ಪಿಎಫ್‌ಐ ಮಾಡೆಲ್‌ ಹೋರಾಟ ಮತ್ತು ಫ್ಯಾಸಿಸ್ಟ್ ಆಡಳಿತದಲ್ಲಿ ಮುಸ್ಲಿಮ್ ಸಮುದಾಯ ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳು

ಮುಹಮ್ಮದ್ ನಜೀಬ್‌ ಬೆಂಗಳೂರು

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ರಾಷ್ಟ್ರೀಯ ಮಟ್ಟದಲ್ಲಿ 93 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಸಂಘಟಿಸಿ 106 ಮುಖಂಡರನ್ನು ಬಂಧನ ಮಾಡಿದೆ. ಸಂಘಟನೆಯ ಸ್ಥಾಪಕ ಸದಸ್ಯರು ಹಾಗೂ ಪ್ರಮುಖ ನಾಯಕರನ್ನೇ ಮೊದಲ ಹಂತದ ದಾಳಿಯಲ್ಲಿ ಎನ್‌ಐಎ ಗುರಿಪಡಿಸಿದೆ. ಸದ್ಯ ಎನ್‌ಐಎ ಕಾನೂನು ಬಾಹಿರ ಚಟುವಟಿಕೆ ಹಾಗೂ ಭಯೋತ್ಪಾದನೆ ಸಂಚು ಆರೋಪವನ್ನು ಈ ಸಂಘಟನೆಯ ಮೇಲೆ ಹೊರಿಸಿದೆ. ದಾಳಿಯ ಬೆನ್ನಲ್ಲೇ ಪಿಎಫ್‌ಐ ನಿಷೇಧದ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಇಂತಹದೊಂದು ನಿರ್ಧಾರವನ್ನು ಕೈಗೊಳ್ಳಬಹುದು ಅಥವಾ ಕೈಗೊಳ್ಳದಿರಬಹುದು. ಆದರೆ ಎನ್‌ಐಎ ನಡೆಸಿದ ದಾಳಿ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಬಹುದಾದ ಸಂಭಾವ್ಯ ನಿರ್ಧಾರಗಳ ಪರಿಣಾಮಗಳು ಒಟ್ಟು ಮುಸ್ಲಿಂ ಸಮುದಾಯದ ಮೇಲೆ ಆಗಲಿರುವ ಹಿನ್ನೆಲೆಯಲ್ಲಿ ಪಿಎಫ್‌ಐ ಮಾದರಿಯ ಹೋರಾಟ ಮತ್ತು ಫ್ಯಾಸಿಸ್ಟ್ ಆಡಳಿತದಲ್ಲಿ ಮುಸ್ಲಿಮ್ ಸಮುದಾಯದ ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಬೇಕಾದ ತುರ್ತು ಅಗತ್ಯವಿದೆ.

