- ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಅಧಿಕಾರಿಯ ಹತ್ಯೆ
- ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಕೊಲೆ
- ಆರೋಪಿ ಮನೆ ಕೆಲಸದ ಸಹಾಯಕ ಯಾಸಿರ್ ಅಹ್ಮದ್ ಬಂಧನ
- ಯಾಸಿರ್ ಅಹ್ಮದ್ನ ಡೈರಿಯಲ್ಲಿ ವಿಚಿತ್ರ ಬರಹಗಳು ಪತ್ತೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮು ಕಾಶ್ಮೀರದ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕತ್ತು ಸೀಳಿ ಅವರ ಕೊಲೆಗೈಯ್ಯಲಾಗಿದ್ದು, ಮೃತದೇಹದ ಮೇಲೆ ಸುಟ್ಟ ಗಾಯಗಳು ಕೂಡ ಇವೆ.
ಜಮ್ಮು ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ನಿವಾಸದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 57 ವರ್ಷದ ಹೇಮಂತ್ ಲೋಹಿಯಾ ಕೊಲೆಯಾದವರು. ಇವರು 1992ರ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮನೆಯಾಳು ನಾಪತ್ತೆಯಾಗಿದ್ದಾನೆ. ಇದೇ ವೇಳೆ ಟಿಆರ್ಎಫ್ ಉಗ್ರ ಸಂಘಟನೆ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಪೊಲೀಸರ ಪ್ರಕಾರ ಲೋಹಿಯಾ ಅವರ ಶವ ಅವರ ಮನೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರ ತನಿಖೆಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಮನೆ ಕೆಲಸದಾತ ಯಾಸಿರ್ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಬಣ್ಣಿಸಿದ್ದಾರೆ. ನೌಕರನ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಯಾಸಿರ್ ತಲೆಮರೆಸಿಕೊಂಡಿದ್ದಾನೆ.
ಡೈರಿಯಲ್ಲಿ ಏನಿದೆ? : ಆರೋಪಿ ಯಾಸಿರ್ ಅಹ್ಮದ್ಗೆ ಸೇರಿದ ಖಾಸಗಿ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಆತ ಬರೆದಿದ್ದ ಬರಹವು ಆತ ಖಿನ್ನತೆಗೆ ಒಳಗಾಗಿದ್ದ ಎಂಬುದನ್ನು ಸೂಚಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ದಿನಚರಿಯಲ್ಲಿ ಹಿಂದಿ ಸಿನಿಮಾಗಳ ವಿಷಾದದ ಹಾಡುಗಳ ಸಾಲುಗಳು ಕೂಡ ಇವೆ. ಕೆಲವು ಪುಟಗಳಲ್ಲಿ ಹೃದಯಬಡಿತ, ಜೀವನ ಮತ್ತು ಸಾವಿನ ಕುರಿತಾದ ಟಿಪ್ಪಣಿಗಳನ್ನು ಬರೆದುಕೊಂಡಿದ್ದಾನೆ.
“ನಾನು ನನ್ನ ಬದುಕನ್ನು ದ್ವೇಷಿಸುತ್ತೇನೆ. ಜೀವನವು ಸಂಕಷ್ಟಗಳನ್ನು ಮಾತ್ರ ಉಂಟುಮಾಡುತ್ತದೆ. ಸಾವು ಮಾತ್ರವೇ ಶಾಂತಿ ಉಂಟುಮಾಡುತ್ತದೆ. ನಾನು ನನ್ನ ಜೀವನವನ್ನು ಮರು ಆರಂಭಿಸಲು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದಾನೆ.
ಮತ್ತೊಂದು ಪುಟದಲ್ಲಿ ಆತ, “ಪ್ರಿಯ ಸಾವು, ದಯವಿಟ್ಟು ನನ್ನ ಜೀವನಕ್ಕೆ ಬಾ. ನಾನು ಯಾವಾಗಲೂ ನಿನಗಾಗಿ ಕಾಯುತ್ತಿದ್ದೇನೆ” ಎಂದು ಬರೆದಿದ್ದಾನೆ. ನನ್ನ ಜೀವನ 1% ,ಖುಷಿ 10% ಪ್ರೀತಿ 0%, ಒತ್ತಡ 90%, ದುಃಖ 99% ಮತ್ತು ನಕಲಿ ನಗು 100% ಎಂದು ಬರೆದುಕೊಂಡಿರುವುದು ಆತನ ಆಂತರಿಕ ಬೇಗುದಿ ಮತ್ತು ಮಾನಸಿಕ ಗೊಂದಲವನ್ನು ಪ್ರತಿಫಲಿಸಿದೆ ಎಂದು ತಿಳಿದು ಬಂದಿದೆ.