ಸಭಾಪತಿ ಆಯ್ಕೆ ಕಗ್ಗಂಟು: ಮೂಲ ಬಿಜೆಪಿಗರಲ್ಲಿ ಎದ್ದಿದೆ ಅಪಸ್ವರ -ತ್ರಿಶಂಕು ಸ್ಥಿತಿಯಲ್ಲಿ ಬಸವರಾಜ ಹೊರಟ್ಟಿ

ಬೆಂಗಳೂರು: ಬಹುಕಾಲ ಜನತಾ ದಳ (ಜಾತ್ಯತೀತ) ಪಕ್ಷದ ಪ್ರಭಾವಿ ನಾಯಕರಾಗಿದ್ದ,  ಅಧಿಕಾರದ ಹಂಬಲದಿಂದ ಕೆಲ ತಿಂಗಳುಗಳ ಹಿಂದೆ ಜೆಡಿಎಸ್‌ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ ಮಾಜಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧಿಕಾರದ ಸ್ಥಿತಿ ಇದೀಗ ಅಂತಕ್ಕೆ ಕಾರಣವಾಗಿದೆ.

ಅಧಿಕಾರದಲ್ಲಿ ಉಳಿಯುವುದೇ ತನ್ನ ಉದ್ದೇಶವೆಂದು ಪಕ್ಷಾಂತರ ಮಾಡಿದ ಬಸವರಾಜ ಹೊರಟ್ಟಿ ವಿಧಾನ ಪರಿಷತ್ತು ಸ್ಥಾನಕ್ಕೆ ಮರು ಆಯ್ಕೆಯಾದರು. ಮುಂದೆಯೂ ಬಿಜೆಪಿ ಪಕ್ಷ ತಮ್ಮನ್ನು ಸಭಾಪತಿಯಾಗಿ ಆಯ್ಕೆ ಮಾಡಲಿದೆ ಎಂದು, ತನ್ನ ಅಧಿಕಾರ ಸ್ಥಾನ ಭದ್ರವಾಗಿರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಸವರಾಜ ಹೊರಟ್ಟಿ ಅವರಿಗೆ ಇದೀಗ ತ್ರಿಶಂಕು ಸ್ಥಿತಿ ಎದುರಾಗಿದೆ.

ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಈಗಾಗಲೇ ಚುನಾವಣೆ ನಡೆದು ಹೊಸಬರು ಆಯ್ಕೆಯಾಗಬೇಕಾಗಿತ್ತು. ಆದರೆ, ಸಭಾಪತಿ ಆಯ್ಕೆ ಚುನಾವಣೆ ಮುಂದೂಡಿಕೆಯೂ ಆಗಿತ್ತು. ಇದೀಗ ಚುಣಾವಣೆ ಘೋಷಣೆಯಾಗುವುದು ನಿಶ್ಚಿತವಾಗಿದ್ದು, ಆಡಳಿತ ಪಕ್ಷ ಬಿಜೆಪಿ ಪಾಳೆಯದಲ್ಲಿ ವಲಸಿಗರಿಗೆ ಮಣೆ ಹಾಕಲು ಸಿದ್ದರಿಲ್ಲದೇ ಮೂಲ ಬಿಜೆಪಿಗರೇ ಸಭಾಪತಿಯಾಗಿ ಆಯ್ಕೆಯಾಗಬೇಕೆಂದು, ಬಸವರಾಜ ಹೊರಟ್ಟಿ ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮತ್ತು ಇತರ ಕೆಲ ನಾಯಕರು ಸಭಾಪತಿ ಅಭ್ಯರ್ಥಿಯನ್ನಾಗಿ ಬಸವರಾಜ ಹೊರಟ್ಟಿಯವರ ಪರವಾಗಿದ್ದಾರೆ. ಆದರೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹೊರಟ್ಟಿ ಆಯ್ಕೆಗೆ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್ತು ಸಭಾಪತಿ ಸ್ಥಾನಕ್ಕೆ ನಾಳೆ(ಸೆಪ್ಟಂಬರ್‌ 21) ಚುನಾವಣೆ ನಡೆಸಲು ತೀರ್ಮಾನವಾಗಿದ್ದರೂ, ಈ ಕ್ಷಣದವರೆಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿಲ್ಲ ಮತ್ತು ಚುನಾವಣೆ ನಡೆಸುವ ಬಗ್ಗೆ ರಾಜ್ಯಪಾಲರ ಕಚೇರಿಗೆ ವರದಿ ಸಲ್ಲಿಕೆಯಾಗಿಲ್ಲ. ಹೊರಟ್ಟಿಯವರ ಆಯ್ಕೆ ಬಗ್ಗೆ ಗೊಂದಲ ಮೂಡಿದ್ದರಿಂದ ಸಭಾಪತಿ ಚುನಾವಣೆಯನ್ನು ಮತ್ತೆ ಮುಂದೂಡುವ ಸಾಧ್ಯತೆಗಳಲ್ಲವೂ ಎದ್ದು ಕಾಣುತ್ತಿದೆ.

ಬಿಜೆಪಿ ಹೈಕಮಾಂಡ್‌ ಸಭಾಪತಿ ಆಯ್ಕೆ ವಿಚಾರವಾಗಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಬಸವರಾಜ ಹೊರಟ್ಟಿಯವರನ್ನು ಆಯ್ಕೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು ವ್ಯಕ್ತಪಡಿಸಿದ್ದಾರೆ.

ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಬಿಜಜೆಪಿಯಲ್ಲಿ ಕೆಲವು ಸಭಾಪತಿ ಸ್ಥಾನದ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿ ಬಿಜೆಪಿ ಹೈಕಮಾಂಡ್ ಮತ್ತು ಆರ್​ಎಸ್​ಎಸ್​ಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರ್​ಎಸ್​​ಎಸ್ ಮತ್ತು ಬಿಜೆಪಿ ಹೈಕಮಾಂಡ್ ಸದಸ್ಯರಲ್ಲಿ ಒಬ್ಬರಾದ ಬಿ.ಎಲ್ ಸಂತೋಷ್ ಅವರ ಮಧ್ಯಪ್ರವೆಶದಿಂದ ಸಭಾಪತಿ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ.

ಜೆಡಿಎಸ್‌ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಳ್ಳುವ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ವಿಧಾನ ಪರಿಷತ್ತು ಸದಸ್ಯರಾಗಿ ಮರು ಆಯ್ಕೆಗೊಂಡ ಪಕ್ಷದಲ್ಲಿ ಮತ್ತೆ ಸಭಾಪತಿಯಾಗಿ ಆಯ್ಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ನೀಡಿದ್ದರು. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ನೀಡಲು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ ಮೇಲ್ಮನೆ ಸಭಾಪತಿಯಾಗಿ ಮರು ಆಯ್ಕೆಯಾಗುವ ಭರವಸೆಯೊಂದಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಸವರಾಜ ಹೊರಟ್ಟಿಗೆ ನೀಡಿದ್ದ ಮಾತನ್ನು ತಪ್ಪುವ, ಬಿಜೆಪಿ ವಚನ ಭ್ರಷ್ಟ ಪಕ್ಷವೆನಿಸುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.

ಸಭಾಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದ ಮತ್ತು ಸಭಾಪತಿ ಚುನಾವಣೆ ಮುಂದೂಡುವ ಸಾಧ್ಯತೆ ಹಿನ್ನೆಲೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿದ್ದಾರೆ. ಹೈಕಮಾಂಡ್ ಜತೆ ಮಾತನಾಡಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಶ್ರಮಿಸುವುದಾಗಿ ಮುಖ್ಯಮಂತ್ರಿ ಅವರು ಹೊರಟ್ಟಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಲಸಿಗರಲ್ಲಿ ತೀವ್ರಗೊಂಡಿರುವ ಅಸಮಾಧಾನ

ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಪಕ್ಷಕ್ಕೆ ಸೇರಿಸಿಕೊಂಡ ಹಲವರಿಗೆ ಮಾತು ಕೊಟ್ಟಂತೆ ಸೂಕ್ತ ಸ್ಥಾನ ಮಾನ ಕಲ್ಪಿಸುವುದರಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ವಲಸಿಗರಲ್ಲಿ ಕೆಲವರಿಗಷ್ಟೆ ಪಕ್ಷ ಸೇರುವಾಗ ನೀಡಿದ ಆಶ್ವಾಸನೆಯನ್ನು ಈಡೇರಿಸಿಲ್ಲ ಎನ್ನುವ ಆಪಾದನೆಗಳಿವೆ. ಇತ್ತೀಚಿನ ಕೆಲ ದಿನಗಳಲ್ಲಿ ಬಿಜೆಪಿ ಪಕ್ಷ ಸೇರಿದ ವಲಸಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

Donate Janashakthi Media

Leave a Reply

Your email address will not be published. Required fields are marked *