ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯು.ಎನ್.ಹೆಚ್.ಆರ್.ಸಿಗೆ ಕೋಲಾರ ಜಿಲ್ಲೆಯ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.
ಜಿನೀವಾ ಮೂಲದ 47 ಮಂದಿ ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ, ಡಾ.ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದೆ. ಪ್ರಸ್ತುತ ವರ್ಣಬೇಧ, ಕ್ಸೆನೋಫೋಬಿಯಾ ಅಸುಹಿಷ್ಣತೆಗೆ ಸಂಬಂಧಿಸಿದ ವಿಷಯಗಳನ್ನು ಇವರು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪೆಷಲ್ ರೆಪೋರ್ಟರ್ಗಳ ಕೆಲಸವೇನು?
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಸ್ವತಂತ್ರ ತಜ್ಞರಾಗಿ ಹಲವು ವಿಶೇಷ ರೆಪೋರ್ಟರ್ಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ, ಆಯಾ ಕ್ಷೇತ್ರದಲ್ಲಿ ನುರಿತವರನ್ನು ಎಸ್ಆರ್ ಆಗಿ ಆಯ್ಕೆ ಮಾಡಲಾಗುತ್ತದೆ. ಒಂದು ದೇಶಕ್ಕೆ ನಿರ್ದಿಷ್ಟವಾಗಿ ಮಾನವ ಹಕ್ಕು ವಿಚಾರಗಳನ್ನು ಇವರು ವರದಿ ಮಾಡುತ್ತಾರೆ.
ಇದು ಸಂಭಾವನೆ ರಹಿತ ಹುದ್ದೆಯಾಗಿದೆ. ಯುಎನ್ಎಚ್ಆರ್ಸಿಯಲ್ಲಿ ವಿವಿಧ ವಿಚಾರಗಳಿಗೆ ತಜ್ಞರಾಗಿ 45 ಎಸ್ಆರ್ಗಳು ಮತ್ತು ದೇಶ ನಿರ್ದಿಷ್ಟ ತಜ್ಞರಾಗಿ 13 ಎಸ್ಆರ್ಗಳಿರುತ್ತಾರೆ. ಇವರೆಲ್ಲರೂ ತಮಗೆ ವಹಿಸಿದ ವಿಚಾರಗಳ ಬಗ್ಗೆ ಜಾಗತಿಕ ಅಥವಾ ನಿರ್ದಿಷ್ಟ ದೇಶದಲ್ಲಿ ಬೆಳವಣಿಗೆಯ ಮೇಲೆ ನಿಗಾ ಇಟ್ಟು ಸ್ವತಂತ್ರವಾಗಿ ಅವಲೋಕಿಸಿ ಯುಎನ್ಎಚ್ಆರ್ಸಿ ಅಧ್ಯಕ್ಷರಿಗೆ ವರದಿ ಮತ್ತು ಸಲಹೆ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಈ ಜವಾಬ್ದಾರಿಯನ್ನು ಮ್ಯಾಂಡೇಟ್ ಎಂದು ಕರೆಯಲಾಗುತ್ತದೆ.
ರೇಸಿಸಂ ಅಥವಾ ಜನಾಂಗೀಯತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯುಎನ್ಎಚ್ಆರ್ಸಿಯಲ್ಲಿ 1994ರಲ್ಲಿ ಮ್ಯಾಂಡೇಟ್ ರಚಿಸಲಾಯಿತು. ಆಫ್ರಿಕನ್ನರು, ಆಫ್ರಿಕಾ ಮೂಲದವರು, ಅರಬ್ಬರು, ಮುಸ್ಲಿಮರು, ಏಷ್ಯನ್ನರು, ಏಷ್ಯನ್ ಮೂಲದವರು, ವಲಸಿಗರು, ಮತ್ತು ಯಾವ ರಾಷ್ಟ್ರೀಯತೆ ಇಲ್ಲದವರು, ಮೂಲವಾಸಿಗಳು, ಅಲ್ಪಸಂಖ್ಯಾತರು, ಹಾಗು ಡರ್ಬನ್ ಡಿಕ್ಲರೇಶನ್ ಅಂಡ್ ಪ್ರೋಗ್ರಾಮ್ ಆಫ್ ಆ್ಯಕ್ಷನ್ನಲ್ಲಿ ಪ್ರಸ್ತಾಪಿಸಲಾದ ಸಂತ್ರಸ್ತರು ಇವರಲ್ಯಾರನ್ನಾದರೂ ಗುರಿಯಾಗಿಸಿ ಜನಾಂಗೀಯ ದೌರ್ಜನ್ಯ ಇತ್ಯಾದಿ ಅಸಹಿಷ್ಣು ಘಟನೆಗಳು ನಡೆದಲ್ಲಿ ಅದರನ್ನು ವರದಿ ಮಾಡಬೇಕೆಂದಿದೆ.
ಜನಾಂಗೀಯತೆಯ ವಿಚಾರದ ಬಗ್ಗೆ 1994ರಿಂದ ಎಸ್ಆರ್ ಆಗಿ ನೇಮಕವಾಗಿರುವುದು ಅಶ್ವಿನಿ ಅವರು ಆರನೆಯವರು. ಈ ಮೊದಲು ಎಸ್ಆರ್ಗಳಾದ ಎಲ್ಲಾ ಐವರೂ ಕೂಡ ಆಫ್ರಿಕನ್ನರು. ಈಗ ಮೊದಲ ಬಾರಿಗೆ ಆಫ್ರಿಕನ್ನೇತರರು ಜನಾಂಗೀಯ ಸಮಸ್ಯೆ ಬಗ್ಗೆ ಯುಎನ್ಎಚ್ಆರ್ಸಿಯಲ್ಲಿ ಸ್ವತಂತ್ರ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಶ್ವನಿ ಕಿರು ಪರಿಚಯ : ಕೆ.ಪಿ. ಅಶ್ವನಿ ಕೋಲಾರ ತಾಲೂಕಿನ ಕಸಬಾ ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿಗಳ ಮೊದಲ ಪುತ್ರಿಯಾಗಿರುವ ಕೆ.ಪಿ.ಅಶ್ವಿನಿ ಯವರು ತಮ್ಮ ಪದವಿ ವಿಧ್ಯಾಬ್ಯಾಸವನ್ನು ಮೌಂಟ್ ಕಾರ್ಮೆಲ್ ಕಾಲೇಜು ಬೆಂಗಳೂರು ಹಾಗೂ ಸ್ನಾತಕೋತ್ತರ ಪದವಿಯನ್ನು ಸೇಂಟ್ ಜೋಸೆಫ್ಸ್ ಕಾಲೇಜು ಬೆಂಗಳೂರು ಹಾಗೂ ಎಂ.ಪಿಲ್.ಪಿಹೆಚ್.ಡಿ ಪದವಿಯನ್ನು ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯ ನವದೆಹಲಿಯಲ್ಲಿ(ಜೆ.ಎನ್.ಯು) ಪಡೆದಿರುತ್ತಾರೆ.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ನಂತರ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಒಡಿಸ್ಸಾ ಮತ್ತು ಛತ್ತೀಸ್ಘಡ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಆದಿವಾಸಿಗಳ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶೇಷ ಆಧ್ಯಯನ ಮಾಡಿರುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ಸೆಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಮೂಲತ: ಅಂಬೇಡ್ಕರ್ ವಾದಿಯಾಗಿದ್ದು, ದಲಿತ ಚಳುವಳಿಗಳಲ್ಲಿ ಕರ್ನಾಟಕ ಮತ್ತು ವಿದೇಶಗಳಲ್ಲಿ ಹೋರಾಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಸ್ತುತ ಇವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯು.ಎನ್.ಹೆಚ್.ಆರ್.ಸಿ ಆಗಿ ನೇಮಕವಾಗಿದ್ದಾರೆ.
ಡಾ.ಕೆ.ಪಿ.ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯು.ಎನ್.ಹೆಚ್.ಆರ್.ಸಿಗೆ ನೇಮಕವಾಗಿರುವುದು ಕೋಲಾರ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದ್ದು, ಇನ್ನಷ್ಟು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿ ಎಂದು ರಾಜ್ಯದ ಜನ ಶುಭ ಹಾರೈಸಿದ್ದಾರೆ.
“ದಲಿತ ಮಹಿಳೆ ಮತ್ತು ಶೋಷಿತ ಸಮುದಾಯದ ವ್ಯಕ್ತಿಯಾಗಿರುವ ನಾನು ಹುಟ್ಟು ಮತ್ತು ಉದ್ಯೋಗ ಆಧಾರಿತ ತಾರತಮ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೆಲಸ ಮಾಡಿದ್ದೇನೆ. ಛತ್ತೀಸ್ಗಡ, ಒಡಿಶಾ ರಾಜ್ಯಗಳಲ್ಲಿ ಅಕ್ರಮ ಭೂಸ್ವಾಧೀನದಿಂದ ಸಂತ್ರಸ್ತರಾದ ಮೂಲನಿವಾಸಿಗಳ ಜೊತೆ ಕೆಲಸ ಮಾಡಿದ್ದೇನೆ. ಹುಟ್ಟಿನಿಂದ ಮತ್ತು ಉದ್ಯೋಗದಿಂದ ತಾರತಮ್ಯ ಎದುರಿಸುವ ಜನರ ಜೊತೆ ಕೆಲಸ ಮಾಡುವ ಅನೇಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೇನೆ”
– ಅಶ್ವಿನಿ ಕೆ.ಪಿ.
ದಲಿತ- ಸವರ್ಣಿಯರು ಎಂದು ಮನುವಾದಿ ರೀತಿ ತಾವುಗಳು ಸಹ ತಾರತಮ್ಯ ಶ್ರೇಣಿ ವ್ಯವಸ್ಥೆಯ ವೈಭವಿಕರಣ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು
ತಾವುಗಳು “ಹಳ್ಳಿಯ ಪ್ರತಿಭೆ” / “ಗ್ರಾಮೀಣ ಪ್ರತಿಭೆ”
“ಬಡತನದಲ್ಲಿ ಅರಳಿದ ಪ್ರತಿಭೆ” ಸುದ್ದಿ ಮಾಡಬಹುದ್ದಿತ್ತು. ಆದರೆ ತಾವು ಸಹ ಮನುವಾದಿ ರೀತಿ ಅದೇ ತಾರತಮ್ಯ ಆಧಾರಿತ ಮನಸ್ಥಿತಿ ಧನ್ಯವಾದಗಳು