ಕ್ಯಾಲಿಫೋರ್ನಿಯಾ: ಕಿಡ್ನಾಪ್ ಆಗಿದ್ದ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿ ಶವವಾಗಿ ಪತ್ತೆ!

ಕ್ಯಾಲಿಫೋರ್ನಿಯಾ:ಸೋಮವಾರ ಕಿಡ್ನಾಪ್ ಆಗಿದ್ದ ಎಂಟು ತಿಂಗಳ ಮಗು ಸೇರಿದಂತೆ  ಕುಟುಂಬದ ನಾಲ್ಕು ಮಂದಿ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಮೆರಿಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿಯನ್ನು ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಅಪಹರಿಸಲಾಗಿತ್ತು. 8 ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್  ಹಾಗೂ ಮಗುವಿನ ಚಿಕ್ಕಪ್ಪ, 39 ವರ್ಷದ ಅಮನದೀಪ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು.

ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಅವರು ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ. ಪೊಲೀಸರ ಪ್ರಕಾರ, ಅಧಿಕಾರಿಗಳನ್ನು ಸಂಪರ್ಕಿಸುವ ಮೊದಲು ತೋಟದ ಬಳಿಯ ರೈತ ಕಾರ್ಮಿಕರು ಶವಗಳನ್ನು ಪತ್ತೆ ಮಾಡಿದ್ದಾರೆ.

ಇದೊಂದು  ಭಯಾನಕ, ಆಘಾತಕಾರಿ ಹಾಗೂ ಪ್ರಜ್ಞಾಶೂನ್ಯ ಪ್ರಕರಣ ಎಂದು  ಮರ್ಸಿಡ್ ಕೌಂಟಿ ಶೆರಿಫ್ ವರ್ನ್ ವಾರ್ನ್ಕೆ  ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಹೇಳಿಕ ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ. ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಆತ ಈ  ಕುಟುಂಬವನ್ನು ಬಲವಂತವಾಗಿ ಟ್ರಕ್‌ಗೆ ಹತ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಂಟು ತಿಂಗಳ ಮಗು,  ಆಕೆಯ ಪೋಷಕರು ಹಾಗೂ ಚಿಕ್ಕಪ್ಪ ಅಮನ್‌ದೀಪ್ ಸಿಂಗ್ ಸೋಮವಾರದಿಂದ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಅವರನ್ನು ಹುಡುಕುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಗುರುವಾರ ರಾತ್ರಿ ಅವರ ಶವ ಪತ್ತೆಯಾಗಿದೆ.

2005 ರಲ್ಲಿ ಸಶಸ್ತ್ರ ದರೋಡೆ  ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆ. ಆದರೆ ಈ ಕೃತ್ಯದಲ್ಲಿ ಇನ್ನು ಹಲವರಿರುವ ಶಂಕೆ ಇದ್ದು, ಈತನೋರ್ವನೇ ಈ ಕೃತ್ಯವೆಸಗುವುದು ಅಸಾಧ್ಯ ಎಂದು ಮರ್ಸಿಡ್ ಕೌಂಟಿ  ಶೆರಿಫ್ ವೆರ್ನ್ ವಾರ್ನ್ಕೆ ಹೇಳಿದ್ದಾರೆ. ಪೊಲೀಸರ ಬಳಿ ಇರುವ ಪ್ರಮುಖ ಸಾಕ್ಷಿ ಎನಿಸಿದ ವಿಡಿಯೋದಲ್ಲಿ ಜಸ್ದೀಪ್ ಮತ್ತು ಅಮನದೀಪ್  ಒಂಬತ್ತು ನಿಮಿಷಗಳ ಅಂತರದಲ್ಲಿ ತಮ್ಮ ಕುಟುಂಬದ ಟ್ರಕ್‌ನಲ್ಲಿ ಆಗಮಿಸುತ್ತಿರುವ ದೃಶ್ಯವಿದೆ. ಈ ವೇಳೆ ಕಸದ ಚೀಲ ಹೊತ್ತೊಯ್ಯುವವನೋರ್ವ ಇವರಿಗೆ ಎದುರಾಗಿದ್ದಾನೆ. ಅದೇ ವ್ಯಕ್ತಿ ನಂತರ ಬಂದೂಕು ಹೊರತೆಗೆಯುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.

ನಂತರ ಜಸ್ದೀಪ್ ಮತ್ತು ಅಮನದೀಪ್ ಅವರ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿದ್ದಾರೆ. ಅಲ್ಲದೇ ಅವರನ್ನು ಬಲವಂತವಾಗಿ ಟ್ರಕ್‌ಗೆ ನುಗ್ಗಿಸಿದ್ದಾನೆ. ನಂತರ ಬಂದೂಕುಧಾರಿ ಅವರ ಹಿಂದೆ ಹೋಗಿದ್ದಾನೆ. ಸೋಮವಾರ ರಸ್ತೆಯೊಂದರಲ್ಲಿ ರೈತರೊಬ್ಬರು ಹೀಗೆ ಅಪಹರಣಕ್ಕೊಳಗಾದವರ ಸಂತ್ರಸ್ತರ ಎರಡು ಸೆಲ್ ಫೋನ್‌ಗಳನ್ನು ನೋಡಿದ್ದು, ಅದನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಜಸ್ದೀಪ್ ಹಾಗೂ ಅಮನ್ದೀಪ್ ಅವರ ಪೋಷಕರಾದ ಡಾ. ರಂಧೀರ್ ಸಿಂಗ್ ಹಾಗೂ ಕೃಪಾಲ್ ಕೌರ್  ಅವರು ಪಂಜಾಬ್‌ನ ಹೋಶಿಯರ್ಪುರದ ಹರ್ಸಿ ಪಿಂಡ್ ಗ್ರಾಮದವರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *