ಗುರುರಾಜ ದೇಸಾಯಿ
ಅನಾದಿ ಕಾಲದಿಂದಲೂ ಮಹಿಳೆಯರು, ಬಾಲಕಿಯರ ಮೇಲೆ ದೌರ್ಜನ್ಯ, ಕಿರುಕುಗಳ ನಡೆಯುತ್ತಲೇ ಬಂದಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಮಹಿಳಾ ಆಯೋಗಕ್ಕೆ ಬರುವ ದೂರುಗಳ ಸಂಖ್ಯೆ ದೌರ್ಜನ್ಯದ ಕ್ರೌರ್ಯತೆಯನ್ನು ಸಾಕ್ಷೀಕರಿಸುತ್ತವೆ.
ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮುಂದೆ ಬರುತ್ತಿದ್ದರೂ, ಅವರ ಮೇಲೆ ದೌರ್ಜನ್ಯ, ಶೋಷಣೆ ನಿಂತಿಲ್ಲ. ಕೆಲಸದ ಸ್ಥಳದಲ್ಲಿಸಹೋದ್ಯೋಗಿ, ಮೇಲಾಧಿಕಾರಿ ಸೇರಿ ಹಲವರಿಂದ ಉದ್ಯೋಗಸ್ಥ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ನೋಡಿದಾಗ ಉದ್ಯೋಗಸ್ಥ ಮಹಿಳೆಯರಿಗೆ ಭದ್ರತೆ ಇಲ್ಲ ಎಂಬ ಸಂಗತಿಗಳು ಹೊರ ಬಿದ್ದಿವೆ.
ಸರಕಾರಿ/ ಖಾಸಗಿ ಕಚೇರಿಗಳಲ್ಲಿ, ಕಾರ್ಖಾನೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಮೇಲೆಯೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಬಡ್ತಿಯ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಸಾಮಾನ್ಯ ಎನ್ನುವಂತೆ ಆಗಿವೆ. ಉನ್ನತ ಸ್ಥಾನದಲ್ಲಿರುವ ಈ ನಡವಳಿಕೆಯನ್ನು ವಿರೋಧಿಸಿದರೆ ಅಥವಾ ಬಹಿರಂಗಪಡಿಸಿದರೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕಲಾಗುತ್ತಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಹೀಗೆ ಕಿರುಕುಳ ಕೊಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು 5,750 ದೂರುಗಳು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಕೆಯಾಗಿವೆ.
‘ಹಲವು ಮಹಿಳೆಯರು ದೂರು ನೀಡಲು ಹಿಂದೇಟು ಹಾಕುವುದು ಸಾಮಾನ್ಯ ಸಂಗತಿಯಾಗಿದೆ. ದಾಖಲಾಗಿರುವ 5,750 ಪ್ರಕರಣಗಳ ಪೈಕಿ 2,310 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 3,440 ಪ್ರಕರಣಗಳು ಚಾಲ್ತಿಯಲ್ಲಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಭದ್ರತೆ, ಕೌಟುಂಬಿಕ ದೌರ್ಜನ್ಯ, ಲಿವಿಂಗ್ ರಿಲೇಷನ್ ಶಿಪ್, ಸೈಬರ್ ಕ್ರೈಂ ನಂತಹ ಪ್ರಕರಣಗಳು ನಡೆದಿರುವುದು ಆತಂಕದ ಸಂಗತಿ.
