ಬರ್ನ್: ಸ್ವಿಟ್ಜರ್ಲೆಂಡ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಬುರ್ಖಾ ನಿಷೇಧ ಜಾರಿಗೆ ತರಲಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರ ಎಚ್ಚರಿಸಿದೆ.
ಸ್ವಿಟ್ಜರ್ಲೆಂಡ್ ನಲ್ಲಿ ಸಾರ್ವಜನಿಕ ಸ್ಥಳಘಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 1 ಸಾವಿರ ಡಾಲರ್ ದಂಡ ತೆರಬೇಕಾಗಿದೆ. ಈ ಸಂಬಂಧ ದಂಡ ವಿಧಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಹಿಜಾಬ್ ವಿರೋಧಿಸಿ ಇರಾನ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಸ್ವಿಟ್ಜರ್ಲೆಂಡ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬುರ್ಖಾ ನಿಷೇಧ ಹಾಗೂ ಉಲ್ಲಂಘನೆಗೆ 1 ಸಾವಿರ ಡಾಲರ್ (ರೂಪಾಯಿ ಲೆಕ್ಕದಲ್ಲಿ ರೂ.83 ಸಾವಿರ ಆಗಲಿದೆ) ದಂಡ ವಿಧಿಸುವ ಪ್ರಸ್ತಾವನೆ ಕುರಿತು ಅಕ್ಟೋಬರ್ 12 ರಂದು ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲಾಗಿದೆ.
ಬುರ್ಖಾ ಇಡೀ ದೇಹ ಮಾತ್ರವಲ್ಲ ಮುಖವನ್ನು ಮುಚ್ಚುತ್ತದೆ. ಕೇವಲ ಕಣ್ಣುಗಳು ಮಾತ್ರ ಕಾಣುತ್ತದೆ. ಈ ರೀತಿ ಮುಖ ಮುಚ್ಚಿಕೊಳ್ಳುವ, ಕಣ್ಣು ಮಾತ್ರ ಕಾಣಿಸುವ ಯಾವುದೇ ವಸ್ತ್ರಕ್ಕೆ ಅವಕಾಶವಿಲ್ಲ. ಆದರೆ ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಈ ರೀತಿಯ ಉಡುಪು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ ಎಂದು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಸುರಕ್ಷತೆ ಕಾರಣ ನೀಡಿ ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲಾಗಿತ್ತು. ಇದೀಗ ಈ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ವಿಧಿಸುವ ಪ್ರಸ್ತಾವನೆ ಮಂಡಿಸಲಾಗಿದೆ.