ರಾಷ್ಟ್ರಪತಿಗಳಿಂದ ಉದ್ಘಾಟನೆಗೆ ಸಜ್ಜಾಗಿದೆ ಧಾರವಾಡದ ಐಐಐಟಿ ನೂತನ ಕಟ್ಟಡ

ಧಾರವಾಡ: ರಾಷ್ಟ್ರಪತಿ ದ್ರೌಪದಿ ಮುರ್ಮು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳ ನಿಮಿತ್ತ ಅವರು, ಸೆಪ್ಟೆಂಬರ್ 26ರಂದು ಮೈಸೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಮೈಸೂರು ದಸರಾ 2022ಕ್ಕೆ ಅವರು ಚಾಲನೆ ನೀಡಲಿದ್ದಾರೆ. ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ)ಯ ನೂತನ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಧಾರವಾಡದ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಸತ್ತೂರು ಬಳಿ ಆಯೋಜಿಸಲಾಗಿದೆ. ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ)ಯ ಕುಲಸಚಿವ ಚನ್ನಪ್ಪ ಅಕ್ಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೋಶ ಜಗಲಾಸರ್ ಸೇರಿದಂತೆ ಅಧಿಕಾರಿಗಳು, ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಸೇರಿದಂತೆ ಸುಮಾರು 700 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.  ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ) ನಿರ್ಮಾಣಕ್ಕೆ ಜಾಗ ನೀಡಿದ ರೈತರು ಪಾಲ್ಗೊಳ್ಳಲಿದ್ದು, ಅವರಿಗೆ ಸನ್ಮಾನ ಮಾಡಲಾಗುತ್ತದೆ. ರಾಷ್ಟ್ರಪತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಧಾರವಾಡ ಐಐಐಟಿಯ ಮಹತ್ವ

ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಸಾರ್ವಜನಿಕ ಖಾಸಗಿ-ಕೈಗಾರಿಕಾ ಪಾಲುದಾರಿಕೆಯ ಮಾದರಿಯಲ್ಲಿ ಭಾರತ ಸರಕಾರ, ಕರ್ನಾಟಕ ಸರಕಾರ ಹಾಗೂ ಕೈಗಾರಿಕಾ ಸಂಸ್ಥೆಯಾದ ಕಿಯೋನಿಕ್ಸ್ ಇವುಗಳ ಸಹಭಾಗಿತ್ವದೊಂದಿಗೆ 2015ರಲ್ಲಿ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉನ್ನತ ಶಿಕ್ಷಣ, ವೃತ್ತಿಪರ ಪರಿಣತಿ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶಕ್ಕೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. 2017ರ ಸಂಸತ್ತಿನ 23ನೇ ಕಾಯ್ದೆಯಡಿಯಲ್ಲಿ ಈ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯೆಂದು ಘೋಷಿಸಲಾಗಿದೆ.

ಧಾರವಾಡ ಐಐಟಿಯಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ 834 ವಿದ್ಯಾರ್ಥಿಗಳಿದ್ದರು. ಈ ವರ್ಷದ ಪ್ರವೇಶಾತಿ ಕೊನೆಯಲ್ಲಿ 1000 ವಿದ್ಯಾರ್ಥಿಗಳನ್ನು ಹೊಂದುವ ನಿರೀಕ್ಷೆ ಇದೆ.

ವಿವಿಧ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ 36 ಅಧ್ಯಾಪಕರನ್ನು ಐಐಐಟಿ ಸಂಸ್ಥೆ ಹೊಂದಿದೆ. ಸಂಸ್ಥೆಯಲ್ಲಿ 29 ಭೋಧಕೇತರ ಸಿಬ್ಬಂದಿಗಳಿದ್ದಾರೆ. ಸಂಸ್ಥೆಯ ನಾಲ್ಕನೇ ಸರದಿಯಲ್ಲಿ ತೇರ್ಗಡೆಗೊಳ್ಳುತ್ತಿರುವವರ ಮಕ್ಕಳ ಕ್ಯುಮಿಲೇಟಿವ್ ಸರಾಸರಿ 7.0 ಇದೆ ಹಾಗೂ ಆಸಕ್ತಿಯಿರುವ ಮಕ್ಕಳಲ್ಲಿ ಶೇ.100 ರಷ್ಟು ಕೆಲಸ ಗಳಿಸಿದ್ದಾರೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ಬದಲಾವಣೆ ತರುವಂತಹ ಅಪರೂಪದ ಅವಕಾಶವನ್ನು ಈ ಸಂಸ್ಥೆ ಹೊಂದಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಈಗಾಗಲೇ ಉತ್ತರ ಕರ್ನಾಟಕದಲ್ಲಿ ತಾಂತ್ರಿಕ, ಕೃಷಿ, ವೈದ್ಯಕೀಯ, ಕಾನೂನು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯನ್ನು ಹೊಂದಿದ್ದು, ಶೈಕ್ಷಣಿಕ ನಗರಿ ಎಂದು ಪ್ರಸಿದ್ಧಿ ಪಡೆದಿದೆ. ಐಐಐಟಿ ಧಾರವಾಡ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿಯೂ ಬೆಳೆಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *