ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರ ರಾವ್

ಡಾ.ಶಮ್ಸುಲ್ ಇಸ್ಲಾಂ

74 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣರಾದವರೆಂದು ಹೇಳಿದ್ದ ವಿ.ಡಿ.ಸಾವರ್ಕರ್ ಇಂದು ಅದೇ ಮಹಾತ್ಮ ಗಾಂಧಿಯವರೊಂದಿಗೆ ಸಮಾನ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ. ಸಂಸದ್ ಭವನದಲ್ಲಿ ಇವರಿಬ್ಬರ ಫೋಟೋಗಳು ಒಂದೆಡೆಯಲ್ಲೇ ಇವೆ. ಈಗ ದೇಶವನ್ನು ಆಳುತ್ತಿರುವ ಮಂದಿ ಅವರನ್ನು ಸ್ವಾತಂತ್ರ್ಯ ಸಮರದ ‘ವೀರ’ ಎನ್ನುತ್ತಿದ್ದಾರೆ. ಆದರೆ ಅವರು ಬ್ರಿಟಿಶ್ ಆಳರಸರ ಕ್ಷಮೆ ಕೋರಿ, ತನ್ನನ್ನು ಬಿಡುಗಡೆ ಮಾಡಬೇಕು ಎಂದು ಒಂದಲ್ಲ, ಎರಡಲ್ಲ, ಐದು ಕ್ಷಮಾಪತ್ರಗಳನ್ನು ಬರೆದಿದ್ದರು ಎಂದು ಬಯಲಾದಾಗ, ಅದು, ಸ್ವಾತಂತ್ರ್ಯ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಲು ಅವರ ರಣನೀತಿಯಾಗಿತ್ತು ಎಂದು ಅವರ ಬೆಂಬಲಿಗರು ಹೇಳುತ್ತಿದ್ದರೆ, ಕಳೆದ ವರ್ಷ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್‌ರವರು ಅವರು ಸ್ವತಃ ಗಾಂಧೀಜಿಯ ಸಲಹೆಯಯಂತೆ ಆ ಪತ್ರಗಳನ್ನು ಬರೆದಿದ್ದರು ಎಂದರು. ಇದು ನಿಜವಲ್ಲ ಎಂದು ಬೇಗನೇ ಸಾಬೀತಾಯಿತು, ಜತೆಗೆ ಈ ‘ವೀರ’ನ ಈ ಕ್ಷಮಾಪತ್ರಗಳು ‘ರಣನೀತಿ’ಯೇನೂ ಆಗಿರಲಿಲ್ಲ ಎಂದೂ ಅವರ ಬೆಂಬಲಿಗರು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು.

ಆದರೂ ಇಂತಹ ಮಿಥ್ಯೆಗಳನ್ನು ಹೆಣೆಯುವ, ಪಸರಿಸುವ ಪ್ರಯತ್ನಗಳು ನಿಂತಿಲ್ಲ. ಇವುಗಳಲ್ಲಿ ಇತ್ತೀಚಿನದ್ದು ಅವರು ಅಂಡಮಾನ್ ಜೈಲಿನಲ್ಲಿದ್ದುಕೊಂಡೇ ಬುಲ್‌ಬುಲ್ ಹಕ್ಕಿಯ ರೆಕ್ಕೆಯೇರಿ ಪ್ರತಿದಿನ ಗುಲಾಮ ಭಾರತದಲ್ಲಿನ ಪರಿಸ್ಥಿತಿಯ ನೋಟವನ್ನು ಪಡೆಯುತ್ತಿದ್ದರು ಎಂಬುದು. ಸಹಜವಾಗಿ ಈ ಮಿಥ್ಯೆಗಳನ್ನು ಬಯಲಿಗೆಳೆಯುವ ಪ್ರಯತ್ನಗಳೂ ನಡೆದ್ತಿವೆ. ಡಾ.ಶಮ್ಸುಲ್ ಇಸ್ಲಾಮ್ ರವರ ‘ಸಾವರ್ಕರ್ ಅನ್‌ಮಾಸ್ಕ್ಡ್’ ಅಂತಹ ಒಂದು ಪ್ರಮುಖ ಕೃತಿ. ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಈ ಕೃತಿ ಹಿಂದೂ ಮಹಾಸಭಾ, ಆರೆಸೆಸ್ ಮತ್ತು ಭಾರತ ಸರಕಾರದ ಪತ್ರಾಗಾರಗಳಲ್ಲಿ ಇರುವ ಮೂಲ ದಸ್ತಾವೇಜುಗಳು ಮತ್ತು ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜತೆಗಿದ್ದ ಕ್ರಾಂತಿಕಾರಿಗಳ ಸ್ಮರಣೆಗಳನ್ನು ಆಧರಿಸಿದೆ. ಇದರಲ್ಲಿ ಏಳು ಮಿಥ್ಯೆಗಳನ್ನು ಬಯಲಿಗೆಳೆಯಲಾಗಿದೆ.

ಪ್ರಸ್ತಾವನೆ

ಈಗ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿರುವ ಹೆಸರು ಸಾವರ್ಕರ್. ಅವರ ಫೋಟೋವು ಈಗ ಸಂಸತ್ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಫೋಟೋಗಳ ಜತೆ ರಾರಾಜಿಸುತ್ತಿದೆ. ಅವರನ್ನು ‘ವೀರ’ ಸಾವರ್ಕರ್ ಎಂದು ಕರೆಯುತ್ತಾರೆ. ಆ ವೀರನ ಕುರಿತು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಏನು ಹೇಳುತ್ತಾರೆ ನೋಡೋಣ. ಫೆಬ್ರವರಿ 27, 1948 ರಲ್ಲಿ ಪ್ರಧಾನ ಮಂತ್ರಿ ನೆಹರೂರವರಿಗೆ ಬರೆದ ಪತ್ರದಲ್ಲಿ ಅವರು ಹೇಳುತ್ತಾರೆ: “ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಮತಾಂಧರ ಗುಂಪೊಂದು ಪಿತೂರಿಯನ್ನು ಮಾಡುತ್ತದೆ ಮತ್ತು ಅದನ್ನು ಆಗುವಂತೆ ನೋಡಿಕೊಳ್ಳುತ್ತದೆ.” ಮಹಾತ್ಮಾ ಗಾಂಧಿಯವರ ಹತ್ಯೆಯ ಕುರಿತು ಪಟೇಲರು ಬರೆದ ಪತ್ರ ಅದಾಗಿತ್ತು.

ಬುಲ್ ಬುಲ್ ಹಕ್ಕಿಯ ಮೇಲೆ ಸಾವರ್ಕರ್ ಜೈಲಿನಿಂದ ಹೊರಗೆ – ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

ಇವತ್ತಿನ ಹಿಂದುತ್ವ ಅನುಯಾಯಿಗಳು ಸಾವರ್ಕರ್ ಅವರನ್ನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆಂದು ವೈಭವೀಕರಿಸಲು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಆರ್.ಎಸ್.ಎಸ್. ನ ಇಬ್ಬರು ಕಟ್ಟಾಳು ಸ್ವಯಂಸೇವಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅದ್ವಾನಿ ಅವರ ನೇತೃತ್ವದಲ್ಲಿ 1990 ರ ಕೊನೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಡೆಮಾಕ್ರಾಟಿಕ್ ಅಲಯನ್ಸ್ (ಎನ್.ಡಿ.ಎ) ಸಮಯದಲ್ಲಿ ಸಾವರ್ಕರ್ ಅವರನ್ನು ದೈವತ್ವಕ್ಕೆ ಏರಿಸುವ ಪ್ರಯತ್ನ ಆರಂಭವಾಯಿತು. ಹಿಂದುತ್ವ ಸಿದ್ಧಾಂತದ ಪ್ರತಿಪಾದಕನನ್ನು ಸ್ವಾತಂತ್ರ ಹೋರಾಟಗಾರನೆಂದು ಬಿಂಬಿಸುವ ಕಾರ್ಯ ಶುರುವಾಯಿತು. ಅಂಡಮಾನಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ವಿ.ಡಿ.ಸಾವರ್ಕರ್ ವಿಮಾನ ನಿಲ್ದಾಣವೆಂದು ಮೇ 4, 2002 ರಂದು ಘೋಷಿಸುವಾಗ ಆಗಿನ ಗೃಹ ಸಚಿವರಾಗಿದ್ದ ಎಲ್.ಕೆ.ಅದ್ವಾನಿಯವರು “ಸಾವರ್ಕರ್ ಅವರು ಪ್ರತಿಪಾದಿಸಿದ ಹಿಂದುತ್ವವು ದೇಶದ ಪರಂಪರೆಯ ಬೇರುಗಳೊಂದಿಗೆ ಸಂಪೂರ್ಣವಾಗಿ ಬೆರೆತುಹೋದ ಸಿದ್ಧಾಂತವಾಗಿದೆ.” ಎಂಬ ಆರ್.ಎಸ್.ಎಸ್. ನ ನಿಲುವನ್ನು ಅಲ್ಲಿ ಪ್ರತಿಧ್ವನಿಸಿದರು. ಹಿಂದುತ್ವದ ವೈಭವೀಕರಣ ಅಲ್ಲಿಗೇ ನಿಲ್ಲಲಿಲ್ಲ. ಫೆಬ್ರವರಿ 26, 2003 ರಂದು ಸಂಸತ್ ಭವನದಲ್ಲಿ ಕೇಂದ್ರ ಸಭಾಂಗಣದಲ್ಲಿ ಸಾವರ್ಕರ್ ಅವರ ಫೋಟೋವನ್ನು ಅನಾವರಣ ಮಾಡಲಾಯಿತು. ಮಹಾತ್ಮಾ ಗಾಂಧಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಅವರ ಫೋಟೋ ಕೂಡ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ರಾರಾಜಿಸುವಂತಾಯಿತು. ದ್ವಿರಾಷ್ಟ್ರ ನೀತಿಯ ಬಗ್ಗೆ ಸದಾ ಒಲವು ಹೊಂದಿದ್ದ ಮತ್ತು ಪ್ರಜ್ಞಾಪೂರ್ವಕವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರವಿದ್ದ ಸಾವರ್ಕರ್ ಅವರನ್ನು ಭಾರತದ ರಾಷ್ಟ್ರೀಯವಾದಿ ಹಾಗೂ ದೇಶಪ್ರೇಮಿ ಎಂದು ವೈಭವೀಕರಿಸಬಹುದಾದರೆ, ಮಹಮದಾಲಿ ಜಿನ್ನಾ ಅವರೂ ಕೂಡ ಅದೇ ಸ್ಥಾನಮಾನವನ್ನು ಬಯಸಿದರೆ ತಪ್ಪಾಗುವುದಿಲ್ಲ ಅಲ್ಲವೇ?

ಸಾವರ್ಕರ್ ಅವರು 1966 ರಲ್ಲಿ ಯಾವುದೇ ಹೆಚ್ಚು ಶೋಕಾಚರಣೆ ಇಲ್ಲದೆ ಸಾವನ್ನಪ್ಪಿದರು ಎಂಬ ಸಂಗತಿ ಬಹಳ ಜನಕ್ಕೆ ಗೊತ್ತೇ ಇಲ್ಲ. ಅವರು ತಮ್ಮ 83 ನೇ ವಯಸ್ಸಿನಲ್ಲಿ ಯಾರ ಗಮನಕ್ಕೂ ಬಾರದೆಯೇ ಸದ್ದುಗದ್ದಲವಿಲ್ಲದೆ ಮರಣ ಹೊಂದಿದರು. ಗಾಂಧಿ ಹತ್ಯೆಯ ಪಿತೂರಿಯ ಭಾಗವಾಗಿದ್ದರು ಎಂಬ ಕಳಂಕದಿಂದ ಅವರ ಬದುಕಿನುದ್ದಕ್ಕೂ ಹೊರಬರಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಖ್ಯಾತ ಅಂಕಣಕಾರರಲ್ಲಿ ಒಬ್ಬರಾದ ವೀರ್ ಸಾಂಘ್ವಿ ಅವರು: ”1990 ರ ದಶಕದ ಕೊನೆಯವರೆಗೂ ‘ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಮಹಾಪುರುಷ’ ಎಂದು ಬಿಂಬಿಸಲು ದೊಡ್ಡ ಪ್ರಯತ್ನ ಮಾಡುವ ತನಕವೂ, ಅವರ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ” ಎಂದು ಸರಿಯಾಗಿಯೇ ಹೇಳಿದ್ದಾರೆ. “ಅವರು ಹಿಂದುತ್ವ ಪದವನ್ನು ಆವಿಷ್ಕಾರ ಮಾಡಿದರು ಮತ್ತು ಭಾರತದ ಸ್ವಾತಂತ್ರ್ಯ ಚಳುವಳಿಯ ಪ್ರತಿಪಾದಕರಾಗಿದ್ದರು ಎಂದೆಲ್ಲಾ ನಮಗೆ ಹೇಳಲಾಯಿತು. ‘ಸಾವರ್ಕರ್ ಅವರನ್ನು ಪುನಃಸ್ಥಾಪಿಸುವ’ ಆಂದೋಲನವು ಆಗ ಅಧಿಕಾರಕ್ಕೆ ಬಂದಿದ್ದ ಭಾರತೀಯ ಜನತಾ ಪಕ್ಷದ ಅಧಿಕೃತ ನೀತಿಯಾಗಿತ್ತು.”

ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998 ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ. 1998 ಕ್ಕೂ ಮುಂಚೆ ಮಹಾರಾಷ್ಟ್ರದಲ್ಲಿ ಬಹಳ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರವು ಮುಂಬಯಿಯ ವಿಧಾನ ಸಭೆಯ ಗೋಡೆಗಳ ಮೇಲೆ ಸಾವರ್ಕರ್ ಅವರ ಫೋಟೋಗಳನ್ನು ಪ್ರದರ್ಶಿಸುವ ಆಲೋಚನೆಯನ್ನೇ ಮಾಡಿರಲಿಲ್ಲ. 2003 ರಲ್ಲಿ ಸಂಸತ್ತಿನಲ್ಲಿ ಸಾವರ್ಕರ್ ಫೋಟೋ ಅನಾವರಣ ಮಾಡಿದ ನಂತರ ಮಾತ್ರವೇ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಮುಂಬಯಿಯಲ್ಲೂ ಅವರ ಫೋಟೋವನ್ನು ಕೂಡ ಹಾಕಿತು.

ತದನಂತರ, ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗವು ‘‘ಸಾವರ್ಕರ್ ಅವರನ್ನು ಪುನಃಸ್ಥಾಪಿಸುವ’ ಆಂದೋಲನದಲ್ಲಿ ಪಾಲ್ಗೊಂಡಿತು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನವ ದೆಹಲಿಯಲ್ಲಿ ತಮ್ಮ ಮೊಟ್ಟ ಮೊದಲ ಪತ್ರಿಕಾ ಗೋಷ್ಠಿಯಲ್ಲಿ (ಆಗಸ್ಟ್ 4, 2004) ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು “ಒಬ್ಬ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ” ಎಂದು ಕೊಂಡಾಡಿದ್ದರು. ಆಗ ಪೆಟ್ರೋಲಿಯಂ ಸಚಿವರಾಗಿದ್ದ ಮಣಿ ಶಂಕರ್ ಅಯ್ಯರ್ ಅವರು ಅದಾಗಲೇ ‘ಸಾವರ್ಕರ್ ಅವರ ದೇಶಪ್ರೇಮದ ಸಾಕ್ಷ್ಯಾಧಾರಗಳ ಬಗ್ಗೆ’ ಪ್ರಶ್ನೆ ಮಾಡಿದ್ದರಿಂದ, ಆ ಕುರಿತು ಕೇಳಲಾದ ಪ್ರಶ್ನೆಗೆ ಮನ ಮೋಹನ್ ಸಿಂಗ್ ಅವರು “ಸಾವರ್ಕರ್ ಅವರ ಕುರಿತ ವಿವಾದಕ್ಕೆ ಸಂಬಂಧಪಟ್ಟಂತೆ, ಅವು ಮಣಿ ಶಂಕರ್ ಅಯ್ಯರ್ ಅವರ ವೈಯಕ್ತಿಕ ಅಭಿಪ್ರಾಯ, ನಮ್ಮ ಸರ್ಕಾರದ್ದಲ್ಲ,… ಅದೊಂದು ಅನಗತ್ಯವಾದ ವಿವಾದ.” ಎಂದು ಉತ್ತರಿಸಿದ್ದರು.

ಮನಮೋಹನ್ ಸಿಂಗ್ ಅವರು ಸಾವರ್ಕರ್ ಅವರ ಪರವಾಗಿ ಮಾತನಾಡುವಾಗ ಒಬ್ಬ ದಾರ್ಶನಿಕನಂತೆ ತೋರಿದರು: “ಘಟನೆಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸುವ ಸ್ವಾತಂತ್ರ್ಯವನ್ನು ಇತಿಹಾಸ ನಮಗೆ ನೀಡಿದ್ದರೂ, ನಿಧನರಾದವರ ಬಗ್ಗೆ ಅನುಚಿತವಾಗಿ ಮಾತನಾಡುವುದರಿಂದ ಒಳ್ಳೆಯದೇನನ್ನೂ ಸಾಧಿಸಲಾಗುವುದಿಲ್ಲ ಎಂದು ನನಗನಿಸುತ್ತದೆ.” ಒಬ್ಬ ಕಾಂಗ್ರೆಸ್ ಪ್ರಧಾನ ಮಂತ್ರಿಯೊಬ್ಬರು ಸಾವರ್ಕರ್ ಅವರನ್ನು ಸಮರ್ಥಿಸಿ ಮಾತನಾಡಿದ್ದು ಅದೇ ಮೊದಲು. ಅದಕ್ಕೂ ಮುಂಚೆ, ಅವರ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ, ಗುಲಾಂ ನಬಿ ಆಜಾದ್ ಅವರು ‘ಸಾವರ್ಕರ್ ಅವರ ಬಗ್ಗೆ ಅಯ್ಯರ್ ಅವರು ಮಾಡಿದ ವ್ಯಾಖ್ಯಾನವು ಅವರ ವೈಯಕ್ತಿಕ ನಿಲುವು ಮತ್ತು ಸರ್ಕಾರ ಅದನ್ನು ಒಪ್ಪುವುದಿಲ್ಲ’ ಎಂದರು. ಸಾವರ್ಕರ್ ಅವರ ಬಗ್ಗೆ ಅಯ್ಯರ್ ಅವರು ಮಾಡಿದ ಟೀಕಾತ್ಮಕ ಅಭಿಪ್ರಾಯ ಕುರಿತು ಮಹಾರಾಷ್ಟ್ರದಲ್ಲಿ ಮುಖ್ಯ ಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರು ಮಾತ್ರ ಕೋಪದಿಂದ ಪ್ರತಿಕ್ರಿಯೆ ಮಾಡಿದ್ದಲ್ಲ, ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ಮುಖಂಡ ಆರ್.ಅಡಿಕ್ ಅವರು ಶಿವಸೇನಾದ ಮರಾಠಿ ಪತ್ರಿಕೆ ಸಾಮ್ನಾದಲ್ಲಿ ಸಾವರ್ಕರ್ ಅವರನ್ನು ಹಾಡಿಹೊಗಳಿ ಮುಖಪುಟದ ಲೇಖನ ಬರೆದಿದ್ದರು.

ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ. ವೀರ್ ಸಾಂಘ್ವಿಯವರ ಪ್ರಕಾರ, “ಕಾಂಗ್ರೆಸ್ ಸಿದ್ಧಾಂತವನ್ನು ಅಥವಾ ಜಾತ್ಯತೀತ ಸಿದ್ಧಾಂತವನ್ನು ಒಪ್ಪುವವರು ಸಾವರ್ಕರ್ ಅವರನ್ನು ಪೂಜ್ಯಭಾವದಿಂದ ಕಾಣುವುದು ಅರ್ಥವಾಗದ ಸಂಗತಿ. ಜಾತ್ಯತೀತ ಸಿದ್ಧಾಂತವನ್ನು ಒಪ್ಪದ ಆರ್.ಎಸ್.ಎಸ್ ಅಥವಾ ಶಿವಸೇನಾದಂಥವರು ಅವರನ್ನು ಗೌರವಿಸುವುದು ಸರಿ. ಆದರೆ ಕಾಂಗ್ರೆಸ್ ಮುಖಂಡರುಗಳು ಹಠಾತ್ತನೆ ಸಾವರ್ಕರನ್ನು ಹಾಡಿಹೊಗಳುವುದೆಂದರೆ ಹೇಗೆ?” ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದ ಮತ್ತು ಗಾಂಧಿಯವರ ಹತ್ಯೆಗೆ ಕಾರಣವಾದ ವ್ಯಕ್ತಿಯೊಬ್ಬನನ್ನು ಒಂದು ಪಕ್ಷವಾಗಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸಿಗರು ಸಮರ್ಥಿಸುವುದು ಪರಮ ನೀಚತನವೇ ಸರಿ.

ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಹಾಗೂ ಆರ್.ಎಸ್.ಎಸ್. ನೊಂದಿಗೆ ಕಾಂಗ್ರೆಸ್ ಸದಸ್ಯರಾರೂ ಒಡನಾಟ ಇಟ್ಟುಕೊಳ್ಳಬಾರದೆಂದು ಗಾಂಧಿ, ನೆಹರೂ ಮತ್ತು ಪಟೇಲ್ ಅವರ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಜೂನ್ 1934 ರಲ್ಲಿ ಅಂಗೀಕರಿಸಿದ ನಿರ್ಣಯವನ್ನು ಇವತ್ತಿನ ಕಾಂಗ್ರೆಸ್ ನಾಯಕತ್ವ ಮರೆತಂತಿದೆ, ಆ ನಿರ್ದೇಶನ ಇವತ್ತಿಗೂ ನ್ಯಾಯಾನುಸಾರವಾಗಿಯೇ ಇದೆ, ಏಕೆಂದರೆ ಅದನ್ನು ಹಿಂತೆಗೆದುಕೊಂಡಿಲ್ಲ.

