ಪೇಸಿಎಂ ಪ್ರಕರಣ: ಕಾಂಗ್ರೆಸ್‌ ಮುಖಂಡರ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಇತ್ತೀಚಿಗೆ ಅತ್ಯಂತ ವೈವಿದ್ಯಪೂರ್ಣ ಪ್ರಚಾರದಿಂದ ವ್ಯಾಪಕ ಸುದ್ದಿ ಪಡೆದುಕೊಂಡಿದ್ದ ʻಪೇಸಿಎಂʼ ಭಿತ್ತಿಚಿತ್ರ ಪ್ರದರ್ಶನ ಅಭಿಯಾನಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಂಗ್ರೆಸ್‌ ಪಕ್ಷದ ಮುಖಂಡರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ ಮತ್ತು ತನಿಖೆ ಕೈಗೊಳ್ಳುವ ಅಗತ್ಯವಿಲ್ಲವೆಂದು ತಿಳಿಸಿದೆ.

ʻಪೇಸಿಎಂʼ ಭಿತ್ತಿಚಿತ್ರ ಅಭಿಯಾನಕ್ಕೆ ಕರೆಕೊಟ್ಟಿದ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಹಾಗೂ ವಕೀಲರಿಬ್ಬರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಅಂತೆಯೇ, “ಆದೇಶದಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯ ಹಾಲಿ ಅರ್ಜಿದಾರರ ವಿರುದ್ದದ ಪ್ರಕರಣವನ್ನು ಪರಿಗಣಿಸುವುದಕ್ಕೆ ಸೀಮಿತವಾಗಿದ್ದು, ಇತರೆ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ನೆಲಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ವಕೀಲ ನಾರಾಯಣ ಗೌಡ ಜೆ ಎಸ್‌ ಮತ್ತು ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ನೀಡಿದೆ.

ಅರ್ಜಿದಾರರು ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ – 1984 ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ – 1981 ಮತ್ತು ಐಪಿಸಿ ಸೆಕ್ಷನ್‌ 290ರ ಅಡಿ ದಾಖಲಿಸಿದ್ದ ಪ್ರಕರಣವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಸಿದ್ದರು.

“ಅರ್ಜಿದಾರರು ಇತರರಿಗೆ ಮೊಬೈಲ್‌ ಮೂಲಕ ಭಿತ್ತಿಪತ್ರಗಳನ್ನು ಅಂಟಿಸುವಂತೆ ಸೂಚಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ ನಿಬಂಧನೆಗಳ ಅಡಿ ಅಪರಾಧಿಗಳಾಗುವುದಿಲ್ಲ. ಕಾಯಿದೆ ಅಡಿ ಅಪರಾಧವಾಗುವಂಥ ಯಾವುದೇ ಕೆಲಸವನ್ನು ಅರ್ಜಿದಾರರು ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಎಫ್‌ಐಆರ್‌ ಮತ್ತು ನೆಲಮಂಗಲದಲ್ಲಿನ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಕಾಂಗ್ರೆಸ್‌ ಪಕ್ಷದ ನಾಯಕರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಮಿಷನ್ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ಪೇಸಿಎಂ ಅಭಿಯಾನ ಆರಂಭಿಸಿದ್ದರು. ಪೇಟಿಎಂ ಕ್ಯುಆರ್ ಕೋಡ್ ಮಾದರಿಯಲ್ಲೇ ಕ್ಯುಆರ್ ಕೋಡ್ ರಚಿಸಿ ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಕಾಣುವಂತೆ ಮಾಡಿ ಭಿತ್ತಿಚಿತ್ರಗಳನ್ನು ಎಲ್ಲೆಡೆ ಅಂಟಿಸಿದ್ದರು. ಅಲ್ಲದೆ ಈ ಪೋಸ್ಟರ್ ಅನ್ನು ಸ್ಕ್ಯಾನ್ ಮಾಡಿದರೆ ಬಿಜೆಪಿ ಸರ್ಕಾರದ ಭ್ರಷ್ಟ್ರಾಚಾರ ಹಗರಣಗಳ ವೆಬ್‌ಸೈಟ್ ತೆರೆಯುವಂತೆ ಈ ಪೇಸಿಎಂ ಕ್ಯೂಆರ್ ಕೋಡ್ ರಚಿಸಿ ರಚಿಸಲಾಗಿತ್ತು. ಇದು ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಉಭಯ ಪಕ್ಷಗಳ ನಾಯಕರ ನಡುವೆ ತೀವ್ರ ವಾಕ್ಸಮರ ಮತ್ತು ಕಾನೂನು ಸಮರಕ್ಕೂ ಕಾರಣವಾಗಿದೆ.

Donate Janashakthi Media

Leave a Reply

Your email address will not be published. Required fields are marked *