರಾಕರಣೆ ಮಾಡಿ ದಲಿತ ಕುಟುಂಬಕ್ಕೆ ಅವಮಾನ ಮಾಡಿದ ಘಟನೆ ನಡೆಯಿತು.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶನಿದೇವರ ದೇವಸ್ಥಾನಕ್ಕೆ ಬಂದ ದಲಿತ ಯುವಕ ಪ್ರತಾಪನನ್ನು ಬೆತ್ತಲೆಗೊಳಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮಾಡಿದ ವಿಚಾರ ರಾಜ್ಯದ ಗಮನಕ್ಕೆ ಬಂದಿದೆ.

ಮಂಡ್ಯದ ಕೆ.ಆರ್.ಪೇಟೆ ಹರಿಹರಪುರದಲ್ಲಿ ದಲಿತರು ಊರಿನ ಜಾತ್ರೆಯಲ್ಲಿ ದೇವಸ್ಥಾನ ಪ್ರವೇಶ ಮಾಡಿದ್ದರಿಂದ ಮೇಲ್‌ಜಾತಿಯ ಸವರ್ಣಿಯರು ದಲಿತರ ಕೇರಿಗೆ ನುಗ್ಗಿ ದಾಂದಲೆ ನಡೆಸಿದ್ದರಿಂದ ದಲಿತ ಯುವಕ ತಲೆಗೆ ಏಟು ಬಿದ್ದು ಆಸ್ಪತ್ರೆ ಸೇರಿದರು.

ಉತ್ತರ ಕರ್ನಾಟಕದ ಜೇವರ್ಗಿ ಜಿಲ್ಲೆಯ ಚನ್ನೂರಿನಲ್ಲಿರುವ ದಲಿತರ ಬಾವಿಗೆ ವಿಷಹಾಕಿ ದಲಿತರ ಮಾರಣ ಹೋಮ ನಡೆಸುವ ಹುನ್ನಾರ ಬೆಳಕಿಗೆ ಬಂದಿತು.

ಬಳ್ಳಾರಿ-ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕ್ ಗೋನಾಳ ಗ್ರಾಮದಲ್ಲಿ ದಲಿತ ಯುವಕ ನನ್ನ ಹಾಡು ಹಗಲೇ ಕೈ ಕತ್ತರಿಸಿ ಅಮಾನುಷವಾದ ಘಟನೆ ನಡೆದುಹೋಯಿತು.

ಬೆಂಗಳೂರು ನಗರದ ಅಂಚಿನಲ್ಲಿರುವ ಬೆಂ. ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಾಚನ ಹಳ್ಳಿಯಾಗೆ ದಲಿತರು ದೇವರ ಜಾತ್ರೆಯಲ್ಲಿ ತಮಟೆ ಬಾರಿಸಲು ನಿರಕರಿಸಿದ ಕಾರಣಕ್ಕೆ ದಲಿತರ ಮೇಲೆ ದೌರ್ಜನ್ಯ ನಡೆಯಿತು.

ವಿಜಯನಗರ ಹೊಸಪೇಟೆ ಕನ್ನಡ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿ ವೇತನ ನೀಡದೆ ಕಿರುಕುಳ ನೀಡಿ ಕುಲಪತಿಗಳೇ ದೌರ್ಜನ್ಯ ನಡೆಸಿದ ಘಟನೆಗಳು.

ರಾಯಚೂರು ಜಿಲ್ಲೆಯಲ್ಲಿ ನ್ಯಾಯಲಯದಲ್ಲಿ ಜನವರಿ 26 – ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರವನ್ನು ನ್ಯಾಯದೀಶ ಮಲ್ಲಿಯಪ್ಪಗೌಡರವರು ತೆಗೆಸಿ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಘಟನೆ ರಾಜ್ಯದಲ್ಲಿ ದಲಿತರನ್ನು ರೊಚ್ಚಿಗೆಬ್ಬಿಸಿ ಬೃಹತ್ ರ‍್ಯಾಲಿಗೆ ಕಾರಣವಾಯಿತು.

Donate Janashakthi Media

One thought on “ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಏಕೆ?

Leave a Reply

Your email address will not be published. Required fields are marked *