ವಿದ್ಯಾರ್ಥಿ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಎಸ್‌ಎಫ್‌ಐ ಆಗ್ರಹ

ಹಟ್ಟಿ: ಪಟ್ಟಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್ಐ) ಹಟ್ಟಿ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಜೇಂದ್ರ ಕುಮಾರ್ ಆಗಮಿಸಿ ಎಸ್ಎಫ್ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಎಲ್ಲಾ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಪರಿಹರಿಸುವ ಭರವಸೆ ನೀಡಿದರು.

ಎಸ್‌ಎಫ್ಐ ಜಿಲ್ಲಾ ಅಧ್ಯಕ್ಷ ರಮೇಶ್ ವೀರಾಪೂರ್ ಮಾತನಾಡಿ, ಸಮಾಜ ಕಲ್ಯಾಣ ನಡೆಸಲಾಗುತ್ತಿರುವ ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೇ ಹಂದಿಗಳ ಗೂಡಾಗಳಾಗಿವೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯವಾಗಿ ನಿಲಯದಲ್ಲಿ ದಿನಗಳೆಯುವಂತಾಗಿದೆ. ಹಟ್ಟಿ ಕಾಲೇಜು ವಿದ್ಯಾರ್ಥಿ ನಿಲಯದ ಪಾಲಕ ಶರಣಪ್ಪ ಮಾಸರಕಲ್ 2-3 ತಿಂಗಳಿಗೊಮ್ಮೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಸೌಲಭ್ಯ ಕೇಳಿದ  ವಿದ್ಯಾರ್ಥಿಗಳಿಗೆ  ದಮ್ಕಿ ಹಾಕುತ್ತಿದ್ದಾರೆ ಅಥವಾ ಸೌಲಭ್ಯ ಕೇಳುವ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ತಣ್ಣಗಾಗಿಸುವ ಪ್ರಯತ್ನ ಮಾಡಿ ಸೌಲಭ್ಯ ನೀಡದೇ ನುಣಿಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ.  ಆದ್ದರಿಂದ ಈ ಕೂಡಲೇ ಈ ಬೇಜವಾಬ್ದಾರಿ ನಿಲಯ ಪಾಲಕರನ್ನು ಕೆಲಸದಿಂದ ವಜಾ ಮಾಡಬೇಕು. ಸಮಯಕ್ಕೆ ಸರಿಯಾಗಿ ಬಂದು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವಂತಹ ಜವಾಬ್ದಾರಿ ಇರುವ ನಿಲಯ ಪಾಲಕರನ್ನು ನೇಮಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಲ್ಲದೆ, ವಿದ್ಯಾರ್ಥಿ ನಿಲಯದಲ್ಲಿ ಆಹಾರ ನೀಡಿಕೆ ಪಟ್ಟಿ ಹಾಕಿ ಗುಣಮಟ್ಟ ಕಾಪಾಡಬೇಕು. ನಿಲಯದ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳ ನಿಲಯಗಳಲ್ಲಿ ಕನಿಷ್ಠ 10 ಶೌಚಾಲಯ ಹಾಗೂ 10 ಸ್ನಾನ ಗೃಹ ಕೊಠಡಿಗಳನ್ನು ಕಟ್ಟಿಸಬೇಕು. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ನಿಲಯಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಕೂಡಲೇ ಅದನ್ನು ಸರಿಪಡಿಸಬೇಕು. ಪತ್ರಿಕೆ ಸೇರಿದಂತೆ ಪುಸ್ತಕ ಓದಲು ಅನುಕೂಲವಾಗುವಂತೆ ಟೇಬಲ್‌ಗಳ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳ ವಸತಿ ನಿಲಯಗಳಲ್ಲಿನ ಪ್ರತಿ ವಿದ್ಯಾರ್ಥಿಗೂ ಶುಚಿತ್ವಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಬೇಕು. ಗ್ರಂಥಾಲಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಶುಚಿತ್ವಕ್ಕೆ ಆದ್ಯತೆ ನೀಡುವುದರೊಂದಿಗೆ, ಆಟದ ಸಾಮಗ್ರಿಗಳು ಬಕೇಟು, ಚಂಬು, ಸೊಳ್ಳೆ ಬತ್ತಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿ ಇತ್ಯಾದಿ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಗಾದಿ ಹಾಗೂ ಹೊದಿಕೆಗಳನ್ನು ನೀಡಬೇಕು. ಪ್ರತಿ ವಿದ್ಯಾರ್ಥಿ ನಿಲಯಕ್ಕೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಬಂದ ಏಳು ಲಕ್ಷ ಅನುದಾನ ಏನಾಯಿತು. ಈ ಬಗ್ಗೆ ಸಂಬಂಧಿಸಿದ ದಾಖಲೆಗಳು ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಅಡುಗೆ ಮಾಡಲು ಸಿಲಿಂಡರ್, ಅಡುಗೆಗೆ ಬೇಕಾದ ಅಗತ್ಯ ಬೋಗಾಣಿ ಹಾಗೂ ಇತರೆ ಸಾಮಗ್ರಿಗಳನ್ನ ನೀಡಬೇಕು. ಅಡಿಗೆಯವರ ಬಾಕಿ ವೇತನ ಕೊಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್, ಹಟ್ಟಿ ಘಟಕದ ಅಧ್ಯಕ್ಷ ರಮೇಶ್ ಬಿ, ಕಾರ್ಯದರ್ಶಿ ಶಿವಪುತ್ರ, ಆ ಕಾರ್ಯದರ್ಶಿ ಮೌನೇಶ್ ಕಡ್ಡೋಣಿ, ಶಿವಪ್ಪ, ಅಶೋಕ್, ಪ್ರಹ್ಲಾದ್ ವೀರಗೊಟ್, ರಮೇಶ್ ವೀರಗೋಟ್, ವಾರ್ಡನ್ ಗಳಾದ ಮಲ್ಲಿಕಾರ್ಜುನ್, ಅಮರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *