ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ ಮತದಾನದ ಹಕ್ಕನ್ನು ನೀಡಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿತ್ತು. ಆಯೋಗದ ನಿರ್ಧಾರದ ಬಗ್ಗೆ ಸಾಕಷ್ಟು ವಿವಾದವೂ ಸೃಷ್ಟಿಯಾಯಿತು. ಇದು ಸ್ಪಷ್ಟವಾಗಿ ಬೇರೆಡೆಯಿಂದ ಮತದಾರರನ್ನು ಕರೆತಂದು ರಾಜ್ಯದಲ್ಲಿ ಹಿಡಿತ ಸಾಧಿಸಲು ಕೇಂದ್ರದ ಬಿಜೆಪಿ ಪಕ್ಷವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ 2019ರ ಆಗಸ್ಟ್ನಲ್ಲಿ ಕಲಂ 370 ರದ್ದುಗೊಂಡು ಕೇಂದ್ರಾಡಳಿತ ಪ್ರದೇಶವಾದ ಬಳಿಕ ಅಲ್ಲಿ ಯಾವುದೇ ಚುನಾವಣೆ ನಡೆದಿಲ್ಲ ಹಾಗೂ, ಯಾವುದೇ ರಾಜಕೀಯ ಪಕ್ಷಗಳ ಸರ್ಕಾರ ಅಧಿಕಾರ ವಹಿಸಿಕೊಂಡಿಲ್ಲ. ಕಳೆದ 4 ವರ್ಷಕ್ಕೂ ಹೆಚ್ಚು ಸಮಯದಿಂದ ಅಲ್ಲಿ ಯಾವುದೇ ಚುನಾವಣೆಯೂ ನಡೆದಿಲ್ಲ. ಮುಂದಿನ ವರ್ಷ ಚುನಾವಣೆ ನಡೆಯುವ ಸಾಧ್ಯತೆಗಳು ಇರುವುದಿಂದ ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರು ಸಹ ಇಲ್ಲಿ ಮತದಾನ ಮಾಡಲು ನೋಂದಣಿ ಮಾಡಲು ಅವಕಾಶ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮತದಾರರನ್ನು ಬಿಜೆಪಿ ಆಮದು ಮಾಡಿಕೊಂಡು ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿವೆ. ಇದರ ಬೆನ್ನಲ್ಲೇ ಮಂಗಳವಾರ ಜಿಲ್ಲಾ ನ್ಯಾಯಾಧೀಶ ದಾಖಲೆಗಳಿಲ್ಲದಿದ್ದರೂ ಸ್ಥಳೀಯರಲ್ಲದವರನ್ನು ನೋಂದಾಯಿಸಿಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಒಂದು ವರ್ಷಗಳಿಂದ ಕಾಶ್ಮೀರದಲ್ಲಿ ವಾಸಿಸುತ್ತಿದ್ದರೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಮತದಾನದ ಹಕ್ಕು ನೀಡುವಂತೆ ಮಾಡಿದ ಆದೇಶವನ್ನು ಈಗ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಚುನಾವಣಾ ಆಯೋಗ ಹೊರಡಿಸಿರುವ ಆದೇಶವು ಜಾರಿಯಲ್ಲಿದ್ದು ಸರಿಯಾದ ದಾಖಲೆಗಳಿದ್ದರೆ ಕಾಶ್ಮೀರೇತರ ನಾಗರಿಕರು ಮತದಾನದ ಹಕ್ಕು ಪಡೆಯಬಹುದು. ಆಯೋಗದ ಅಂದಾಜಿನ ಪ್ರಕಾರ ಇದರಿಂದ ಸುಮಾರು 20-25 ಲಕ್ಷ ಹೊಸ ಮತದಾರರು ಸೃಷ್ಟಿಯಾಗಲಿದ್ದಾರೆ. ಅಂದರೆ ಸುಮಾರು 33% ಹೊಸ ಮತದಾರರು ಸೇರ್ಪಡೆಯಾಗಲಿದ್ದಾರೆ.
ಮೆಹಬೂಬಾ ಮುಫ್ತಿ ಅವರು, “ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದು ಅಂದರೆ ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.