ಬೆಂಗಳೂರು: ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಿಭಾಗ (ಮಲ್ಲೇಶ್ವರ) ಜಂಟಿ ಆಯುಕ್ತ ಕೆಎಎಸ್ ಅಧಿಕಾರಿ ಎಸ್.ಎಂ. ಶ್ರೀನಿವಾಸ್ ಮತ್ತು ಅವರ ಆಪ್ತ ಸಹಾಯಕ ಉಮೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಡಿವೈಎಸ್ಪಿಗಳಾದ ಮಂಜಯ್ಯ, ಶಂಕರ್ ನಾರಾಯಣ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ವ್ಯಕ್ತಿಯೊಬ್ಬರು ತಮ್ಮ ಆಸ್ತಿಯ ಖಾತೆ ಬದಲಾವಣೆ ಕೋರಿ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ₹4 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು. ಪ್ರಕರಣ ಸಂಬಂಧ ₹4 ಲಕ್ಷ ಲಂಚದ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಇಂದು(ಸೆಪ್ಟಂಬರ್ 12) ಮಧ್ಯಾಹ್ನ ಬಿಬಿಎಂಪಿ ಪಶ್ಚಿಮ ವಲಯದ ಕಚೇರಿಯಲ್ಲಿ ದೂರುದಾರರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದರು.
ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದುಗೊಳಿಸಿ ಭ್ರಷ್ಟಾಚಾರ ವಿರುದ್ಧ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಮರು ಸ್ಥಾಪನೆಗೊಂಡ ಬಳಿಕ ಕೈಗೊಂಡ ಮೊದಲ ಕಾರ್ಯಾಚರಣೆ ಇದಾಗಿದೆ.