ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಲು ಆಗ್ರಹಿಸಿ ಅ. 28 ರಿಂದ ಅನಿರ್ದಿಷ್ಟಾವಧಿ ಧರಣಿ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ಮುಂದುವರೆದ ಭಾಗವಾಗಿ, ಅಕ್ಟೋಬರ್‌ 28 ರಿಂದ ಹಗಲು ರಾತ್ರಿ ಅನಿರ್ಧಿಷ್ಟಾವಧಿ ಧರಣಿ  ನಡೆಸಲು ಸಮಿತಿಯು ತೀರ್ಮಾನಿಸಿದೆ.

ಸುರತ್ಕಲ್‌ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವು ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರೆಗೂ ರಾಜಿಯಿಲ್ಲದೇ ಮುಂದುವರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 28 ರಿಂದ ಟೋಲ್ ಸಮೀಪವೇ ಅನಿರ್ದಿಷ್ಟಾವಧಿ ಧರಣಿ ನಡೆಸಲು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಟೋಲ್ ಗೇಟ್ ಮುತ್ತಿಗೆ ಹಾಕಿ ಬಿಜೆಪಿ ಸರ್ಕಾರ ಟೋಲ್ ಸಂಗ್ರಹ ಸ್ಥಗಿತಗೊಳಿಸದೇ ಭಂಡತನ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಐಕ್ಯತೆಯಿಂದ ಭಾಗಿಯಾದ ಹೋರಾಟಗಾರರು, ಒಕ್ಕೊರಲಿನಿಂದ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಬಲವನ್ನು ಪ್ರಯೋಗಿಸಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು ಚದುರಿಸಿದೆ. ಇದು ಬಿಜೆಪಿ ಸರ್ಕಾರ ಹಾಗೂ ಸಂಸದರ, ಶಾಸಕರುಗಳ ಜನ ವಿರೋಧಿತನವನ್ನ ಎತ್ತಿ ತೋರಿಸಿದೆ ಎಂದು ಸಮಿತಿ ಆರೋಪಿಸಿದೆ.

ಮುತ್ತಿಗೆ, ಪ್ರತಿಭಟನೆಗೆ ವ್ಯಾಪಕ ಜನ ಬೆಂಬಲವನ್ನು ಕಂಡು ಕಂಗೆಟ್ಟು ಹದಿನೈದು, ಇಪ್ಪತ್ತು ದಿನ ಟೋಲ್ ಗೇಟ್ ಮುಚ್ಚಲು ಸಮಯ ನೀಡಬೇಕು ಎಂದು ಸಾರ್ವಜನಿಕವಾಗಿ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೋರಾಟ ಸಮಿತಿ ಅವರಲ್ಲಿ ಮನವಿ ಮಾಡಿದ್ದರು.

ಟೋಲ್ ತೆರವಿಗೆ ಸಂಬಂಧಿಸಿದಂತೆ ಹಲವು ಇದೇ ರೀತಿಯ ಭರವಸೆಗಳನ್ನು ಈ ಹಿಂದೆ ನೀಡಿ ಈಡೇರಿಸದೇ ಇರುವುದರಿಂದ ಜನತೆ ಇವರ ಮಾತುಗಳ ಮೇಲಿನ ನಂಬಿಕೆಯನ್ನು ಪೂರ್ತಿ ಕಳೆದುಕೊಂಡಿದ್ದಾರೆ. ಈಗಲೂ ಇವರ ಭರವಸೆಗಳನ್ನು ನಂಬಿ ಹೋರಾಟ ಸ್ಥಗಿತಗೊಳಿಸಿದರೆ ಸುರತ್ಕಲ್ ಟೋಲ್ ಸುಲಿಗೆ ಶಾಶ್ವತಗೊಳ್ಳಲಿದೆ‌ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲಾಡಳಿತ, ಸಂಸದರ ಕಾಲಮಿತಿ ನವೆಂಬರ್ 7ಕ್ಕೆ ಅಂತ್ಯಗೊಳ್ಳುತ್ತದೆ. ಅದಕ್ಕೆ ಹತ್ತು ದಿನ ಮುಂಚಿತವಾಗಿ ಅಕ್ಟೋಬರ್ 28ಕ್ಕೆ ಅನಿರ್ಧಿಷ್ಟ ಧರಣಿ ಆರಂಭಿಸುವುದು. ಆ ಮೂಲಕ ಸಾರ್ವಜನಿಕವಾಗಿ ವಿನಂತಿಸಿದಂತೆ ನವೆಂಬರ್ 7ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಜನಾಭಿಪ್ರಾಯ ಕ್ರೋಢೀಕರಿಸುವ, ಒತ್ತಡವನ್ನು ಸೃಷ್ಟಿಸುವ ಪ್ರಯತ್ನವನ್ನು ಅನಿರ್ಧಿಷ್ಟಾವಧಿ ಧರಣಿಯ ಮೂಲಕ ಮಾಡುವುದು. ಒಟ್ಟು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹೋರಾಟವನ್ನು ಮುಂದುವರಿಸುವುದು ಎಂದು ಸಭೆಯಲ್ಲಿ ನಿರ್ಧರವಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸಹ ಸಂಚಾಲಕ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ವಹಿಸಿದ್ದರು. ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ಮುಖಂಡರಾದ ಎಂ ದೇವದಾಸ್, ರಘು ಎಕ್ಕಾರು, ಸಾಮಾಜಿಕ ಮುಖಂಡರಾದ ಎಂ ಜಿ ಹೆಗ್ಡೆ, ವೈ ರಾಘವೇಂದ್ರ ರಾವ್, ಡಿವೈಎಫ್‌ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ವಿವಿಧ ಸಂಘಟನೆಗಳ ಪ್ರಮುಖರಾದ ಕಿಶನ್ ಕುಮಾರ್ ಕೊಲ್ಕೆಬೈಲು, ವಸಂತ ಬರ್ನಾಡ್, ರಾಜೇಶ್ ಪೂಜಾರಿ ಕುಳಾಯಿ, ದಿನೇಶ್ ಕುಂಪಲ, ಹರೀಶ್ ಪೇಜಾವರ, ಶೇಖರ ಹೆಜಮಾಡಿ, ರಮೇಶ್ ಟಿ ಎನ್, ಶ್ರೀಕಾಂತ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು‌.

Donate Janashakthi Media

Leave a Reply

Your email address will not be published. Required fields are marked *