ಅದಕ್ಕಿಂತ ಮೊದಲು, ಪಿಎಫ್‌ಐ ಇಂದಿನ ಸ್ಥಿತಿಗೆ ಅವರ ಕೆಲವು ಸ್ವಯಂಕೃತ ಅಪರಾಧಗಳೇ ಬಹುಮುಖ್ಯ ಕಾರಣ ಎಂಬುವುದು ನಾವು ಹಾಗೂ ಅವರ ಆ ಸಂಘಟನೆಯ ನಾಯಕತ್ವ ಅರ್ಥೈಸಿಕೊಳ್ಳಬೇಕಾಗದ ಸಂಗತಿ. ಸಂಘಪರಿವಾರದ ದಬ್ಬಾಳಿಕೆ ದೌರ್ಜನ್ಯವನ್ನು ಎದುರಿಸಲು ಮುಸ್ಲಿಂ ಸಮಾಜವನ್ನು ಪ್ರತಿರೋಧದ ಹೆಸರಿನಲ್ಲಿ ಒಟ್ಟುಗೂಡಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಘಟನೆ ಪಿಎಫ್‌ಐ. ಆರಂಭಿಕ ಹಂತದಲ್ಲೇ ಪಿಎಫ್‌ಐ ತನ್ನ ಸಂಘಟನೆ ಹಾಗೂ ಕಾರ್ಯಕರ್ತರನ್ನು (ಕೇಡರ್‌) ಸಜ್ಜುಗೊಳಿಸಿದ್ದೇ ಮತೀಯ ಆಧಾರದಲ್ಲಿ. ಕೊಲೆಗೆ ಕೊಲೆ, ಏಟಿಗೆ ಇದಿರೇಟು ಧರ್ಮ, ಮನಿ, ಮಸಲ್‌ ಹಾಗೂ ಪೊಲಿಟಿಕಲ್ ಪವರ್ ಮೂಲಕ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂಘಪರಿವಾರವನ್ನು ಎದುರುಗೊಳ್ಳುವುದು ಪಿಎಫ್‌ಐ ಕಂಡುಕೊಂಡ ಮಾರ್ಗವಾಗಿದೆ. ಮುಸ್ಲಿಮರ ಮುಂದೆ ಇರುವುದು ಏಕೈಕ ದಾರಿ ಇದೊಂದೇ ಎಂಬುವುದು ಪಿಎಫ್‌ಐ ನಿಲುವು.

ಈ ಮಾರ್ಗ ಸಾಧನೆಗೆ ದೇಶದ ಹಲವು ಕಡೆಗಳಲ್ಲಿ ಪ್ರತಿರೋಧದ ಹೆಸರಿನಲ್ಲಿ ನಡೆಸಿದ ಹತ್ಯೆಗಳು ಒಂದು ಕಡೆಯಾದರೆ, ಪ್ರವಾದಿ ಪೈಗಂಬರರಿಗೆ  ಅವಮಾನ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಕೇರಳದಲ್ಲಿ ಅಧ್ಯಾಪಕರೊಬ್ಬರ ಕೈಕಡಿದು ಅದನ್ನು ಸಮರ್ಥನೆ ಮಾಡಿಕೊಂಡ ರೀತಿ ಪಿಎಫ್‌ಐ ಮತೀಯ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಇತ್ತೀಚೆಗೆ ಉಡುಪಿಯ ಒಂದು ಕಾಲೇಜಿನಲ್ಲಿ ನಡೆದ ಹಿಜಾಬ್‌ ವಿಚಾರವನ್ನು ಸ್ಥಳೀಯವಾಗಿ ಬಗೆಹರಿಸಲು ಇದ್ದ ಎಲ್ಲಾ ಸಾಧ್ಯತೆಗಳನ್ನು ಮೀರಿ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಿಭಾಯಿಸಿದ ವಿಧಾನ ಹಾಗೂ ಅದರಿಂದ ಮುಸ್ಲಿಂ ಸಮಾಜದ ಮೇಲಾದ ಪರಿಣಾಮಗಳು ಪಿಎಫ್‌ಐ ಮಾಡೆಲ್‌ ಒಂದು ಶೋಷಿತ ಸಮುದಾಯಕ್ಕೆ ಯಾವ ರೀತಿ ಹಾನಿ ಉಂಟು ಮಾಡಬಲ್ಲದು ಎಂಬುವುದಕ್ಕೆ ಮತ್ತೊಂದು ಉದಾಹರಣೆ.

ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಮಸೂದ್‌ ಕೊಲೆ ಪ್ರಕರಣದಲ್ಲಿ 80 ಶೇಕಡಾ ಬೀದಿ ಜಗಳ, ವ್ಯಕ್ತಿಗತ ದ್ವೇಷದ ಆಯಾಮದಲ್ಲಿ ನಡೆದಿದ್ದರೂ ಅದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಸಂಘದ ಪ್ರಮುಖ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ನಡೆಸುವ ಮೂಲಕ ರಾಜ್ಯದಲ್ಲಿ ಮಂಕುಕವಿದು ಕುಳಿತಿದ್ದ ಬಿಜೆಪಿಗೆ ಮುಸ್ಲಿಮರ ವಿರುದ್ಧ ದ್ವೇಷಕಾರಲು ಹಾಗೂ ರಾಜಕೀಯ ಲಾಭ ಪಡೆದುಕೊಳ್ಳಲು ಸಿಕ್ಕ ಅವಕಾಶ ಪಿಎಫ್‌ಐ ಅಪಾಯಕಾರಿ ನಡೆಗೆ ಮಗದೊಂದು ಉದಾಹರಣೆ. ಇದರ ಪರಿಣಾಮ ಫಾಝಿಲ್ ಎಂಬ ಅಮಾಯಕ ಜೀವವನ್ನು ಕಳೆದುಕೊಂಡರೂ ಆ ಸಾವಿಗೆ ನ್ಯಾಯ ಸಿಗದಂತಾಯಿತು.

ಇಂತಹ ಮತೀಯತೆಯಿಂದ ಕೂಡಿದ ಅಪಕ್ವ ನಡೆಗಳ ಜೊತೆಗೆ ಅತಿರೇಕದ ನಿಲುವು, ಹುತಾತ್ಮತೆ, ಸದಾ ಸಂಘರ್ಷದ ಹಾಗೂ ರಾಡಿಕಲ್‌ ಮಾದರಿಯ ಹೋರಾಟವನ್ನು ಮುಸ್ಲಿಮ್ ಯುವ ಸಮಾಜಕ್ಕೆ ಪರಿಚಯಿಸಿ ಅದೇ ಅಂತಿಮ ದಾರಿ ಎಂದು ಬಿಂಬಿಸುವ ಪ್ರಯತ್ನವನ್ನು ಪಿಎಫ್‌ಐ ನಡೆಸಿದೆ. ಇದನ್ನು ವಿಮರ್ಶೆ ಮಾಡಿದ ಸಮದಾಯದ ಜನರನ್ನೇ ಧರ್ಮ ವಿರೋಧಿಗಳಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)  ಏಜೆಂಟರೆಂದು ಐಟಿ ಸೆಲ್‌ಗಳ ಮೂಲಕ ದಾಳಿಗಳನ್ನು ನಡೆಸಿ ಬಾಯಿ ಮುಚ್ಚಿಸುವ ಪ್ರಯತ್ನವನ್ನು ನಡೆಸಿದೆ. ಇದರ ಮೂಲಕ ಮುಸ್ಲಿಂ ಸಮುದಾಯವನ್ನು ಸದಾ ಭಯ, ಆತಂಕದಲ್ಲಿ ಇಡುವ ಮೂಲಕ ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸುತ್ತಿರುವ ಫ್ಯಾಸಿಸ್ಟ್‌ ಶಕ್ತಿಗಳಿಗೆ ಮತ್ತಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗಿದೆ. ಜೊತೆಗೆ ತಮ್ಮ ರಾಜಕೀಯ ಶಕ್ತಿಯನ್ನು ಪಿಎಫ್‌ಐ ವೃದ್ದಿಸಿಕೊಳ್ಳುತ್ತಿದೆ.

ದೇಶದಲ್ಲಿ ಆರ್‌ಎಸ್‌ಎಸ್‌ ಭಜರಂಗದಳದಂತಹ ಮತೀಯ ಶಕ್ತಿಗಳು ನಡೆಸಿದ ಕೃತ್ಯಗಳಿಗೆ ಆಗದ ಕ್ರಮಗಳು ಪಿಎಫ್‌ಐ ವಿರುದ್ಧ ಏಕೆ ಎಂಬ ಸಹಜ ಪ್ರಶ್ನೆಗಳು ಉದ್ಭವವಾಗುತ್ತವೆ. ಖಂಡಿತಾ ಎನ್‌ಐಎ ದಾಳಿಯ ಹಿಂದಿರುವ ಸೂತ್ರದಾರಿಗಳು ಯಾರು ಎಂಬುವುದು ಹಾಗೂ ಅವರ ಉದ್ದೇಶ ಏನು ಎಂಬುವುದು ಬಹಿರಂಗ ಸತ್ಯ. ದೇಶದಲ್ಲಿ ಆಡಳಿತದ ಬಹುತೇಕ ಪೂರ್ಣ ಪ್ರಮಾಣದ ಚುಕ್ಕಾಣಿ ಹಿಡಿದಿರುವ ಸಂಘಪರಿವಾರ ಹಾಗೂ ಸರ್ವಾಧಿಕಾರದತ್ತ ತೆರಳುತ್ತಿರುವ ಆಡಳಿತ ತನ್ನ ವಿರುದ್ಧ ನಿಂತ ಯಾರನ್ನು ಸುಮ್ಮನೆ ಬಿಟ್ಟಿಲ್ಲ. ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುವ ಮೂಲಕ ನಡೆಸುತ್ತಿರುವ ದಾಳಿಗಳು ಹಾಗೂ ದೇಶದ ಸಂವಿಧಾನವನ್ನೇ ಬುಡಮೇಲು ಮಾಡುವಂತಹ ಪ್ರಯತ್ನಗಳು ಬಹಿರಂಗವಾಗಿಯೇ ನಡೆಯುತ್ತಿರುವ ಈ ಸಂದರ್ಭದಲ್ಲಿ ಫ್ಯಾಸಿಸ್ಟ್‌ ಸರ್ಕಾರದಿಂದ ತಾರತಮ್ಯವಿಲ್ಲದ ಸಮಾನ ನ್ಯಾಯದ ನಿರೀಕ್ಷೆ ಮಾಡುವುದೇ ದಡ್ಡತನವಾಗಿದೆ. ಈ ಕಾರಣಕ್ಕಾಗಿಯೇ ಮುಸ್ಲಿಮ್ ಸಮುದಾಯ ಎಚ್ಚರಿಕೆಯ ಹಾಗೂ ಬುದ್ಧಿವಂತಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ.

ಹಾಗಾದರೆ  ಪರಿಹಾರ ಏನು?

ಆರ್‌ಎಸ್‌ಎಸ್‌ ಹಾಗೂ ಪರಿವಾರಕ್ಕೆ ಕೇವಲ ಮುಸ್ಲಿಮರು ಶತ್ರುಗಳಲ್ಲ. ಈ ದೇಶದ ಬಹುತ್ವವೇ ಅದಕ್ಕೆ ಶತ್ರುವಾಗಿದೆ. ಬಹುತ್ವ ದೇಶವನ್ನು ನಾಶಪಡಿಸಿ ಹಿಂದುತ್ವದ ರಾಷ್ಟ್ರ ಕಟ್ಟುವುದು ಅದರ ಗುರಿಯಾಗಿದೆ. ಸದ್ಯಕ್ಕೆ ಬಲಿಪೀಠದಲ್ಲಿರುವವರು ಮುಸ್ಲಿಮರಷ್ಟೇ. ಸಂಘದ ಸಿದ್ಧಾಂತ ದೇಶದ ಪ್ರಗತಿಗೆ ಅಭಿವೃದ್ದಿಗೆ ಯಾವತ್ತೂ ಹಾನಿಕಾರಿ.

ಇಂದು ಮುಸ್ಲಿಂ ಮಹಿಳೆಯರ ಹಿಜಾಬ್‌ ನಿಷೇಧಿಸುವ ಸಂಘ ನಿರ್ದೇಶಿತ ಸರ್ಕಾರ ನಾಳೆ ಹಿಂದೂ ಯುವತಿಯರು ತೊಡುವ ಜೀನ್ಸ್ ಪ್ಯಾಂಟ್, ಟಿ-ಶರ್ಟ್‌ನ್ನು ಭಾರತೀಯ ಸಂಸ್ಕೃತಿ ಕಾಪಾಡುವ ಹೆಸರಿನಲ್ಲಿ ನಿಷೇಧ ಮಾಡಲೂಬಹುದು.

ಈ ನಿಟ್ಟಿನಲ್ಲಿ ಬಹುಸಂಖ್ಯಾತ ಬಲಪಂಥೀಯ ಸಂಘ ಸಿದ್ದಾಂತವನ್ನು ನಾವು ಎದುರಿಸುವ ಬಗೆ ಪಿಎಫ್‌ಐ ಮಾದರಿಯ ಮೂಲಕವಲ್ಲ. ಕೋಮುವಾದಕ್ಕೆ ಮತ್ತೊಂದು ಕೋಮುವಾದ ಪರಿಹಾರವಾಗಲಾರದು. ಅಲ್ಪಸಂಖ್ಯಾತ ಮತೀಯವಾದ ಬಹುಸಂಖ್ಯಾತ ಮತೀಯವಾದವನ್ನು ಮತ್ತಷ್ಟು ಬೆಳೆಸುತ್ತದೆ ಎಂಬುವುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಬದಲಾಗಿ ಹಿಂದುತ್ವ ಮತೀಯವಾದವನ್ನು ಎದುರಿಸಲು ಈ ದೇಶದ ಜಾತ್ಯತೀಯ ಶಕ್ತಿಗಳು, ಮಹಿಳೆಯರು, ಪ್ರಜಾಪ್ರಭುತ್ವದಲ್ಲಿ, ಸಾಮರಸ್ಯದಲ್ಲಿ, ಪ್ರಗತಿಯಲ್ಲಿ ಹಾಗೂ ಬಹುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲ ಜನ ಸಮೂಹ ಒಂದಾಗಬೇಕಾಗಿದೆ.

ರಾಜಕೀಯವಾಗಿ ಕಾಂಗ್ರೆಸ್‌ ಒಳಗೊಂಡು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಡ, ಪ್ರಾದೇಶಿಕ ಪಕ್ಷಗಳು  ಬಲಗೊಳ್ಳಬೇಕಿದೆ. ತಮ್ಮ ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ಗಟ್ಟಿಯಾಗಬೇಕಾದ ಜವಾಬ್ದಾರಿಯೂ ಈ ಪಕ್ಷಗಳಿಗಿವೆ. ಇದರ ಜೊತೆಗೆ ಮುಸ್ಲಿಮ್ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತಮ್ಮ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಅವರ ಸಾಮಾಜಿಕ ಶ್ರೇಯಾಭಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಇದರ ಜೊತೆಗೆ ಆಯಾ ಸಮಾಜದ ತಮ್ಮ ಸಮಾಜದ ಮತೀಯವಾದಿಗಳ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಇದು ಭಾರತದ ಉತ್ತಮ ಭವಿಷ್ಯಕ್ಕಾಗಿ ಅತೀ ಅಗತ್ಯವಾಗಿದೆ. ಧರ್ಮವನ್ನು ಮುಂದಿಟ್ಟುಕೊಂಡು ಹೋದ ಯಾವುದೇ ರಾಷ್ಟ್ರ ಮುಂದುವರಿದಿಲ್ಲ. ಬದಲಾಗಿ ಪತನದತ್ತ ಸಾಗಿದೆ. ಈ ನಿಟ್ಟಿನಲ್ಲಿ ಬಹುಸಂಖ್ಯಾತ ಪ್ರಗತಿಪರರು ಸಂಘದ ಅಪಾಯವನ್ನು ತಮ್ಮ ಸಮುದಾಯದ ಜನರಿಗೆ ಮತ್ತಷ್ಟು ಗಟ್ಟಿಯಾಗಿ ತಿಳಿಸಬೇಕಾದದ್ದು ಈ ಕಾಲದ ತುರ್ತು. ಸಂಘ ಸಿದ್ಧಾಂತ ಈ ದೇಶಕ್ಕೆ ಯಾವ ರೀತಿ ಅಪಾಯಕಾರಿ ಎಂಬುವುದರ ವಿವಿಧ ಸ್ವರೂಪಗಳನ್ನು ಜನರಿಗೆ ಮನಗಾಣಿಸಬೇಕು. ಪ್ರಗತಿಪರ ಸಂಘಟನೆಗಳು ತಳಮಟ್ಟದಲ್ಲಿ ಜನರನ್ನು ತಲುಪಿ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು. ಇವಷ್ಟೇ ಅಲ್ಲ, ಮುಸ್ಲಿಮ್ ಸಮುದಾಯದಲ್ಲೂ ಕೆಲವೊಂದು ಬದಲಾವಣೆಗಳು ಹಾಗೂ ಸುಧಾರಣೆಗಳು ನಡೆಯಬೇಕಾಗಿದೆ.

