ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಶಿಕ್ಷಣದ ಕೋಮುವಾದೀಕರಣ ಎಗ್ಗಿಲ್ಲದೆ ಮುಂದುವರೆಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕೋಮುವಾದಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್.ಎಸ್.ಎಸ್) ತಾಲೀಮು ಶಿಬಿರ ನಡೆಸಲು ಅನುಮತಿ ನೀಡಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಆರೋಪಿಸಿದೆ.
ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ರಾಜ್ಯ ಸಮಾಜ ಕಲ್ಯಾಣ ಸಚಿವರು ಕೋಟಾ ಶ್ರೀನಿವಾಸ ಪೂಜಾರಿ ರವರ ಶಿಪಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಾಂಕ 09-10-2022 ರಿಂದ 17-10-2022 ರವರೆಗೆ ಒಟ್ಟು 9 ದಿನಗಳ ಕಾಲ ಸಂಘ
ಪರಿವಾರದ ತಾಲೀಮು ಶಿಬಿರ ನಡೆಸಲು ವಸತಿ ಶಾಲೆಗಳನ್ನು ಹಿಂದುತ್ವ ಕಾರ್ಯಗಳಿಗೆ ಬಳಕೆಗೆ ಬಿಟ್ಟು ಕೊಡಲು ಸಚಿವರು ತಮ್ಮ ಅಧಿಕಾರ ಪ್ರಭಾವ ಬಳಸಿ ಶಿಫಾರಸ್ಸು ಮಾಡಿರುವುದು ಅಪಾಯಕಾರಿ ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಸಂಘ ಸಂಸ್ಥೆಗಳ ಪ್ರವೇಶ, ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಶಿಕ್ಷಣ ಇಲಾಖೆಯ ಆದೇಶವಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ಆಶಯದಂತೆ ಧರ್ಮ ನಿರಪೇಕ್ಷತೆಯನ್ನು ಕಾಪಾಡಬೇಕು ಆದರೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಕೋಮುವಾದಿ, ಮತೀಯವಾದಿ ಹಿಡನ್ ಅಜೆಂಡಾ ಜಾರಿಗಾಗಿ ಕೋಮು ಗಲಭೆ,ಜನಾಂಗೀಯ ಹಿಂಸೆಗಳಲ್ಲಿ ತೊಡಗಿರುವ ಆರ್ಎಸ್ಎಸ್ ನಂತಹ ಕೋಮು ವಿಷಕಾರಿ ಸಂಘಟನೆಯ ಶಸ್ತ್ರಾಸ್ತ್ರ ತಾಲೀಮು, ದೈಹಿಕ ಕಸರತ್ತು, ಹಾಗೂ ಮತೀಯವಾದ ತುಂಬುವ ಒಂದು ರೀತಿಯ ಸಮಾಜ ಘಾತುಕ ಕೃತ್ಯಗಳಿಗೆ ಪ್ರೇರಣೆ ನೀಡುವ ಶಿಬಿರಕ್ಕೆ ಸರ್ಕಾರಿ ವಸತಿ ಶಾಲೆಯನ್ನು ಬಳಸಿಕೊಳ್ಳುತ್ತಿರುವುದು ಸಂವಿಧಾನ ಬಾಹಿರ ಮತ್ತು ವಸತಿ ಶಾಲಾ ನಿಯಮವನ್ನು ಉಲ್ಲಂಘಿಸಿದೆ ಎಂದು ಎಸ್ಎಫ್ಐ ಆರೋಪಿಸಿದೆ.
ರಾಜ್ಯ ಬಿಜೆಪಿ ಸರ್ಕಾರ ಆರ್ಎಸ್ಎಸ್ ಅಣತಿಯಂತೆ ರಾಜ್ಯದಲ್ಲಿ ಈಗಾಗಲೇ ಹಿಜಾಬ್ ವಿವಾದ , ಪಠ್ಯ ಪರಿಷ್ಕರಣೆಯಲ್ಲಿ ಕೋಮುವಾದಿ ವಿಚಾರಗಳನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿ ಬಿತ್ತಲು ಮುಂದಾಗಿರುವ ಈ ವಿಷಮ ಸಂಧರ್ಭದಲ್ಲಿ ಇದೀಗ ಶಿಕ್ಷಣ ಸಂಸ್ಥೆಗಳನ್ನೇ ಕೋಮುವಾದಿ,ಮತೀಯವಾದಿ ಆರ್ಎಸ್ಎಸ್ ತರಬೇತಿ ಶಿಬಿರಗಳಿಗೆ ಬಳಸುತ್ತಿರುವುದು ಶಿಕ್ಷಣದ ಕೇಸರೀಕರಣದ ಅಜೆಂಡಾದ ಭಾಗವಾಗಿದೆ ಇಂತಹ ಕೋಮುವಾದಿ ನೀತಿಗಳನ್ನು ಕೂಡಲೇ ಬಿಜೆಪಿ ಸರ್ಕಾರ ನಿಲ್ಲಿಸಬೇಕು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದಿ ಸಂಘಟನೆಗಳು ಆಟಾಟೋಪಕ್ಕೆ ಕಡಿವಾಣ ಹಾಕಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ.
ತಕ್ಷಣವೇ ಸದರಿ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಶಿಬಿರ ನಡೆಯುವ ವಸತಿ ಶಾಲೆ ಎದುರು ವಿವಿಧ ಸಂಘಟನೆಗಳು, ಪೋಷಕರಿಂದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.