ಸಿಬ್ಬಂದಿ ನೇಮಕಾತಿ ಆಯೋಗ ಕನ್ನಡ ವಿರೋಧಿ ನೀತಿ: ಕಾನೂನು ಹೋರಾಟಕ್ಕೆ ಕಸಾಪ ಚಿಂತನೆ

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ ನಡೆಸುತ್ತಿರುವ ಪ್ರವೇಶ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದ್ದು, ಕನ್ನಡ ಭಾಷೆಯಲ್ಲಿ ಕಡೆಗಣಿಸಲಾಗಿದೆ. ಈ ಮೂಲಕ ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿ ಅನುಸರಿಸಿದೆ. ಇದರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ನ್ಯಾಯಾಂಗ ಹೋರಾಟ ನಡೆಸಲು ಮುಂದಾಗಿದೆ.

ಕೇಂದ್ರ ಭದ್ರತಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಸಿಬ್ಬಂದಿ ನೇಮಕಾತಿ ಆಯೋಗವು ಪ್ರಾದೇಶಿಕ ಭಾಷೆಗಳಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾದೇಶಿಕ ಭಾಷಾ ವಿರೋಧಿ ನೀತಿ ಮೂಲಕ ಹಿಂದಿ ಭಾಷೆಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ ಎನ್ನುವ ರೀತಿಯಲ್ಲಿ ಆಯೋಗ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಏಫ್‌) ಸೇರಿದಂತೆ ಕೇಂದ್ರ ಭದ್ರತಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಆಯೋಗ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡದಿರುವುದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಕೇಂದ್ರ ಭದ್ರತಾ ಪಡೆಗಳಲ್ಲಿ ಖಾಲಿ ಇರುವ 24,369 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಆಯೋಗ ಅದನ್ನು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸಲು ಮುಂದಾಗಿದೆ.

ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್‌ ಆಧರಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಒಳಗೊಂಡಿದೆ. ಆದರೆ ಎಲ್ಲಿಯೂ ಕನ್ನಡವನ್ನು ಬಳಸಲು ಅವಕಾಶ ಕಲ್ಪಿಸಲಾಗಿಲ್ಲ. ಆಯೋಗವು ಈ ಧೋರಣೆಯಿಂದ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹೀಗಾಗಿ ಕೇಂದ್ರ ಪೊಲೀಸ್‌ ಸಂಸ್ಥೆಗಳಲ್ಲಿ ಕನ್ನಡಿಗರು ಕೆಲಸ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಡಾ. ಮಹೇಶ ಜೋಶಿ ವಿವರಿಸಿದ್ದಾರೆ.

ಆಯೋಗವು ಎಸ್‌ಎಸ್‌ಎಲ್‌ಸಿ ಪಾಸಾದವರನ್ನು ನೇಮಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಆದರೆ, ಕನ್ನಡ ಭಾಷೆಯನ್ನೇ ನಂಬಿದವರಿಗೆ ಮೂಗಿಗೆ ತುಪ್ಪ ಸವರುವುದು ಸರಿಯಲ್ಲ. ಈಗಾಗಲೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲವು ಪರಿಷತ್ತಿನ ಸದಸ್ಯರು ಸಿಬ್ಬಂದಿ ನೇಮಕಾತಿ ಆಯೋಗದ ಈ ಕನ್ನಡ ವಿರೋಧಿ ನೀತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೇಟ್ಟಿಲೇರಲು ಸೂಚಿಸಿದ್ದಾರೆ ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಮಾಲೋಚನೆ ನಡೆಸಲಿದೆ. ಅವರಿಂದ ಸಲಹೆ ಪಡೆದ ನಂತರ ನ್ಯಾಯಾಂಗ ಹೋರಾಟ ಬಗ್ಗೆ ನಿರ್ಧರಿಸಲಾಗುವುದು ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *