ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್​ ನಿಧನ

ಗುರುಗ್ರಾಮ್: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಅವರು ಇಂದು ಬೆಳಗ್ಗೆ 8.16 ಕ್ಕೆ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮುಲಾಯಂ ಸಿಂಗ್​ರನ್ನು ಆಗಸ್ಟ್ 22 ರಂದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 1 ರ ರಾತ್ರಿ ಮೂತ್ರಕೋಶ ಸೋಂಕಿನಿಂದಾಗಿ ತೀವ್ರ ಅನಾರೋಗ್ಯ ಉಂಟಾಗಿತ್ತು. ತಕ್ಷಣ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಮೇದಾಂತ ಆಸ್ಪತ್ರೆಯ ವೈದ್ಯರ ತಂಡ ತೀವ್ರ ನಿಗಾ ವಹಿಸಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.

ಕಳೆದೆರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಸಿಎಂ ಮುಲಾಯಂ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. 2020 ರಲ್ಲಿ ಕೋವಿಡ್​ ಸೋಂಕು ತಗುಲಿ ಅದರಿಂದ ಗುಣಮುಖರಾಗಿದ್ದರು. ಬಳಿಕ ಅವರ ಆರೋಗ್ಯ ಕ್ಷೀಣಿಸುತ್ತ ಬಂದಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಮುಲಾಯಂ 1939 ನವೆಂಬರ್ 22ರಂದು ಜನಿಸಿದರು. 1992ರಲ್ಲಿ ಸಮಾಜ ವಾದಿ ಪಕ್ಷ ಸ್ಥಾಪಿಸಿದ್ದರು. ಮೂರು ಬಾರಿ 1989, 1993 ಹಾಗೂ 2003ರಲ್ಲಿ ಉತ್ತರಪ್ರದೇಶ ಸಿಎಂ ಆಗಿದ್ದರು. 1996-98ರಲ್ಲಿ ಕರ್ನಾಟಕದ ಹೆಚ್​ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1967ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಮುಲಾಯಂ 8 ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

1996ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರಲ್ಲಿ ಮೈನ್ಪುರಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *