ಬೆಂಗಳೂರು: ಕೃಷಿಗೆ ಜಿಎಂ ಸಾಸಿವೆ ಲಭ್ಯವಾಗುವಂತೆ ಮಾಡುವ ಒಂದು ಹೆಜ್ಜೆಯಾಗಿ, ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿಯು ಜೈವಿಕವಾಗಿ ಮಾರ್ಪಾಡಿಸಿದ ಸಾಸಿವೆ ಬೀಜ ಉತ್ಪಾದನೆ ಹಾಗೂ ಪರೀಕ್ಷೆಗೆ ಹಸಿರು ನಿಶಾನೆ ನೀಡಿರುವುದನ್ನು ಅತುರದ ಕ್ರಮ ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಕೆಪಿಆರ್‌ಎಸ್ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು, ಕೃಷಿ ಬೆಳವಣಿಗೆ, ಆಹಾರ ಉತ್ಪಾದನೆಯ ಸ್ವಾವಲಂಬನೆ ಹಾಗೂ ರೈತರ ಆದಾಯ ಹೆಚ್ವಿಸಲು ವಿಜ್ಞಾನ ಆಧಾರಿತ ಪರಿಹಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಯಾವಾಗಲೂ ಬೆಂಬಲಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಅನುಭವವು ಇಂತಹ ತಂತ್ರಜ್ಞಾನದ ಪರಿಹಾರವು ರೈತರ, ಗ್ರಾಹಕರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಬದಲು ಕಾರ್ಪೊರೇಟ್ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳನ್ನೇ ಮತ್ತಷ್ಟು ಪ್ರೊತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಬೀಜ ತಳಿಗಳ ಸಂಶೋಧನೆಯಲ್ಲಾಗಲಿ ಹಾಗೂ ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳನ್ನು ಹೊರಗಿಡಬೇಕು ಮತ್ತು ಜೈವಿಕ ಪರಿಸರ ಹಾಗೂ ಆರೋಗ್ಯ ಸಂಬಂದಿ ದುಷ್ಪರಿಣಾಮಗಳ ಕುರಿತ ಸಂದೇಹಗಳನ್ನು ವಸ್ತುನಿಷ್ಠ, ಕಠಿಣ ಹಾಗೂ ಪಾರದರ್ಶಕ ವೈಜ್ಞಾನಿಕ ಪುರಾವೆಗಳ ಆಧಾರದಿಂದ ಪರಿಶೀಲಿಸಿ ಸ್ಪಷ್ಟಪಡಿಸಿಕೊಳ್ಳುವ ತನಕ ಯಾವುದೇ ರೀತಿಯಲ್ಲೂ ವಾಣಿಜ್ಯ ಬಳಕೆಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಗಂಡು ಸಾಸಿವೆ ಹಾಗೂ ಹೆಣ್ಣು ಸಾಸಿವೆ ನಡುವೆ ತಳಿ ಸಂಕರಣ ಸಾಧ್ಯವಾಗುವಂತೆ ಜೈವಿಕವಾಗಿ ಮಾರ್ಪಡಿಸಿದ ಡಿಎಂಹೆಚ್ -11 ಹೈಬ್ರೀಡ್ ಬೀಜಗಳ ಅಭಿವೃದ್ಧಿಯು ಇಳುವರಿ ಹೆಚ್ಚಳವನ್ನು ಹಾಗೂ ಕಳೆನಾಶಕಕ್ಕೆ ಪ್ರತಿರೋಧಕವನ್ನು ಪರಿಚಯಿಸಿದೆ. ಇಳುವರಿ ಹೆಚ್ಚಳದ ಉದ್ದೇಶ ಮುಖ್ಯವಾಗಿರುವಾಗಲೇ ಕಳೆನಾಶಕಕ್ಕೆ ಪ್ರತಿರೋಧದ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ಅತಿ ಹೆಚ್ಚು ವಿಷಕಾರಿ ಕಳೆನಾಶಕಗಳ ಬಳಕೆಯನ್ನು ಕಂಡಿದೆ. ದುರ್ಬಲ ನಿಯಂತ್ರಕ ಹಾಗೂ ವಿಸ್ತರಣಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಕಳೆನಾಶಕ ಪ್ರತಿರೋಧ ತಳಿಗಳು ಆಹಾರ ಬೆಳೆಗಳಲ್ಲಿ ಅನಿಯಂತ್ರಿತವಾಗಿ ವಿಷಕಾರಿ ಕೃಷಿ ರಾಸಾಯನಿಕಗಳ ಬಳಕೆಯನ್ನು ಉತ್ತೇಜಿಸುವ ಅಪಾಯವನ್ನು ಎದುರಿಸಬೇಕಾಗಬಹುದು. ಕೀಟನಾಶಕಗಳ ಮಾರಾಟ ಹಾಗೂ ಬಳಕೆ ನಿಯಂತ್ರಣದ ಕಾನೂನು ಅಂಶಗಳು ಬಹಳ ಪೇಲವವಾಗಿ ಜಾರಿಗೊಳ್ಳುತ್ತಿವೆ.
