ಹಿಂದುತ್ವದ ಜಿಜ್ಞಾಸೆ ಹಾಗೂ ಹಿಂದೂಪರ ಸಂಘಟನೆಗಳ ಮೀಸಲಾತಿ ವಿರೋಧಿ ಹೇಳಿಕೆಯ ಪ್ರಶ್ನೆಗಳು…..???

ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಪ್ರಸ್ತುತ ಸಂದರ್ಭದಲ್ಲಿ ಭಾರತ ಸಾಗುತ್ತಿರುವ ಧರ್ಮೀಕೇಂದ್ರಿತ ಸಾಮಾಜಿಕ ಅಸಮಾನತೆಯ ಅಸಂಸ್ಕೃತೀಕರಣದ ದಿಕ್ಕನೇ ಭವ್ಯ, ಸುಂದರ, ಪಾರಂಪರಿಕ ಎಂದು ಹೇಳಿ ಅದನ್ನೇ ಸುಸಂಸ್ಕೃತಿ ಎಂದೇಳಲು ಮುಂದಾಗಿರುವವರಿಗೆ ಧಾರ್ಮಿಕ ಅಧಃಪತನದ ಜೊತೆ ಸಾಮಾಜಿಕ ಅಜ್ಞಾನವು ಮನೆ ಮಾಡಿರುವುದು ಕಂಡು ಬರುತ್ತದೆ. ಇವರಿಗೆ ಪುರಾಣ ಮಿಶ್ರಿತ ವೈಭವದ ಭಾರತ ಗೊತ್ತೇ ಹೊರತು    ವಾಸ್ತವದಲ್ಲಿನ ಅಸಮಾನತೆಯ ಭಾರತ ತಿಳಿದಿಲ್ಲ. ಸದ್ಯದ ಮಟ್ಟಿಗೆ ಈ ವಾಸ್ತವ ತಿಳಿಯುವುದೂ ಇಲ್ಲ. ಏಕೆಂದರೆ ಇವರಿಗೆ ಭಾರತೀಯರಿಗೆ ಇತಿಹಾಸದ ಪರಿಜ್ಞಾನವಿಲ್ಲ ಎಂದು ಹೇಳಿದ ವಿದೇಶಿಯರ ಹೇಳಿಕೆಯೂ ತಿಳಿಯಲಿಲ್ಲ – ಈ ಹೇಳಿಕೆಗೆ ಪೂರಕವಾಗಿ ಭಾರತ ಹಾಗೂ ಭಾರತೀಯರನ್ನು ತನ್ನ ಸಮಗ್ರ ಓದು ಹಾಗೂ ಒಡಲಾಳದಿಂದ ಸಂಪೂರ್ಣವಾಗಿ ಅರ್ಥೈಸಿಕೊಂಡು ಹೇಳಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಚಾರಿತ್ರಿಕ ಪದದ ಅರ್ಥವೂ ತಿಳಿಯಲಿಲ್ಲ… ಮೇಲಿನ ಅರ್ಥಗರ್ಭಿತ ಮಾತುಗಳಿಗೂ ಏಕಮುಖ ದೃಷ್ಟಿಕೋನದಿಂದ ಭಾರತ ಚರಿತ್ರೆಯನ್ನು ನೋಡಿದವರಿಗೆ ಈ ಮಾತುಗಳು ವಿದೇಶಿಯರ ಮಾತು ಹಾಗೂ ಅಸ್ಪೃಶ್ಯರ ಮಾತು ಎಂದು ವೆಂಗ್ಯವಾಗಿ ನೋಡಿ ತಿರಸ್ಕರಿಸುವಂತೆ ಮಾಡಿತ್ತೆ ಹೊರತು ಆಂತರ್ಯದಲ್ಲಿ ಇವುಗಳ ಮಹತ್ವವನ್ನು ಕಂಡುಹಿಡಿಯುವ ಗೋಜಿಗೆ ಹೋಗಲೇ ಇಲ್ಲ. ಏಕೆಂದರೆ ಇವರ ಕಾಲ್ಪನಿಕ ಸ್ವರೂಪದ ಕಲ್ಪಿತ ಭಾರತದಲ್ಲಿ ಈ ವಸ್ತುನಿಷ್ಠ ನೋಟಗಳಿಗೆ ಸ್ಥಾನವೇ ಇರಲಿಲ್ಲ… ಈ ಎರಡು ಹೇಳಿಕೆಗಳಲ್ಲಿಯೂ ಕಾಯಕ ಸಿದ್ಧಾಂತದ ಚರಿತ್ರೆಯ ಹೊಳಪುಗಳಿವೆ. ಆದರೆ ಇತಿಹಾಸದ ಪರಿಜ್ಞಾನವಿಲ್ಲದವರು ಅಥವಾ ಇತಿಹಾಸವನ್ನು ಮರೆತವರು ತಮ್ಮ ಬದುಕಿನ ಐಡೆಂಟಿಟಿಗಾಗಿ ಮತ್ತದೇ ಪುರಾಣದ ಚರಿತ್ರೆಯನ್ನೆ – ಕಟ್ಟುಕತೆಯ ಸುಳ್ಳಿನ ಚರಿತ್ರೆಯನ್ನು ವಾಸ್ತವಗೊಳಿಸಲು ಮುಂದಾಗಿ ಧಾರ್ಮಿಕ ಅಂಧಕಾರದ ಮೂಲಕ ಭಾವನಾತ್ಮಕವಾಗಿ ರಾಷ್ಟ್ರವನ್ನು ಅಸಂಸ್ಕೃತೀಕರಣಗೊಳಿಲು ತೊಡಗಿ ತಾತ್ಕಾಲಿಕ ಜಯಗಳಿಸುತ್ತಿರುವುದು ದುರಂತವೇ ಆಗಿದೆ. ಈ ಜಯ ಹೇಗಿದೆ ಎಂದರೆ ಜನರಾಡುವ ಪಾರಂಪರಿಕ ಗಾದೆ ಮಾತಾದ ಹರ್ಷದ ಕೂಳಿಗಾಗಿ – ವರ್ಷದ ಕೂಳನ್ನು ಕಳೆದುಕೊಂಡಂತೆ ಎಂಬಂತಾಗಿದೆ.

ಏಕೆಂದರೆ :, ಧರ್ಮ ಹಾಗೂ ರಾಷ್ಟ್ರದ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುವ ಸ್ವ ಘೋಷಿತ  ರಾಷ್ಟ್ರೀಯವಾದಿಗಳು  ಮತಾಂತರ  – ಮತಾಂತರದ ನಂತರದ ಮೀಸಲಾತಿ…… ಇತ್ಯಾದಿ ಇತ್ಯಾದಿ ಮುಖ್ಯವಾದ ವಸ್ತುನಿಷ್ಠ ಪ್ರಶ್ನೆಗಳು – ಹಾಗೂ ಈ ಪ್ರಶ್ನೆಗಳಿಗೆ ವಸ್ತುನಿಷ್ಠವಾದ ಉತ್ತರವನ್ನು ಹುಡುಕುವ ಜವಾಬ್ದಾರಿಯೂ ಇಲ್ಲದ ಅಜ್ಞಾನದ ಭಾರತೀಯರು ಆಗಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ . ಇವರಿಗೆ ಬುದ್ಧ-  ಬಸವ- ಬಸವಾದಿ ಶರಣರು- ಕೀರ್ತನೆಕಾರರು- ಸೂಫಿ ಸಂತರು- ಸಮ ಸಮಾಜ ಕಲ್ಪನೆ ಕಂಡ ಸಾಮಾಜಿಕ ಸುಧಾರಕರು- ಇವರೆಲ್ಲರ ವಾರಸುದಾರರಾದ ಡಾ. ಬಿ ಆರ್ ಅಂಬೇಡ್ಕರ್ ಅವರ ದೂರ ದೃಷ್ಟಿಯ ಸಮ-ಸಮಾಜದ ಕಲ್ಪನೆಯ ಸದೃಢ ಭಾರತದ ಅರಿವಿಲ್ಲ. ಈ ಸಮಸಂಸ್ಕೃತಿಯ ವಾಸ್ತವದ ಬದುಕಿಗೆ ಹೋರಾಡಿದ ಮಹಾನ್ ವ್ಯಕ್ತಿಗಳ ಇತಿಹಾಸದ ಅಲ್ಪ ಜ್ಞಾನವೂ ಇವರಿಗಿಲ್ಲ. ಇವರಿಗೆ ಇರುವುದು ಕೇವಲ ಅಲೌಕಿಕ ಮಾದರಿಯ – ಪುರಾಣ ಹಿನ್ನೆಲೆಯ  ಅಸಮಾನತೆಯನ್ನೇ ಸ್ವಾರ್ಥಪರ ಸಾಧನೆಗೆ ಸಮಾನತೆಯೆಂದು ಪ್ರತಿಪಾದನೆ ಮಾಡಿದ ಅಜ್ಞಾನದ ಧಾರ್ಮಿಕ ಹಿನ್ನೆಲೆಯ ಬೆರಳೆಣಿಕೆಯಷ್ಟು ಜನರ ಭಾರತ ಮಾತ್ರ. ಈ ಭಾರತದಲ್ಲಿ ಇರುವುದು ಮೂರು ಜನ ಹೇಳುವುದನ್ನು 97 ಜನ ಯಾವುದೇ ಪ್ರಶ್ನೆ ಮಾಡದೆ  ಕೇಳಿಸಿಕೊಳ್ಳುವ ಮಾದರಿಯೇ ಹೊರತು – ಕೇಳಿಸಿಕೊಂಡ ಉಪನ್ಯಾಸವನ್ನು ಪ್ರಶ್ನೆಯ ಮೂಲಕ ವಿಮರ್ಶೆ ಮಾಡುವ ಭಾರತವಲ್ಲ… ಇವರ ಈ ಭಾರತಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲದಿದ್ದರೂ ಸಹ ಧಾರ್ಮಿಕ ಅಂತಃಪಥನದಿಂದ ಕಾಣುವಂತೆ- ಕೇಳುವಂತೆ- ವಾಸನೆ ತಿಳಿಯುವಂತೆ ನಟಿಸುತ್ತಿದೆ – ಈ ಬಣ್ಣವಿಲ್ಲದ ನಟನೆಗೆ ಅದ್ಭುತವಾದ ಗೌರವವೂ ಭಾರತದಲ್ಲಿ ದೊರಕಿದೆ… ಈ ನಾಟಕವು  ಸಮಯ ಬಂದಾಗಲೆಲ್ಲ ತನ್ನ ವ್ಯಾಘ್ರ ರೂಪವನ್ನು ತೋರಿಸುತ್ತಲೇ ಇದೆ, ಆದರೆ ಶ್ರಮ-ಕಾಯಕ ಸಿದ್ಧಾಂತದ ಮೂಲಕ ರಾಷ್ಟ್ರ ಕಟ್ಟಿದ – ಇವರ ಶ್ರಮದ ಆಧಾರದ ಮೇಲೆಯೇ ವೈಭವದ ಬದುಕನ್ನು ರೂಪಿಸಿಕೊಂಡು- ದುಡಿಯದೇ- ಶ್ರಮಪಡದೆ ಕೇವಲ ಧಾರ್ಮಿಕ ಹಿನ್ನೆಲೆಯಲ್ಲಿಯೇ ತಮಗೆ ತಾವೇ ಸ್ಫೃಶ್ಯರು ಎಂದು ಹೇಳಿಕೊಂಡವರಿಂದ ಅಸ್ಪೃಶ್ಯರೆಂದು ಕರೆಸಿಕೊಂಡ ಬಹುಜನ ವರ್ಗದ  ಭಾರತಕ್ಕೆ ಕಣ್ಣು- ಕಿವಿ- ಮೂಗಿನ ಸ್ಪರ್ಶ ಚೆನ್ನಾಗಿದ್ದರೂ ಸಹ ಗೋಚರಿಸದಂತೆ ಧಾರ್ಮಿಕ ಹಾಗೂ ಸಾಮಾಜಿಕ ಅಮಾನವೀಯ ಕಟ್ಟುಪಾಡುಗಳ ಸಂಕೋಲೆಯಿಂದ ಮಾಡಲಾಗಿದೆ. ಹೀಗೆ  ಮಾಡಿದವರ ವಿರುದ್ದ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿಯನ್ನು ಪಡೆಯಲೇಬೇಕಾದವರ ಸಂವಿಧಾನಾತ್ಮಕವಾದ ಮೀಸಲಾತಿಯ ಪ್ರಶ್ನೆಗಳು ಇಂದು ಮೂಲಭೂತವಾದಿಗಳು ಮತಾಂತರದ ಹೆಸರಿನಲ್ಲಿ ನಿರ್ಬಂಧಿಸಬೇಕೆಂಬ ಹೇಳಿಕೆ ನೀಡುತ್ತಿರುವುದು ಸಾಂಸ್ಕೃತಿಕ ಅಂಧಕಾರದಿಂದ ಕೂಡಿದೆ. ಇವರಿಗೆ ಭಾರತದ ಸಂವಿಧಾನ ಕಣ್ಣಿಗೆ ಕಾಣುವಂತೆ ನೀಡಿರುವ ಒಂದಷ್ಟು ಮೀಸಲಾತಿ ಗೊತ್ತೇ ಹೊರತು – 2000 ವರ್ಷಗಳಿಂದ ಇದೇ ಜನಾಂಗ ಮೇಲ್ಜಾತಿ ಅಥವಾ  ಸ್ಪೃಶ್ಯ ಜನಾಂಗ ಎಂದು ತಮಗೆ ತಾವೇ ಕರೆದುಕೊಂಡು ಅವರಿಂದ ಅನುಭವಿಸಿದ ಪಾರಂಪರಿಕ – ಅಸಂಸ್ಕೃತಿ – ಸ್ವಾರ್ಥಪರ ಹಿನ್ನೆಲೆಯ ಮೀಸಲಾತಿಯ ಪರಿಜ್ಞಾನವೇ ಇಲ್ಲ. ಇದು ಅವರ ನಿಜ ಮೀಸಲಾತಿಯ ಮಿತಿಯು ಆಗಿರಬಹುದು. ಆದರೆ ದೇಶಕ್ಕೆ ಇದು ಮಾರಕ ಹಾಗೂ ದುರಂತವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಪ್ರಜ್ಞಾವಂತರು ಗ್ರಹಿಸಬೇಕಾಗಿದೆ.

ಇತ್ತೀಚೆಗೆ ಲೋಕಸಭೆ ಹಾಗೂ ರಾಜ್ಯದ ವಿಧಾನಸಭೆಗಳಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿರುವುದು ಸರಿಯಷ್ಟೇ. ಕರ್ನಾಟಕ ಸರ್ಕಾರವು ಈ ಹಂತದಲ್ಲಿ ಬಹುದೊಡ್ಡ ಹೆಜ್ಜೆಯನ್ನೇ ಇಟ್ಟು ವಿಧಾನಸಭೆ-ವಿಧಾನ ಪರಿಷತ್ತುಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಧ್ವನಿ ಮತದ ಮೂಲಕ ಒಪ್ಪಿಗೆ ಪಡೆದು ಜಾರಿಗೊಳಿಸಿತು. ಈ ಹಂತದಲ್ಲಿ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯೆಂದರೆ ಮತಾಂತರ ಎಂದರೆ ಏನು? ಎಂಬುವುದು. ಭಾರತದಲ್ಲಿ ಮತಾಂತರ ಪ್ರಕ್ರಿಯೆಗೆ ಒಳಗಾಗಿದ್ದರೆ ಮತಾಂತರಗೊಂಡವರು ಯಾರು?…

ಅಥವಾ ಯಾವುದೇ ಮತಕ್ಕೆ ಒಳಪಡದೆ ಕೇವಲ ಜಾತಿಯಾಗಿ ಗುರುತಿಸಿಕೊಂಡಿದ್ದರು ಹೊಸದಾಗಿ ಮತ ಸ್ವೀಕಾರ ಮಾಡಿದರೆ ಇದನ್ನು ಮತಾಂತರ ಎನ್ನಬೇಕೋ… ಅಥವಾ ಮತ ಸ್ವೀಕಾರ ಎನ್ನಬೇಕೋ… ಎಂಬ ಪ್ರಶ್ನೆ ಚಾರಿತ್ರಿಕ ಕಾಲಘಟ್ಟದಿಂದ ಮುದಲ್ಗೊಂಡು ಸಮಕಾಲೀನವರೆಗೂ ಪ್ರತಿಯೊಬ್ಬ ಪ್ರಜ್ಞಾವಂತರಿಗೂ ಬೌದ್ಧಿಕವಾಗಿ ಕಾಡದೆ ಇರದು.

ಉದಾಹರಣೆಗೆ: ಜೈನ ಮತಾವಲಂಬಿ ಹೊಯ್ಸಳರ ದೊರೆ ಬಿಟ್ಟಿದೇವ ಶ್ರೀರಾಮನುಜಚಾರ್ಯರ ಪ್ರಭಾವದಿಂದ ಶ್ರೀವೈಷ್ಣವ ಧರ್ಮದ ಮತಾವಲಂಬಿಯಾದದ್ದು ಮತಾಂತರ. ಇಲ್ಲಿ ಜೈನ ಧರ್ಮವು ಒಂದು ಮತವಾಗಿತ್ತು – ತದನಂತರ ಅವರು ಸ್ವೀಕಾರ ಮಾಡಿದ ವೈಷ್ಣವ ಧರ್ಮವು ಒಂದು ಮತವಾಗಿತ್ತು. ಇದು ಮತಾಂತರಕ್ಕೆ ಉದಾಹರಣೆಆದರೆ ವೃತ್ತಿ ಆಧಾರದ ಮೇಲೆ ಧರ್ಮದ ಪರಿಮಿತಿಗೆ ಒಳಪಡದೆ ಕೇವಲ  ಜಾತಿ ಕೇಂದ್ರಿತವಾಗಿದ್ದ ಬಹುದೊಡ್ಡ ಜನವರ್ಗ ಹಾಗೂ ಸಮುದಾಯಗಳು ಬಸವಣ್ಣ ಹಾಗೂ ಬಸವಾದಿ ಶರಣ-ಶರಣೆಯರ ಪ್ರಭಾವಕ್ಕೆ ಒಳಗಾಗಿ ಸಮಸಂಸ್ಕೃತಿಯ ಆಧಾರದ ಮೇಲೆ ಬಸವಣ್ಣನವರು ಸ್ಥಾಪಿಸಿದ  ಲಿಂಗಾಯಿತ ಧರ್ಮ ಸ್ವೀಕರಿಸಿದ್ದು ಮತಸ್ವೀಕಾರ… ಎಂದೇನಿಸಿಕೊಳ್ಳುತ್ತದೆ.

ಈ ಮೇಲಿನ ಉದಾಹರಣೆಗಳು ಮತಾಂತರಕ್ಕೂ — ಮತಸ್ವೀಕಾರಕ್ಕೂ ಇರುವ ನಿದರ್ಶನ. ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ ಒಂದು ರಾಜಕೀಯ ಪಕ್ಷದ ಸದಸ್ಯ ಮಾತ್ರ ಮತ್ತೊಂದು ರಾಜಕೀಯ ಪಕ್ಷಕ್ಕೆ ಸೇರಿಕೊಂಡರೆ  ಪಕ್ಷಾಂತರ ಎನ್ನುವುದು  – ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡದೆ ಹೊಸದಾಗಿ ಸದಸ್ಯತ್ವ ಪಡೆಯುವ ವ್ಯಕ್ತಿಯನ್ನು ಪಕ್ಷದ ಸೇರ್ಪಡೆ ಎಂದು ಕರೆಯುತ್ತಾರೆ ಹೊರತು ಪಕ್ಷಾಂತರ ಎಂದು ಕರೆಯುವುದಿಲ್ಲ.

ಈ ಹಿನ್ನಲೆಯಲ್ಲಿ ಹೋಲೆಯ ಹಾಗೂ ಮಾದಿಗ ಜನಾಂಗ ಸಂಪ್ರದಾಯವಾದಿಗಳಿಂದ ಅಸ್ಪೃಶ್ಯ ಜನಾಂಗ ಎಂಬುದಾಗಿ ಕರೆಸಿಕೊಂಡ   ಹಿನ್ನೆಲೆಯಲ್ಲಿ ಅವರು ಧರ್ಮ ರಹಿತವಾಗಿ ಕೇವಲ ಜಾತಿಯ ಜನಾಂಗವಾಗಿದ್ದರು ಎಂಬುದಕ್ಕೆ ಪ್ರಾಚೀನ ಭಾರತ ಚರಿತ್ರೆಯಿಂದ ಮುದಲ್ಗೊಂಡು ಸಮಕಾಲಿನ ಚರಿತ್ರೆವರಿಗೂ ನಿದರ್ಶನಗಳಿವೆ… ಈ ಹಿನ್ನೆಲೆಯಲ್ಲಿ ಈ ಜನಾಂಗ ಮತಾಂತರ ಹೊಂದುತ್ತಿಲ್ಲ – ಬದಲಿಗೆ ಮತ ಸ್ವೀಕಾರ ಮಾಡುತ್ತಿದ್ದಾರೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಾಗಿದೆ.

ಭಾರತದ ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಶೋಕನ ಕಾಲ, ಮೊಘಲರ ಕಾಲ, ವಿಜಯನಗರದ ಕಾಲ, ತದನಂತರ ಭಾರತಕ್ಕೆ ಆಗಮಿಸಿದ ಬ್ರಿಟೀಷರ ಕಾಲಗಳಲ್ಲಿಯೂ ಅಧಿಕಾರ – ಅಂತಸ್ತು – ರಾಜಕೀಯ ಸ್ಥಾನಮಾನಗಳಿಗಾಗಿ ಆಳ್ವಿಕೆ ಮಾಡಿದವರ ಮತಗಳಿಗೆ ಭಾರತದಲ್ಲಿ ಪ್ರಬಲ ಮತಾವಲಂಬಿಗಳಾಗಿದ್ದವರು ಸ್ವಾರ್ಥ ಸಾಧನೆಗಾಗಿ ಮತಾಂತರಗೊಂಡಿದ್ದಕ್ಕೆ ನಿದರ್ಶನಗಳಿವೆ…  ಹಾಗೂ ಯಾವುದೇ ಧರ್ಮದ ಚೌಕಟ್ಟಿಗೂ ಒಳಪಡದೆ ಕೇವಲ ಜಾತಿಯಾಗಿ ಬದುಕುತ್ತಿದ್ದ ಬಹುದೊಡ್ಡ ಜನ ವರ್ಗ ಕಾಲಕಾಲಕ್ಕೆ ದೇಶದಲ್ಲಿ ಸಂಭವಿಸಿದ ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ಒಳಪಟ್ಟು ಮತಸ್ವೀಕಾರ ಪ್ರಕ್ರಿಯೆಗಳು ನಿರಂತರವಾಗಿ ಭಾರತದ ನೆಲದಲ್ಲಿ ನಡೆದಿರುವುದಕ್ಕೆ ಚಾರಿತ್ರಿಕ ನಿದರ್ಶನಗಳಿವೆ.

ಆದರೆ ಇಷ್ಟೆಲ್ಲಾ ಚಾರಿತ್ರಿಕ ನಿದರ್ಶನಗಳನ್ನು ಒಳಗೊಂಡಿದ್ದರೂ ಸಹ ಭಾರತದ ಮೂಲನಿವಾಸಿಗಳನ್ನು ಪಾರಂಪರಿಕ ಅಸ್ಪೃಶ್ಯರು ಎಂಬ ಬಹುದೊಡ್ಡ ಅಳಿಸಲಾಗದ, ಮನುಷ್ಯ – ಮನುಷ್ಯರನ್ನು ಮನುಷ್ಯತ್ವದಿಂದಲೂ ಕಾಣದಂತಹ ಅಮಾನವಿಯ – ಅಂಧಕಾರದ  – ಎಂದೆಂದಿಗೂ ಅಳಿಸಲಾಗದ ಜಾತೀಯತೆ ಎಂಬ ಮೀಸಲಾತಿಯ ಸಂಕೂಲಿಗೆ ಸಿಲುಕಿಸಿ ಮಾನವರ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಿದ್ದು ಮಾತ್ರ ಬಹುದೊಡ್ಡ ಸಾಂಸ್ಕೃತಿಕ ದುರಂತ. ಈ ಸಾಮಾನ್ಯ ಪರಿಜ್ಞಾನ ತಿಳಿದರೆ ಮಾತ್ರ ಇಂದು ಮತಾಂತರಗೊಂಡವರಿಗೆ ಮೀಸಲಾತಿಯನ್ನು ನೀಡಬಾರದು ಎಂಬ ಹೇಳಿಕೆ ನೀಡುವ ಮೂಲಭೂತವಾದಿಗಳಿಗೆ ಭಾರತದ ಚರಿತ್ರೆಯ ಅರಿವಿದೆ ಎಂದು ಹೇಳಬಹುದು. ಇಲ್ಲದಿದ್ದರೆ ಇಂತಹ ಧಾರ್ಮಿಕ ಅಂದಕಾರರಿಗೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ. ಏಕೆಂದರೆ ಇವರಿಗೆ ಭಾರತದ ಜನ ಸಂಸ್ಕೃತಿ ಇತಿಹಾಸದ ಅರಿವು ಕಿಂಚಿತ್ತೋ  ಇಲ್ಲ.

ಅಂದಿನಿಂದ – ಇಂದಿನವರೆಗೂ ವರ್ಣಾಶ್ರಮ ಪದ್ಧತಿಯು ರೂಪಿಸಿದ ಧಾರ್ಮಿಕ ಕಟ್ಟುಪಾಡುಗಳು – ಹಾಗೂ ಪುರೋಹಿತಶಾಹಿ,  ಬಂಡಾವಾಳಶಾಹಿ, ಊಳಿಗಮಾನ್ಯಶಾಹಿ ಅಲಿಖಿತ ರೂಪದ ಆಸಂವಿಧಾನಾತ್ಮಕ ಕಟ್ಟುಪಾಡುಗಳ ಮೀಸಲಾತಿಯು ಯಾವುದೇ ಪ್ರಶ್ನೆ ಮಾಡಿದ ಹಾಗೆ ಮುಂದುವರಿಯಬೇಕು. ಸಾವಿರಾರು ವರ್ಷಗಳಿಗೂ ಹೆಚ್ಚು ಕಾಲದಿಂದ ಜಾರಿಯಲ್ಲಿರುವ ಪಾರಂಪರಿಕ –  ಸಾಂಪ್ರದಾಯವಾದಿ – ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳ ಹಿನ್ನಲೆಯ ಅಸಮಾನತೆಯ ಮೀಸಲಾತಿ ಸಂಪೂರ್ಣವಾಗಿ ಹೋಗಲಾಡಿಸಲು ಪ್ರಜಾಪ್ರಭುತ್ವ ಭಾರತದಲ್ಲಿ ಸಂವಿಧಾನಾತ್ಮಕವಾಗಿ ನೀಡಿದ ಮೀಸಲಾತಿಯನ್ನು ಮತಾಂತರದ ಹಿನ್ನೆಲೆಯಲ್ಲಿ ರದ್ದುಪಡಿಸಬೇಕು – ಎಂದು ವಾದಿಸುತ್ತಿರುವ ಕೆಲವು ರಾಷ್ಟ್ರೀಯವಾದಿ ಹಿನ್ನೆಲೆಯ ಮೂಲಭೂತವಾದಿ ಸಂಘಟಕರಿಗೆ ಮೀಸಲಾತಿಯ ಚಾರಿತ್ರಿಕ ಘಟನೆಗಳನ್ನು ತಿಳಿಸುವುದರ ಜೊತೆಗೆ ಮತಾಂತರ ಹಾಗೂ ಮತಸ್ವೀಕಾರದ ತಿಳುವಳಿಕೆಯನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ತಿಳಿಪಡಿಸುವುದೇ ಲೇಖನದ ಉದ್ದೇಶ.

ಸಾವಿರಾರು ವರ್ಷಗಳಿಂದ ಸ್ವಘೋಷಿತವಾಗಿ ಅನುಭವಿಸಿಕೊಂಡು ಬಂದ – ಇಂದಿಗೂ ಅನುಭವಿಸಲು ಕುತಂತ್ರದ ಮೂಲಕ ಬಯಸುತ್ತಿರುವ – ಶತಶತಮಾನಗಳಿಂದಲೂ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಪಡೆದುಕೊಂಡಿದ್ದ ಅವೈಜ್ಞಾನಿಕ – ಬಹುಜನರ ಶೋಷಣೆಯ ಮೀಸಲಾತಿ ಕುರಿತು ಯಾವ ರಾಷ್ಟ್ರೀಯವಾದಿ ಎಂದು ಕರೆಸಿಕೊಳ್ಳುವ ಚರಿತ್ರ, ಸಮಾಜ ಶಾಸ್ತ್ರಜ್ಞರಾಗಲಿ – ಸಾಹಿತಿಗಳಾಗಲಿ ರಾಜಕಾರಣಿಗಳಾಗಲಿ ಮಾತನಾಡುವುದಿಲ್ಲ… ಅಥವಾ ಈ ಪರಂಪರೆಯ ಒಬ್ಬ ಭಾರತೀಯನಾಗಿ ಶ್ರಮದ ಮೂಲಕ ಭಾರತವನ್ನು ಭದ್ರವಾಗಿ ಕಟ್ಟಿದರೂ ಸಹ ಸವರ್ಣೀಯರಿಂದ ಅಸ್ಪೃಶ್ಯರು ಎಂದು ಕರೆಸಿಕೊಂಡಿರುವ ಈ ಮೂಲನಿವಾಸಿ ಭಾರತೀಯರ ಕುರಿತು ಮಾತನಾಡದಿರುವುದು ಸಹ ಅವರ ಸ್ವ-ಘೋಷಿತ ಅಜ್ಞಾನದ ಮೀಸಲಾತಿಯೆ ಅಗಿದೆ.

ಮೇಲಿನ ಈ ಮಾತುಗಳನ್ನು ಹೇಳಲು ಕಾರಣವೆಂದರೆ ಇತ್ತೀಚೆಗೆ ನಮ್ಮನ್ನಾಳುವ ಪ್ರಜಾಸತ್ತಾತ್ಮಕ – ಜಾತ್ಯಾತೀತ – ಧರ್ಮ ನಿರಪೇಕ್ಷಿತ ಮಾದರಿಯ ಪ್ರಜಾಪ್ರಭುತ್ವ ಸರ್ಕಾರಗಳು ಮತಾಂತರ ನಿಷೇದ ಕಾನೂನನ್ನು ನಿಷೇಧಗೊಳಿಸಿದ ನಂತರ ಇದನ್ನು ಬೆಂಬಲಿಸುವ ಬರದಲ್ಲಿ ಸಂವಿಧಾನ ನೀಡಿರುವ ರಾಜಕೀಯ – ಶೈಕ್ಷಣಿಕ ಹಾಗೂ ಉದ್ಯೋಗ ಕುರಿತ ಮೀಸಲಾತಿಯನ್ನು ಮತಾಂತರಗೊಂಡವರಿಗೆ ನೀಡಬಾರದು – ಮತಾಂತರಗೊಂಡವರಿಗೆ ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬ ಪ್ರಶ್ನೆಯನ್ನು ಮುನ್ನಲೆಗೆ ತಂದಿರುವುದು. ಇಂತಹ ಬಾಲಿಷಾ ಹೇಳಿಕೆಗಳನ್ನು ಕೊಡಲು ಇವರ‍್ಯಾರು. ಇಂದು ಪ್ರಜಾಪ್ರಭುತ್ವ ಭಾರತವನ್ನು ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಕಿಂಚಿತ್ತು ಪರಿಜ್ಞಾನ ಇಲ್ಲದೆ – ಜನರನ್ನು ಜನತೆಯನ್ನಾಗಿ ಪ್ರೀತಿಸುವ ಪರಿಜ್ಞಾನವೂ ಇಲ್ಲದಿದ್ದರೂ ಸಹ ತಮಗೆ ತಾವೇ ರಾಷ್ಟ್ರೀಯವಾದಿಗಳು ಎಂದು ಸ್ವಘೋಷಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಭಜರಂಗದಳ – ಗಳಂತಹ ಸಾಂಪ್ರದಾಯವಾದಿ ಸಂಘಟನೆಗಳ ಪ್ರತಿಪಾದಕರಿಗೆ ಭಾರತವೇ ತಿಳಿದಿಲ್ಲ. ಇವರಿಗೆ ಕೇವಲ ಭಾರತದ ಭೂ-ಪಟ ಮಾದರಿಯ ಪ್ರಶ್ನೆ ಮಾಡದ, ಸಾಂಸ್ಕೃತಿಕವಾಗಿ ನಿಷ್ಕ್ರಿಯೆಗೊಂಡಿರುವ ಅಜ್ಞಾನದ ಭಾರತ ತಿಳಿದಿರುವುದೇ ಹೊರತು – ವಿವಿಧ ಸಾಮಾಜಿಕ ಹಿನ್ನೆಲೆಯ ಸಾಂಸ್ಕೃತಿಕ ಭಾರತವನ್ನು ಅನಾವರಣಗೊಳಿಸುವ ಭಾರತದ ಭೂ-ಪ್ರದೇಶಗಳ ವಸ್ತುನಿಷ್ಟ ಚರಿತ್ರೆಯ ಪರಿಜ್ಞಾನವಿಲ್ಲದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಇಂತಹ ಅಜ್ಞಾನದಿಂದಾಗಿಯೇ ಮತಾಂತರಗೊಂಡವರಿಗೆ ಸಂವಿಧಾನದಡಿಯಲ್ಲಿ ದೊರಕುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ವಿಶೇಷ ಮಾದರಿಯ ಮೀಸಲಾತಿಯನ್ನು ನೀಡಬಾರದು ಎಂಬ ನೀಡುತ್ತಿರುವುದು ಅವರ ಬಾಲಿಸತನವನ್ನು ವ್ಯಕ್ತಪಡಿಸುತ್ತದೆ. ಕೈಲಾಗದವನು ಮೈ ಪರಚಿಕೊಂಡ ಎಂಬ ಗಾದೆಗೆ ಇದು ಉತ್ತಮ ನಿರ್ದೇಶನ.

ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಅಲೌಕಿಕ ಹಿನ್ನೆಲೆಯಲ್ಲಿ ಯಥೇಚ್ಛವಾಗಿ ಮಾತನಾಡುವ – ಪಾರಂಪರಿಕವಾಗಿ ಆಳ್ವಿಕೆ ಮಾಡುತ್ತಿದ್ದ ಅಲಿಖಿತ ಸಂವಿಧಾನದ ಕಟ್ಟುಪಾಡುಗಳನ್ನೇ ಮುನ್ನೆಲೆಗೆ ತಂದು ವಾಸ್ತವದ ಸಂವಿಧಾನವನ್ನೇ ಮೂಲೆಗುಂಪಾಗಿಸಿ ನ್ಯಾಯ ನೀಡಲು ಮುಂದಾಗುವವರಿಗೇನು ಗೊತ್ತು ಅಂಬೇಡ್ಕರ್ ಅವರು ರಚಿಸಿದ ಸಮಸಂಸ್ಕೃತಿ ಪ್ರತಿಪಾದನೆ ಮಾಡುವ ಬೆವರಿನ ಸಂಕೇತದ ಸಂವಿಧಾನದ ತಾಕತ್ತು. ಇಂತಹ ಕಾಯಕ ಸಿದ್ಧಾಂತದ ಬೆವರಿನ ಸಂವಿಧಾನದ ಮುಂದೆ ಕೇವಲ ದುಡಿಸಿಕೊಂಡೆ ಮೆರೆದ ತೀರ್ಥದವರ ಸಂವಿಧಾನ ಸೋಲಲೇಬೇಕು. ಏಕೆಂದರೆ ಈ ತೀರ್ಥದ ಸಂವಿಧಾನದ ಅಡಿಯಲ್ಲಿ ಪಾರಂಪರಿಕವಾಗಿ ಯಾರು ಪ್ರಶ್ನೆ ಮಾಡೋದಾಗಿ ಸಾಂಪ್ರದಾಯಿಕ ಮೀಸಲಾತಿಯನು ಅಪಾರವಾಗಿ ಪಡೆದವರು ಇಂದಿಗೂ ಯಥೇಚ್ಛವಾಗಿ ಪಡೆಯುತ್ತಿರುವವರು ಯಾರು?… ಎಂಬ ಪ್ರಶ್ನೆಗೆ ಉತ್ತರ ನಿಮಗೆ ತಿಳಿದರೆ ಮಾತ್ರ ಮತಾಂತರಗೊಂಡವರಿಗೆ ಮೀಸಲಾತಿ ಕೊಡಬೇಕು ಬೇಡವೋ ಎಂಬ ಚರ್ಚೆಗೆ ನೀವು ಮುಂದಾಗುತ್ತೀರಿ. ಇದನ್ನರಿಯದೆ ನೀವು ಏನೇ ಮಾತನಾಡಿದರು ಅದು ವಿತಂಡವಾದವೇ ಸರಿ. ಅಸಂವಿಧಾನಾತ್ಮಕವಾಗಿ ಪಾರಂಪರಿಕವಾದ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯಿಂದ ಮೀಸಲಾತಿಯನ್ನು ಪಡೆಯತ್ತಿರುವವರು ಯಾರು? ಎಂಬ ಪರಿಜ್ಞಾನ….. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಾಂಸ್ಕೃತಿಕ ಶ್ರೇಯೋಭಿವೃದ್ಧಿಗಾಗಿ ಮೀಸಲಾತಿ ನೀಡಲು ಬಯಸಿದಾಗ ಇವರನ್ನು ಮೇಲಿನ ಸಂಘಟನೆಗಳು ಹೇಳುವ ಹಾಗೆ ಹಿಂದೂ ಧರ್ಮದ ಪರಿಧಿಗೆ ಸೇರಿಸಲಾಗಿತ್ತೇ? ಅಥವಾ ಸಂವಿಧಾನದಲ್ಲಿ ಭಾರತ ಹಿಂದೂ ಧರ್ಮದ ರಾಷ್ಟ್ರ, ಎಂಬ ಉಲ್ಲೇಖವಿದೆಯೇ? ಇತ್ಯಾದಿ ಇತ್ಯಾದಿ ಮೂಲಭೂತ ಪ್ರಶ್ನೆಗಳು ಸಂವಿಧಾನತ್ಮಕವಾಗಿ ಮೂಡುತ್ತದೆ. 1948ರ ಭಾರತವೇ ಬೇರೆ, 2022ರ ಸಂದರ್ಭದ ಭಾರತವೇ ಬೇರೆ ಎಂಬ ಪರಿಜ್ಞಾನ ನಿಮಗೆ ಇರಲೇಬೇಕು.

ಸರ್ವರಿಗೂ ಸಮಪಾಲು ಸಮಬಾಳು ಸಮಬಾಳು ಎಂಬ ಧ್ಯೇಯವಾಕ್ಯದೊಂದಿಗೆ ನಿರ್ಮಾಣಗೊಂಡಿರುವ ಭಾರತದ ಬೃಹತ್ ಲಿಖಿತ ಸಂವಿಧಾನವು ಜನರನ್ನು ಒಡೆದಾಳುವ ನೀತಿಗೆ ಎಂದೂ ತೆರೆದುಕೊಂಡಿಲ್ಲ. ಬದಲಿಗೆ ಶತಶತಮಾನಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ದುಡಿಮೆಗಾರರಾದರೂ ಭೂಹೀನರಾಗಿ, ಅಪಾರ ಪಾರಂಪರಿಕ ಜ್ಞಾನವಂತರಾದರು ಅವಿದ್ಯಾವಂತರಾಗಿ, ಶ್ರಮ ಮತ್ತು ದುಡಿಮೆಯ ಮೂಲಕ ಯಾವ ಫಲಪೇಕ್ಷೆಯನ್ನು ಬಯಸದೆ ರಾಷ್ಟ್ರ ಕೊಟ್ಟಿದ್ರು ಸಹ ಸಂಸ್ಕೃತಿ ಹೀನರಾಗಿರುವ – ಅಸಂಸ್ಕೃತಿ ಜನರೆಂದು ಸೂಚಿಸುವ ಕೇರಿಯವಾಸಿಗಳಾನಾಗೀಸಿ ಅವರು ಸೇವಿಸುವ ಆಹಾರ, ಪೂಜಿಸುವ ದೇವರು, ವಾಸಿಸುವ ಸ್ಥಳ, ಆಚರಣೆಗಳನ್ನ ಮುಂದೆ ಮಾಡಿ ಶತಶತಮಾನಗಳಿಂದಲೂ ಮೊದಲ್ಗೊಂಡು ಇಂದಿನವರೆಗೂ ಈ ಬಹುದೊಡ್ಡ ಜನ ಸಮುದಾಯವನ್ನು ಅಸ್ಪೃಶ್ಯರನ್ನಾಗಿಸಿದವರು ಯಾರು? ಎಂಬ ಪ್ರಶ್ನೆಗೆ ತಮಗೆ ತಾವೇ ಸುಂಸ್ಕೃತರು ಎಂದು ಸ್ಘೋಷಿಸಿಕೊಂಡಿರುವ, ಮತಾಂತರ – ಮತಸ್ವೀಕಾರ ಪ್ರಕ್ರಿಯೆ ಕುರಿತ ಕಿಂಚಿತ್ತು ಪರಿಜ್ಞಾನವಿಲ್ಲದೇ ಪುಂಕಾನು-ಪುಂಖವಾಗಿ ಮಾತನಾಡುವವರು ಉತ್ತರ ನೀಡಬೇಕಾಗಿದೆ.

ಮತಾಂತರಗೊಂಡವರಿಗೆ ಮೀಸಲಾತಿಯ ಸೌಲಭ್ಯ ಕೊಡಬಾರದು ಎಂದು ಹೇಳುವ ಮೂಲಭೂತವಾದಿಗಳು ಮೊದಲು ಈ ಜನ ವರ್ಗ ಏಕೆ ಮತಾಂತರಗೊಳ್ಳುತ್ತಾರೆ ಎಂಬ ಇತಿಹಾಸದ ಪಾಠವನ್ನು ಅರಿಯಬೇಕಾಗಿದೆ. ಮತಾಂತರ ಪ್ರಕ್ರಿಯೆಗೆ ಹಂಬಲಿಸುತ್ತಿರುವ ಬಹುದೊಡ್ಡ ಮೂಲನಿವಾಸಿ ತತ್ವದ ಶ್ರಮಿಕ ವರ್ಗದವರು ಅದ್ಯಾವ ಭಾರತದ ಭವ್ಯ, ಸುಂದರ, ಸಾಂಸ್ಕೃತಿಕ ಐಡೆಂಟಿಟಿಯ ಸುವರ್ಣ ಯುಗ ಎಂದು ಕರೆಸಿಕೊಂಡ ಸಾಮ್ರಾಟರ ಆಳ್ವಿಕೆಯಲ್ಲಿ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳಲಾಗಿತ್ತು….? ಎಂಬುದಕ್ಕೆ ಕಿಂಚಿತ್ತು ದಾಖಲೆಗಳಿಲ್ಲದ ಹಾಗೂ ಇಂದು ಮತಾಂತರಗೊಂಡವರಿಗೆ ಮೀಸಲಾತಿಯನ್ನು ನೀಡಬಾರದು ಎಂದು ಹೇಳುವವರಲ್ಲಿ ಉತ್ತರವೂ ಇಲ್ಲ.

ಈ ದೇಶದ ಚರಿತ್ರೆಯಲ್ಲಿ ಸ್ವಾತಂತ್ರ ನಂತರ ಜಾರಿಗೆ ಬಂದ ಸಂವಿಧಾನ ಜನಪರ – ಜಾತ್ಯತೀತ – ಧರ್ಮ ನಿರಪೇಕ್ಷಿತ ಹಿನ್ನೆಲೆಯಲ್ಲಿ ಮನುಷ್ಯರನ್ನು ಮನುಷ್ಯತ್ವದ ಹಿನ್ನೆಲೆಯಲ್ಲಿ ಪ್ರೀತಿಸುವ ಸಂವಿಧಾನವಾಯಿತೇ ಹೊರತು ಧರ್ಮಪರ ಸಂವಿಧಾನವಾಗಿ ರೂಪುಗೊಳ್ಳಲೇ ಇಲ್ಲ ಎಂಬುದು ಸತ್ಯ. ಇಂತಹ ಕಠೋರ ಸತ್ಯವನ್ನು ಪ್ರತಿಪಾದನೆ ಮಾಡಿದ್ದಕ್ಕಾಗಿಯೇ ಸುಳ್ಳು ಚರಿತ್ರೆಯ ಮೇಲೆ ತಮ್ಮ ಧಾರ್ಮಿಕ – ಸಾಮಾಜಿಕ ಬದುಕನ್ನು ಕಟ್ಟಿಕೊಂಡು ಬಂದಂತವರಿಗೆ  ಇದು ಕಹಿ ಸತ್ಯವನ್ನಾಗಿಸಿತು.

ಕೇವಲ ಸುಳ್ಳಿನ ಆಧಾರದ ಮೇಲೆ ರಾಷ್ಟ್ರ ಕಟ್ಟಿದವರಿಗೆ ಈ ಸತ್ಯದ ಸಂವಿಧಾನದ ಆಶಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಂವಿಧಾನವನ್ನು ಪುರಾಣ ಹಿನ್ನೆಲೆಯ ಪಾರಂಪರಿಕ ಸುಳ್ಳಿನ ಚರಿತ್ರೆಯಾಗಿ ಬದಲಾಯಿಸಬೇಕೆಂಬುದೇ ಮೇಲಿನ ಮೂಲಭೂತ ಸಂಘಟನೆಗಳ ಧ್ಯೇಯೋದ್ಧೇಶ. ಏಕೆಂದರೆ ಸ್ವತಂತ್ರ ನಂತರ ಭಾರತಕ್ಕೆ ಬಂದ ಪ್ರಜಾಪ್ರಭುತ್ವ ಮಾದರಿಯ ಸಮ ಸಂಸ್ಕೃತಿಯ ಸಂವಿಧಾನದ ಪೂರ್ವದಲ್ಲಿ ಮತನಾಡದೆ ಇದ್ದ ಬಹುಜನ ವರ್ಗದವರು ಮಾಡುವ ಕಸುಬಿನ ಆಧಾರದ ಮೇಲೆ ಕೇವಲ ಜಾತಿಗಳಾಗಿದ್ದರೆ ಹೊರತು ಎಂದೆಂದಿಗೂ ಅವರು ಧರ್ಮದ ಹಿನ್ನೆಲೆಗೆ ಒಳಪಟ್ಟಿರಲೇ ಇಲ್ಲ…. ಅಥವಾ… ವರ್ಣಾಶ್ರಮ ಪದ್ಧತಿಗೆ ಅನುಗುಣವಾಗಿ ಹೊಲೆ-ಮಾದಿಗರು – ಚಂಡಾಲರು ಇನ್ನಿತರ ಅಸ್ಪೃಶ್ಯ ವರ್ಗದ ವೃತ್ತಿಪ್ರಧಾನ ಜಾತಿಕೇಂದ್ರಿತ ವ್ಯಕ್ತಿಗಳು ವರ್ಣಾಶ್ರಮ ಧಾರ್ಮಿಕ ಪರಂಪರೆಗೆ ಒಳಪಡದೆ ಪಂಚಮರನ್ನಾಗಿಸಿ ಊರಿನಿಂದ ಆಚೆ ಧರ್ಮರಹಿತರನ್ನಾಗಿಸಿ ವಾಸಮಾಡಲು ಸಾಮಾಜಿಕ ಹಾಗೂ ಧಾರ್ಮಿಕ ಅಜ್ಞಾನದ ಕಾನೂನುಗಳನ್ನು ಆಜ್ಞೆಗೊಳಿಸಿ ಅಸ್ಪೃಶ್ಯರನ್ನಾಗಿಸಿದವರಿಗೆ ಅಂದು ನಾವೆಲ್ಲ ಹಿಂದೂ ಎಂಬ ಭಾವನೆ ಏಕೆ ಇರಲಿಲ್ಲ…? ಇಂದಿಗೂ ಸಹ ಕಿಂಚಿತ್ತೋ ಇಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಸಂವಿಧಾನ ಬಂದ ನಂತರ ಸಮಸ್ತ ಭಾರತದ ಭೂ ಪ್ರದೇಶವನ್ನು ತಮ್ಮ ಸ್ವ-ಅನುಭವ ಹಾಗೂ ಅಪಾರ ಜ್ಞಾನರ್ಜನೆಯ ಮೂಲಕ ಸಮಸ್ತ ಭಾರತದ ವಾಸ್ತವದ ಭೂ ಪ್ರದೇಶವನ್ನು ಅರ್ಥೈಸಿಕೊಂಡು ಜನ ಸಂಸ್ಕೃತಿಯನ್ನು ಉತ್ತಮೀಕರಿಸಿ – ರಾಷ್ಟ್ರವನ್ನು ಪ್ರಪಂಚದಲ್ಲಿ ಬಲಿಷ್ಠವಾಗಿ ಕಟ್ಟುವ ಹಿನ್ನೆಲೆಯಲ್ಲಿ ಸಂವಿಧಾನವನ್ನು ಬಾಬಾಸಾಹೇಬರು ರೂಪಿಸಿದರು ಎಂಬ ಕಾರಣಕ್ಕಾಗಿ ಅವರು ಮತ್ತು ಅವರ ಸಂವಿಧಾನವು ಪಾರಂಪರಿಕ ಸಾಂಪ್ರದಾಯವಾದಿಗಳಿಗೆ ಅಸ್ಪೃಶ್ಯರಂತೆಯೇ ಕಾಣುತ್ತಿರುವುದು ದುರಂತವೇ ಸರಿ. ಈ ಅರ್ಥದಲ್ಲಿಯೇ ಹೇಳುವುದು ಸ್ವಘೋಷಿತ ಮೂಲಭೂತವಾದಿಗಳಿಗೆ ಭಾರತದ ಇತಿಹಾಸದ ಅರಿವಿಲ್ಲ ಎಂದು.

ಭಾರತಕ್ಕೆ ಸ್ವಾತಂತ್ರ್ಯಬಾರದೆ ರಾಜಪ್ರಭುತ್ವದ ಆಳ್ವಿಕೆಯಲ್ಲಿ ಅಥವಾ ವಿದೇಶಿರ ಆಳ್ವಿಕೆಯ ತೆಕ್ಕೆಯಲ್ಲಿ ಸಿಲುಕಿ ಸ್ವತಂತ್ರ ಭಾರತದ ಕಲ್ಪನೆ ಇಲ್ಲದ ಜಾತಿ ಹಾಗೂ ಶ್ರೇಣಿಕೃತ ವ್ಯವಸ್ಥೆಯಲ್ಲಿಯೇ ಅಂಧಕಾರದಲ್ಲಿ ಇದ್ದುದ್ದಾಗಿದ್ದರೆ ಮತಾಂತರ-ಮತಾಂತರಗೊಂಡವರಿಗೆ ಮೀಸಲಾತಿಯ ಯಾವ ಪ್ರಶ್ನೆಗಳು ಉದ್ಭವಿಸುತ್ತಿರಲಿಲ್ಲ. ಈ ಮಾತಿಗೆ ಇತಿಹಾಸದುದ್ದಕ್ಕೂ ನಿದರ್ಶನಗಳಿವೆ. ಆದರೆ ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದು – ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ಎಂಬ ತತ್ವ ಸಿದ್ಧಾಂತದ ಹಿನ್ನೆಲೆಯ ಸಂವಿಧಾನ ಜಾರಿಗೆ ಬಂದ ಮೇಲೆ ಅವರ ಪಾರಂಪರಿಕ ಜೀತದಾಳುಗಳು – ಇಟ್ಟಿಬಿಟ್ಟಿ ಚಾಕರಿ ಮಾಡುವವರು – ತಮ್ಮ ಮನೆತನದ ಪಾರಂಪರಿಕ ತೊತ್ತುಗಳು  ದೊರಕದ ಹಿನ್ನೆಲೆಯಲ್ಲಿ, ಮುಂದುವರೆದು ಅವರು ತಮ್ಮ ಪಾರಂಪರಿಕ ಅಜ್ಞಾನಗಳ ಮೌಢ್ಯ ಸಂಪ್ರದಾಯಗಳನ್ನು ಧಿಕ್ಕರಿಸಿದ ಹಿನ್ನೆಲೆಯಲ್ಲಿ ಇವರಿಗೆ ಸಂವಿಧಾನದ ಮೂಲಕ ಇಂತಹ ಮೂಲಭೂತ ಹಕ್ಕುಗಳ  ಅವಕಾಶವನ್ನು ಕಲ್ಪಿಸಿದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಕಂಡರೆ ವಿಷ್ಣು…. ಹಿರಣ್ಯ ಕಶ್ಯಪ ಹೊಟ್ಟೆಯನ್ನು ತನ್ನ ಕೈಗಳಿಂದಲೇ ಬಗೆದು, ಅವನ ರಕ್ತವನ್ನು ಚೆಲ್ಲಾಡಿ ಕೊನೆಗೆ ಕರುಳುಗಳನ್ನು ಮಾಲೆ ಹಾಕಿಕೊಂಡಷ್ಟೇ ಕೋಪ ಬರುವುದು ಸಹಜವಾಗಿದೆ… ಹಾಗೂ ಸಂವಿಧಾನವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಶ್ರಮಜೀವಿಗಳಾದ ಬಹು ಜನರನ್ನು ಕಂಡರೆ ಶತ್ರು ರಾಷ್ಟ್ರದ ಜನರನ್ನು ಬೇಕಾದರೆ ಪ್ರೀತಿಸುತ್ತಾರೆ ಆದರೆ – ಸಂವಿಧಾನದ ಅಡಿಯಲ್ಲಿ ಬದಲಾವಣೆಗೊಂಡ ಅಸ್ಪೃಶ್ಯ ಜನವರ್ಗದವರನ್ನು ಮಾತ್ರ ಈ ಮೂಲಭೂತವಾದಿಗಳು ಪ್ರೀತಿಸಲು ಸಾಧ್ಯವೇ ಇಲ್ಲವೇನು ಎನ್ನುವಷ್ಟು ಮಟ್ಟಿಗೆ ಇವತ್ತಿನ ಸಂದರ್ಭ ಸಾಂಸ್ಕೃತಿಕವಾಗಿ ಸೃಷ್ಟಿಯಾಗಿದೆ. ಅದಕ್ಕಿಂತ ಮೂಲಭೂತವಾದಿಗಳು ಭಾರತವನ್ನು ಕೇವಲ ಹಿಂದೂ ರಾಷ್ಟ್ರವನ್ನಾಗಿಸಲು ಮುಂದಾಗುತ್ತಿರುವ ಅಜ್ಞಾನದ ಭರದಲ್ಲಿ ಮತಾಂತರಗೊಂಡವರಿಗೆ ಮೀಸಲಾತಿಯನ್ನು ನೀಡಬಾರದು ಎಂದು ಹೇಳುತ್ತಿರುವುದು ಅಂಧಕಾರದ ಸಂಕೇತವಾಗಿದೆ. ಹೀಗೆ ಹೇಳುವವರಿಗೆ ಭಾರತದ ದೇಶದ ಚರಿತ್ರೆಯಾಗಲಿ, ಮತ – ಮತಾಂತರಗಳ ಕಲ್ಪನೆಯಾಗಲಿ ಕಿಂಚಿತ್ತೋ  ಇಲ್ಲ. ಇಂತಹ ಅಂಧಕಾರದವರಿಗೆ ಜ್ಞಾನದ ಪ್ರಶ್ನೆಗಳನ್ನು ಕೇಳುವುದಾದರೆ,

೧.

ಸಾವಿರ ವರ್ಷಗಳಿಂದಲೂ ಬದಲಾವಣೆ ಬಯಸದೆ ಇರುವಂತಹ ಅಸ್ಪೃಶ್ಯತಾ ಆಚರಣೆಯನ್ನು ೭೫ ವರ್ಷದ ಪ್ರಜಾಪ್ರಭುತ್ವದಲ್ಲಿ ಹೋಗಲಾಡಿಸಲು ನಿಮ್ಮ ಅಂತರಾಳದ ಸಂವಿಧಾನಾತ್ಮಕ ಹೋರಾಟ ಯಾವುದು..???

ಏಕೆ ಈ ಕಾರ್ಯ ನಿಮ್ಮಿಂದ ಕಿಂಚಿತ್ತೋ ಆಗಲಿಲ್ಲ….??  ದನ್ನು ನಿರ್ಮೂಲನೆ ಮಾಡಿ ಸಮಸಮಾಜದ ಭಾರತ ಕಟ್ಟುವುದು ರಾಷ್ಟ್ರೀಯವಾದಿ ಚಿಂತನೆಯ ಭಾಗವಲ್ಲವೇ…..??

ಅಥವಾ

ಅಸ್ಪೃಶ್ಯತೆಯನ್ನು ಜೀವಂತವಾಗಿ ಇಟ್ಟು ಭವ್ಯ ಭಾರತದ ರಾಷ್ಟ್ರವನ್ನು ನಿರ್ಮಿಸಲು ಮುಂದಾದವರ ಚಿಂತನೆ ರಾಷ್ಟ್ರೀಯವಾದಿ ಚಿಂತನೆಯೇ….??

ಬಹುಮುಖ್ಯವಾಗಿ ದುಡಿದು ಅರೆ ಹೊಟ್ಟೆಯಲ್ಲಿ ಮಲಗಿದವರ ಚರಿತ್ರೆ ರಾಷ್ಟ್ರೀಯವಾದಿ ಚರಿತ್ರೆಯಾಗಬೇಕೋ ಅಥವಾ ದುಡಿಸಿಕೊಂಡು ಹೊಟ್ಟೆ ತುಂಬ ಉಂಡು ಸೋಂಬೇರಿತನದಿಂದ ಮೆರೆದವರ ಚರಿತ್ರೆ ರಾಷ್ಟ್ರೀಯವಾದಿ ಚರಿತ್ರೆ ಆಗಬೇಕೋ….. ಎಂಬುದನ್ನು  ನೀವೇ ವಸ್ತುನಿಷ್ಠವಾಗಿ ಉತ್ತರಿಸಿ.

ಇದಕ್ಕೆ ಇಂದಿನ ಸಂದರ್ಭದಲ್ಲಿ ಸಾಮಾಜಿಕ ಸ್ಥಿತಿಗತಿಯನ್ನು ಅರ್ಥೈಸಿಕೊಂಡು ಉತ್ತರಿಸಬೇಕು. ಅದನ್ನು ಹೊರತುಪಡಿಸಿ ನಾವು ರಾಮಾನುಜಾಚಾರ್ಯರ ಕಾಲದಲ್ಲಿ ದೇವಾಲಯಗಳಿಗೆ ದಲಿತರ ಪ್ರವೇಶ ಮಾಡಿಸಿದೆವು, ನಮ್ಮ ಸಂಸ್ಕೃತಿ ವಸುದೇವ ಕುಟುಂಬಂ ಎಂಬ ಆಧಾರದಲ್ಲಿ ಸಮಸ್ತರನ್ನು ಪ್ರೀತಿಸುವ ಸಂಸ್ಕೃತಿ ಎಂದು ಹೇಳಿ ಜಾರಿಕೊಳ್ಳುವುದು ಬೇಡ….

ಈ ವಸ್ತು ವಿಷಯವನ್ನು ಅರ್ಥ ಮಾಡಿಕೊಂಡ ಇಂತಹ ಬಾಲಿಷ ಹೇಳಿಕೆ ನೀಡುತ್ತಿರುವ ನೀವೇ ಹೇಳಿ ಮತಾಂತರ ಆದವರಿಗೆ ಮೀಸಲಾತಿ ಕೊಡಬೇಕೋ ಅಥವಾ ಬೇಡವೋ ಎಂಬುದನ್ನು….. ಇದಕ್ಕೆ ನಿಮ್ಮ ಅಂಧಕಾರದ ಉತ್ತರ ಬೇಡ – ಜ್ಞಾನದ ಉತ್ತರ ಬೇಕು.

ಆದರೆ ಏನು ಮಾಡುವುದು, ಕೊಡಬಾರದು ಎಂಬುದಕ್ಕೆ ನಿಮ್ಮಲ್ಲಿ ಪುರಾಣದ ಚರಿತ್ರೆ ಇದೆ ಕೊಡಬೇಕು ಎಂಬುದಕ್ಕೆ ನಮ್ಮಲ್ಲಿ ವಾಸ್ತವದ ಸಂವಿಧಾನದ ಚರಿತ್ರೆ ಇದೆ ೭೫ ವರ್ಷದ ಪ್ರಜಾಪ್ರಭುತ್ವದ ಲಿಖಿತ ಸಂವಿಧಾನದ ರಾಷ್ಟ್ರದಲ್ಲಿ ಪುರಾಣ ಮಾತನಾಡುತ್ತಿದ್ದೆ ಹೊರತು ವಾಸ್ತವದ ಸಂವಿಧಾನ ಮಾತನಾಡುತ್ತಿಲ್ಲ… ಸಂವಿಧಾನವನ್ನು ಮಾತನಾಡಲು ಬಿಡುತ್ತಲೂ ಇಲ್ಲ. ಇದು ಆಧುನೀಕ ಭಾರತದ ಸಮ ಸಮಾಜ ನಿರ್ಮಾಣ ಭಾರತ ಚರಿತ್ರೆಯ ಬಹುದೊಡ್ಡ ದುರಂತ.

೨.

೨೦೦೦ ವರ್ಷಗಳಿಂದ ಶಿಕ್ಷಣ ಎಂಬ ಬಹುದೊಡ್ಡ ಅಸ್ತ್ರವನ್ನು ತಮ್ಮ ಸ್ವತ್ತಾಗಿಸಿಕೊಂಡು ಅದಕ್ಕಾಗಿ ಅಗ್ರಹಾರಗಳು – ಘಟಿಕಾಲಯ –  ಗುರುಕುಲ – ದೇವಾಲಯಗಳನ್ನು ಪ್ರಭುತ್ವದವರನ್ನು ಓಲೈಸಿಕೊಂಡು ನಿರ್ಮಾಣ ಮಾಡಿಸಿಕೊಳ್ಳಲಾಗಿತ್ತು… ಈ ಎಲ್ಲವೂ  ನಮ್ಮಿಂದಲೇ ನಿರ್ಮಾಣಗೊಂಡಿತು ಎಂದು ದೇವರು-ಧರ್ಮದ ಮೂಲಕ ಶ್ರೇಷ್ಠತೆಯನ್ನು ಗುರುತಿಸಿಕೊಳ್ಳುವವರು ಈ ರಾಷ್ಟ್ರದ ಶ್ರಮಜೀವಿ – ಮೂಲನಿವಾಸಿಗಳ ಸಹಜವಾದ ಮಾನವನ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ನೀವೇಕೆ ಕಿಂಚಿತ್ತು ಮಾತನಾಡಲಿಲ್ಲ?… ಇಂದಿಗೂ ಮಾತನಾಡುತ್ತಿಲ್ಲ…..? ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಅರಿವು ನಿಮಗಿಲ್ಲವೇ…..? ಇದು ಸಮ ಸಂಸ್ಕೃತಿಯ ನಿರ್ಮಾಣದ ಚರಿತ್ರೆಯ ಭಾಗವಲ್ಲವೇ. ಈ ಅರ್ಥದಲ್ಲೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದ್ದು ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು. ಈ ಪದದ ಅರ್ಥವನ್ನು ಗಂಭೀರವಾಗಿ ಪರಿಗಣಿಸಿ. ನಂತರ ಮತಾಂತರಗೊಂಡವರಿಗೆ ಮೀಸಲಾತಿ ಕೊಡಬೇಕೋ ಅಥವಾ ಕೊಡಬಾರದು ಎಂಬ ಹೇಳಿಕೆಯನ್ನು ನೀವು ನೀಡಿವಿರಂತೆ…

೩.

ಹಬ್ಬ- ಜಾತ್ರೆ- ಉತ್ಸವಗಳ ಹೆಸರಿನಲ್ಲಿ ಪಾರಂಪರಿಕವಾದ ಅಮಾನವೀಯ ಕೆಲಸ-ಕಾರ್ಯಗಳನ್ನು ಸಾಮಾಜಿಕ ಹಾಗು ಧಾರ್ಮಿಕ ಹಿನ್ನೆಲೆಯಲ್ಲಿ ಕಠಿಬದ್ದವಾಗಿ ಮಾಡಿಕೊಂಡು ಬರುತ್ತಿದ್ದವರು ಸಮಸಂಸ್ಕೃತಿಯ ಸಂವಿಧಾನದಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾನೂನಿನ ಹಿನ್ನೆಲೆಯಲ್ಲಿ ನಿರ್ವಹಿಸಲು ನಿರಾಕರಿಸಿದಾಗ, ಗ್ರಾಮಗಳಲ್ಲಿ ಮೂಲ ನಿವಾಸಿಗಳಾದರೂ ಸಹ ಸವರ್ಣಿಯರಿಂದ ಅಸ್ಪೃಶ್ಯರು ಎಂದು ಗುರುತಿಸಿಕೊಂಡಿದ್ದವರ ಮೇಲೆ ನಡೆದ ಭೀಕರ ದೌರ್ಜನ್ಯ, ಬಹಿಷ್ಕಾರ, ಸಾಮಾಜಿಕ ನಿರ್ಬಂಧಗಳ ವಿರುದ್ಧ ನೀವ್ಯಾರು ಯಾಕೆ ಸಂವಿಧಾನಾತ್ಮಕವಾಗಿ ಸೊಲ್ಲೆತ್ತಲಿಲ್ಲ…..?? ಅಂದರೆ, ನೀವು ಈಗ ಇರುವ ಪ್ರಜಾಪ್ರಭುತ್ವ ಮಾದರಿಯ ಬೃಹತ್ ಲಿಖಿತ ಸಂವಿಧಾನದ ವಿರೋಧಿಗಳೇ…

ಇಂತಹ ಘಟನೆಗಳನ್ನು ಖಂಡಿಸುವುದು ನಿಮ್ಮ ಪಾರಂಪರಿಕ ಅಲಿಖಿತ ಸಂವಿಧಾನದ ವಿರುದ್ಧ ಮಾತನಾಡಿದಂತೆ ಆಗುವುದೇ…? ಅಥವಾ ಇಂತಹ ಘಟನೆಗಳನ್ನು ಎಂದಿಗೂ ಖಂಡಿಸಬಾರದೆಂದು ಪ್ರಬಲ ಅಲಿಖಿತ ಸಂವಿಧಾನದ ಸೃಷ್ಟಿಕರ್ತರಿಂದ ಆಜ್ಞೆ ಆಗಿದೆಯೇ… ಏಕೆಂದರೆ ಶತಶತಮಾನಗಳಿಂದಲೂ ಮೀಸಲಾತಿಯನ್ನು ವಿರೋಧ ಮಾಡುವವರು ಇಂತಹ ಮೌಖಿಕ ಆಜ್ಞೆಗಳನ್ನೇ  ಕಿಂಚಿತ್ತೋ ಪ್ರಶ್ನೆ ಮಾಡದೆ ಪಾಲಿಸಿಕೊಂಡು ಬಂದವರು ತಾನೆ.

ಇದಕ್ಕೆ ಉತ್ತರವನ್ನು ಮತಾಂತರಗೊಂಡವರಿಗೆ ಮೀಸಲಾತಿ ನೀಡಬಾರದು ಎಂಬ ಹೇಳಿಕೆ ಕೊಟ್ಟವರಿಂದ ನಿರೀಕ್ಷಿಸಲು ಸಾಧ್ಯವೇ….?

ಮೊದಲೇ ಹೇಳಿದಂತೆ ಈ ಮಾದರಿಯ ಧಾರ್ಮಿಕ ಅಂಧಕಾರರಿಗೆ – ಸಾಮಾಜಿಕ ಅಸಮಾನತೆಯ ವಸ್ತು ನಿಷ್ಠತೆಯನ್ನು ವ್ಯಕ್ತಪಡಿಸುವ  ಪ್ರಶ್ನೆ ಅರ್ಥವೇ ಆಗುವುದಿಲ್ಲ. ಇನ್ನು ಉತ್ತರ ಹೇಗೆ ಕೊಡಲು ಸಾಧ್ಯ….!

೪.

ಸಾವಿರಾರು ವರ್ಷಗಳಿಂದ ಪ್ರಶ್ನೆ ಮಾಡದೆ ಏಕಮುಖವಾಗಿರುವ ಅಸ್ಪೃಶ್ಯತೆ ವಿರುದ್ಧ ಪ್ರಶ್ನೆ ಮಾಡಿದ, ಭಾರತವಲ್ಲದೆ ಪ್ರಪಂಚದ ಅನೇಕ ಪ್ರಗತಿಪರ ರಾಷ್ಟ್ರಗಳು ಒಪ್ಪಿ-ಅಪ್ಪಿಕೊಂಡಿರುವ ಭಾರತದ ಸಂವಿಧಾನವು ಅಸಮಾನತೆಯನ್ನು ತೊಡೆದು ಹಾಕಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಆಧಾರದಲ್ಲಿ ನಿರ್ಮಾಣಗೊಂಡಿತ್ತು ಎಂಬ ಕಾರಣಕ್ಕಾಗಿ ಇದನ್ನು ಬದಲಾಯಿಸಬೇಕು – ಇದನ್ನು ಬದಲಾಯಿಸಲೆಂದೆ ನಾವು ಬಂದಿರುವುದು ಎಂದು ಧಾರ್ಮಿಕ ಹಿನ್ನೆಲೆಯಿಂದ ಹೇಳಿಕೆಗಳು ಬಂದಾಗ ಸಮ-ಸಂಸ್ಕೃತಿಯನ್ನು ಪ್ರತಿಪಾದನೆ ಮಾಡುವವರು, ನಾವೆಲ್ಲ ಒಂದು – ನಾವೆಲ್ಲ ಹಿಂದೂ ಎಂದು ಹೇಳಿಕೊಳ್ಳುವ ಸಂಘಟಕರು ಕಿಂಚಿತ್ತಾದರೂ ಏಕೆ ಸಂವಿಧಾನದ ಪರವಾಗಿ ಮಾತನಾಡಲಿಲ್ಲ….??.

ಈ ಸಂವಿಧಾನ ಅಸ್ಪೃಶ್ಯರಿಗೆ ಮೀಸಲಾತಿ ನೀಡಿ ಮುಖ್ಯ ವಾಹಿನಿಗೆ ತರಲು ಪ್ರೇರಣೆ ಆಯಿತು ಎಂದೋ…. ಅಥವಾ ನೀವೇ ಕರೆದಂತಹ ಅಸ್ಪೃಶ್ಯ ಜನಾಂಗಕ್ಕೆ ಸೇರಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು ಎಂದೋ… ಎಂಬುದನ್ನು ನೀವೇ ನಿರ್ಧರಿಸಿ.

ಈ ಎರಡು ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಬಯಸುವುದು ನನಗೂ ಕಷ್ಟ….

೫.

ಸಂವಿಧಾನದ ಅಡಿಯಲ್ಲಿ ಮೀಸಲಾತಿಯನ್ನು ಪಡೆದು, ಉನ್ನತ ಶಿಕ್ಷಣ ಪಡೆದ ಅಧಿಕಾರಿಗಳು ಇತರೆ ನೌಕರರ ಮೇಲೆ ಅಸ್ಪೃಶ್ಯತೆ ಎಂಬ ಪ್ರಬಲ ಅಸ್ತ್ರ ಪ್ರಯೋಗವಾಗಿಸಿ ಅವರು ಅಮಾನವೀಯತೆಗೆ ಒಳಗಾದಾಗ ಏಕೆ…. ಅವರು ಭಾರತೀಯರು – ನೀವೇ ಪ್ರತಿಪಾದನೆ ಮಾಡುವ ಹಾಗೆ ಇವರು ಸಹ ಹಿಂದೂಗಳು ಎಂಬ ಪರಿಜ್ಞಾನ ಇಲ್ಲದಾಯಿತು. ಇಂತಹ ಘಟನೆಗಳು ಸಂಭವಿಸಿದಾಗ ಇವರು ಕೇವಲ ಜಾತಿಯ ವ್ಯಕ್ತಿಗಳು. ಧಾರ್ಮಿಕ ಹಿನ್ನೆಲೆ ಬಂದಾಗ ಮಾತ್ರ, ಸಂಖ್ಯಾಬಲಕ್ಕೆ ಮಾತ್ರ ಇವರು ಹಿಂದೂಗಳು. ಇಂತಹ ಒಡೆದಾಳುವ ನೀತಿಗೆ ನಿಮ್ಮಿಂದ ಉತ್ತರ ನಿರೀಕ್ಷಿಸಲು ಸಾಧ್ಯವೇ…??

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋದ ಬುದ್ಧ- ಬಸವ- ಬಸವದಿ ಶರಣರು- ಕನಕ- ಆಧುನೀಕ ಕಾಲದ ಅನೇಕ ಮಹಾನ್ ಮಹಾನ್ ಚಿಂತಕರು- ಸಾಧಕರು ತಾವು ಅಂದುಕೊಂಡ ತುಟ್ಟ ತುದಿಯ ಗುರಿಯನ್ನು ಮುಟ್ಟಲಾಗದೆ ಸೋತಿರುವುದೇ ಉಂಟು. ಏಕೆಂದರೆ ಇವರು ಹುಟ್ಟುಹಾಕಿದ ಪ್ರಶ್ನೆಗಳಿಗೆ ಅವರೇ ನೀಡಿದ ಉತ್ತರಕ್ಕೆ ನೈತಿಕತೆ ಇದೆ… ಆದರೆ ಇದನ್ನು ಅರ್ಥ ಮಾಡಿಕೊಂಡು ಪಾಲಿಸಬೇಕಾದವರು ಧಾರ್ಮಿಕ ಅಂಧಕಾರದ ಅನೈತಿಕತೆ ಗುರಿಯಾಗಿರುವುದು ಸಹಜವಾಗಿದ್ದೆ ಆಗಿದೆ.

೬.

ನಮ್ಮ ರಾಷ್ಟ್ರದಲ್ಲಿ ಹೆಣ್ಣಿಗೆ ಮಹತ್ವ ಹಾಗೂ ಪವಿತ್ರದ ಸ್ಥಾನವನ್ನು ನೀಡಿದ್ದೇವೆ. ಭೂಮಿ, ನೀರು ಇವುಗಳನ್ನು ದೇವಾನುದೇವತೆಗಳಿಗೆ ಹೋಲಿಸಿಕೊಂಡು ಗೌರವಿಸಿ-ಪೂಜಿಸಿಕೊಂಡು ಬರುತ್ತಿದ್ದೇವೆ. ಆದರೆ ಶ್ರೇಣೀಕೃತ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅಸ್ಪೃಶ್ಯ ಮಹಿಳೆ ಹಾಗೂ ಮಕ್ಕಳ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಕೊಲೆ ಇತ್ಯಾದಿ ಇತ್ಯಾದಿ….. ಭೀಕರ ಅಮಾನವೀಯ ಘಟನೆಗಳು ಗತಿಸಿದಾಗ ಯಾವ ಸಂದರ್ಭದಲ್ಲಿ ಮತಾಂತರಗೊಂಡವರಿಗೆ ಮೀಸಲಾತಿ ನೀಡಬಾರದು ಎಂದು ಸ್ವಯಂ ಹೇಳಿಕೆ ಕೊಡುವಷ್ಟು  ಶಕ್ತರಾಗಿರುವವರು ಇದರ ವಿರುದ್ಧ ಬೃಹತ್ ಪ್ರತಿಭಟನಾ ಮಾಡಿ ನ್ಯಾಯಪರ ಹೋರಾಟ ಮಾಡಿರುವುದಕ್ಕೆ  ನಿದರ್ಶನಗಳಿವೆ….? ನಿಮಗೆ ಈ ಪ್ರಶ್ನೆಗೆ ಸೂಕ್ತ ಉತ್ತರ ದೊರಕುವವರೆಗೂ ಇವರು ಮತ ಸ್ವೀಕರಿಸಿದರು ಅಥವಾ ಮತಾಂತರಗೊಂಡರು ಸಹ ಮೀಸಲಾತಿಗೆ ಸಂಪೂರ್ಣ ಅರ್ಹರು ಎಂಬುದನ್ನು ಮೊದಲು ಗ್ರಹಿಸಬೇಕಾಗಿದೆ. ಈ ಅಂತದಲ್ಲಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು ಹಿಂದೂ ಧರ್ಮ ಅಸಮಾನತೆಯ ತೊಟ್ಟಿಲು ಎಂದು. ಈ ಮಾತಿನ ಗಂಭೀರವಾದ ಅರ್ಥವನ್ನು ತೆರೆದ ಮನಸ್ಸಿನಿಂದ ಗ್ರಹಿಸಬೇಕಾಗಿದೆ. ಆನಂತರ ಮತಾಂತರಗೊಂಡವರಿಗೆ ಮೀಸಲಾತಿ ಕೊಡಬೇಕೋ – ಬೇಡವೋ ಎಂಬುದನ್ನು ಮಾತನಾಡುವಿರಂತೆ……

೭.

ಅಸ್ಪೃಶ್ಯ ಮಹಿಳೆ ಎಂಬ ಕಾರಣಕ್ಕಾಗಿ ಶಾಲೆಯಲ್ಲಿ ಬಿಸಿ ಊಟ ಸಿದ್ದಪಡಿಸಿದ ಊಟವನ್ನು ತಿರಸ್ಕರಿಸಿದ ಘಟನೆ…. ದೇವಾಲಯಕ್ಕೆ ಮಗು ಪ್ರವೇಶ ಮಾಡಿತು ಎಂಬ ಕಾರಣಕ್ಕಾಗಿ ೨೫,೦೦೦ ದಂಡ ಹಾಗೂ ಬಹಿಷ್ಕಾರ, ದೇವರ ಕೋಲು ಮುಟ್ಟಿದ್ದಕ್ಕಾಗಿ ೬೦,೦೦೦ ದಂಡ ಹಾಗೂ ಬಹಿಷ್ಕಾರ, ಹೋಟೆಲ್‌ನಲ್ಲಿ ಗ್ಲಾಸ್ ಮುಟ್ಟಿದನು, ಸವರ್ಣೀಯರ ಕೇರಿಯಲ್ಲಿ ಇರುವ ನೀರಿನ ಬಾವಿಯನ್ನು ಸ್ಪರ್ಶ ಮಾಡಿದನು, ಸವರ್ಣೀಯರ ಕೇರಿಯಲ್ಲಿ ಇರುವ ಸಾರ್ವಜನಿಕ ಬೋರ್‌ ವೆಲ್ ಮುಟ್ಟಿದನು ಎಂಬ ಕಾರಣಕ್ಕಾಗಿ…, ಹೇರ್ ಕಟ್ ಮಾಡುವುದಿಲ್ಲ – ಹೋಟೆಲ್ ಒಳಗಡೆ ಪ್ರವೇಶ ಮಾಡಿದ್ದಕ್ಕೆ- ಗ್ಲಾಸ್ ನಿಂದ ಟೀ ಕಾಫಿ ಕೊಡಲು ನಿರಾಕರಿಸಿದಂತಹ ಅಸ್ಪೃಶ್ಯತಾಚರಣೆಯ ಕ್ಷುಲ್ಲಕ ಅಷ್ಟೇ ಗಂಭೀರವಾದ ಕಾರಣದಿಂದಾಗಿ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ನಡೆದ ಭೀಕರ ಅಮಾನವೀಯ ಘಟನೆಗಳನ್ನು ನೀವು ಬಯಸುವ  ಹಿಂದುತ್ವ ಅಥವಾ ಭಾವನಾತ್ಮಕವಾಗಿ ನಾವೆಲ್ಲರೂ ಭಾರತೀಯರು – ನಾವೆಲ್ಲರೂ ಹಿಂದುಗಳು ಎಂದು ಹೇಳಿಕೊಳ್ಳುವವರು ಯಾರೂ ಸಹ ಪ್ರಶ್ನೆ ಮಾಡಲಿಲ್ಲ…. ಪ್ರಶ್ನೆ ಮಾಡಬೇಕಾದವರಿಗೆ ಇಂತಹ ಅಮಾನವೀಯ ಘಟನೆಗಳು ದಿನ ನಿತ್ಯ ನಡಿತಿರುವುದರಿಂದ ಅರಿವಿಲ್ಲವೇ…??

ಮೇಲಿನ ಪ್ರಶ್ನೆಗಳಿಂದ ಉದ್ಭವಿಸುವ ಪ್ರಶ್ನೆ ಎಂದರೆ ಮೀಸಲಾತಿ ಎಂದರೆ ಏನು? ಎಂಬುದು…. ಮೇಲಿನ ಮಾತುಗಳೇ ಮೀಸಲಾತಿಗೆ ಉತ್ತರವಾಗಿವೆ… ಇಂತಹ ಘಟನೆಗಳನ್ನು ಕೇಳಿ – ನೋಡಿ ಅಲ್ಲದೆ, ಸ್ವತಃ ಅನುಭವಿಸಿ ಸಂವಿಧಾನ ಸೃಷ್ಟಿಕರ್ತರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀಡಿರುವುದು. ಇದರ ಪರಿಜ್ಞಾನವನ್ನು ಅಂತರಾಳದಿಂದ ಅರ್ಥಮಾಡಿಕೊಂಡಾಗ ಮಾತ್ರ ಮತಾಂತರಗೊಂಡವರಿಗೆ ಮೀಸಲಾತಿ ನೀಡಬಾರದು ಎಂಬ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬಹುದು.

ಲಿಖಿತ ಸಂವಿಧಾನದಡಿಯಲ್ಲಿ ಕೇವಲ ಉದ್ಯೋಗ – ಶೈಕ್ಷಣಿಕ – ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಸ್ಪೃಶ್ಯವನ್ನು ಮುನ್ನೆಲೆಗೆ ತರಲು ಸಂವಿಧಾನಾತ್ಮಕವಾಗಿ ನೀಡಿರುವುದು ಮೀಸಲಾತಿಯೋ….?

ಅಥವಾ

ಮೇಲೆ ಉಲ್ಲೇಖಿಸಿರುವ ಮಾದರಿಯ ಅಸ್ಪೃಶ್ಯತೆಯನ್ನು ನಿವಾರಣೆ ಮಾಡದೇ – ಜಾತಿ ಹಾಗೂ ಜಾತಿಯಾಧಾರಿತ ಕಸುಬುಗಳನ್ನು  ಯಥಾವತ್ತಾಗಿ ಉಳಿಸಿಕೊಂಡು ಅಸ್ಪೃಶ್ಯತೆಯನ್ನು ಉಳಿಸುವುದು ಮೀಸಲಾತಿಯೋ….?

ಮಿತ್ರರೇ, ನೀವೇ ಹೇಳಿ… ಸಮ-ಸಮಾಜವನ್ನು ನಿರ್ಮಾಣ ಮಾಡುವುದು ಮೀಸಲಾತಿಯೋ…..? ಅಸಮಾಜವನ್ನು ನಿರ್ಮಾಣ ಮಾಡುವುದು ಮೀಸಲಾತಿಯೋ….??

ಸಂವಿಧಾನ ನೀಡಿರುವ ಮೀಸಲಾತಿ ಕಣ್ಣಿಗೆ ಕಾಣಿಸುತ್ತಿದೆ… ಅದಕ್ಕಾಗಿ ಅದರ ವಿರೋಧವನ್ನು ನೀವು ಪ್ರಬಲವಾಗಿ ಮಾಡುತ್ತಿದ್ದೀರಿ. ಆದರೆ ಶತಶತಮಾನಗಳಿಂದಲೂ ಸವರ್ಣೀಯರ ಮನಸ್ಸಿನಲ್ಲಿ ಅದುಮಿಕೊಂಡಿರುವ ಅಸ್ಪೃಶ್ಯತೆ ಆಚರಣೆ ಎಂಬ ಅಳಿಸಲಾಗದೆ ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ – ವಂಶದಿಂದ ವಂಶಕ್ಕೆ ಬಳುವಳಿಯಾಗಿ ಉಳಿದಿರುವ ಈ ಅಮಾನವೀಯ ಮೀಸಲಾತಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ನಿಮ್ಮ ಕಣ್ಣಿಗೆ ರಾಚುವಂತೆ ಕಂಡರೂ ಸಹ ಕುರುಡರಾಗಿರುವ ನಿಮ್ಮ ಮನಸ್ಸಿನ ಪ್ರಪಂಚದಲ್ಲಿ ಮೀಸಲಾತಿ ಕೊಡಬಾರದು – ತೆಗೆಯಬೇಕು ಎಂದು ತಾವು ಮಾತ್ರ ಸೇಫ್ ಆದ ಜಾಗದಲ್ಲಿ ಕುಳಿತು   ಮಾತನಾಡುವುದು ಎಷ್ಟು ಮಾತ್ರ ಸರಿ…. ನಿಮ್ಮಿಂದ ಉತ್ತರ ಬಯಸಬಹುದೇ.

ಆದರೆ ಇಂದು ಅಸ್ಪೃಶ್ಯ ಸಮುದಾಯದವರಿಗೆ ಸಂವಿಧಾನ ನೀಡಿರುವ ಮೀಸಲಾತಿ ಕೇವಲ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿ ಮಾತ್ರ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು. ಅಲ್ಲಿ ಅಸ್ಪೃಶ್ಯತಾ ನಿವಾರಣೆಗೂ ಪ್ರಬಲವಾದ ಮೀಸಲಾತಿಯನ್ನೇ ನೀಡಲಾಗಿದೆ… ಆದರೆ ಶಿಕ್ಷಣ ಮತ್ತು ಉದ್ಯೋಗದಿಂದ ಮುಂದಾದ ದಲಿತರ ಮೇಲಿರುವಂತ ನಿಮ್ಮ ವಾರೆ ನೋಟಅಸ್ಪೃಶ್ಯತಾ ಆಚರಣೆ  ವಿರುದ್ಧ ಸಂವಿಧಾನ ನೀಡುವ ಮೀಸಲಾತಿಯ ಮೇಲೆ ಏಕಿಲ್ಲ ನಿಮ್ಮ ನೇರ ನೋಟ.

ಇಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಕಂಡುಕೊಂಡ ನಂತರ ನೀವು ಮತಾಂತರ ಆದವರಿಗೆ ಮೀಸಲಾತಿ ಕೊಡಬೇಕೋ – ಬೇಡವೋ ಎಂಬುದನ್ನು ನಿರ್ಧರಿಸಿ.

ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಹೇಳಿದಂತೆ ಶ್ರಮದ ಮೂಲಕ ರಾಷ್ಟ್ರವನ್ನು ಕಟ್ಟಿದ ಬಹುದೊಡ್ಡ ಜನವರ್ಗಕ್ಕೆ ನಾಳೆಯ ದಿನಗಳಲ್ಲಿ ಮೀಸಲಾತಿಯೇ ಬೇಕಾಗಿಯೂ ಇಲ್ಲ, ಅವರಿಗೆ ಅವರ ಶ್ರಮವೇ ಮೀಸಲಾತಿ.

ಆದರೆ ಶ್ರಮಜೀವಿಗಳ ಶ್ರಮವನ್ನೇ ಬಂಡವಾಳ ಮಾಡಿಕೊಂಡು ತಮ್ಮ ವೈಭವದ ಜೀವನವನ್ನು ರೂಪಿಸಿಕೊಂಡವರಿಗೆ ಅನಿಕಿತ ಪ್ರಬಲ ಮೀಸಲಾತಿ ಬೇಕಾಗಿಯೇ ಇದೆ….

ಆದರೆ ಸಮಸಂಸ್ಕೃತಿಯ ಪ್ರತಿಪಾದನೆ ಮಾಡುವ ಈ ಜನ ವರ್ಗಕ್ಕೆ ಬೇಕಾಗಿರುವ ಮೀಸಲಾತಿ ಅಸ್ಪೃಶ್ಯತೆ ಎಂಬ ನಿಮ್ಮ ಪಾರಂಪರಿಕ ಮೀಸಲಾತಿಯನ್ನು ನಿಮ್ಮ ಮನೆ ಹಾಗೂ ಮನದಿಂದ ತೆಗೆಯುವುದು… ಈ ನಿಮ್ಮ ಅಜ್ಞಾನದ ಮೀಸಲಾತಿಯನ್ನು ನಿಮ್ಮ ಮನೆ ಹಾಗೂ ಮನದಿಂದ ತೊಲಗಿಸಲು ಸಾಧ್ಯವೇ….? ಇದು ಸಾಧ್ಯವಾದರೆ ಮಾತ್ರ ಮತಾಂತರಗೊಂಡವರಿಗೆ ಮೀಸಲಾತಿಯ ಸೌಲಭ್ಯ ಕೊಡಬಾರದು ಎಂಬ ಅರ್ಥ ಬರುತ್ತದೆ.

ಇಲ್ಲದಿದ್ದರೆ ನಿಮ್ಮ ಹೇಳಿಕೆ ಕೇವಲ ನೀರ ಮೇಲಿನ ಗುಳ್ಳೆಯಂತೆಯೇ ಸರಿ.

ಏಕೆಂದರೆ, ಈ ಹಂತದ ನಿಮ್ಮ ಅಜ್ಞಾನ ಶತಶತಮಾನಗಳಿಂದಲೂ ಚಲಿಸದೆ ಜಡ್ಡು ಕಟ್ಟಿಕೊಂಡಿರುವುದರಿಂದ ನಿಮ್ಮಿಂದ – ನಿಮ್ಮಂತವರಿಂದಾಗಿ ಭಾರತೀಯ ಸಮಾಜ ನಿರ್ಲಪ್ತಗೊಂಡಿದೆ… ಏಕೆಂದರೆ ಮತಾಂತರಗೊಂಡವರನ್ನು ಸಹ ನೀವೇ ಅವರ ಜಾತಿಯ ಹಿನ್ನೆಲೆಯಲ್ಲಿಯೇ ದಲಿತ ಕ್ರೈಸ್ತರುದಲಿತ ಬೌದ್ಧರುದಲಿತ ಮುಸಲ್ಮಾನರುದಲಿತ ಸಿಕ್ಕರು – ಎಂದು ಕರೆಯುತ್ತಿರುವುದು – ಮೀಸಲಾತಿಯನ್ನು ನೀಡಲೇಬೇಕಾದ ಸಂಕೇತ ಅಲ್ಲವೇ… ಈ ಎಲ್ಲದಕ್ಕೂ ಮೂಲಕಾರಣವಾಗಿರುವ ನಿಮ್ಮ ಅಸಮಾನತೆಯ – ಸಮಾಜವನ್ನು ಒಡೆದಾಳುವ ಚಿಂತನೆಗೆ ಕೊನೆ ಉಂಟೆ…. ಇದು ಕೊನೆಯಾಗಲೇಬೇಕು.

ದಯವಿಟ್ಟು ಲೇಖನವನ್ನು ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಆರೋಗ್ಯಕರವಾಗಿ ಗಮನಿಸಿ – ಪ್ರತಿಕ್ರಿಯಿಸಿ. ಇವೆಲ್ಲ ಒಡಲಾಳದ – ಸ್ವ ಅನುಭವದ – ಈ ಅಮಾನವೀಯ ಸಾಮಾಜಿಕ ಸಂಕೋಲೆಯಲ್ಲಿ ಸಿಲುಕಿ ನೊಂದವರ ನ್ಯಾಯಪರ ಮಾತುಗಳೇ ಹೊರತು – ಮತ್ತೊಬ್ಬರಿಗೆ ನೋವು ಉಂಟುಮಾಡುವ ಮಾತುಗಳೆಲ್ಲ.

ನೋವುಂಡವರಿಗೆ ಇನ್ನೊಬ್ಬರಿಗೆ ನೋವುಂಟು  ಮಾಡುವ ಅಜ್ಞಾನ ಬರುವುದಿಲ್ಲ. ನೋವನ್ನು ನಿವಾರಣೆ ಮಾಡುವ ಜ್ಞಾನ ಮಾತ್ರ ಬರುತ್ತದೆ…

ಇದೆ ನಿಜವಾದ ಭಾರತದ ಸಂಸ್ಕೃತಿ.. ಇಂತಹ ಸಂಸ್ಕೃತಿಯ ಪ್ರತಿಪಾದಕರು ನಾವಾಗೋಣ.. ಸಮಸಮಾಜದ ಸದೃಢ ಭಾರತವನ್ನು ಕಟ್ಟೋಣ.. ಪ್ರಪಂಚದಲ್ಲಿ ನಮ್ಮ ಭಾರತದ ಐಕ್ಯತೆಯನ್ನು ಎತ್ತಿಹಿಡಿಯೋಣ.

ಜೈ ಭೀಮ್ ಜೈ ಭಾರತ್

Donate Janashakthi Media

Leave a Reply

Your email address will not be published. Required fields are marked *