ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಚಾಲನೆ ನೀಡಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು.
ಈ ಕಂತಿನಲ್ಲಿ ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಮೋದಿಯವರು, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಮೋದಿ ಚಾಲನೆ ನೀಡಿದರು.
ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಸಾವಿರಾರು ರೈತರು ಸಮಾರಂಭದ ಸ್ಥಳದಲ್ಲಿ ಹಾಜರಿದ್ದರು. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳ ಒಂದು ಕೋಟಿಗೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗಿಯಾಗಿದ್ದರು.
ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಭಾರತ್ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು.
ಇದನ್ನೂ ಓದಿ : ರೈತರು ಮತ್ತು ಜನತೆಗೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳಿಂದ ಅವಮಾನ
ಹಣ ಜಮೆಯಾಗದಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಖಾತೆಗೆ ಕೃಷಿ ಸಮ್ಮಾನ್ ನಿಧಿ ಹಣ ವರ್ಗಾವಣೆ ಆಗಿರದಿದ್ದರೆ, ಸರಕಾರಕ್ಕೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ಲೋಪವಿರಬಹುದು. ಅಥವಾ ನಿಮ್ಮ ಖಾತೆಯಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಬರುವುದರೊಳಗೆ ಈ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ನೀವು ಈ ಯೋಜನೆಯ ಲಾಭ ಪಡೆಯಬಹುದು.
ಈ ತಪ್ಪುಗಳಾಗಿವೆಯೇ ಪರಿಶೀಲಿಸಿ: ಕಿಸಾನ್ ಸಮ್ಮಾನ್ ನಿಧಿಗೆ ನೋಂದಣಿಯಾಗುವಾಗ ನೋಂದಣಿಯಾಗುವಾಗ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಒಂದು ದಾಖಲೆಯ ಕೊರತೆಯಿದ್ದರೆ ಸಮಸ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿಯೂ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ತಪ್ಪುಗಳಾಗಿದ್ದರೆ, ಕೂಡಲೇ ಸರಿಪಡಿಸಬೇಕು. ನಂತರವಷ್ಟೇ ನೀವು ಮುಂದಿನ ಕಂತನ್ನು ಪಡೆಯಬಹುದು.
ಲೋಪಗಳನ್ನು ಸರಿಪಡಿಸುವುದು ಹೇಗೆ?
ನಿಮ್ಮ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ 2000 ರೂಪಾಯಿ ಜಮೆಯಾಗಿಲ್ಲದಿದ್ದರೆ, ಚಿಂತೆ ಮಾಡುವ ಬದಲು, ಈ ಕೆಳಗಿನ ಮಾಹಿತಿಗಳನ್ನು ಅನುಸರಿಸಿ
ಡೀಟೇಲ್ಸ್ ನವೀಕರಿಸಿ :ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ (https://pmkisan.gov.in/). ಇಲ್ಲಿ ಫಾರ್ಮರ್ ಕಾರ್ನರ್ಗೆ ಹೋಗಿ ಮತ್ತು ಎಡಿಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ಕ್ಯಾಪ್ಚಾ ಕೋಡ್ ಕ್ರಿಯೇಟ್ ಆಗುತ್ತದೆ. ನಿಗದಿತ ಸ್ಥಳದಲ್ಲಿ ಅದನ್ನು ನಮೂದಿಸಿದ ನಂತರ ಸಲ್ಲಿಸಿ.
ಆನ್ಲೈನ್ನಲ್ಲಿ ಹೆಸರು ಸರಿಪಡಿಸಿ: ನಿಮ್ಮ ಹೆಸರು ತಪ್ಪಾಗಿರುವುದರಿಂದಲೂ ಹಣ ಜಮೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಅಂದರೆ, ವೆಬ್ಸೈಟ್ನಲ್ಲಿ ನೀವು ನೀಡಿರುವ ಹೆಸರು ಮತ್ತು ಆಧಾರ್ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿದ್ದರೆ, ಈ ಸಮಸ್ಯೆಯಾಗುತ್ತದೆ. ನಂತರ ನೀವು ಅದನ್ನು ಆನ್ಲೈನ್ನಲ್ಲಿ ಸರಿಪಡಿಸಬಹುದು. ಬೇರೆ ಏನಾದರೂ ತಪ್ಪು ಇದ್ದರೆ, ಅದನ್ನು ನಿಮ್ಮ ಕೃಷಿ ಇಲಾಖೆ ಕಚೇರಿಯಲ್ಲಿ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.
ಈ ಮೂಲಕವೂ ಸಂಪರ್ಕಿಸಬಹುದು : ನಿಮ್ಮ ಖಾತೆಗೆ ಹಣ ಜಮೆಯಾಗಿಲ್ಲದಿದ್ದರೆ, ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ, ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.
ಅಧಿಕೃತ ವೆಬ್ಸೈಟ್ ಸಂಪರ್ಕಿಸಿ : ಪಿಎಂ-ಕಿಸಾನ್ ಸಮ್ಮನ್ ನಿಧಿ (PM KISAN SAMMAN NIDHI) ಯೋಜನೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು http://www.yojanagyan.in ಕ್ಲಿಕ್ ಮಾಡಿ ನಿಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು.