ಕಾರ್ಮೋಡದಲ್ಲೊಂದು ಕೋಲ್ಮಿಂಚು ವೈದ್ಯಕೀಯ ಗರ್ಭಪಾತ ಕುರಿತ ಸುಪ್ರೀಂ ಕೋರ್ಟ್ ತೀರ್ಪು

ವಿಮಲಾ ಕೆ.ಎಸ್.

ಕಾರ್ಮೋಡದಲ್ಲೊಂದು ಕೋಲ್ಮಿಂಚಿನಂತೆ ಆಗಾಗ ಮಹಿಳೆಯರಿಗೆ ಒಂದಿಷ್ಟಿಷ್ಟು ಸಮಾಧಾನ ಕೊಡುವ ತೀರ್ಪುಗಳನ್ನು ನೋಡುತ್ತೇವೆ. ಅಂತಹ ಒಂದು ತೀರ್ಪು ಸೆಪ್ಟೆಂಬರ್ 29 ರಂದು ವೈದ್ಯಕೀಯ ಗರ್ಭಪಾತದ ಕುರಿತು ಬಂದಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಏ.ಎಸ್.ಬೋಪಣ್ಣ, ಹಾಗೂ ಜೆ.ಬಿ.ಪಾರ್ದಿವಾಲಾರನ್ನೊಳಗೊಂಡ ಪೀಠವು ಮಣಿಪುರದ ಮಹಿಳೆಯೊಬ್ಬರ ಪ್ರಕರಣದಲ್ಲಿ ಕೊಟ್ಟ ತೀರ್ಪು ಇದು.

ಏನಿದು ಪ್ರಕರಣ:

ಮಣಿಪುರದ ಅವಿವಾಹಿತ ಮಹಿಳೆಯೊಬ್ಬರು ಒಪ್ಪಿತ ಸಂಬಂಧದಲ್ಲಿ ಧರಿಸಿದ ಬಸಿರನ್ನು, ತಮ್ಮ ಸಂಬಂಧ ಮುರಿದುಬಿದ್ದ ಕಾರಣದಿಂದ, ತೆಗೆದು ಹಾಕಲು ಬಯಸಿದ್ದಳು. ಆದರೆ ಅವಳ ಕೋರಿಕೆಯನ್ನು ಮಾನ್ಯ ಮಾಡದ ದೆಹಲಿ ಹೈಕೋರ್ಟ್ ಆಕೆಯ ಗರ್ಭಪಾತದ ಹಕ್ಕನ್ನು ನಿರಾಕರಿಸಿತ್ತು. ನಿರಾಕರಿಸಲು ಅದು ತನ್ನ ಕಾರಣವನ್ನು ದೇಶದಲ್ಲಿರುವ 1971 ರ ವೈದ್ಯಕೀಯ ಗರ್ಭಪಾತ ಕಾಯ್ದೆ ಯ ಕಲಮು 3(2)(ಬಿ) ಮತ್ತು 2003 ರ ವೈದ್ಯಕೀಯ ಗರ್ಭಪಾತ ಕಾಯ್ದೆ ನಿಯಮಗಳ 3(ಬಿ) ಗಳನ್ನು ಉಲ್ಲೇಖಿಸಿ ದೂರುದಾರರು ಅವಿವಾಹಿತ ಮಹಿಳೆ ಮತ್ತು ಒಪ್ಪಿತ ಸಂಬಂಧದಲ್ಲಿ ಗರ್ಭ ಸಂಭವಿಸಿರುವುದರಿಂದ ಈ ಕಾಯ್ದೆಯ ಅಡಿ ಗರ್ಭಪಾತದ ಹಕ್ಕನ್ನು ಗುರುತಿಸಿಲ್ಲ ಎಂದಿತ್ತು. ಸಾಲದೆಂಬಂತೆ ಮುಖ್ಯ ನ್ಯಾಯಾಧೀಶರೇ ಇದ್ದ ಪೀಠ ದೂರುದಾರಳಿಗೆ ಹೆರಿಗೆಯಾಗುವವರೆಗೆ ಯಾವುದಾದರೂ ಸುರಕ್ಷಿತ ಸ್ಥಳದಲ್ಲಿದ್ದು ನಂತರ ಹುಟ್ಟಿದ ಮಗುವನ್ನು ಯಾರಿಗಾದರೂ ದತ್ತು ಕೊಟ್ಟುಬಿಡುವ ಸಲಹೆಯೂ ಮಾಡಿದ್ದರೆಂದು ಮಾಧ್ಯಮಗಳ ವರದಿಗಳು ಬಂದಿದ್ದವು.!! ಎಂದರೆ ಮಹಿಳೆಯೊಬ್ಬಳ ಮೂಲಭೂತ ಹಕ್ಕು ಅವಳ ದೇಹದ ಮೇಲಿನ ಹಕ್ಕು, ಹೆರುವ ಹೆರದಿರುವ ತೀರ್ಮಾನ ಮಾಡುವ ಹಕ್ಕನ್ನು ನಿರಾಕರಿಸಿದ ಸ್ಪಷ್ಟ ಉದಾಹರಣೆಯಲ್ಲವೇ ಇದು??

ಮುರಿದ ಸಂಬಂಧದ, ತನಗೆ ಅನಗತ್ಯ ಎನಿಸಿದ ಗರ್ಭವನ್ನು ತೆಗೆಸಲು ನಿರ್ಧರಿಸಿದ ಆ ಮಹಿಳೆ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆಕೆ ಸಲ್ಲಿಸಿದ ಮೇಲ್ಮನವಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ಕಾಯ್ದೆಯಲ್ಲಿರುವ ಈ ಅಂಶವೇ ಸಂವಿಧಾನದ ಕಲಮು 14 ಮತ್ತು 21ರ ಉಲ್ಲಂಘನೆ ಎಂದೂ ಹೇಳಿ ಆಕೆಗೆ ಗರ್ಭಪಾತ ಮಾಡಿಸಲು ಜುಲೈ 2022 ರಲ್ಲಿ ಅನುಮತಿ ನೀಡಿ, ವಿಷಯವನ್ನು ವಿಸ್ತೃತ ಪರಿಶೀಲನೆಗೆ ಕಾಯ್ದಿರಿಸಿತ್ತು.

ವಿವಿಧ ಕಾರಣಗಳಿಗಾಗಿ ಇದೊಂದು ಐತಿಹಾಸಿಕ ತೀರ್ಪು:

ಸುಪ್ರೀಂ ಕೋರ್ಟ್ ಈಗ ಒಂದು ಐತಿಹಾಸಿಕ ತೀರ್ಪು ನೀಡಿ ಮಹಿಳೆಯ ದೇಹದ ಮೇಲಿನ ಹಕ್ಕು ಅವಳದು, ತನಗೆ ಬೇಡದ ಗರ್ಭವನ್ನು ತೆಗೆಸಲು ಮತ್ತೊಬ್ಬರ ಅನುಮತಿಯ ಅಗತ್ಯವಿಲ್ಲವೆಂದು ಹೆಣ್ಣಿನ ದೇಹದ ಸ್ವಾಯತ್ತ ಹಕ್ಕನ್ನು ಮಾನ್ಯ ಮಾಡಿದ್ದಷ್ಟೇ ಅಲ್ಲದೇ ಬಹು ಚರ್ಚಿತವಾಗಿರುವ ವಿವಾಹದೊಳಗಿನ ಬಲವಂತದ ಗರ್ಭವನ್ನು ತೆಗೆಸಲೂ ಅನುಮತಿ ನೀಡಿ ವೈವಾಹಿಕ ಸಂಬಂಧದಲ್ಲಿನ ಅತ್ಯಾಚಾರವನ್ನು ಗುರುತಿಸಬೇಕೆಂಬ ಬೇಡಿಕೆಯನ್ನೂ ಮಾನ್ಯ ಮಾಡಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆಯೆಂದೇ ಪರಿಗಣೀಸಬೇಕು. ವಿವಾಹ ಎನ್ನುವುದು ಇಬ್ಬರ ನಡುವಿನ ಬದುಕಿನ ಒಪ್ಪಂದವೆಂಬುದು ನಿಜ. ಆದರೆ ವಿಪರ್ಯಾಸವೆಂದರೆ ನಮ್ಮ ಸಮಾಜ ವಿವಾಹವನ್ನು ಲೈಂಗಿಕ ಕ್ರಿಯೆಯ ಲೈಸೆನ್ಸ್ ಎಂದು ಪರಿಗಣಿಸಿದೆ. ಹಾಗೆಂದೇ ವಿವಾಹದೊಳಗೆ ನಡೆಯುವ ಬಲವಂತದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಲು ಅವಕಾಶವಿರಲಿಲ್ಲ. ಇಂಡಿಯನ್ ಪೀನಲ್ ಕೋಡ್ ನ 375 ನೇ ಕಲಮಿನನ್ವಯ? ಮಹಿಳೆಯೊಬ್ಬಳ ಮೇಲೆ ಅವಳ ಇಚ್ಛೆಗೆ ವಿರುದ್ಧವಾಗಿ, ಆಕೆಯ ಸಮ್ಮತಿಯಿಲ್ಲದೇ, ಬಲವಂತ ಮಾಡಿ, ಮೋಸದಿಂದ, ಮತ್ತು ಬರಿಸಿ, ಆಕೆ ಮಾನಸಿಕ ಅಸ್ವಸ್ಥಳಾಗಿದ್ದರೆ, ಇಂಥ ಎಲ್ಲ ಸಂದರ್ಭಗಳಲ್ಲಿಯೂ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದಾಗಲೂ ಆಕೆ ಅಪ್ರಾಪ್ತ ಯುವತಿಯಾಗಿದ್ದಲ್ಲಿ ಮಾತ್ರ ಅದು ಅಪರಾಧವೆಂದು ಪರಿಗಣಿಸಲ್ಪಡುತ್ತದೆ.? ಎಂದರೆ ಹೆಣ್ಣೊಬ್ಬಳ ದೇಹದ ಮೇಲೆ ಗಂಡಿನ ಸರ್ವಾಧಿಕಾರವನ್ನು ಖಾತ್ರಿ ಪಡಿಸುವ ಎಲ್ಲ ಅವಕಾಶಗಳೂ ಇದ್ದ ಸಮಾಜವಿದು. ಇಡೀ ದೇಶವೇ ತಲ್ಲಣಿಸಿದ ನಿರ್ಭಯಾ ಪ್ರಕರಣದ ನಂತರ ಬಂದ ಅತ್ಯಾಚಾರ ಕಾಯ್ದೆಯ ತಿದ್ದುಪಡಿಗಳ ಸಂದರ್ಭದಲ್ಲಿ ಕೂಡಾ ಈ ವಿಷಯ ಮುನ್ನೆಲೆಗೆ ಬಂದಿತ್ತು. ಜಸ್ಟೀಸ್ ವರ್ಮಾ ಆಯೋಗದ ಕೋರಿಕೆಯ ಮೇರೆಗೆ ಬಂದ ಸಾರ್ವಜನಿಕರ ಅಭಿಪ್ರಾಯಗಳಲ್ಲಿ ಕೂಡಾ ವಿವಾಹದೊಳಗಿನ ಒತ್ತಾಯದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದೇ ಪರಿಗಣಿಸಲು ಒತ್ತಾಯದ ಶಿಫಾರಸ್ಸುಗಳನ್ನು ಸಾರ್ವಜನಿಕರು, ಮಹಿಳಾ ಸಂಘಟಕರು ನೀಡಿದ್ದರು. ಆದರೆ ಶಿಫಾರಸುಗಳನ್ನು ಅಂಗೀಕರಿಸುವಾಗ ಅದನ್ನು ಸರ್ಕಾರ ಪರಿಗಣಿಸಿರಲಿಲ್ಲ. ಅದಕ್ಕೆ ಕಾರಣ ಈ ಸಮಾಜ ವಿವಾಹ ಸಂಬಂಧವನ್ನು ಪರಿಭಾವಿಸುವ ರೀತಿ. ಮತ್ತು ಲೈಂಗಿಕತೆಯ ವಿಷಯದಲ್ಲಿ ಪುರುಷನಿಗೆ ಕೊಟ್ಟಿರುವ ಏಕಸ್ವಾಮ್ಯತೆಯ ಕಾರಣದಿಂದ. ಹೆಣ್ಣಿನ ಹಕ್ಕಿನ ಪ್ರಶ್ನೆಗಳು ಬಂದಾಗೆಲ್ಲ ಅದು ಕುಟುಂಬವನ್ನು ಉಳಿಸುವ ನೆಲೆಯಲ್ಲಿ ಚರ್ಚೆಗೆ ಒಳಪಡುತ್ತದೆ. ಅವಳ ದೇಹದ ಮೇಲಿನ ಹಕ್ಕು, ಅಥವಾ ಹುಟ್ಟಿದ ಕುಟುಂಬದಿಂದ ಪಡೆಯುವ ಆಸ್ತಿ ಸಂಬಂಧಿತ ಹಕ್ಕು, ಕಿರಿಕಿರಿಯ, ಹಿಂಸೆಯ ವಿವಾಹ ಬಂಧನದಿಂದ ಹೊರ ಬರಲು ಅವಕಾಶ ಇರುವ ವಿಚ್ಚೇದನದ ಹಕ್ಕು..ಹೀಗೆ ಯಾವುದೇ ಸಂದರ್ಭಗಳಲ್ಲಿಯೂ ಅವಳ ಅಗತ್ಯವನ್ನು ಮುಖ್ಯವಾಗಿ ಪರಿಗಣಿಸದೇ ಅನಿವಾರ್ಯತೆಗೆ ಅವಳನ್ನು ಒಡ್ಡುವ ಕೆಲಸ ಯಾವ ಮುಜುಗರವೂ ಇಲ್ಲದೇ ನಡೆಯುತ್ತದೆ. ಈ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದ ದೆಹಲಿ ಹೈ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಸಮಾಜದ ಮನೋಭಾವ ಬದಲಿಕೆಗೆ ಸಣ್ಣದೊಂದು ಅವಕಾಶ ಸೃಷ್ಟಿ ಮಾಡಿದ ತೀರ್ಪು ಇದು ಐತಿಹಾಸಿಕ.

