ಚೆನ್ನೈ : ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಹಿರಿಯ ನಾಯಕ ಮತ್ತು ಪಕ್ಷದ ಕೇರಳ ಘಟಕದ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಅಕ್ಟೋಬರ್ 1 ರಂದು ಚೆನ್ನೈನಲ್ಲಿ ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು, ಕ್ಯಾನ್ಸರ್ನಿಂದ ಬಳಲುತ್ತಿದ್ದ ಕೊಡಿಯೇರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಮೂಲಗಳ ಪ್ರಕಾರ, ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ ಕಣ್ಣೂರಿಗೆ ಕೊಂಡೊಯ್ಯಲಾಗುವುದು, ತಲಶ್ಶೇರಿ ಟೌನ್ ಹಾಲ್ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನವರೆಗೂ ಅವರು ರಾಜ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಅವರ ಅನಾರೋಗ್ಯದಿಂದಾಗಿ ಕರ್ತವ್ಯಗಳನ್ನು ನಿರ್ವಹಿಸಲು ಕಷ್ಟಕರವಾದಾಗ ಅವರು ತಮ್ಮ ಸ್ಥಾನವನ್ನು ತ್ಯಜಿಸಿದರು. ಆಗಸ್ಟ್ ಅಂತ್ಯದಲ್ಲಿ, ಕೊಡಿಯೇರಿ ಅವರು ಸತತ ಮೂರು ವರ್ಷದ ಅವಧಿಗೆ ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಪಕ್ಷಕ್ಕೆ ಮನವಿ ಮಾಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆಪ್ಟೆಂಬರ್ 9 ರಂದು ಕೊಡಿಯೇರಿ ಅವರನ್ನು ಭೇಟಿ ಮಾಡಿದ್ದರು.
ಕೊಡಿಯೇರಿ ಬಾಲಕೃಷ್ಣನ್ ಅವರು 16 ನವೆಂಬರ್ 1953 ರಂದು ತಲಶ್ಶೇರಿಯ ಕೊಡಿಯೇರಿಯಲ್ಲಿ ಜನಿಸಿದರು. ಅವರು ಸಿಪಿಎಂ, ಕೇರಳ ಸ್ಟೂಡೆಂಟ್ಸ್ ಫೆಡರೇಶನ್ (ಕೆಎಸ್ಎಫ್) ನ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು ಮತ್ತು ನಂತರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್ಎಫ್ಐ) ರಾಜ್ಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಕೊಡಿಯೇರಿ ಅವರು 1980 ರಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟದ (ಡಿವೈಎಫ್ಐ) ಕಣ್ಣೂರು ಜಿಲ್ಲಾ ಅಧ್ಯಕ್ಷರಾಗಿ ಯುವಜನ ಹೋರಾಟಕ್ಕೆ ನೇತೃತ್ವ ನೀಡಿದ್ದರು. 1982 ರಿಂದ 1991 ರವರೆಗೆ ಮತ್ತು 2001 ರಿಂದ 2016 ರವರೆಗೆ ಕೇರಳ ವಿಧಾನಸಭೆಯಲ್ಲಿ ತಲಸ್ಸೆರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2001 ರಿಂದ 2006 ರವರೆಗೆ, ಹಾಗೂ 2011 ರಿಂದ 2016 ರವರೆಗೆ ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿದ್ದರು. 2006 ರಿಂದ 2011 ರವರೆಗೆ ಎಡ ಪ್ರಜಾಸತ್ತಾತ್ಮಕ ರಂಗದ ಸರಕಾರದ ಅವಧಿಯಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.