ಕರ್ತವ್ಯದಲ್ಲಿ ಲೋಪವೆಸಗಿದ್ದಾರೆಂದು ಪೊಲೀಸ್ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಹಿರಿಯ ಅಧಿಕಾರಿ

ಪಾಟ್ನಾ: ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎಂದು ಆರೋಪಿಸಿ ಹಿರಿಯ ಪೊಲೀಸ್‌ ಅಧಿಕಾರಿ ಗೌರವ್ ಮಂಗ್ಲಾ ಐದು ಮಂದಿ ಠಾಣಾ ಸಿಬ್ಬಂದಿಗಳನ್ನು ಲಾಕಪ್‌ನಲ್ಲಿ ಹಾಕಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ.

ಈ ಘಟನೆಯು ಬಿಹಾರದ ನಾವಾಡ ಪಟ್ಟಣದಲ್ಲಿ ನಡೆದಿದ್ದು, ಪೊಲೀಸ್‌ ಅಧಿಕಾರಿಯ ಕಾರ್ಯವೈಖರಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಇದೊಂದು ವಿಷಾದಕರ ಬೆಳವಣಿಗೆ ಬಿಹಾರದ ಪೊಲೀಸ್ ಸಿಬ್ಬಂದಿಗಳ ಸಂಘ ಹೇಳಿಕೊಂಡಿದ್ದು ಅಲ್ಲದೆ ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಮನವಿ ಮಾಡಿದೆ.

ಪೊಲೀಸ್‌ ಠಾಣೆಯ ಸಬ್​-ಇನ್​ಸ್ಪೆಕ್ಟರ್​ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್​ರೇಖಾ ಸಿಂಗ್, ಎಎಸ್​ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಈ ಐವರು ಜೈಲಿನಲ್ಲಿರುವ ಸಿಬ್ಬಂದಿಗಳು.

ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಯು ಅವರನ್ನು  ಲಾಕಪ್​ಗೆ ದೂಡಿ, ಬೀಗ ಜಡಿದಿದ್ದಾರೆ. ಪೊಲೀಸರು ಲಾಕಪ್​ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ.

ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ‘ಬಿಹಾರ ಪೊಲೀಸ್ ಒಕ್ಕೂಟ’ ಈ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಎಸ್​ಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್​ಪಿ ಗೌರವ್ ಮಂಗ್ಲಾ ಕೆಲವು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಅದಕ್ಕಾಗಿ ಅವರನ್ನು ಜೈಲಿಗೆ ಹಾಕಿದ್ದೆ ಮಾಧ್ಯಮಗಳು ಅದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ ಠಾಣಾ ಇನ್​ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಎಸ್​ಪಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Donate Janashakthi Media

One thought on “ಕರ್ತವ್ಯದಲ್ಲಿ ಲೋಪವೆಸಗಿದ್ದಾರೆಂದು ಪೊಲೀಸ್ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಹಿರಿಯ ಅಧಿಕಾರಿ

Leave a Reply

Your email address will not be published. Required fields are marked *