ತಳ ಸಮುದಾಯಗಳ ಬೆಸುಗೆಯ ಜೋಕುಮಾರಸ್ವಾಮಿ ಆಚರಣೆ

ಗುರುರಾಜ ದೇಸಾಯಿ

ಭಾದ್ರಪದ ಮಾಸ, ಶುಕ್ಲಪಕ್ಷದ ಸಂದರ್ಭದಲ್ಲಿ ಗಣೇಶ ಚತುರ್ಥಿ ನಂತರ ಜೋಕುಮಾರನ ಆಚರಣೆ ಪ್ರಮುಖವಾದುದು. ಇದು ಉತ್ತರ ಕರ್ನಾಟಕದ ಭಾಗದಲ್ಲಿ ಪರಂಪರೆಯಿಂದ ಉಳಿಸಿಕೊಂಡು ಬಂದ ಜಾನಪದ ಹಬ್ಬ. ಜೋಕುಮಾರನ ಪೂಜೆಗೆ ಸಾಮಾನ್ಯವಾಗಿ ಜನರು ಮಾಡುವ ನುಚ್ಚು, ಮಜ್ಜಿಗೆ, ಬೆಣ್ಣೆ, ಗಂಜಿ ಪ್ರಿಯನಾಗಿದ್ದು, ಬಡವರ ವಿನಾಯಕ ಈ ಜೋಕುಮಾರ ಎಂದು ಇಂದಿಗೂ ಆಚರಣೆಯಲ್ಲಿದೆ. 

ಗಂಗಾಮತದ ಹೆಣ್ಣುಮಕ್ಕಳು ಬೇವಿನಸೊಪ್ಪಿನ ಬುಟ್ಟಿಯಲ್ಲಿ ಮಣ್ಣಿನ ಮೂರ್ತಿ ಇಟ್ಟುಕೊಂಡು ಮನೆಮನೆಗೆ ಹೋಗುತ್ತಾರೆ. ಮನೆಯಲ್ಲಿರುವ ತಗಣಿ, ಚಿಕ್ಕಾಡುಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡು ಹೋಗುತ್ತಾರೆ. ಜೋಕು­ಮಾರನ ಆಚರಣೆಯಲ್ಲಿ ಇದು ಪ್ರಮುಖ­ವಾದ ಸಂಪ್ರದಾಯವಾಗಿದೆ.

ಜೋಕುಮಾರ ಊರಿನ ಕುಂಬಾರರ ಮನೆಯಲ್ಲಿ ಮಣ್ಣಿನಲ್ಲಿ ನಿರ್ಮಾಣ­ವಾಗು­ತ್ತಾನೆ. ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ತಲೆಗೆ ಕಿರೀಟದಂತಿರುವ ತಲೆ­ಸುತ್ತು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ, ಕುಂಕು­ಮದ ಪಟ್ಟೆಗಳು, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿ, ಜನನೇಂದ್ರಿ­ಯವುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ತಳ­ವಾರರು ಅಥವಾ ಗಂಗೆಯ ಮಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ.

ಬುಟ್ಟಿಯಲ್ಲಿ ಸುತ್ತಲೂ ಇಟ್ಟ ಬೇವಿನ ಸೊಪ್ಪಿನ ನಡುವೆ ಅಗಲವಾದ ಬಾಯಿ ತೆರೆದುಕೊಂಡಿರುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಇಡುತ್ತಾರೆ. ಮಹಿಳೆಯರು ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳೆಲ್ಲ ತುಂಬಿ ಒಡ್ಡುಗಳೆಲ್ಲ ಒಡೆದಾವು’ ಎಂದು ಹಾಡುತ್ತ ಅಲಂಕೃತಗೊಂಡ ಜೋಕುಮಾರಸ್ವಾಮಿಯನ್ನ ಹೊತ್ತು ಅಂದಿನ ದಿನವೇ ಊರಿನ ಪ್ರಮುಖರ ಮನೆಗೆ ತೆರಳಿ ಮೊದಲ ಪೂಜೆ ಮಾಡುವರು. ಏಳು ದಿನಗಳು ಏಳು ಊರುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕೆಂಬುದು ಕಟ್ಟಳೆ. ಗಲ್ಲಿ ಗಲ್ಲಿಗೆ ತೆರಳಿದಾಗ. ಅಲ್ಲಿ ಬುಟ್ಟಿಯನ್ನಿಟ್ಟು ಎಲ್ಲರನ್ನು ಕರೆದು ಪೂಜೆ ಮಾಡಿ ಸುತ್ತಲೂ ಕುಳಿತು ಜೋಕುಮಾರನ ಹಾಡು ಹಾಡುತ್ತಾರೆ. ಅಲ್ಲಿನ ಭಕ್ತರು ಮೊರದಲ್ಲಿ ದವಸ, ಧಾನ್ಯ, ಹಣವನ್ನು ಕೊಡುತ್ತಾರೆ. ಕೊಟ್ಟ ದಾನಕ್ಕೆ ಪ್ರತಿಯಾಗಿ ಮಹಿಳೆಯರು ಕರಿಮಸಿ ಬೆರೆತ ಬೇವಿನ ಸೊಪ್ಪು, ಮತ್ತು ಜೋಳ, ನುಚ್ಚು, ಮೆಣಸಿನಕಾಯಿ ಮುಂತಾದವುಗಳನ್ನು ಪ್ರತಿಯಾಗಿ ಕೊಡುತ್ತಾರೆ. ಅವನ್ನು ಹೊಲದ ತುಂಬೆಲ್ಲಾ ಚಲ್ಲಿದರೆ ಉತ್ತಮ ಬೆಳೆ ಆಗುವುದು ಎಂಬ ನಂಬಿಕೆ ಇದೆ.

ಅಲ್ಪಾಯುಷಿಯಾದ ಜೋಕು­ಮಾರನನ್ನು ಅನಂತನ­ಹುಣ್ಣಿಮೆಯ ದಿನ ರಾತ್ರಿ ಊರಿನ ಹರಿಜನಕೇರಿಯಲ್ಲಿಟ್ಟು ಈತನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಹೆಣ್ಣುಮಕ್ಕಳ ಸೆರಗು ಮುಳ್ಳಿಗೆ ತಾಗು­ತ್ತದೆ. ಜೋಕು­ಮಾರನೇ ಸೀರೆ ಎಳೆದ­ನೆಂದು ಭಾವಿಸಿ ಗಂಡಸರು ಆತನನ್ನು ಒನಕೆಯಿಂದ ಬಡಿದು ಸಾಯಿಸುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ಸುಖಕಾಲ­ವೆಂದು, ಬೋರಲು ಬಿದ್ದರೆ ದುಖಃ ಕಾಲವೆಂದು ಗ್ರಾಮೀಣರು ನಂಬುತ್ತಾರೆ. ಸತ್ತ ನಂತರ ರುಂಡ-ಮುಂಡಗಳನ್ನು ಅಗ­ಸರು ಊರಿನ ಬದಿಯ ಹಳ್ಳಕ್ಕೆ ಒಯ್ದು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಹಾಕಿಬರುತ್ತಾರೆ. ಆಗ ಜೋಕು­ಮಾರನು ನರಳುತ್ತಾನೆ. ಇದ­ರಿಂದ ತಮಗೆ ಅಪಾಯವಾ­ಗುವುದು ಎಂದು ನಂಬು­ತ್ತಾರೆ. ಅಗಸರು ಮೂರು ದಿನಗಳ ಕಾಲ ಬಟ್ಟೆ ಒಗೆಯಲು ಹಳ್ಳಕ್ಕೆ ಹೋಗು­ವುದಿಲ್ಲ. ನಾಲ್ಕನೇ ದಿನ ಆತ­ನನ್ನು ಸಂತೈಸಲು ಕರ್ಮಾದಿ ಕಾಯಕ ಮಾಡು­ತ್ತಾರೆ ಎಂಬ ಕತೆ ಜನರಲ್ಲಿದೆ.

ಜೋಕು­ಮಾರನನ್ನು ಜನಪದರು ತಮ್ಮ ಹಾಡುಗಳಲ್ಲಿ ಹೀಗೆ ಹೇಳುತ್ತಾರೆ

‘ಅಡ್ಡಡ್ಡ ಮಳೆ ಬಡಿದು, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ…

ರೈತರ ದೇವತೆ ಎನ್ನುವಲ್ಲಿ ಹಾಡುವ ಹಾಡು ಹೀಗಿದೆ,

‘ಹಾಸ್ಯಾಸಿ ಮಳಿ ಬಡಿದು ಬೀಸಿ ಬೀಸಿ ಕೆರೆ ತುಂಬಿ, ಬಾಸಿಂಗದಂತ ತೆನೆಬಾಗಿ ಗೌಡರ ರಾಶಿಯ ಮ್ಯಾಲೆ, ಸಿರಿ ಬಂದು ಜೋಕಮಾರ….

“ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ್ ಗುಡ್ಡಗಳೆಲ್ಲ ಹಸಿರಾಗಿ ಜೋಕುಮಾರ, ಹಾಸ್ಯಾಸಿ ಮಳಿ ಬಡಿದು, ಬೀಸಿ ಬೀಸಿ ಕೆರೆತುಂಬಿ ಬಾಸಿಂಗದಂತ ತೆನೆಬಾಗಿ ಜೋಕುಮಾರ.

ಜೋಕುಮಾರನ ಸುತ್ತಲೂ ಅನೇಕ ಕಥೆಗಳಿವೆ. ಭೂಲೋಕಕ್ಕೆ ಈತನು ಬಂದು ಹೋದ ನಂತರ ಅದು ಸುಖದ ಕಾಲವೆಂದು ಜನಪದರು ನಂಬುತ್ತಾರೆ.

ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ…ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಸೋಗಸಾಗಿ ಹಾಡುವ ಹಾಡುಗಳನ್ನು ಕೇಳುವುದೇ ಚಂದ ಮನಕ್ಕೆ ಆನಂದ.

ಇಂದಿಗೂ ಹಳ್ಳಿಗಳಲ್ಲಿ ಮೆರೆಯು­ವವರನ್ನು ‘ದೊಡ್ಡ ಜೋಕಮಾರ ಆಗ್ಯಾನ’ ಎಂದು ಹೇಳುವದನ್ನು ನೋಡಿ­­ದರೆ ಇದು ಕಾಮುಕ, ಗರ್ವಿಷ್ಠ, ಸೊಕ್ಕಿನವನೆಂದು ಅರ್ಥ ನೀಡುತ್ತದೆ. ಜೋಕ ಎಂದರೆ ಡೌಲು, ಬೆಡಗು, ಮನ್ಮಥ, ಠೀವಿ ಉಳ್ಳವನೆಂಬ ಅರ್ಥ­ಗಳಿವೆ. ನೊಂದವರ, ಬಡವರ ಪ್ರತೀಕ­ವಾದ ಜೋಕುಮಾರನ ಬಗ್ಗೆ ಬಹಳಷ್ಟು ನಂಬಿಗೆ ಸಂಪ್ರದಾಯಗಳು ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿವೆ. ಪ್ರತಿವರ್ಷ ಜೋಕುಮಾರನನ್ನು ಹೊತ್ತು ತಂದು ಮನೆ ಮನೆಗಳಿಗೆ ತೆರಳಿ ಸೌಹಾರ್ದತೆಯಿಂದ ಆಚರಿಸಲಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *