ಕನ್ನಡತನ ನಮ್ಮ ಅಸ್ಮಿತೆ; ಕನ್ನಡದ ಏಳಿಗೆಗಾಗಿ ಪಣ ತೊಡೊಣ: ಬಸವರಾಜ ಪೂಜಾರ

ಹಾವೇರಿ: ಕನ್ನಡ ಹಬ್ಬವನ್ನು ನಾವೆಲ್ಲರೂ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಇದು ನಮ್ಮ ಅಸ್ಮಿತೆಯ ಹಬ್ಬ. ಜಾತಿ, ಮತ, ಧರ್ಮಗಳ ಹಂಗಿಲ್ಲದ ಈ  ಹೆಮ್ಮೆಯ ದಿನದಂದು ನಾವೆಲ್ಲರೂ ಕನ್ನಡದ ಏಳಿಗೆಗಾಗಿ ಪಣ ತೊಡಬೇಕಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಇಂದು(ನವೆಂಬರ್‌ 1) ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ಡಿವೈಎಫ್ಐ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕುವೆಂಪು, ಮಾಸ್ತಿ, ಕಾರಂತರಾದಿಯಾಗಿ ಕರ್ನಾಟಕ ಏಕೀಕರಣಕ್ಕೆ ಕಾರಣರಾದ ಮಹನೀಯರೆಲ್ಲರನ್ನು ಗೌರವದಿಂದ ಸ್ಮರಿಸಬೇಕು. ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸುವ ಜೊತೆಗೆ ಭಾರತದ ಭಾಷಾ ಸಹೋದರತ್ವ, ಐಕ್ಯತೆಗೆ ಶ್ರಮಿಸಲು ಮುಂದಾಗಬೇಕು ಎಂದರು.

ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಉದ್ಯೋಗ ಸೃಷ್ಠಿಯಲ್ಲಿ ಸ್ಥಳೀಯರಿಗೆ ಸಿಂಹಪಾಲು ದೊರೆಯಬೇಕು ಅದಕ್ಕಾಗಿ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಎಲ್ಲರೂ ಹೋರಾಡಬೇಕಾಗಿದೆ ಎಂದರು.

ಹಿರಿಯರಾದ ಗುರುನಾಥ ಸಿಂಗ್ ಕಹಾರ ಕನ್ನಡ  ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮೇಘನಾ ಹಾಗೂ ತಂಡದವರು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಮುಖಂಡರಾದ ಶ್ರೀಮತಿ ಸುಧಾ ಕಹಾರ, ಕೆಎಚ್.ಪಿ.ಟಿ. ತಾಲೂಕು ಸಂಯೋಜಕರಾದ ರೇಣುಕಾ ಕಹಾರ, ಡಿವೈಎಫ್ಐ ಘಟಕದ ಮುಖಂಡರಾದ ರಾಜುಸಿಂಗ್ ಕಹಾರ, ಅಜಯಸಿಂಗ್ ರಜಪೂತ, ಅಣ್ಣಪ್ಪ ಕಹಾರ, ವಿಶಾಲಾ ಬಿ ಮುಳಗುಂದ, ಸ್ವಾತಿ ಎಸ್.ಕೆ,  ಅರುಣ ಗುಂಜಳ, ಕರೀಷ್ಮಾ ಹುಬ್ಬಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *