ಬಿಲ್ಕಿಸ್‌ ಬಾನೊ ಪ್ರಕರಣ: ಅತ್ಯಾಚಾರಿಗಳ ಬಿಡುಗಡೆಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ

ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅವಧಿಪೂರ್ವ ಬಿಡುಗಡೆಯಾಗಿರುವ 11 ಮಂದಿ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕೇವಲ ಎರಡು ವಾರದಲ್ಲಿಯೇ ಅನುಮತಿ ನೀಡಿದೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್‌ ನ್ಯಾಯಪೀಠ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠಕ್ಕೆ ಗುಜರಾತ್‌ ಸರ್ಕಾರವು ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಅದರಂತೆ, 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ ವಿರೋಧಿಸಿದ್ದವು. ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ನೀತಿಯಡಿ ಅಗತ್ಯವಿರುವ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ಆರೋಪಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಎಂದು ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಆದರೆ, ಅಪರಾಧಿಗಳ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು. ಗುಜರಾತ್ ಪೊಲೀಸ್, ದಾಹೋದ್ ಜಿಲ್ಲಾಧಿಕಾರಿ ಮತ್ತು ಗೋಧ್ರಾ ಉಪ-ಜೈಲು ಸೂಪರಿಂಟೆಂಡೆಂಟ್ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸಿದ್ದರು ಎಂದು ಗುಜರಾತ್ ಸರ್ಕಾರ ತಿಳಿಸಿದೆ.

2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳು 14 ವರ್ಷಗಳಿಂದ ಜೈಲಿನಲ್ಲಿದ್ದರು. ಅವರನ್ನು, ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಉತ್ತಮ ನಡುವಳಿಕೆ ಎಂಬ ಆಧಾರದಲ್ಲಿ ಗುಜರಾತ್‌ ಸರ್ಕಾರ ಬಿಡುಗಡೆಯಾಗಿದ್ದರು. ಇದನ್ನು ಪ್ರಶ್ನಿಸಿ ಮೂರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿತ್ತು.

1 ಸಾವಿರಕ್ಕೂ ಹೆಚ್ಚು ದಿನ ಪೆರೋಲ್‌ ಮೇಲೆ ಹೊರಗಿದ್ದರು

ಅಪರಾಧಿಗಳು 14 ವರ್ಷಗಳ ಜೈಲುವಾಸದ ಸಂದರ್ಭದಲ್ಲಿಯೇ ಸಾವಿರಾರು ದಿನಗಳ ಕಾಲ ಪೆರೋಲ್ ಮೇಲೆ ಹೊರಗಿದ್ದರು ಎಂಬ ಅಂಶವು ಬೆಳಕಿಗೆ ಬಂದಿದೆ. ದಾಖಲೆಗಳಲ್ಲಿ ಇವು ಉಲ್ಲೇಖಗೊಂಡಿದ್ದು, ಅವರು ಪೆರೋಲ್ ಮೇಲೆ ಹೊರಗಿದ್ದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರಿಗೆ ಕಿರುಕುಳ ನೀಡಿದ್ದು ವರದಿಯಾಗಿದೆ. ಹೀಗಾಗಿ ಅವರ ‘ಉತ್ತಮ ನಡತೆ’ ಕುರಿತಾದ ಪ್ರತಿಪಾದನೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಬಿಡುಗಡೆ ಸಂದರ್ಭದಲ್ಲಿಯೂ ಗುಜರಾತ್ ಪೊಲೀಸರು ಬಿಲ್ಕಿಸ್ ಬಾನೊ ಅವರಿಗೆ ಭದ್ರತೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ ಅಂಶವು ಉಲ್ಲೇಖಿಸಲಾಗಿದೆ.

ಗುಜರಾತ್‌ ಸರ್ಕಾರ ನೀಡಿರುವ ಪ್ರತಿಕ್ರಿಯೆ ತುಂಬಾ ದೊಡ್ಡದಾಗಿದೆ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠ, “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಕೀಲರಿಗೆ ಅಫಿಡವಿಟ್‌ನ ಸಂಪೂರ್ಣ ಪ್ರತಿಗಳು ಲಭ್ಯವಾಗಲಿ ಎಂದಿದೆ. ಹಾಗೂ ನವೆಂಬರ್ 29, 2022ಕ್ಕೆ ಪ್ರಕರಣ ಪಟ್ಟಿ ಮಾಡುವಂತೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *