ಚುನಾವಣಾ ಆಯೋಗದ ಅನಗತ್ಯ ನಡೆ : ರಾಜಕೀಯ ಪಕ್ಷಗಳ ಹಕ್ಕುಗಳಲ್ಲಿ ಹಸ್ತಕ್ಷೇಪ ಬೇಡ- ಸಿಪಿಐ(ಎಂ) ಪೊಲಿಟ್‍ಬ್ಯುರೊ

“ತನ್ನದೇ ಅಫಿಡವಿಟ್‍ಗೆ ವ್ಯತಿರಿಕ್ತವಾದ ಚುನಾವಣಾ ಆಯೋಗದ ಅನಗತ್ಯ ನಡೆ ಈಗೇಕೆ?”

ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಹಣಕಾಸು ಒದಗಿಸುವ ಯೋಜನೆ ಮತ್ತು ಇದು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬಹಿರಂಗಪಡಿಸಲು ಮಾರ್ಗದರ್ಶನ ನೀಡಲು ಮಾದರಿ ನೀತಿ ಸಂಹಿತೆಯನ್ನು ತಿದ್ದುಪಡಿ ಮಾಡುವ ಚುನಾವಣಾ ಆಯೋಗದ ಪ್ರಸ್ತಾಪವು ಸಂಪೂರ್ಣವಾಗಿ ಅನಗತ್ಯ ಕ್ರಮವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಸಂವಿಧಾನವು ಚುನಾವಣಾ ಆಯೋಗಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಆದೇಶವನ್ನು ನೀಡಿದೆ. ರಾಜಕೀಯ ಪಕ್ಷಗಳು ಜನರಿಗೆ ನೀಡುವ ಆಶ್ವಾಸನೆಗಳಲ್ಲಿನ ತಮ್ಮ ನೀತಿ ನಿರೂಪಣೆಗಳು ಮತ್ತು ಕಲ್ಯಾಣ ಕ್ರಮಗಳನ್ನು  ನಿಯಂತ್ರಿಸುವುದು ಚುನಾವಣಾ ಆಯೋಗದ ಕೆಲಸವಲ್ಲ. ಇದು ಒಂದು ಪ್ರಜಾಪ್ರಭುತ್ವದಲ್ಲಿ ಕೇವಲ ರಾಜಕೀಯ ಪಕ್ಷಗಳ ವ್ಯಾಪ್ತಿಗೆ ಮಾತ್ರವೇ ಸೇರಿರುವ ಕ್ಷೇತ್ರ ಎಂದು ಪೊಲಿಟ್‍ಬ್ಯುರೊ ನೆನಪಿಸಿದೆ.

ಚುನಾವಣಾ ಆಯೋಗವು ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಆಯೋಗವು ರಾಜಕೀಯ ಪಕ್ಷಗಳ ನೀತಿ ನಿರ್ಧಾರಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಅದು ಅಧಿಕಾರಗಳ ಒಂದು ಅತಿಕ್ರಮಣವಾಗುತ್ತದೆ ಎಂದು ಹೇಳಿತ್ತು. ಇದೀಗ ಚುನಾವಣಾ ಆಯೋಗ ವ್ಯತಿರಿಕ್ತ ನಿಲುವು ತಳೆದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರ್ಯಾಂಗ ಹಾಕುತ್ತಿರುವ ಒತ್ತಡದಿಂದಾಗಿಯೇ ಎಂದು ಪೊಲಿಟ್‍ಬ್ಯುರೊ ಖಾರವಾಗಿ ಪ್ರಶ್ನಿಸಿದೆ.

ಜನಗಳ ಕಾಳಜಿಗಳನ್ನು ಕೈಗೆತ್ತಿಕೊಳ್ಳುವ, ಅವರ ಸಮಸ್ಯೆಗಳನ್ನು ನೀಗಿಸಲು ನೀತಿ ಕ್ರಮಗಳನ್ನು ಮುಂದಿಡುವ ರಾಜಕೀಯ ಪಕ್ಷಗಳ ಹಕ್ಕನ್ನು ಮಿತಿಗೊಳಿಸುವ ಅಥವಾ ನಿಯಂತ್ರಿಸುವ ಯಾವುದೇ ಪ್ರಯತ್ನವನ್ನು ತಮ್ಮ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *