ಚಿಕ್ಕಮಗಳೂರು: ಅಪಘಾತವೊಂದರಲ್ಲಿ ಸಾವಿಗೀಡಾದ ರಕ್ಷಿತಾ ಕುಟುಂಬದವರು ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಅವರ ಕುಟುಂಬದವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ್ದು, ರೂ. 8 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ 18 ವರ್ಷದ ಯುವತಿ ರಕ್ಷಿತಾ ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಐದು ದಿನಗಳ ಹಿಂದೆ ಸರ್ಕಾರಿ ಬಸ್ಸಿನಿಂದ ಇಳಿಯುವಾಗ ಆಯಾ ತಪ್ಪಿ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು.
ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಬದುಕುವುದು ಸಾಧ್ಯವಿಲ್ಲವೆಂದು ಖಚಿತಗೊಂಡಿದ್ದರಿಂದ ವಿದ್ಯಾರ್ಥಿನಿ ರಕ್ಷಿತಾಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಮಾದರಿಯಾದರು.
ರಕ್ಷಿತಾಳ ಅಂಗಾಂಗ ದಾನದ ಮೂಲಕ 9 ಜನರ ಜೀವ ಉಳಿದಿದೆ. ಹಾಗಾಗಿ, ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರ ಎನ್ನುವುದಕ್ಕಿಂತ ಗೌರವಯುತವಾಗಿ ಎಂಟು ಲಕ್ಷ ರೂ. ಹಣವನ್ನು ನೀಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ. ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ. ಹಣವನ್ನು ಸರ್ಕಾರ ಮಂಜೂರು ಮಾಡಿದೆ.