ಸುಭಾಸ ಮಾದರ
ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮರಾದ ಲಕ್ಷಾಂತರ ಜನ ಸ್ವಾತಂತ್ರ್ಯ ಸೇನಾನಿಗಳಲ್ಲಿ ಬಹುಮುಖ್ಯವಾಗಿ ಇಂದಿಗೂ ಯುವಜನರ ಮನಸಿನಲ್ಲಿ ಸ್ಪೂರ್ತಿಯಾಗಿ ನಿಂತಿರುವುದು ಭಗತ್ಸಿಂಗ್ ಹಾಗೂ ಅವರ ಸಂಗಾತಿಗಳು. ಭಗತ್ಸಿಂಗ್, ಲಾಲ್ ಲಜಪತ್ ರಾಯ್ ಅವರ ಕೊಲೆಗೆ ಕಾರಣರಾಗಿದ್ದ ಸ್ಯಾಂಡರ್ಸ್ನನ್ನು ಕೊಲೆ ಮಾಡಲು ಸಂಚು ರೂಪಿಸಿ, ಬ್ರಿಟಿಷ್ ಕಚೇರಿಯ ಮುಂದೆನೆ ಗುಂಡು ಹಾರಿಸಿ ಕೊಲೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಭಗತ್ಸಿಂಗ್, ರಾಜಗುರು, ಸುಖದೇವ್ ಮೂವರು ಪೋಲಿಸರ ಕಣ್ಣಿನಿಂದ ತಪ್ಪಿಸಿಕೊಂಡು ಲಾಹೋರಿನಿಂದ ಕಲ್ಕಾತ್ತಾಗೆ ಹೊರಡುವ ಯೋಜನೆಯನ್ನು ರೂಪಿಸಿರುತ್ತಾರೆ ಆದರೆ ಸ್ಯಾಂಡರ್ಸ್ ಕೊಲೆ ಗಂಭೀರ ಸ್ವರೂಪ ಪಡೆದು ಬ್ರಿಟಿಷ್ ಪೋಲಿಸರು ಭಗತ್ ಸಿಂಗ್ ಹಾಗೂ ಇತರರನ್ನು ಎಲ್ಲೆಡೆ ಹುಡುಕುತ್ತಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯ ಮತ್ತೊಬ್ಬ ಕ್ರಾಂತಿಕಾರಿ ಸಂಗಾತಿ ಭಗವತಿ ಚರಣ್ ವೋಹ್ರಾ ಹೆಂಡತಿ ದುರ್ಗಾವತಿದೇವಿ ವೋಹ್ರಾ ಅವರು ಭಗತ್ ಸಿಂಗ್ ಹಾಗೂ ರಾಜಗುರು ತಪ್ಪಿಸಿಕೊಳ್ಳಲು ಸಹಕರಿಸುತ್ತಾರೆ.