ಮುಸ್ಲಿಮ್ ಸಮಾಜದಲ್ಲಿರುವ ಪಿಡುಗುಗಳನ್ನು ತೊಡೆದು ಹಾಕಲು ಯಾವ ಪ್ರಮಾಣದಲ್ಲಿ ಸುಧಾರಣಾ ಚಳುವಳಿಗಳು ನಡೆಯಬೇಕಿತ್ತೂ ಆ ಪ್ರಮಾಣದಲ್ಲಿ ಆಗಿಲ್ಲ ಎಂಬುವುದು ಸ್ವತಃ ಡಾ. ಬಿ.ಆರ್‌ ಅಂಬೇಡ್ಕರ್ ಅವರ ನಿಲುವೂ ಆಗಿತ್ತು. ಸಮುದಾಯಕ್ಕೆ ಸೂಕ್ತವಾದ ಜಾತ್ಯತೀತ ಅಥವಾ ಲಿಬರಲ್ ಮತ್ತು ದೂರದೃಷ್ಟಿತ್ವ ಹೊಂದಿರುವ ನಾಯಕತ್ವವಿಲ್ಲ. ಸದ್ಯ ನಡೆಯುತ್ತಿರುವ ಘಟನಾವಳಿಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬ ನಿರ್ದೇಶನಗಳಿಲ್ಲ. ಭಯ, ಅಸಾಯಕತೆ, ನೋವು ಮುಸ್ಲಿಮ್ ಸಮುದಾಯವನ್ನು ಕಂಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯ ಸಜ್ಜುಗೊಳ್ಳಬೇಕಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕಾಗಿದೆ.

ಧರ್ಮ ಪಾಲನೆಯ ಜೊತೆಗೆ ಬಹುತ್ವದ ಕಲ್ಪನೆಯನ್ನು ಈ ನೆಲದ  ಸೂಫಿಗಳು ನಮಗೆ ತೋರಿಸಿಕೊಟ್ಟಿದ್ದಾರೆ. ಅತಿಧಾರ್ಮಿಕತೆ, ಮತೀಯತೆ, ಲಿಂಗ ತಾರತಮ್ಯ ಸಮುದಾಯವನ್ನು ಮತ್ತಷ್ಟು ಕತ್ತಲೆಯಲ್ಲಿ ಇಡುತ್ತದೆ. ಈ ನಿಟ್ಟಿನಲ್ಲಿ ಕೆಲವು ಸೀಮೋಲ್ಲಂಘನೆಯ ಅಗತ್ಯ ಖಂಡಿತಾ ಇದೆ. ಅತಿರೇಕದ ವರ್ತನೆಯನ್ನು ತೋರದೆ ಪ್ರಜ್ಞಾವಂತಿಕೆಯಿಂದ ಮುಂದುವರಿಯಬೇಕು. ಸಮುದಾಯದ ಒಳಗಿನ ಪ್ರಜ್ಞಾವಂತ ಧ್ವನಿಗಳಿಗೆ ಕೊಂಚ ಮಟ್ಟಿಗಾದರು ಕಿವಿಯಾಗಬೇಕು. ಘನತೆಯ ಬದುಕಿಗಾಗಿ ನಾವು ಎಲ್ಲಾ ಧಿಕ್ಕುಗಳಲ್ಲಿ ಎಲ್ಲರ ಜತೆಗೂಡಿ ಹೋರಾಡೋಣ. ಎಲ್ಲರ ಜೊತೆಗೂಡಿ ಬದುಕಿ ಬಾಳೋಣ.

Donate Janashakthi Media

Leave a Reply

Your email address will not be published. Required fields are marked *