ಗ್ರೀಕ್ ಕಾರ್ಮಿಕರು ಕಾರ್ಪೊರೆಟ್ ಮತ್ತು ಸರಕಾರಗಳ ದಮನಕ್ರಮಗಳು, ಖಾಸಗೀಕರಣ ಮತ್ತು ಜೀವನಾಶ್ಯಕ ವಸ್ತುಗಳ ಬೆಲೆಏರಿಕೆ ಇವುಗಳನ್ನು ವಿರೋಧಿಸಿ ಹಲವು ಹೋರಾಟಗಳಲ್ಲಿ ತೊಡಗಿದ್ದಾರೆ. ಈ ಹೋರಾಟಗಳನ್ನು ತೀವ್ರಗೊಳಿಸುವ ಭಾಗವಾಗಿ ನವೆಂಬರ್ 9ರಂದು ಕಾರ್ಮಿಕ ಸಂಘಗಳ ಕೇಂದ್ರೀಯ ಸಂಘಟನೆ ಪಾಮೆ (All Workers Militant Front – PAME) ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.
ಲಾರ್ಕೊ (General Mining and Metallurgical Company – LARCO) ಎಂಬ ಸರಕಾರಿ ಒಡೆತನದ ಗಣಿ ಮತ್ತು ಲೋಹ ಕಂಪನಿಯ ಕಾರ್ಮಿಕರು, ಅದನ್ನು ಮುಚ್ಚುವ ಮತ್ತು ಖಾಸಗೀಕರಿಸುವುದರ ವಿರುದ್ಧ ಕಳೆದ ಮೂರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಸೌಹಾರ್ದ ಬೆಂಬಲ ವ್ಯಕ್ತಪಡಿಸಲು ಅಕ್ಟೋಬರ್ 9ರಂದು ಲಾರಿಮ್ನಾ ಎಂಬ ಪಟ್ಟಣದ ಮುಖ್ಯಚೌಕದಲ್ಲಿ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು. ಇದರಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಮಲಾಮತಿನಾ ವೈನರಿ ಮತ್ತು ಹೆಲ್ಲಾಸ್ ಚಿನ್ನದ ಗಣಿಯ ಕಾರ್ಮಿಕರು ಕಾರ್ಮಿಕರ ಜತೆ ಮ್ಯಾನೇಜ್ ಮೆಂಟ್ ಸಾಮೂಹಿಕ ಒಪ್ಪಂದಕ್ಕೆ ಬರಬೇಕೆಂದು ಸಮರಶೀಲ ಹೋರಾಟ ನಡೆಸಿದ್ದು, ಹಲವು ಕಾರ್ಮಿಕರನ್ನು ವಜಾ ಮಾಡಲಾಗಿದೆ. ಈ ಎರಡು ಕಂಪನಿಗಳ ಕಾರ್ಮಿಕರಿಗೆ ಸೌಹಾರ್ದ ಬೆಂಬಲ ಸೂಚಿಸಿ ಥೆಸ್ಸಾಲೊನಿಕಿ ನಗರದಲ್ಲಿ ಭಾರೀ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಏರ್ಪಡಿಸಿದ್ದಕ್ಕಾಗಿ ಗ್ರೀಸ್ ಆಸ್ಪತ್ರೆ ಡಾಕ್ಟರುಗಳ ಸಂಘ (OENGE) ದ ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಗ್ರೀಸ್ ನ ಬಲಪಂಥೀಯ ನ್ಯೂ ಡೆಮೊಕ್ರಸಿ ನಾಯಕತ್ವದ ಸರಕಾರ ತಂದಿರುವ ಕಾರ್ಮಿಕ-ವಿರೋಧಿ ಕಾರ್ಮಿಕ ಕಾನೂನುಗಳನ್ನು ಬಳಸಿ ಕಂಪನಿ ಮ್ಯಾನೇಜ್ ಮೆಂಟುಗಳು ಹೋರಾಟದಲ್ಲಿ ಮತ್ತು ಸಂಘ ಕಟ್ಟುವುದರಲ್ಲಿ ತೊಡಗಿರುವ ಕಾರ್ಮಿಕರ ವಿರುದ್ಧ ವಜಾ, ಶಿಸ್ತುಕ್ರಮ ಮುಂತಾದ ದಮನಕ್ರಮಗಳಲ್ಲಿ ತೊಡಗಿವೆ. ಸರಕಾರದ ಕಾರ್ಪೊರೆಟ್-ಪರ ಕಾರ್ಮಿಕ-ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು ಎಲ್ಲೆಡೆ ಹೋರಾಡುತ್ತಿದ್ದಾರೆ. ಸರಕಾರಿ ಕಂಫನಿಗಳನ್ನು ಮುಚ್ಚುವ ಅಥವಾ ಖಾಸಗೀಕರಿಸುವ ನೀತಿಗಳ ವಿರುದ್ಧವೂ ಹೋರಾಡುತ್ತಿದ್ದಾರೆ. ಅದರ ಜತೆ ಉಕ್ರೇನ್ ಯುದ್ಧದ ನಂತರ ಇಂಧನ ಮತ್ತು ಎಲ್ಲ ಜೀವನಾವಶ್ಯಕ ಬೆಲೆಗಳ ವಿಪರೀತ ಏರಿಕೆ ಕಾರ್ಮಿಕರ ಜೀವನವನ್ನು ದುರ್ಭರಗೊಳಿಸಿದೆ.