ಮೌನಗರ್ಭದಲ್ಲಿ ಅಡಗಿರುವ ಅದೆಷ್ಟು ನೋವುಗಳು:

ಈ ದೇಶದಲ್ಲಿ ಎನ್.ಎಫ್.ಎಚ್.ಎಸ್. ವರದಿಯೇ ಗುರುತಿಸಿದಂತೆ? ಭಾರತದಲ್ಲಿ ಮೂವರಲ್ಲಿ ಒಬ್ಬ 15 ರಿಂದ 49 ವಯೋಮಾನದ ಮಹಿಳೆಯರು, ಮತ್ತು ಸರಿ ಸುಮಾರು 80% ಮಹಿಳೆಯರು ತಮ್ಮ ಗಂಡಂದಿರಿಂದ ಲೈಂಗಿಕ ದೌರ್ಜನ್ಯವೂ ಸೇರಿದಂತೆ ಹಿಂಸೆಯನ್ನು ಅನುಭವಿಸುತ್ತಾರೆ.? ಇವು ಗಮನಕ್ಕೆ ಬಂದ ಅಂಕಿ ಸಂಕಿಗಳು, ಬೆಳಕಿಗೆ ಬಾರದ ಅದೆಷ್ಟು ಹೆಣ್ಣು ಜೀವಗಳು ಮೌನದಲ್ಲಿ ಈ ಹಿಂಸೆಯನ್ನು ಅನುಭವಿಸುತ್ತ ನಿಡುಸುಯ್ಯುತ್ತಾರೆಂಬ ಕಲ್ಪನೆಯೂ ಈ ಸಮಾಜಕ್ಕೆ ಇರಲಿಕ್ಕಿಲ್ಲ. ಹಾಗಾಗಿಯೇ ವಿವಾಹವೆಂಬ `ಪವಿತ್ರ’ ಬಂಧನದೊಳಗೆ ಚಿರಕಾಲ ಬಂಧಿಯಾಗಿಯೇ ಹೆಣ್ಣು ಇರಬೇಕೆಂಬ ಸನಾತನ ವಾದ ವಿವಾಹಿತ ಸಂಬಂಧದೊಳಗಿನ ಅಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಕರೆಯಲು ಸಮ್ಮತಿಸುವುದಿಲ್ಲ. ಈ ಕಾರಣವೂ ಸೇರಿದಂತೆ ಇದುವರೆಗೂ ವಿವಾಹದೊಳಗಿನ ಅತ್ಯಾಚಾರವನ್ನು ಅತ್ಯಾಚಾರವೆಂದು ಒಪ್ಪಿಕೊಂಡಿರಲಿಲ್ಲ. ಈ ಅವಧಿಯಲ್ಲಿಯೇ ಕರ್ನಾಟಕ ಹೈಕೋರ್ಟ್ ಒಂದು ಪ್ರಕರಣದಲ್ಲಿ? ಅತ್ಯಾಚಾರವೆಂದರೆ ಅತ್ಯಾಚಾರವೇ, ಗಂಡ ಮಾಡಿದರೂ ಯಾರೇ ಮಾಡಿದರೂ ಎಂದು ಹೇಳಿದ ತೀರ್ಪೂ ಇದೆ. ಅದೇ ವೇಳೆಗೆ ಇತರ ಉಚ್ಛ ನ್ಯಾಯಾಲಯಗಳಲ್ಲಿ ವಿಭಜಿತ ತೀರ್ಪು-ಸ್ಪ್ಲಿಂಟ್ ವರ್ಡಿಕ್ಟ್ ಗಳೂ ಬಂದಿವೆ. ಆದರೆ ಇದಮಿತ್ಥಂ ಎಂಬ ಅಭಿಪ್ರಾಯ ಇದುವರೆಗೂ ಬಂದಿಲ್ಲ. ಈಗ ವೈದ್ಯಕೀಯ ಗರ್ಭಪಾತದ ಅಧಿಕಾರವನ್ನು ನಿರ್ಧರಿಸುವಾಗ ಅತ್ಯಂತ ಗಂಭೀರವಾದ ಈ ಸಂಗತಿಯತ್ತಲೂ ಸರ್ವೋಚ್ಛ ನ್ಯಾಯಾಲಯ ಹರಿಸಿದ ಗಮನ ಸ್ವಾಗತಾರ್ಹವಾದುದು.

ಭಾರತದಲ್ಲಿ ವೈದ್ಯಕೀಯ ಗರ್ಭಪಾತ ಕಾನೂನು:

ಭಾರತದಲ್ಲಿ ವೈದ್ಯಕೀಯ ಗರ್ಭಪಾತಕ್ಕೆ ಕಾನೂನಿನ ಮಾನ್ಯತೆ ಇದೆ.1971 ಕ್ಕೂ ಮುನ್ನ ಗರ್ಭಪಾತ ಮಾಡುವುದು 1860ರ ಐ.ಪಿ.ಸಿ. 312 ನೇ ಕಲಮಿನ ಪ್ರಕಾರ ಶಿಕ್ಷಾರ್ಹ ಕ್ರಿಮಿನಲ್ ಅಪರಾಧವಾಗಿತ್ತು. 1960 ರಲ್ಲಿ ಇತರ ಹಲವು ದೇಶಗಳಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಯಿತು. ಅದೇ ವೇಳೆಗೆ ಭಾರತದಲ್ಲಿಯೂ ಈ ಬಗ್ಗೆ ಆಲೋಚನೆ ಪ್ರಾರಂಭಗೊಂಡಿತು. ಆ ದಿನಗಳಲ್ಲಿ ತೀವ್ರವಾಗಿ ಹೆಚ್ಚಿದ ಅಸುರಕ್ಷ ಗರ್ಭಪಾತಗಳು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವಾಲಯವನ್ನು ಕಳವಳಕ್ಕೆ ತಳ್ಳಿತು. ಈ ಸಮಸ್ಯೆಯ ಪರಿಹಾರಕ್ಕೆ 1964 ರಲ್ಲಿ ಶಾಂತಿಲಾಲ್ ಶಾ ನೇತೃತ್ವದಲ್ಲಿ ಗರ್ಭಪಾತ ಕಾನೂನು ತರಲು ಸಲಹೆ ಕೊಡುವಂತೆ ಸಮಿತಿಯೊಂದನ್ನು ರಚಿಸಲಾಯಿತು. ಅವರ ಸಲಹೆಯ ಮೇರೆಗೆ ವೈದ್ಯಕೀಯ ಗರ್ಭಪಾತ ಕಾನೂನು ತರಲು ಮಸೂದೆಯೊಂದನ್ನು ಸಂಸತ್ತಿನಲ್ಲಿ 1970ರಲ್ಲಿ ಮಂಡಿಸಲಾಯಿತು. ಆಗಸ್ಟ್ 1971 ರಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಶಾ ಸಮಿತಿಯು ಭಾರತದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಮಹಿಳೆಯರ ಮತ್ತು ಜೀವಗಳ ಹಾನಿಯನ್ನು ತಡೆಯಲು ಒಂದು ಸೂಕ್ತ ಪರಿಹಾರೋಪಾಯವಾಗಿ ಈ ಕಾನೂನನ್ನು ಪ್ರಸ್ತಾಪ ಮಾಡಿತು. ಆ ವರದಿಯಲ್ಲಿ ಉಲ್ಲೇಖಿಸಿರುವಂತೆ ಆ ಸಮಯದಲ್ಲಿದ್ದ 500 ಮಿಲಿಯನ್ ಜನಸಂಖ್ಯೆಯಲ್ಲಿ 6.5 ಮಿಲಿಯನ್ ಗರ್ಭಪಾತಗಳಾಗುತ್ತಿದ್ದವು. ಅದರಲ್ಲಿ 2.6 ಮಿಲಿಯನ್ ಹಲವು ಕಾರಣಗಳಿಂದ ತಾವಾಗಿಯೇ ಸಂಭವಿಸುವ ಗರ್ಭಪಾತಗಳಾಗಿದ್ದರೆ 3.9 ಮಿಲಿಯನ್ ಮಾಡಿಸಿದ ಗರ್ಭಪಾತಗಳಾಗಿದ್ದವು. ಕಾನೂನಿನ ಮಾನ್ಯತೆ ಇರದಿದ್ದರೂ ನಡೆಯುತ್ತಿದ್ದ ಇವುಗಳು ಎಷ್ಟು ಸುರಕ್ಷಿತವಾಗಿ ನಡೆಯುತ್ತಿದ್ದಿರಬಹುದು ಎಂದು ನಾವು ಊಹಿಸಬಹುದು. ಹಾಗೆಂದೇ ಭಾರತದ ಮಾತೃ ಮರಣಗಳಲ್ಲಿ ಅಸುರಕ್ಷಿತ ಗರ್ಭಪಾತದ ಮರಣಗಳು ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿವೆ ಎಂದು 2018 ರ ವರದಿಯೊಂದು ಹೇಳುತ್ತದೆ.

ಎಂ.ಟಿ.ಪಿ ಕಾನೂನು 1971 ಅಥವಾ ವೈದ್ಯಕೀಯ ಗರ್ಭಪಾತ ಕಾನೂನು 1971 ರ ಪ್ರಕಾರ

  • ಗರ್ಭದ ಪ್ರಾಯ 20 ವಾರದ ಒಳಗಿರುವಾಗ ಗರ್ಭಪಾತ ಮಾಡಿಸುವ ಅವಕಾಶ.
  • ಹಾಗೆ ಮಾಡಿಸಲೂ- ಗರ್ಭವನ್ನು ಮುಂದುವರೆಸುವುದರಿಂದ ಗರ್ಭಿಣಿಯ ದೈಹಿಕ ಅಥವಾ ಮಾನಸಿಕ ಸ್ಥಿತಿಗೆ ತೊಂದರೆಯುಂಟಾಗುವಂತಿದ್ದರೆ, ಅವಳ ಜೀವಕ್ಕೆ ಅಪಾಯವಾಗುವಂತಿದ್ದರೆ
  • ಹುಟ್ಟುವ ಮಗು ದೈಹಿಕ ಅಥವಾ ಮಾನಸಿಕ ಅಸಹಜ ಸ್ಥಿತಿಯ ಕಾರಣದಿಂದ ಮಗುವಿಗೆ ಅಪಾಯದ ಸಂದರ್ಭಗಳು ಕಂಡು ಬಂದರೆ
  • ಅತ್ಯಾಚಾರದಂಥಹ ಕೃತ್ಯಗಳಿಂದ ಗರ್ಭ ಕಟ್ಟಿದರೆ(ಅದು ಮಹಿಳೆಗೆ ತೀವ್ರ ಮಾನಸಿಕ ಆಘಾತವುಂಟು ಮಾಡುತ್ತದೆ ಎಂದು ಊಹಿಸಿ)
  • ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ತೀವ್ರ ಬಡತನವಿದ್ದು, ಈಗಾಗಲೇ ದಂಪತಿಗಳಿಗೆ 2-3 ಮಕ್ಕಳಿದ್ದಾಗ ವೈದ್ಯಕೀಯ ಗರ್ಭಪಾತ ಮಾಡಬಹುದು.

ಈ ಕಾನೂನಿನ ಪ್ರಕಾರ ನೋಂದಾಯಿತ ವೈದ್ಯರು ಮಾತ್ರವೇ ಗರ್ಭಪಾತ ಮಾಡಬಹುದು.

18 ವರ್ಷ ಮೇಲ್ಪಟ್ಟ ಮಹಿಳೆಗೆ ಅವಳ ಸಮ್ಮತಿಯ ಮೂಲಕ, ಅಪ್ರಾಪ್ತರು ಮತ್ತು ಮಾನಸಿಕ ಅಸ್ವಸ್ಥರಾದರೆ ಪೋಷಕರ ಸಮ್ಮತಿ ಬೇಕು.

12 ವಾರಗಳ ಭ್ರೂಣವಾದರೆ ಒಬ್ಬ ನೊಂದಾಯಿತ ವೈದ್ಯರ ಸಲಹೆ ಸಾಕು.

12 ರಿಂದ 20 ವಾರಗಳಾದರೆ ಇಬ್ಬರ ಸಲಹೆ ಬೇಕು.

