ಬೆಂಗಳೂರು: ಖಾಸಗಿ ಶಾಲೆಯ ಬಸ್ಸಿಗೆ ಸರ್ಕಾರಿ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ನೆನ್ನೆ (ಸೆಪ್ಟಂಬರ್ 14) ಬೆಳಿಗ್ಗೆ ಮುನ್ನೆಕೊಳಲು ಸರ್ಕಾರಿ ಶಾಲಾ ವಿದ್ಯಾರ್ಥಿ ನಿತೀಶ್(6) ಶಾಲೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ರಾಯನ್ ಇಂಟರ್ ನ್ಯಾಷನಲ್ ಶಾಲೆ ಬಸ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗಳನ್ನು ಅಲೆದಾಡಿ ಚಿಕಿತ್ಸೆ ಕೊಡಿಸಿದ್ದರೂ ವಿದ್ಯಾರ್ಥಿ ಬದುಕುಳಿಯಲಿಲ್ಲ.
ನಿತೀಶ್ ಕುಮಾರ್ ಶಾಲೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಖಾಸಗಿ ಶಾಲೆಯ ಬಸ್ಸು ಡಿಕ್ಕಿ ಹೊಡೆದಿದೆ. ಕೂಡಲೇ ಬಸ್ ಚಾಲಕ ವಿದ್ಯಾರ್ಥಿ ಬಳಿಗೆ ಬಂದು, ಕೆಳಗೆ ಬಿದ್ದ ಬಾಲಕನನ್ನು ಮೇಲೆತ್ತಿ ಏನು ಆಗಿಲ್ಲ ಅಂತ ನೀರು ಕುಡಿಸಿದ್ದಾನೆ. ಅಪಘಾತ ಸಂಭವಿಸಿದ ಬಳಿಕ ವಿದ್ಯಾರ್ಥಿ ಚೆನ್ನಾಗಿ ಮಾತನಾಡುತ್ತಿದ್ದ. ಬಳಿಕ ತನ್ನ ಶಾಲೆಗೆ ಹೋಗಿದ್ದಾನೆ. ತರಗತಿ ಕೊಠಡಿ ಪ್ರವೇಶಿಸಿದ ನಂತರ ಆತನ ತಲೆಯಲ್ಲಿ ಊತ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ. ಕೂಡಲೇ ಶಾಲಾ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೋಷಕರು ಬಾಲಕನ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಮೂರು ಆಸ್ಪತ್ರೆಗಳಲ್ಲೂ ಬಾಲಕನಿಗೆ ಚಿಕಿತ್ಸೆ ನೀಡದ ವೈದ್ಯರು. ಮತ್ತೊಂದು ಆಸ್ಪತ್ರೆಗೆ ತೆರಳುತ್ತಿದ್ದಾಗ ವಾಹನ ದಟ್ಟಣೆಯಿಂದಾಗಿ ಸಮಸ್ಯೆ ಎದುರಾಗಿತ್ತು. ಆದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ಮುನೇನಕೊಳಲು ಮೃತ ವಿದ್ಯಾರ್ಥಿ ನಿವಾಸದ ಬಳಿ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಮೃತ ವಿದ್ಯಾರ್ಥಿ ನಿತೀಶ್ ಕುಮಾರ್ ದೊಡ್ಡವನು ಇನ್ನೊಬ್ಬ ಮಗ ಅವರ ಗಂಡನ ಹತ್ತಿರ ಇರುವುದಾಗಿ ತಿಳಿದು ಬಂದಿದೆ.
ಅವನ ಮುಖವನ್ನು ಸತ್ತ ಮೇಲೆನೇ ನೋಡಿರೋದು. ದೊಡ್ಡ ಮಗ ಇವನೇ ಇವನು ಇನ್ನ ನಮ್ಮ ಮನೆಗೆ ವಾಪಸ್ ಬರ್ತಾನಾ ಅಂತಾ ಅಜ್ಜಿ ಪರಿಮಳಾ ಅವರು, ಚಿಕ್ಕ ವಯಸ್ಸು ಹೋಗೋ ವಯಸ್ಸಾ ಸರ್ ಅವನು. ಮೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಉಳಿಯಲಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಿ ಶಾಲೆಯ ಪ್ರಭಾರಿ ಪ್ರಿನ್ಸಿಪಾಲ್ ಸುಜಾತ ಪ್ರತಿಕ್ರಿಯಿಸಿ, ಶಾಲೆಯ ಒಳಗಡೆ ಬಂದು ಕುಸಿದು ಬಿದ್ದರು ಅಂತಾ ಅನ್ನೋದು ಸುಳ್ಳು. ಘಟನೆ ಆದ ಮೇಲೆ ಶಾಲಗೆ ಯಾರೋ ಕರೆದುಕೊಂಡು ಬಂದರು. ಕೂಡಲೇ ನಮ್ಮ ಟೀಚರ್ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೂರು ಆಸ್ಪತ್ರೆ ಸುತ್ತಾಡಿದರೂ ಉಳಿಯಲಿಲ್ಲ. ರಾಯನ್ ಶಾಲೆ ಬಸ್ ಅಂತಾ ಹೇಳ್ತಾ ಇದ್ದಾರೆ. ನಾವು ಅಲ್ಲಿಯ ಆಡಳಿತ ಮಂಡಳಿಗೆ ಕರೆ ಮಾಡಿ ಮಾತಾಡಿದ್ದೇವೆ ಎಂದು ತಿಳಿಸಿದರು.
ಹೆಚ್ಎಎಲ್ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ವಿಠಲ್ನನ್ನು ಬಂಧಿಸಿ, ಬಸ್ಸನ್ನು ಜಪ್ತಿ ಮಾಡಿದ್ದಾರೆ.