ಬಾಯರ್ ನಂತಹ ಬಹುರಾಷ್ಟ್ರೀಯ ಕೃಷಿ ರಾಸಾಯನಿಕ ತಯಾರಿಕೆ ಕಂಪನಿಗಳು ತಾವು ಹೊಂದಿರುವ ಬಹಳ ವ್ಯಾಪಕವಾದ ಕೀಟನಾಶಕ ಡೀಲರ್ ಗಳ ಮೂಲಕ ರೈತರನ್ನು ತಮ್ಮ ದುಬಾರಿಯಾದ ಹಾಗೂ ತೀವ್ರ ವಿಷಕಾರಿ ಕೀಟನಾಶಕಗಳನ್ನು ಬಳಸುವಂತೆ ಮಾಡಬಲ್ಲವು. ರೋಗ ಮತ್ತು ಕೀಟಗಳ ಬಾಧೆಗೆ ತುತ್ತಾದ ಬೆಳೆಗಳ ರೈತರನ್ನು ದುಬಾರಿ ಕೀಟನಾಶಕಗಳ ಮಾರಾಟದ ತಮ್ಮದೇ ಆದ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಡೀಲರ್ ಗಳು ಸುಲಭವಾಗಿ ಪ್ರಲೋಭನೆಗೆ ಒಳಪಡಿಸುವರು. ತತ್ಪರಿಣಾಮವಾಗಿ ರೈತರು ಆಗಾಗ್ಗೆ ನಿರ್ದಿಷ್ಟ ಸಮಸ್ಯೆಗೆ ತಕ್ಕ ಪರಿಹಾರ ಅಲ್ಲದಿದ್ದರೂ ಕೀಟನಾಶಕಗಳ ಮೇಲೆ ವಿಪರೀತ ಹಣದ ವೆಚ್ಚವನ್ನು ಅನುಭವಿಸಲಿದ್ದಾರೆ.
ಈ ವಿಷಕಾರಿ ಕೃಷಿ ರಾಸಾಯನಿಕಗಳು ರೈತರ, ಕೃಷಿಕೂಲಿಕಾರರ ಹಾಗೂ ಗ್ರಾಹಕರ ಆರೋಗ್ಯದ ಮೇಲೂ ಕೂಡ ದುಷ್ಪರಿಣಾಮಗಳನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಕಳೆನಾಶಕ ಸ್ನೇಹಿ ತಳಿಗಳನ್ನು ಉತ್ತೇಜಿಸುವಾಗ ಪ್ರಯೋಜನ ಹಾಗೂ ಸಂಭವನೀಯ ಕಂಟಕಗಳ ಕುರಿತು ಪೂರ್ಣ ಮಾಹಿತಿಗಳು ಎಲ್ಲರಿಗೂ ದೊರೆಯುವಂತೆ ಮಾಡುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಆಗ್ರಹಪಡಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಅವರು, ಸಾರ್ವಜನಿಕವಾಗಿ ಲಭ್ಯ ಇರುವ ಮಾಹಿತಿಗಳ ಪ್ರಕಾರ ಕಳೆನಾಶಕ ಸಹಿಷ್ಣು ಅಂಶಗಳು ಇಲ್ಲದ ಹೆಚ್ಚು ಇಳುವರಿ ಹೈಬ್ರೀಡ್ ಬೀಜವನ್ನು ದೆಹಲಿ ವಿಶ್ವವಿದ್ಯಾಲಯದ ಜೈವಿಕ ಮಾರ್ಪಾಡು ವಿಭಾಗ ತಯಾರಿಸಿದೆಯಾ ಅಥವಾ ತಯಾರಿಸಬಹುದಾ ಎಂಬುದು ಸ್ಪಷ್ಟವಾಗಿಲ್ಲ. ವಿಷಕಾರಿ ಕಳೆನಾಶಕಗಳ ಬಳಕೆ ಉತ್ತೇಜಿಸದೇ ಇಂತಹ ಬೀಜಗಳಿಂದ ಇಳುವರಿ ಹೆಚ್ಚಳವನ್ನು ಪಡೆಯಬಹುದೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಅಗತ್ಯಾನುಸಾರ ಈ ದಿಕ್ಕಿನಲ್ಲಿ ಮತ್ತಷ್ಟು ಸಂಶೋಧನೆ ನಡೆಸಿ ರೈತರ, ಗ್ರಾಹಕರ ಹಾಗೂ ಜೀವಿ ಪರಿಸರದ ಹಿತರಕ್ಷಣೆಯನ್ನು ಖಾತರಿಪಡಿಸಿಕೊಳ್ಳುವಂತೆ ಆಗ್ರಹಿಸುತ್ತೇವೆ ಎಂದಿದ್ದಾರೆ.
ಎಣ್ಣಿ ಬೀಜಗಳ ಕೃಷಿ ಹೆಚ್ಚು ಲಾಭದಾಯಕವಾಗಿರಲು ಹಾಗೂ ಖಾದ್ಯ ತೈಲಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಹೆಚ್ಚು ಇಳುವರಿ ಸಾಸಿವೆ ಬೀಜಗಳನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯವಾದುದು. ಆದರೆ, ಅದೇ ಸಂದರ್ಭದಲ್ಲಿ ಇಂತಹ ಬೀಜಗಳು ರೈತರೇ ಪುನರುತ್ಪಾದನೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳದೇ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ವ್ಯವಸ್ಥೆಯನ್ನು ರೂಪಿಸುವುದು ಅಷ್ಟೇ ಮುಖ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಪಾದಿಸುತ್ತದೆ.