ಆ ನಂತರ 2003 ರಲ್ಲಿ ಮತ್ತಿಷ್ಟು ಸುಧಾರಣೆ, 2006 ರಿಂದ 2010 ರ ವರೆಗೆ ತಜ್ಞರ ಜೊತೆ ಹಲವು ಸುತ್ತಿನ ಚರ್ಚೆಗಳು ನಡೆದು 2014 ರಲ್ಲಿ ಮತ್ತಿಷ್ಟು ತಿದ್ದುಪಡಿಗಳನ್ನುತಂದು ಕಾನೂನು ಬದ್ಧ ಸುರಕ್ಷಿತ ಗರ್ಭಪಾತಕ್ಕೆ ಅನುವು ಮಾಡಿಕೊಡಲಾಯಿತು. ಇದರಲ್ಲಿ ಬಹು ಮುಖ್ಯವಾದುದು ಭ್ರೂಣವು ಅಸಹಜ ರೀತಿಯ ಬೆಳವಣಿಗೆಯಲ್ಲಿದ್ದರೆ 20 ವಾರದ ನಂತರವೂ ಗರ್ಭಪಾತ ಮಾಡಲು ಅವಕಾಶ ಕಲ್ಪಿಸಲಾಯಿತು. ಜೊತೆಗೇ ಈ ಅವಧಿಯ ವಿಸ್ತರಣೆಯ ಅವಕಾಶವನ್ನು ಇತರ ವಿಭಾಗದ ಎಂದರೆ ಅತ್ಯಾಚಾರಕ್ಕೆ ಒಳಗಾಗಿ ಧರಿಸಿದ ಗರ್ಭ, ಗರ್ಭ ಧರಿಸಿದ ಮೇಲೆ ಬದಲಾಗಬಹುದಾದ ವೈವಾಹಿಕ ಸ್ಥಿತಿ ಎಂದರೆ ಗಂಡ ಸತ್ತರೆ, ವಿವಾಹ ವಿಚ್ಚೇದನ ಮುಂತಾಗಿ ಒಂಟಿ ಮಹಿಳೆಯಾಗಬೇಕಾಗಿ ಬಂದಾಗ, ವಿವಾಹಿತ ಮಹಿಳೆ ಗರ್ಭನಿರೋಧಕಗಳನ್ನು ಬಳಸಿಯೂ ಅವು ವಿಫಲವಾಗಿ ಗರ್ಭಿಣಿಯಾದರೆ, ಎಂದು ವಿಸ್ತರಿಸಲಾಯಿತು. ಇಲ್ಲಿದ್ದ ಸಮಸ್ಯೆಯೇ ಅತಿ ಮುಖ್ಯವಾಗಿ ಗಮನಿಸಬೇಕಾದ್ದು. ಅದೆಂದರೆ ಲೈಂಗಿಕ ಸಂಬಂಧ ಕೇವಲ ವಿವಾಹಿತರ ಮಧ್ಯೆ ಮಾತ್ರವೇ ನಡೆಯಬೇಕು ಅಥವಾ ನಡೆಯುತ್ತದೆ ಎಂಬ ಅಭಿಪ್ರಾಯ. ಆದರೆ ವಿವಾಹೇತರ ಸಂಬಂಧಗಳ ಕಾರಣದಿಂದಲೂ ಸಂಭವಿಸಬಹುದಾದ ಗರ್ಭಧಾರಣೆ, ಒಪ್ಪಿತ ಸಂಬಂಧದಲ್ಲಿ ಸಂಭವಿಸುವ ಗರ್ಭಧಾರಣೆಗಳ ಸಂದರ್ಭದಲ್ಲಿ ಅದನ್ನು ತೆಗೆದು ಹಾಕಲು ಅವಕಾಶವಿಲ್ಲದಿರುವುದು. ಈ ಅಂಶವನ್ನೇ ಪ್ರಶ್ನಿಸಿ ಸಹಮತದ ಸಂಬಂಧದಲ್ಲಿ ಧರಿಸಿದ ಗರ್ಭವನ್ನು ಆ ಸಂಬಂಧ ಮುರಿದ ಕಾರಣದಿಂದ ತೆಗೆಸಲು ಬಯಸಿದ್ದ 25ರ ಮಹಿಳೆಗೆ ಸಿಕ್ಕ ಜಯ ಸಂವಿಧಾನದ ಅಡಿಯಲ್ಲಿ ಘನತೆಯ,ಮತ್ತು ಸಂತಾನೋತ್ಪತ್ತಿ ಸ್ವಾಯತ್ತತೆಯನ್ನು ಬಯಸುವ ಎಲ್ಲರಿಗೂ ಸಿಕ್ಕ ಜಯವಾಗಿದೆ.

ಈ ತೀರ್ಪುಕೊಡುವಾಗ ಎಂ.ಟಿ.ಪಿ.ಕಾನೂನಿನ 3(ಬಿ) ಯ ಔಚಿತ್ಯವನ್ನೇ ಸುಪ್ರೀಂಕೋರ್ಟ್ ಪ್ರಶ್ನಿಸಿ ಅದು ಸಂವಿಧಾನದ ಮೂಲಭೂತ ಹಕ್ಕುಗಳನ್ನೇ ಉಲ್ಲಂಘಿಸುತ್ತದೆ ಎಂದೂ ಹೇಳಿದೆ.

ನಮ್ಮ ಪರಿಸರ ಮತ್ತು ಮಹಿಳೆಯರ ಪರಿಸ್ಥಿತಿ:

ನಮ್ಮ ಸುತ್ತಲಿನ ಜಗತ್ತು ಬಹಳ ಸುಲಭವಾಗಿ ಹೆಣ್ಣನ್ನು ಅಧೀನತೆಯ ಮನೋಭಾವಕ್ಕೆ ಒಗ್ಗಿಸುತ್ತದೆ.ಮತ್ತು ಪುರುಷ ಕೇಂದ್ರಿತ ಹಾಗೂ ಪುರುಷ ಪ್ರಮುಖ ಆಲೋಚನಾ ಕ್ರಮವನ್ನು ಇಡೀ ಸಮಾಜ ಒಪ್ಪಬೇಕೆಂದೂ ಒತ್ತಾಯಿಸುತ್ತದೆ. ಇದಕ್ಕೆ ಪುರಾಣಗಳಲ್ಲಿಯೂ ಉದಾಹರಣೆಗಳು ಸಿಗುತ್ತವೆ ಮತ್ತು ವಾಸ್ತವ ಬದುಕಿನಲ್ಲಂತೂ ಕಣ್ಣಿಗೆ ರಾಚುವಂತೆ ಕಾಣುತ್ತವೆ. ಉದಾಹರಣೆಗೆ ನಾವು ಮಹಾಭಾರತದ ಕಥೆಗಳನ್ನು ಕೇಳಿದ್ದೇವೆ. ದ್ರೌಪದಿ ಐದು ಗಂಡರ ಮಡದಿ. ಒಬ್ಬರಿಗಿಂತ ಒಬ್ಬರು ಶೂರ ಧೀರ ಪರಾಕ್ರಮಿಗಳು. ಆದರೆ ತಾವು ಸೋತಮೇಲೆ ಅವಳನ್ನೂ ಪಣಕ್ಕಿಟ್ಟು ದ್ಯೂತದಲ್ಲಿ ಸೋಲುತ್ತಾರೆ. ದ್ರೌಪದಿಯನ್ನು ತುಂಬಿದ ಸಭೆಗೆ ಎಳೆದು ತಂದು ಆಕೆಯ ಸೀರೆ ಸೆಳೆಯಲಾಗುತ್ತದೆ.ಹೆಣ್ಣೊಬ್ಬಳ ಘನತೆಯನ್ನು ಆಕೆಯ ದೇಹವನ್ನೇ ಗುರಿಯಾಗಿಸಿಕೊಂಡು ಗುರುತಿಸುವ ಒಂದು ಮನೋಭಾವ ಇದು. ಇಲ್ಲಿ ನನಗೆ ಯಾವತ್ತೂ ಎದ್ದ ಪ್ರಶ್ನೆ ಕೌರವರಿಗೆ ಪಾಂಡವರ ಮೇಲೆ ಹಗೆ ತೀರಿಸಿಕೊಳ್ಳಲಿದ್ದರೆ ಅವರನ್ನು ವಿವಸ್ತ್ರರನ್ನಾಗಿ ಸಭೆಯಲ್ಲಿ ನಿಲ್ಲಿಸಿ ಅವಮಾನಿಸಬಹುದಿತ್ತಲ್ಲ!!. ಅದು ಹಾಗಾಗಲು ಸಾಧ್ಯವೇ ಇಲ್ಲ. ಯಾಕೆಂದರೆ ಮಾನಾಪಮಾನಗಳನ್ನು ಕಾಪಾಡುವುದು ಹೆಣ್ಣಿನ ಮೂಲಕ ಮಾತ್ರ. ಇನ್ನು ಕಥೆ ಮುಂದುವರೆದು ಸೆಳೆಯುತ್ತಿದ್ದ ಸೀರೆ, ತಾನು ವಿವಸ್ತ್ರಳಾಗಿ ತುಂಬಿದ ಸಭೆಯಲ್ಲಿ ನಿಲ್ಲಬೇಕು ಎಂಬ ಸ್ಥಿತಿಯಲ್ಲಿ ಕೃಷ್ಣನ ಮೊರೆ ಹೊಗುತ್ತಾಳೆ. ಅಲ್ಲಿಯೂ ದುಶ್ಯಾಸನ ಸೆಳೆಯುತ್ತಿದ್ದ ಸೀರೆಯನ್ನು ತನ್ನ ಶಕ್ತಿ ಮೀರಿ ತಡೆಯಲು ಹಿಡಿದ ಕೈ ಸಡಿಲಿಸಿ ಎರಡನ್ನೂ ಮೇಲೆತ್ತಿ ಕೃಷ್ಣಾ ಎಂದೊರಲಿದಾಗ ಕೃಷ್ಣ ಅಕ್ಷಯ ವಸ್ತçವನ್ನು ದಯಪಾಲಿಸಿದ ಎಂದು ಹೇಳುತ್ತಾರೆ. ಇಲ್ಲಿ ಕೂಡಾ `ದೇವರೆಂಬ ಪಟ್ಟ ಕಟ್ಟಿಕೊಂಡ ಆ ಕೃಷ್ಣ..ಜಗನ್ನಿಯಾಮಕನೆನಿಸಿಕೊಂಡವ’ ಹೆಣ್ಣೊಬ್ಬಳ ಮೇಲೆ ನಡೆಯುವ ಆಕ್ರಮಣಕ್ಕೆ ತಾನಾಗಿಯೇ ಸಹಾಯವಾಗಿ ಒದಗಿ ಬರಲಿಲ್ಲ. ಬದಲಿಗೆ ಆಕ್ರಂದನ, ನೀನಲ್ಲದೇ ಅನ್ಯರಿಲ್ಲ ನನ್ನ ಕಾಪಾಡುವವರು ಎಂಬ ಅಸಹಾಯಕ ಮೊರೆಗಾಗಿ ಕಾದನಂತೆ. ಅಲ್ಲವೇ ಇದೇ ಪುರುಷ ಪೌರುಷದ ಹೆಣ್ಣಿನ ಅಧೀನತೆಯ ಮಾದರಿ??

ಎರಗಬಹುದಾದ ಅಪಾಯಗಳು-ವಹಿಸಬೇಕಾದ ಕಾಳಜಿಗಳು:

ಇದೇ ಸಂದರ್ಭದಲ್ಲಿ ಕಾಳಜಿ ವಹಿಸಬೇಕಾದ ಕೆಲವು ಅಗತ್ಯಗಳಿವೆ. ಅವೆಂದರೆ ವೈದ್ಯಕೀಯ ಗರ್ಭಪಾತ ಕಾನೂನು ಬದ್ಧವೆಂಬುದರ ನೆರಳಿನಲ್ಲಿಯೇ ಸ್ತ್ರೀ ಭ್ರೂಣ ಹತ್ಯೆ ವ್ಯಾಪಕವಾಗಿ ಬಿಡುವ ಸಂದರ್ಭಗಳು. 1971 ರ ಕಾನೂನಿನ ನೆರಳಲ್ಲಿ ಸಂಭವಿಸಿದ ಲಿಂಗ ಪತ್ತೆ ಭ್ರೂಣ ಹತ್ಯೆಗಳ ಕಾರಣದಿಂದ ತೀವ್ರವಾಗಿ ಕುಸಿದ ಲಿಂಗಾನುಪಾತವನ್ನು ಗಮನಿಸಿಯೇ ಗರ್ಭಪಾತದ ಕಾಯ್ದೆಗೆ ಹಲವು ಕಠಿಣ ಕ್ರಮಗಳನ್ನೂ ಸೇರಿಸಲಾಗಿತ್ತು ಎಂಬುದನ್ನು ಮರೆಯಲಾಗದು. ಮತ್ತು ಆ ಕಠಿಣ ಕ್ರಮಗಳ ಕಾರಣದಿಂದ ಯಾವುದೇ ಕಾರಣಕ್ಕೆ ಗರ್ಭಪಾತದ ಅಗತ್ಯವಿದ್ದವರೂ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವ ವಿಪರೀತ ಸ್ಥಿತಿಯೂ ನಿರ್ಮಾಣವಾಗಿದ್ದೂ ಅಷ್ಟೇ ಸತ್ಯ.

ಹಾಗಿದ್ದೂ ಲಿಂಗಾಧಾರಿತ ಗರ್ಭಪಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಪಿ.ಸಿ.& ಪಿ.ಎನ್.ಡಿ.ಟಿ ಕಾನೂನು ಸಮರ್ಪಕ ಜಾರಿಯಾಗುವಂತೆ ಗಮನ ವಹಿಸಬೇಕೇ ಹೊರತೂ ವೈದ್ಯಕೀಯ ಗರ್ಭಪಾತದ ಅವಕಾಶವನ್ನು ಕ್ಷೀಣಗೊಳಿಸುವುದಾಗಬಾರದು. ಮತ್ತು ಈ ತೀರ್ಪು ಮಹಿಳೆಯರ ಲೈಂಗಿಕತೆಯ ಸ್ವಾತಂತ್ರ÷್ಯವನ್ನೂ ಎತ್ತಿ ಹಿಡಿದಿದ್ದನ್ನು ಗುರುತಿಸಬೇಕು. ಮಹಿಳೆಯೊಬ್ಬಳು ವಿವಾಹಿತಳಲ್ಲ ಎಂಬ ಕಾರಣಕ್ಕೆ ಸಹಜ ದೈಹಿಕ ಕಾಮನೆಗಳನ್ನು ಹೊಂದಬಾರದು ಎಂಬುದು ಪೃಕೃತಿಗೆ ವಿರುದ್ಧವಾಗಿರುವುದು. ಹಾಗೆಂದ ಮಾತ್ರಕ್ಕೆ ಸ್ವಚ್ಛಂದ ಬದುಕಿನ ರಹದಾರಿ ಎಂದು ಭಾವಿಸದೇ ಮನುಷ್ಯ ಸಹಜವಾದ ಕಾಮ,ರಾಗ ದ್ವೇಷಗಳು ಸ್ತ್ರೀ ಪುರುಷರಲ್ಲಿ ಸಹಜವಾಗಿಯೇ ಇರುವುದನ್ನು ದೇಹ ವಿಜ್ಞಾನದ ಭಾಷೆಯಲ್ಲಿ ಗುರುತಿಸಬೇಕು. ಈ ಸೂಕ್ಷ್ಮ ತಿಳುವಳಿಕೆಯೂ ಸಮಾಜದಲ್ಲಿ ಎಲ್ಲರಿಗೂ ಮೂಡಬೇಕು. ಅದಕ್ಕೆ ಶೀಲದ ಪಟ್ಟ ಕಟ್ಟಬಾರದು ಎಂಬ ಸೂಕ್ಷ್ಮ ಸೂಚನೆಯನ್ನು ಸುಪ್ರೀಂ ಕೋರ್ಟ್ ತನ್ನ ಈ ತೀರ್ಪಿನ ಮೂಲಕ ಕೊಟ್ಟಿದೆ ಎನ್ನಬಹುದು. ಈ ತೀರ್ಪನ್ನು ಸಹಜ ಮಾನವ ಸಂಬಂಧ ಮತ್ತು ಬದುಕನ್ನು ಗೌರವಿಸುವ ಎಲ್ಲರೂ ಸ್ವಾಗತಿಸಿದ್ದಾರರೆ. ದೇಶದ ಅತಿ ದೊಡ್ಡ ಮಹಿಳಾ ಸಂಘಟನೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ವಿವಾಹ ಸಂಬಂಧದಲ್ಲಿ ಸಂಭವಿಸುವ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂದ ವಿಭಜಿತ ತೀರ್ಪಿನ ವಿಷಯದಲ್ಲಿ ವಿವಾಹ ಸಂಬಂಧದೊಳಗಿನ ಅಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಬೇಕೆಂದು ಮೇಲ್ಮನವಿ ಸಲ್ಲಿಸಿದೆ ಎಂಬುದನ್ನಿಲ್ಲಿ ನೆನಪಿಸಿಕೊಳ್ಳೋಣ. 90 ರ ದಶಕದಿಂದಲೇ ಜನವಾದಿ ಈ ವಿಷಯ ಕುರಿತು ಒತ್ತಾಯ ಮಾಡುತ್ತಲೇ ಬಂದಿದ್ದು ಈಗ ಬಂದಿರುವ ತೀರ್ಪು ಸ್ವಾಗತಾರ್ಹ ತೀರ್ಪು ಎಂಬುದರಲ್ಲಿ ಸಂದೇಹವೇ ಇಲ್ಲ.

Donate Janashakthi Media

Leave a Reply

Your email address will not be published. Required fields are marked *