ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಆರೋಪ ಹೊರಿಸಿ ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲಿಯೇ ಯುವ ಜೋಡಿ ಹಾರ ಬದಲಾಯಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿ ಎದುರಲ್ಲೇ ಜಾಫರ್ ಮತ್ತು ಚೈತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
14 ರಂದು ಮುಸ್ಲಿಂ ಹುಡುಗ ಜಾಫರ್- ಹಿಂದು ಹುಡುಗಿ ಚೈತ್ರಾ, ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದರು. ಈ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದುತ್ವ ಸಂಘಟನೆ ಕಾರ್ಯಕರ್ತರು ಮದುವೆಗೆ ತಡೆಯೊಡ್ಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ನಾವು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ನಾವು ಮದುವೆಯಾಗುತ್ತೇವೆ, ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು.? ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ ಚೈತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಎಳೆದಾಡಿ, ಕೆಟ್ಟ ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ..? ಎಸ್ಸಿ ಹುಡುಗಿ ಬೇಕಾ ಅಂತ ಪತಿಯನ್ನು ಥಳಿಸಿದ್ದಾರೆ. ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮ್ಮ ಮೇಲೆ ಹಲ್ಲೆ ನಡೆದಿದೆ. ಆ ದಿನ ಬಜರಂಗದಳದವರು ಏನಾದರೂ ಮಾಡುತ್ತಾರೆ ಅಂತಾ ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆರೋಪಿಗಳಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಲಿಸ್ ಇಲಾಖೆ ವಿರುದ್ಧ ಜಾಫರ್ ಮತ್ತು ಚೈತ್ರಾ ಅಸಮಾಧಾನ ಹೊರಹಾಕಿದ್ದಾರೆ.
ಈ ಪ್ರಕರಣದ ಬಗ್ಗೆ ಯುವತಿಯ ತಾಯಿ ಮಾತನಾಡಿದ್ದಾರೆ. ನನ್ನ ಮಗಳ ಜೀವವೇ ನನಗೆ ಮುಖ್ಯ. ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಮತ್ತು ನನ್ನ ಅಳಿಯನಿಗೆ ತೊಂದರೆ ಆಗಬಾರದು. ಅವರು ಮದುವೆಯಾಗಲಿ, ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದು ಪೊಲೀಸ್ ಠಾಣೆಯ ಬಳಿ ಯುವತಿಯ ತಾಯಿ ಶೋಭಾ ಅವರು ಹೇಳಿದ್ದಾರೆ
ಪ್ರಕರಣ ದಾಖಲು : ಲವ್ ಜಿಹಾದ್ ಆರೋಪ ಹೊರಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣದ ದೂರಿನನ್ವಯ ಹಿಂದುತ್ವ ಸಂಘಟನೆ ನಾಲ್ವರು ಕಾರ್ಯಕರ್ತರ ವಿರುದ್ದ ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಹೋದ ಸಂದರ್ಭ ನೈತಿಕ ಪೊಲೀಸ್ ಗಿರಿ ನಡೆದಿತ್ತು.