ಮಹಿಳಾ ಕಾರ್ಮಿಕರೇ ಬಹುಸಂಖ್ಯೆಯಲ್ಲಿರುವ ಗಾರ್ಮೆಂಟ್ಸ್ ಉದ್ಯಮದಲ್ಲಿ ಸೂಪರ್ವೈಸರ್ ಹಾಗೂ ವ್ಯವಸ್ಥಾಪಕ ಹಂತದಲ್ಲಿರುವ ಹೆಚ್ಚಿನವರು ಪುರುಷರೇ ಆಗಿದ್ದಾರೆ. ಉದ್ಯೋಗ ಭದ್ರತೆ, ಪಿಎಫ್ ಹಾಗೂ ಇಎಸ್ಐ ಸೌಲಭ್ಯಗಳನ್ನೂ ಹೆಚ್ಚಿನ ಘಟಕಗಳು ಒದಗಿಸಿಲ್ಲ. ಒಟಿ ಇತ್ಯರ್ಥಪಡಿಸುವುದು, ರಜೆ ನೀಡುವುದು ಸೇರಿದಂತೆ ತೀರಾ ಸಾಮಾನ್ಯವಾಗಿ ಹಾಗೂ ಕಾರ್ಮಿಕರಿಗೆ ಅವರ ಹಕ್ಕಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಒದಗಿಸಲೂ ಹಲವು ಘಟಕಗಳು ಸತಾಯಿಸುತ್ತಿವೆ. ಕೆಲವು ಘಟಕಗಳಲ್ಲಿ ಪುರುಷ ಮೇಲ್ವಿಚಾರಕರು ಮಹಿಳಾ ಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಸಲ್ಲದ ರೀತಿಯಲ್ಲಿ ದೇಹ ಸ್ಪರ್ಶ, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುವುದು ನಡೆದಿದೆ.
ಕಾಗದದಲ್ಲೆ ಉಳಿದ ವಿಶೇಷ ಕಾಯ್ದೆ : ಕೆಲಸದ ಸ್ಥಳದಲ್ಲಿ ಮಹಿಳೆ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು 2013ರಲ್ಲಿ ವಿಶೇಷ ಕಾಯ್ದೆ ರಚಿಸಲಾಗಿದೆ. ಮನೆಗೆಲಸದ ಮಹಿಳೆ ಸೇರಿದಂತೆ ಖಾಸಗಿ, ಸರಕಾರಿ ಕಚೇರಿ ಸೇರಿ ಎಲ್ಲಕೆಲಸ ಮಾಡುವ ಸ್ಥಳದಲ್ಲಿಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಯುವ ಆಶಯ ಕಾಯ್ದೆಯದ್ದಾಗಿದೆ. ತಾಲೂಕು ಮಟ್ಟದಲ್ಲಿಮಹಿಳಾ ಅಧಿಕಾರಿ ನೇತೃತ್ವದ ಸಮಿತಿ ಇದೆ. ಅದಕ್ಕೆ ದೂರು ನೀಡಲು ಅವಕಾಶ ಇದೆ. ದೂರು ಪರಿಶೀಲಿಸಿ, ಅದನ್ನು ಜಿಲ್ಲಾಮಟ್ಟದ ಸಮಿತಿಗೆ ಸಲ್ಲಿಸಿ ಅದು ನಿಜವಾದಲ್ಲಿ ಸಮಿತಿ ಅಥವಾ ಸಂತ್ರಸ್ತೆ ನ್ಯಾಯಾಲಯಕ್ಕೆ ದೂರು ನೀಡಲು ಅವಕಾಶ ಕಲ್ಪಿಸಿದೆ.
2013ರ ಅಧಿನಿಯಮದಡಿ ಯಾವುದೇ ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ, ಕಡ್ಡಾಯವಾಗಿ ಆಂತರಿಕ ದೂರು ಸಮಿತಿ, ಸ್ಥಳೀಯ ದೂರು ಸಮಿತಿ ರಚಿಸಿ, ತಿಳಿವಳಿಕೆ ಶಿಬಿರ ನಡೆಸಬೇಕು. ಈ ಎಲ್ಲ ವರದಿಗಳನ್ನೂ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂಬ ನಿಯಮಗಳಿವೆ. ಆದರೆ, ʻ2013 ಕಾಯಿದೆ’ಯಡಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕೆಂಬ ಕಾನೂನಿನ ಬಗ್ಗೆ ಶೇ. 70ರಷ್ಟು ಸಂಸ್ಥೆಗಳು ದಿವ್ಯ ನಿರ್ಲಕ್ಷ್ಯ ತೋರಿವೆ. ಕೆಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಂತರಿಕ ದೂರು ಸಮಿತಿಗಳನ್ನು ರಚಿಸಿದ್ದರೂ, ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ತರಬೇತಿ, ಅರಿವು ಮೂಡಿಸುವ ಕಾರ್ಯಕ್ರಮಗಳಂತೂ ಇಲ್ಲವೇ ಇಲ್ಲ. ಸಮಿತಿಗಳು ನಾಮ್‌ಕೇ ವಾಸ್ಥೆ ಎನ್ನುವಂತಿವೆ.
ಮಹಿಳೆಯರಿಗೆ ’ಸಾಂತ್ವನ‘ ಹೇಳದ ಕೇಂದ್ರಗಳು : ‘ಮಹಿಳೆಯರ ಮೇಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿಯಂತ್ರಿಸಲು ರಾಜ್ಯದಲ್ಲಿ 2000–01ನೇ ಸಾಲಿನಲ್ಲಿ ರಾಜ್ಯದಾದ್ಯಂತ ಸಾಂತ್ವನ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾರಂಭಿಸಿತ್ತು. ರಾಜ್ಯದಲ್ಲಿ ಒಟ್ಟು 187 ಮಹಿಳಾ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ 118 ತಾಲೂಕುಗಳಲ್ಲಿ ಮಾತ್ರ ಸಾಂತ್ವನ ಕೇಂದ್ರಗಳಿವೆ. 76 ತಾಲೂಕ ಕೇಂದ್ರಗಳಲ್ಲಿ ಸಾಂತ್ವಾನ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ.
ಮಹಿಳಾ ಸಾಂತ್ವಾನ ಕೇಂದ್ರಗಳು 20 ವರ್ಷಗಳಿಂದ ನೊಂದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ಸಲಹೆ ನೀಡುವ ಮೂಲಕ ಈ ಕೇಂದ್ರಗಳು ಆತ್ಮಸ್ಥೈರ್ಯವನ್ನು ನೀಡುತ್ತಾ ಬಂದಿವೆ. ಇವುಗಳನ್ನು ಇನ್ನೂ ಉತ್ತಮ ಪಡಿಸಬೇಕಾದ ತುರ್ತು ಅವಶ್ಯಕತೆ ಇಂದಿನ ಸಮಾಜಕ್ಕೆ ಅಗತ್ಯವಿದೆ. ಆದರೆ, ಸರ್ಕಾರ ಹಲವಾರು ಸಮಸ್ಯೆಗಳ ನೆಪವೊಡ್ಡಿ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಮಹಿಳಾ ದೌರ್ಜನ್ಯದ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆ ಕಣುತ್ತಿದ್ದು, ಸಾಂತ್ವಾನ ಕೇಂದ್ರಗಳು ಬಲಗೊಳ್ಳಬೇಕಿದೆ. ಒಂದು ಕೇಂದ್ರಕ್ಕೆ ಸರ್ಕಾರವು ತಿಂಗಳಿಗೆ ₹50 ಸಾವಿರ ಮಾತ್ರ ನೀಡುತ್ತದೆ. ಕೇಂದ್ರದ ಬಾಡಿಗೆ, ಸಿಬ್ಬಂದಿ ವೇತನ ಎಲ್ಲ ಇದೇ ಮೊತ್ತದಲ್ಲಿ ಸರಿದೂಗಿಸಬೇಕು. ಒಬ್ಬರು ಆಪ್ತ ಸಮಾಲೋಚಕರಿಗೆ ₹15 ಸಾವಿರ, ಮೂವರು ಸಾಮಾಜಿಕ ಕಾರ್ಯಕರ್ತರಿಗೆ ತಲಾ ₹10 ಸಾವಿರ ವೇತನ ಇರುತ್ತದೆ. ಒಂದು ಕೇಂದ್ರಕ್ಕೆ ತಿಗಳಿಗೆ ₹50 ಸಾವಿರ ಹಣ ನೀಡಲು ಸರಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ.
ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆ ಪರಿಣಾಮ ದೌರ್ಜನ್ಯ ಪ್ರಕರಣದ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೊನಾ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ಹೆಚ್ಚಾಯಿತು. ಕೆಲಸದ ಒತ್ತಡವೂ ಹೆಚ್ಚಳವಾಯಿತು. ಎಲ್ಲಿ ಆರ್ಥಿಕ ಅತಂತ್ರತೆ, ಅಭದ್ರತೆ ಕಾಡುತ್ತದೆಯೋ ಅಲ್ಲಿ ದೌರ್ಜನ್ಯ, ಶೋಷಣೆ ಇಮ್ಮಡಿಗೊಂಡಿದೆ. ಭಾರತೀಯ ಸಂಸ್ಕೃತಿಯ ನೆಪದಲ್ಲಿ ಸನಾತನ ಮೌಲ್ಯಗಳು ವಿಜ್ರಂಭಿಸುತ್ತಿವೆ. ಹೆಣ್ಣನ್ನು ಎರಡನೇ ದರ್ಜೆಯ ಪ್ರಜಯನ್ನಾಗಿ ನೋಡುವುದು ಸನಾತನ ಮೌಲ್ಯದ ಲಕ್ಷಣವಾಗಿದೆ. ಹಾಗಾಗಿ ಮಹಿಳೆಯ ದೂರನ್ನು ಯಾರು ಕೇಳುತ್ತಿಲ್ಲ. ಸರಕಾರ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದೆ. ಮಹಿಳಾ ಹಕ್ಕುಗಳಿಗೆ ಬಲ ತುಂಬುವ ಕೆಲಸವಾಗಬೇಕಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬಾಳಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ಹೆಚ್ಚಳದ ಕುರಿತು ಜನಶಕ್ತಿ ಮೀಡಿಯಾ ಆಯೋಗದ ಅಧ್ಯಕ್ಷರಾದ ಪ್ರಮೀಳ ನಾಯ್ಡುರವರನ್ನು ಸಂಪರ್ಕಿಸಿದಾಗ, ಹೌದು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಆಯೋಗಕ್ಕೆ ಬಂದ ದೂರುಗಳಲ್ಲಿ ಒಂದಿಷ್ಟು ದೂರುಗಳನ್ನು ಬಗೆಹರಿಸಲಾಗಿದೆ. ಉಳಿದ ಪ್ರಕರಣಗಳನ್ನು ಶೀಘ್ರದಲ್ಲೆ ಇತ್ಯರ್ಥ ಮಾಡಲಾಗುವುದು. ‘ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ನಿಯಮಾವಳಿ ಪ್ರಕಾರ ಪ್ರತಿ ಸ್ಥಳದಲ್ಲೂ ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ‘ದೌರ್ಜನ್ಯ ನಡೆದರೆ ಮೊದಲು ಸಮಿತಿಗೆ ದೂರು ಸಲ್ಲಿಸಬೇಕು. ಅಲ್ಲಿ ಬಗೆಹರಿಯದಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜರುಗಿಸಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಮಾಹಿತಿ ನೀಡಿದರು.
ಇತ್ತೀಚೆಗೆ ರಾಜ್ಯದಲ್ಲಿ ಹೆಣ್ಣು ಗರ್ಭ ತೆಗೆಯುವುದು, ಕಿರುಕುಳ ನೀಡುವುದು, ಮಹಿಳೆಯರನ್ನು ಕೀಳಾಗಿ ಕಾಣುವುದು, ಚಿತ್ರಿಸುವುದು ಕಂಡುಬರುತ್ತಿದೆ. ದಲಿತ ಮಹಿಳೆ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಸಮಾಜ ಇಷ್ಟು ಮುಂದುವರಿದರೂ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಇನ್ನೂ ನಿಲ್ಲುತ್ತಿಲ್ಲ ಎಂದರೆ ಇದು ತಲೆತಗ್ಗಿಸುವ ವಿಚಾರ. ಹೆಣ್ಣಿನ ಕೂಗಿಗೆ ಸಮಾಜದ ಪ್ರತಿಯೊಬ್ಬರೂ ಧ್ವನಿಗೂಡಿಸಲು ಮುಂದಾಗಬೇಕು. ಮಾನವನ ಹೃದಯದಲ್ಲಿ ಮನುಷ್ಯತ್ವ ಅರಳಿದರೆ ಮಾತ್ರವೇ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ. ಸರಕಾರವೂ ಕೂಡ ತನ್ನ ಜವಾಬ್ದಾರಿಯನ್ನು ಹೆಚ್ಚಿಸಕೊಂಡು ಮಹಿಳೆಯರಿಗೆ ಭದ್ರತೆ ನೀಡಲು ಮುಂದಾಗಬೇಕು.