ಇವೆಲ್ಲದರ ವಿರುದ್ಧ ಹಲವು ಕಾರ್ಮಿಕ ಸಂಘಗಳು ಆಕ್ರೋಶಗೊಂಡಿದ್ದು ಕಾರ್ಮಿಕ ಸಂಘಗಳ ಕೇಂದ್ರೀಯ ಸಂಘಟನೆ ಪಾಮೆ (PAME) ನವೆಂಬರ್ 9ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿದೆ. ಬೆಲೆಏರಿಕೆ ಸರಿದೂಗಿಸುವ ವೇತನ ಏರಿಕೆ, ಸಾಮೂಹಿಕ ಒಪ್ಪಂದಗಳು, ಜೀವನ ವೆಚ್ಚ ನಿಯಂತ್ರಿಸುವ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರದ ಮೇಲೆ ಈ ಸಾರ್ವತ್ರಿಕ ಮುಷ್ಕರ ಒತ್ತಡ ಹೇರಲಿದೆ.
“ಕಾರ್ಮಿಕರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆ, ಬಿಕಟ್ಟು ಹಾಗೂ ಬಡತನ, ದಮನ, ಹರಾಜು, ಯುದ್ಧ – ಇವೆಲ್ಲವುಗಳ ಹಿಂದಿರುವ ಮೂಲ ಕಾರಣ ಹಿಂದೆಯೂ ಇಂದೂ ಒಂದೇ. ಉದ್ಯಮಗಳ ನೀಗಿಸಲಾಗದ ಲಾಭದ ದಾಹ! ಆದ್ದರಿಂದಾಗಿಯೇ ಇಂಧನಗಳ ಕಾಳಸಂತೆಕೋರರ ಲಾಭ ರಕ್ಷಿಸುತ್ತಾರೆ, ಅದೇ ಸಮಯದಲ್ಲಿ ಶೋಷಣೆ, ದಮನಗಳನ್ನು ತೀವ್ರಗೊಳಿಸಿ ಗಟ್ಟಿಗೊಳಿಸುತ್ತಾರೆ.” ಎಂದು ಪಾಮೆ ಸಾರ್ವತ್ರಿಕ ಮುಷ್ಕರಕ್ಕೆ ಕಾರಣವಾದ ಇಂದಿನ ಸನ್ನಿವೇಶವನ್ನು ವಿಶ್ಲೇಷಿಸಿದೆ. ಪಾಮೆ ಖಾಸಗಿ ಕ್ಷೇತ್ರದಲ್ಲಿ 825 ಯುರೋ (802 ಡಾಲರು) ಗಳ ಕನಿಷ್ಠ ವೇತನ, ಸಾರ್ವಜನಿಕ ಕ್ಷೇತ್ರದಲ್ಲಿ ಶೇ.20 ವೇತನೇರಿಕೆಯ ಹಕ್ಕೊತ್ತಾಯ ಮುಂದಿಟ್ಟಿದೆ.
ಜೀವನ ವೆಚ್ಚ ಸರಿದೂಗಿಸಿ ನಿಭಾಯಿಸಲು ಅನುವಾಗುವಂತೆ ಸರಕಾರ ಈ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ : ವಿದ್ಯುತ್ ಮತ್ತು ಗ್ಯಾಸ್ ಬೆಲೆ ಬೆಲೆಗಳ ಮೇಲೆ ಮಿತಿ ಹೇರಬೇಕು ಮತ್ತು ಬೆಲೆ ಇಳಿಸಬೇಕು. ತೈಲ, ಗ್ಯಾಸ್ ಮತ್ತು ವಿದ್ಯುತ್ ಗಳ ಮೇಲಿನ ಎಕ್ಸೈಸ್ ಮತ್ತು ಮೌಲ್ಯವರ್ಧಿತ ತೆರಿಗೆಗಳನ್ನು ತೆಗೆದು ಹಾಕಬೇಕು. ಪ್ರಾಥಮಿಕ ಜೀವನಾವಶ್ಯಕ ಆಹಾರ, ಬಟ್ಟೆ ಗಳ ಬೆಲೆಗಳ ಮೇಲೆ ಮಿತಿ ಹೇರಬೇಕು ಮತ್ತು ಬೆಲೆ ಇಳಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ಖಾತ್ರಿಪಡಿಸಬೇಕು ಮತ್ತು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಕಾರ್ಮಿಕರು ಮತ್ತು ಉದ್ಯೋಗಿಗಳ ಸಾಲ ಮನ್ನಾ ಮಾಡಬೇಕು. ಕಾರ್ಮಿಕರ ಮೊದಲ ಮತ್ತು ಕೊನೆಯ ಶಿಫ್ಟ್ ಸಮಯದಲ್ಲಿ ಉಚಿತ ರೂಟ್ ಗಳನ್ನು ಮತ್ತೆ ಆರಂಭಿಸಬೇಕು. ಸಾರ್ವಜನಿಕ ಸಾರಿಗೆಯ ಟಿಕೆಟ್ ಬೆಲೆಯಲ್ಲಿ ಶೇ. 50 ಕಡಿತ ಮಾಡಬೇಕು. ವಿದ್ಯಾರ್ಥಿಗಳು, ನಿರುದ್ಯೋಗಿಗಳು, ವಿಕಲಾಂಗರು ಮತ್ತು ಪಿಂಚಣಿದಾರರಿಗೆ ಉಚಿತ ಸಾರಿಗೆ ಕೊಡಬೇಕು. ಕಾರ್ಮಿಕರು, ವಿದ್ಯಾರ್ಥಿಗಳು, ಸಣ್ಣ ಉದ್ಯಮಗಳಿಗೆ ಬಾಡಿಗೆ ಸಬ್ಸಿಡಿ ಕೊಡಬೇಕು. ಸಬ್ಸಿಡಿ ಗೆ ಅರ್ಹತೆಯ ಶರತ್ತುಗಳನ್ನು ಉದಾರಗೊಳಿಸಬೇಕು ಮತ್ತು ಸಬ್ಸಿಡಿ ದರ ಏರಿಸಬೇಕು.