ನಾನೀಗ ಹೇಳಲು ಹೊರಟಿರುವುದು ಅಂತಹ ಒಬ್ಬ ಧೀರ ಮಹಿಳೆಯ ಕುರಿತು, ಸ್ವಾತಂತ್ರ್ಯ ಸೇನಾನಿಗಳಲ್ಲಿ ಹಲವರನ್ನು ನಿತ್ಯವೂ ನೆನಪಿಸಿತ್ತೆವೆ. ಅಂತವರ ಸಾಲಿನಲ್ಲಿ ಸಶಸ್ತ್ರ ಚಳುಚಳಿಯಲ್ಲಿ ದುರ್ಗಾವತಿದೇವಿ ಅವರು ಮೊದಲ ಸಾಲಿನಲ್ಲಿ ನಮ್ಮೆದರು ಬರುತ್ತಾರೆ. 1928 ರ ಡಿಸೆಂಬರ್ 19 ರಂದು ಭಗತ್ ಸಿಂಗ್ ಜೆಪಿ ಸ್ಯಾಂಡರ್ಸ್ನನ್ನು ಹತ್ಯೆ ಮಾಡಿದ ಘಟನೆ ನಮಗೆ ಚೆನ್ನಾಗಿ ತಿಳಿದಿದೆ . ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿಯದ ಸಂಗತಿಯೆಂದರೆ, ಭಗತ್ ಸಿಂಗ್ ಹಾಗೂ ಸಂಗಾತಿಗಳು ಇಡೀ ಬ್ರಿಟಿಷ್ ಪಡೆಯ ಸಂಚಿನಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು. ಭಗತ್ಸಿಂಗ್ ಹಾಗೂ ಸಂಗಾತಿಗಳು ಸ್ಯಾಂಡರ್ಸ್ ಹತ್ಯೆಯ ಎರಡು ದಿನಗಳ ಬಳಿಕ ಲಾಹೋರ್ನಿಂದ ತಪ್ಪಿಸಿಕೊಳ್ಳಲು ಸಹಾಯಕ್ಕಾಗಿ ದುರ್ಗಾವತಿದೇವಿಯನ್ನು ಭೇಟಿ ಮಾಡಿದಾಗ ಈ ಕೆಲಸಕ್ಕೆ ದುರ್ಗಾವತಿದೇವಿ ತನ್ನ ಸಂಪೂರ್ಣ ಒಪ್ಪಿಗೆ ನೀಡುತ್ತಾರೆ. ಭಗತ್ ಸಿಂಗ್ ತನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ವಿದೇಶಿ ಉಡುಗೆಯಲ್ಲಿದ್ದರೆ, ಭಗತ್ಸಿಂಗ್ ಅವರಿಗೆ ಸಾಥ್ ನೀಡಲು ಆತನಿಗೆ ಪತ್ನಿಯಾಗಿ ದುರ್ಗಾದೇವಿಯು ಯಾವುದೇ ಹಿಂಜರಿಕೆಯಿಲ್ಲದೆ ಅಭಿನಯಿಸುತ್ತಾರೆ, ಅವರ ಸೇವಕರಂತೆ ರಾಜಗುರು ಅವರೊಡನೆ ಹೊರಡುತ್ತಾರೆ, ದುರ್ಗಾದೇವಿ ಮೂಲತಃ ಗುಜರಾತಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು ಕೂಡಾ ಅವತ್ತಿನ ಸಂದರ್ಭದಲ್ಲಿ ಸಮಾಜಿಕವಾಗಿ ಸ್ಥಾಪಿತವಾದ ಸಾಮಾಜಿಕ ಶಿಷ್ಟಾಚಾರದ ರೂಢಿಗಳನ್ನು ಮುರಿದು ಹಾಕಿ ಭಗತ್ಸಿಂಗ್ ನೊಡನೆ ಹೆಜ್ಜೆ ಹಾಕಿರುವುದು ಮಹತ್ವದ್ದಾಗಿದೆ.
ದುರ್ಗಾವತಿ ದೇವಿ (ದುರ್ಗಾ ಭಾಭಿ) ಒಬ್ಬ ಭಾರತೀಯ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಆಳುವ ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕೆಲವೇ ಮಹಿಳಾ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರು, ದುರ್ಗಾವತಿದೇವಿ ಅಲಹಾಬಾದ್ನಲ್ಲಿ ನೆಲೆಸಿದ್ದ ಬ್ರಾಹ್ಮಣ ದಂಪತಿಗಳ ಏಕೈಕ ಮಗಳು, 07 ಅಕ್ಟೋಬರ್ 1907 ರಲ್ಲಿ ಜನಿಸಿದ ದುರ್ಗಾವತಿದೇವಿಯು ಅವರ ತಾಯಿ ತೀರಿಕೊಂಡ ನಂತರ ತನ್ನ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು, ತನ್ನ 11 ನೇ ವಯಸ್ಸಿನಲ್ಲಿ, ಲಾಹೋರ್ನಲ್ಲಿ ವಾಸಿಸುತ್ತಿದ್ದ ಮತ್ತು ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮಂತ ದಂಪತಿಗಳ ಮಗನಾದ ಭಗವತಿ ಚರಣ್ ವೋಹ್ರಾ ಅವರೊಂದಿಗೆ ಮದುವೆಯಾಯಿತು, ಭಗವತಿಚರಣ್ ವೋಹ್ರಾ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸಕ್ರಿಯ ಸದಸ್ಯರಾಗಿದ್ದವರು, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ, ಅವರ ದೌರ್ಜನ್ಯಗಳ ವಿರುದ್ಧ 1920 ರಲ್ಲಿ ಶುರುವಾದ ಸತ್ಯಾಗ್ರಹ ಚಳುವಳಿಗೆ ಬಂದರು. ನ್ಯಾಷನಲ್ ಕಾಲೇಜಿನಲ್ಲಿ ಭಗತ್ಸಿಂಗ್ ಹಾಗೂ ಇತರ ಸಂಗಾತಿಗಳೊಡನೆ ಸೇರಿಕೊಂಡರು.
ಭಗತ್ಸಿಂಗ್ ಹಾಗೂ ಸಂಗಾತಿಗಳು 1926 ರಲ್ಲಿ ಗುಂಪು ನೌಜವಾನ್ ಭಾರತ್ ಸಭಾವನ್ನು ಸ್ಥಾಪಿಸಿದರು, ಭಗವತಿ ಚರಣ್ ವೋಹ್ರಾ ಇದರ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಯುವಕರನ್ನು ಪ್ರೋತ್ಸಾಹಿಸುವ ಮತ್ತು ಕೋಮುವಾದ ಮತ್ತು ಅಸ್ಪೃಶ್ಯತೆಯ ಸಾಮಾಜಿಕ ಅನಿಷ್ಟಗಳನ್ನು ಕೊನೆಗೊಳಿಸುವುದು ಈ ಸಂಘಟನೆಯ ಪ್ರಮುಖ ಗುರಿಯಾಗಿತ್ತು. ನೌಜವಾನ್ ಭಾರತ ಸಭಾದ ಸದಸ್ಯರು, ಯುವ ಕ್ರಾಂತಿಕಾರಿಗಳೆಲ್ಲರೂ ಲಾಹೋರ್ನಲ್ಲಿರುವ ಭಗವತಿ ಚರಣ್ ಅವರ ಕುಟುಂಬದ ಮನೆಗೆ ನಿರಂತರ ಬೇಟಿ ನೀಡುತ್ತಿದ್ದರು, ಆ ಬೇಟಿ ನಿರಂತರವಾಗಿ ನಡೆಯುತ್ತಿದ್ದ ಚರ್ಚೆಗಳು, ಸಂವಾದಗಳು, ಸ್ವಾತಂತ್ರ್ಯ ಚಳುವಳಿಯ ಭಾಷಣಗಳು ದುರ್ಗಾವತಿದೇವಿಯವರ ಮೇಲೆ ಪ್ರಭಾವ ಬೀರಿರಬಹುದು, ಭಗವತಿ ಚರಣ್ ವೋಹ್ರಾ ಅವರ ಹೆಂಡತಿ ದುರ್ಗಾವತಿದೇವಿಯನ್ನು ಎಲ್ಲರೂ ದುರ್ಗಾ ಭಾಭಿ ಎಂದೆ ಕರೆಯುತ್ತಿದ್ದರು, ಪೋಲಿಸ್ ವಿಚಾರಣೆಯಲ್ಲಿದ್ದ ಭಗತ್ ಸಿಂಗ್ ಮತ್ತು ಇತರ ಸಂಗಾತಿಗಳ ಕಾಪಾಡಲು ದುರ್ಗಾವತಿ ತನ್ನ ಬಳಿಯಿದ್ದ ಆಭರಣಗಳನ್ನು 3000 ರೂಪಾಯಿಗೆ ಮಾರಾಟ ಮಾಡಿ ಆ ಹಣವನ್ನು ಅವರಿಗೆ ನೀಡಿದ್ದರು, ಎಚ್ಎಸ್ಆರ್ಎ ಸದಸ್ಯರಾದ ವಿಮಲಪ್ರಸಾದ ಜೈನ್ ಅವರ ದೆಹಲಿಯಲ್ಲಿ ನಡೆಸಬೇಕಿದ್ದ ಹಿಮಾಲಯನ್ ಟಾಯಿಲೆಟ್ಸ್ (a smokescreen to hide the agenda of making bombs) ಕಾರ್ಖಾನೆಗೆ ತನ್ನ ಪತಿಯೊಡನೆ ಸಹಾಯಕ್ಕೆ ನಿಂತರು, 1928 ರಲ್ಲಿ ದುರ್ಗಾವತಿ ಎಚ್ಎಸ್ಆರ್ಎ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು. ಕ್ರಾಂತಿಕಾರಿಗಳ ಚಳುವಳಿಯ ಇತಿಹಾಸವನ್ನು ಬರೆಯುವ ಜವಾಬ್ದಾರಿಯನ್ನು ಸಂಘವು ಇವರಿಗೆ ವಹಿಸುತ್ತದೆ, The Philosophy of the Bomb, The Cult of the Bomb ಗಳಲ್ಲಿ ಕ್ರಾಂತಿಕಾರಿಗಳ ಚಳುವಳಿಯ ಕುರಿತು ಬರೆದಿದ್ದಾರೆ..
ಲಕ್ನೋದಿಂದ, ಭಗತ್ ಸಿಂಗ್ ಭಗವತಿ ಚರಣ್ಗೆ ಟೆಲಿಗ್ರಾಮ್ ಕಳುಹಿಸಿದ್ದರು, ನಾನು “ದುರ್ಗಾವತಿ” ಯೊಂದಿಗೆ ಕಲ್ಕತ್ತಾಕ್ಕೆ ಬರುತ್ತಿರುವುದಾಗಿ ತಿಳಿಸಿರುವುದನ್ನು, ಭಗವತಿ ಚರಣ್ ಇದನ್ನು ಬಹಳ ಆಶ್ಚರ್ಯದಿಂದ ಸ್ವೀಕರಿಸಿದರು: “ಯಾರು ಈ ದುರ್ಗಾವತಿ?” ಎಂದು ಆಶ್ವರ್ಯಪಟ್ಟರು, ದುರ್ಗಾವತಿಯನ್ನು ಕಂಡೊಡನೆ ಭಗವತಿ ಚರಣ್ ವೋಹ್ರಾ ಇದುವರೆಗೂ ನಿನ್ನಲ್ಲಿನ ಕ್ರಾಂತಿಕಾರಿಯನ್ನ ನಾನು ಕಂಡಿರಲಿಲ್ಲ , ನನಗೊಬ್ಬ ಕ್ರಾಂತಿಕಾರಿ ಹೆಂಡತಿ ಸಿಕ್ಕಿದ್ದಾಳೆ ಎಂದು ಎಂದು ಬಹಳ ಸಂತೋಷಪಟ್ಟಿದ್ದರು. 28 ಮೇ 1930 ರಂದು ಭಗವತಿ ಚರಣ್ ನಿಧನರಾದರು. ರಾವಿ ಬಳಿಯ ಕಾಡಿನಲ್ಲಿ ಬಾಂಬ್ ಪರೀಕ್ಷೆ ನಡೆಸುತ್ತಿದ್ದಾಗ ಅದು ಅವರ ಕೈಯಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡು ಹುತಾತ್ಮರಾದರು.
16 ನೆವಂಬರ್ 1926 ರಲ್ಲಿ ಕರ್ತಾರ ಸಿಂಗ್ ಸರಭ ಹುತಾತ್ಮ ದಿನಾಚರಣೆಯನ್ನು ನಡೆಸಿದರು, ಕರ್ತರ ಸಿಂಗ್ ಸರಭಾ ಅವರು 16 ನವೆಂಬರ್ 1915 ರಂದು ಸ್ವಾತಂತ್ರ್ಯ ಚಳುವಳಿಯ ಕಾರಣಕ್ಕೆ ಅವರನ್ನು ಗಲ್ಲಿಗೇರಿಸಲಾಗಿತ್ತು ಆಗ ಅವರ ವಯಸ್ಸು 19 ವರ್ಷ, 63 ದಿನಗಳ ಕಾಲ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿ 13 ಸೆಪ್ಟೆಂಬರ್ 1929 ರಂದು ಜತಿನ್ ದಾಸ ನಿಧನರಾದರು. ದುರ್ಗಾ ವತಿ ದೇವಿ ಲಾಹೋರ್ನಿಂದ ಕಲ್ಕತ್ತಾಗೆ ರೈಲಿನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನಡೆಸಿದರು, ಭಗತ್ ಸಿಂಗ್ 1929 ರಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಪ್ರಕರಣದಲ್ಲಿ ಶರಣಾದ ನಂತರ ದುರ್ಗಾವತಿದೇವಿ ಲಾರ್ಡ್ ಹೈಲಿಯನ್ನು ಹತ್ಯೆ ಮಾಡಲು ಪ್ರಯತ್ನಿಸಿದರು, ಆದರೆ ಅವನು ತಪ್ಪಿಸಿಕೊಂಡರೂ ಕೂಡ ಅವನ ಅನೇಕ ಸಹಚರರು ಹತರಾದರು, ಭಗವತಿ ಚರಣ್ ಮರಣಾ ನಂತರ ಪೋಲಿಸರಿಗೆ ಸರಿಯಾದ ಸುಳಿವು ಕೂಡ ಸಿಗದ ರೀತಿಯಲ್ಲಿ ದುರ್ಗಾವತಿದೇವಿ ಚಲಿಸುತ್ತಿದ್ದರು ಜುಲೈ 1929 ರಲ್ಲಿ ಅವರು ಲಾಹೋರ್ನಲ್ಲಿ ಕಾಣಿಸಿಕೊಂಡರು, ಭಗತ್ ಸಿಂಗ್ ಅವರ ಚಿತ್ರವಿರುವ ಬೋರ್ಡ್ ಹಿಡಿದುಕೊಂಡು “ಭಗತ್ ಸಿಂಗ್ ಮತ್ತು ದತ್ ದಿನದಂದು” ಮೆರವಣಿಗೆಯನ್ನು ನಡೆಸಿದರು, ನಂತರದಲ್ಲಿ ಜತೀಂದ್ರನಾಥ ದಾಸ್ ಅವರ ಶೋಕಾಚರಣೆಯ ಮಹಿಳಾ ಮೆರವಣಿಗೆಯಲ್ಲಿ ಕಾಣಿಸಿಕೊಂಡರು, ಅಕ್ಟೋಬರ್ 8, 1930 ರ ಮಧ್ಯರಾತ್ರಿಯಲ್ಲಿ, ದಕ್ಷಿಣ ಬಾಂಬೆಯ ಪ್ರಮುಖ ರಸ್ತೆಯಾದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಪೊಲೀಸ್ ಠಾಣೆಯ ಹೊರಗೆ ನಿಂತಿದ್ದ ಬ್ರಿಟಿಷ್ ಪೋಲಿಸ್ ದಂಪತಿಗಳ ಮೇಲೆ ದುರ್ಗಾದೇವಿ ಗುಂಡು ಹಾರಿಸಿದರು, ಈ ಘಟನೆಯನ್ನು ನಂತರ “ಭಯೋತ್ಪಾದಕ ದೌರ್ಜನ್ಯದಲ್ಲಿ ಮಹಿಳೆಯೊಬ್ಬರು ಪ್ರಮುಖವಾಗಿ ಕಾಣಿಸಿಕೊಂಡ ಮೊದಲ ನಿದರ್ಶನ” ಎಂದು ವಿವರಿಸಲಾಗಿದೆ ಇದನ್ನು ಅಂದಿನ ಪ್ರಮುಖ ಪತ್ರಿಕೆಯೊಂದು ದಾಖಲಿಸಿದೆ, ಅಂದು ನಡೆದ ಗುಂಡಿನ ದಾಳಿಗೊಳಗಾದವರು ಪೊಲೀಸ್ ಸಾರ್ಜೆಂಟ್ ಮತ್ತು ಅವರ ಪತ್ನಿ ಎಂದು ನಂತರದಲ್ಲಿ ತಿಳಿಯಿತು. ಗುಂಡಿನ ದಾಳಿ ಪ್ರಕರಣದಲ್ಲಿ ದುರ್ಗಾವತಿ ದೇವಿಯನ್ನು ಬಂಧಿಸಿ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.
ಸ್ವಾತಂತ್ರ್ಯದ ನಂತರ, ದುರ್ಗಾವತಿದೇವಿ ಭಗವತಿ ಚರಣ್ ವೋಹ್ರಾ ಅವರು ಅಪರಿಚಿತ ಜೀವನವನ್ನು ನಡೆಸಿದರು, ಗಾಜಿಯಾಬಾದ್ನಲ್ಲಿ ಸಾಮಾನ್ಯ ನಾಗರಿಕರಾಗಿ, ಲಕ್ನೋದ ಪುರಾಣ ಕಿಲಾ ಪ್ರದೇಶದಲ್ಲಿ ಬಡ ಮಕ್ಕಳಿಗಾಗಿ ಶಾಲೆಯನ್ನು ತೆರದರು. ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು 1956 ರಲ್ಲಿ ಶಾಲೆಗೆ ಭೇಟಿ ನೀಡಿದ್ದರು, ಇದನ್ನು ಈಗ ಸಿಟಿ ಮಾಂಟೆಸ್ಸರಿ ಶಾಲೆ ಎಂದು ಕರೆಯಲಾಗುತ್ತದೆ. ದುರ್ಗಾಬಾಭಿ ಶಹೀದ್ ಸೋಧ್ ಸಂಸ್ಥಾನಕ್ಕಾಗಿ ತನ್ನ ಭೂಮಿಯನ್ನು ದಾನ ಮಾಡಿದರು. 15 ಅಕ್ಟೋಬರ್ 1999 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು.
ದುರ್ಗಾವತಿ ದೇವಿಯೆಂದರೆ ಬ್ರಿಟಿಷ ಪೋಲಿಸರಿಗೂ ಚಳುವಳಿಯ ಸಂದರ್ಭದಲ್ಲಿ ಭಯ ಹುಟ್ಟು ಹಾಕಿದ ಹೆಸರಾಗಿತ್ತು, ಬ್ರಿಟಿಷರು ದುರ್ಗಾವತಿಯನ್ನು “ಭಾರತದ ಅಗ್ನಿ” ಎಂದು ಕರೆದರು. ಬ್ರಿಟಿಷರ ವಿರುದ್ಧ ಕೆಲವೇ ಕೆಲವು ಮಹಿಳೆಯರು ತೋರಿಸಿದ ತ್ಯಾಗ ಮತ್ತು ನಿರ್ಭಯತೆಯ ಫ್ಲ್ಯಾಷ್ಬ್ಯಾಕ್ನಲ್ಲಿ ಕಾಮ್ರೇಡ್ ದುರ್ಗಾವತಿ ದಂತಕಥೆಯಾಗಿ ಉಳಿದಿದ್ದಾರೆ. ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ನಿರ್ಭೀತ ಮಹಿಳೆ ಯುವ ಪೀಳಿಗೆಗೆ ಸ್ಫೂರ್ತಿ ನೀಡಲು ಜೀವನಚರಿತ್ರೆಯು ವಿದ್ಯಾರ್ಥಿಗಳಿಗೆ ಮುಟ್ಟಬೇಕಿದೆ.