ವಿಷಾದದ ಸಂಗತಿಯೆಂದರೆ, ಫ್ಯಾಸಿಸ್ಟ್ ಹಾಗೂ ಸಂಕುಚಿತ ಮನೋಭಾವವನ್ನು ವಿರೋಧಿಸಿದ ಅವಿಸ್ಮರಣೀಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ಸಿನ ಇವತ್ತಿನ ನಾಯಕತ್ವವು ತಮ್ಮ ಭವ್ಯ ಗತಕಾಲವನ್ನು ಸಂಪೂರ್ಣ ಮರೆತಿರುವ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ. ಈ ಕಾರಣದಿಂದಾಗಿಯೇ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹತ್ತರವಾದ ಉದಾರವಾದಿ, ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಪರಂಪರೆಯನ್ನು ಗೊಂದಲಮಯವಾಗಿಸುವಲ್ಲಿ ಸಾವರ್ಕರ್ ಬಂಟರು ಯಶಸ್ವಿಯಾಗಿದ್ದಾರೆ; ಪ್ರಜಾಸತ್ತಾತ್ಮಕ ಜಾತ್ಯತೀತ ಭಾರತವನ್ನು ಸಾವರ್ಕರ್ ಎಂದಿಗೂ ಬಯಸಿರಲಿಲ್ಲ. ಅವರಂಥವರ ಚಿಂತನೆಗಳನ್ನು ಕೃತಿಗಳನ್ನು ಹಾಡಿ ಹೊಗಳುವುದು ಸರಿಯಾಗಲಾರದು. ಆರ್.ಎಸ್.ಎಸ್. ನ ರಾಜಕೀಯ ಮುಖವಾದ ಭಾರತೀಯ ಜನತಾ ಪಕ್ಷವು 2014 ರಲ್ಲಿ ರಾಷ್ಟ್ರ ಮಟ್ಟದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾವರ್ಕರ್ ಅವರ ವೈಭವೀಕರಣ ವೇಗ ಪಡೆದುಕೊಂಡಿತು. ತಾನೊಬ್ಬ ಆರ್.ಎಸ್.ಎಸ್.ನ ಸದಸ್ಯ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುವ ಪ್ರಧಾನ ಮಂತ್ರಿಗಳು ಸಾವರ್ಕರ್ ಅವರನ್ನು “ಸಾವಿಗೆ ಹೆದರದ ವೀರ ಸಾವರ್ಕರ್ ಒಬ್ಬ ವೀರ ಪುರುಷ”(1) ಎಂದು ಹಾಡಿ ಹೊಗಳುತ್ತಾರೆ. ತನ್ನನ್ನು ರೂಪಿಸಿದವರೇ ಸಾವರ್ಕರ್ ಎಂದು ಹೇಳುವ ಮಟ್ಟಕ್ಕೆ ಮೋದಿ ಹೋಗುತ್ತಾರೆ.(2) ಆ ಹಿಂದುತ್ವ ಸಿದ್ಧಾಂತಿ ಸಾವರ್ಕರ್ ಅವರ 131 ನೇ ಜನ್ಮ ದಿನಾಚರಣೆಯಂದು ನರೇಂದ್ರ ಮೋದಿ ತನ್ನ ಸಚಿವ ಸಂಪುಟ ಹಾಗೂ ಪಕ್ಷದ ಸದಸ್ಯರನ್ನು ಕರೆದುಕೊಂಡು ಹೋಗಿ ಸಂಸತ್ತಿನ ಸೆಂಟ್ರಲ್ ಸಭಾಂಗಣದಲ್ಲಿನ ಸಾವರ್ಕರ್ ಫೋಟೋಕ್ಕೆ ನಮನ ಸಲ್ಲಿಸುತ್ತಾರೆ. ಸಾವರ್ಕರ್ ಫೋಟೋಕ್ಕೆ ವಂದಿಸುವ ಪ್ರಧಾನಿಗಳಲ್ಲಿ ವಾಜಪೇಯಿಯವರ ನಂತರ ಮೋದಿ ಎರಡನೇಯವರು. ಸಾವರ್ಕರ್ ಅವರ ನಂಬಿಕಸ್ಥ ಮಿತ್ರನಾಗಿದ್ದ ಮತ್ತು ಮಹಾತ್ಮಾಗಾಂಧಿಯನ್ನು ಹತ್ಯೆ ಮಾಡಿದ ಅಪರಾಧಕ್ಕೆ ನೇಣಿಗೇರಿಸಲ್ಪಟ್ಟ ನಾಥೂರಾಂ ಗೋಡ್ಸೆ ಕೂಡ ಗೌರವಿಸಬೇಕಾದ ವ್ಯಕ್ತಿತ್ವ’ ಎಂದು ಬಿಜೆಪಿಯ ಮತ್ತೊಬ್ಬ ಸಂಸದ ಸಾಕ್ಷಿ ಮಹಾರಾಜ್ ಬಣ್ಣಿಸಿದ್ದರು. “ನಾಥೂರಾಂ ಗೋಡ್ಸೆ ಕೂಡ ಒಬ್ಬ ರಾಷ್ಟ್ರೀಯವಾದಿ ಮತ್ತು ಮಹಾತ್ಮಾ ಗಾಂಧಿ ದೇಶಕ್ಕಾಗಿ ಬಹಳ ಶ್ರಮಿಸಿದ್ದಾರೆ ಕೂಡ. ಗೋಡ್ಸೆ ಕೂಡ ಒಬ್ಬ ನೊಂದ ವ್ಯಕ್ತಿ. ಅವನು ತಪ್ಪು ತಿಳುವಳಿಕೆಯಿಂದ ಏನನ್ನೋ ಮಾಡಿರಬಹುದು ಆದರೆ ಅವನು ದೇಶದ್ರೋಹಿಯಲ್ಲ. ಅವನೊಬ್ಬ ದೇಶಭಕ್ತ.” ಎಂದು ಗೋಡ್ಸೆಯನ್ನು ಗಾಂಧಿಗೆ ಹೋಲಿಸಿ ಹಾಡಿ ಹೊಗಳಿದ್ದರು ಸಾಕ್ಷಿ ಮಹಾರಾಜ್.

ಪ್ರಜಾಸತ್ತಾತ್ಮಕ-ಜಾತ್ಯತೀತ ಭಾರತವನ್ನು ರಚಿಸಿ ಸರಿಸುಮಾರು ಒಂದು ಶತಮಾನವಾಗುತ್ತಿರುವಾಗಲೂ ಇತಿಹಾಸವನ್ನು ಹಾಳುಗೆಡಹುವ ಸಾವರ್ಕರ್ ಬಂಟರ ಕೃತ್ಯಗಳು ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರ. ಅವರೊಬ್ಬ ಮಹಾನ್ ಕ್ರಾಂತಿಕಾರಿ, ಅದಮ್ಯ ಸ್ವಾತಂತ್ರ್ಯ ಹೋರಾಟಗಾರ, ಮಹೋನ್ನತ ವಿಚಾರವಾದಿ ಇತ್ಯಾದಿ ಇತ್ಯಾದಿ ಎಂದು ಅವರನ್ನು ಗುತ್ತಿಗೆ ಪಡೆದವರಂತೆ ಸ್ತುತಿಸುತ್ತಿದ್ದಾರೆ. ಆದರೆ ಸಾವರ್ಕರ್ ಅವರ ಬರಹಗಳು ಮತ್ತು ಕಾರ್ಯಾಚರಣೆಗಳನ್ನು ಗಮನಿಸಿದರೆ ಈ ಎಲ್ಲಾ ಸಮರ್ಥನೆಗಳು ಸುಳ್ಳು ಎಂದು ಸಾಬೀತಾಗುತ್ತವೆ.

ಮುಂದುವರೆಯುವುದು…………….

(ಡಾ. ಶಮ್ಸುಲ್ ಇಸ್ಲಾಂ 1973 ರಿಂದ 2013 ರ ವರೆಗೆ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ರಾಜಕೀಯಶಾಸ್ತ್ರದ ಫ್ರಾಧ್ಯಾಪಕರಾಗಿದ್ದರು ಸಂಶೋಧಕರಾಗಿ, ಅಂಕಣಕಾರರಾಗಿ ಮತ್ತು ನಾಟಕಕಾರರಾಗಿಯೂ ಪ್ರಸಿದ್ಧರು; ಭಾರತದಲ್ಲಿ ರಾಷ್ಟ್ರೀಯವಾದದ ಉದಯ ಮತ್ತು ಬೆಳವಣಿಗೆಯ ಬಗ್ಗೆ ಮೂಲಭೂತ ಸಂಶೋಧನೆಗಳಿಗೆ ಹೆಸರಾದವರು. ಇವರ ಸುಮಾರು 13 ಕೃತಿಗಳು ಮತ್ತು 1000ಕ್ಕೂ ಹೆಚ್ಚು ಲೇಖನಗಳು ಮುಖ್ಯವಾಗಿ ಮತಾಂಧತೆ, ಅಮಾನವೀಯ ವಿಚಾರಗಳು, ಸರ್ವಾಧಿಕಾರ, ಮಹಿಳೆಯರಿಗೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಿರುಕುಳಗಳನ್ನು ಕುರಿತಾದವುಗಳು.)

Donate Janashakthi Media

Leave a Reply

Your email address will not be published. Required fields are marked *