ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಜೈಲುವಾಸ ಅನುಭವಿಸುತ್ತಿರುವ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಮಲಯಾಳಂ ಅಂತರ್ಜಾಲ ತಾಣದ ವರದಿಗಾರ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ದೆಹಲಿ ಘಟಕದ ಕಾರ್ಯದರ್ಶಿ ಸಿದ್ದಿಕ್ ಕಪ್ಪನ್ ಅವರು 2020ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ಸಂಭವಿಸಿದ ಭೀಕರ ಸಾಮೂಹಿಕ ಅತ್ಯಾಚಾರದ ಕುರಿತು ವರದಿ ಮಾಡಲು ತೆರಳುತ್ತಿದ್ದಾಗ ಇತರ ಮೂವರನ್ನು ಬಂಧಿಸಲಾಯಿತು.
ಯುಎಪಿಎ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಮೊಕದ್ದಮೆ ಹೂಡಿರುವ ಸಿದ್ದಿಕ್ ಕಪ್ಪನ್ ಅವರು ಆಗಸ್ಟ್ 2ರಂದು ಜಾಮೀನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರೊನ್ನಳಗೊಂಡ ನ್ಯಾಯ ಪೀಠವು ಜಾಮೀನು ಅರ್ಜಿಯ ವಿಚಾರಣೆಯ ವೇಳೆ ʻಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಮತ್ತು ಕಪ್ಪನ್ ಟೂಲ್ಕಿಟ್ ಎಂದು ಆರೋಪಿಸಿರುವ ಪ್ರಾಸಿಕ್ಯೂಷನ್ ವಿದೇಶಿ ಭಾಷೆಯಲ್ಲಿದೆ ಎಂದು ತೋರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಮುಕ್ತ ಅಭಿವ್ಯಕ್ತಿ ವ್ಯಕ್ತಪಡಿಸುವ ಎಲ್ಲಾ ಹಕ್ಕು ಇದೆ. ಸಂತ್ರಸ್ತರಿಗೆ ನ್ಯಾಯ ಬೇಕು ಎಂದು ತೋರಿಸಲು ಮತ್ತು ಸಾಮಾನ್ಯ ಧ್ವನಿ ಎತ್ತಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆಯೇ” ಎಂದು ಪ್ರಶ್ನಿಸಿತು.
“ಅವರನ್ನು ಬಂಧಿಸುವ ಸಂದರ್ಭದಲ್ಲಿ ಏನು ಪತ್ತೆಯಾಗಿದೆ? ಸಿದ್ದಿಕ್ ಕಪ್ಪನ್ ಮತ್ತು ಸಹಚರರ ಬಳಿ ಯಾವುದೇ ಸ್ಫೋಟಕ ವಸ್ತುಗಳು ಇರಲಿಲ್ಲ. ಅವರ ಬಳಿ ಮತ್ಯಾವ ವಸ್ತುಗಳು ಕಂಡುಬಂದಿಲ್ಲ. ಆದರೆ ಕಾರಿನಲ್ಲಿ ಪತ್ತೆಯಾಗಿದ್ದನ್ನು ಅವರು ಪ್ರಚಾರಕ್ಕೆ ಬಳಸಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಲಲಿತ್ ಹೇಳಿದರು.
ಪಾಸ್ಪೋರ್ಟ್ ಒಪ್ಪಿಸಬೇಕು, ಮುಂದಿನ ಆರು ವಾರ ದೆಹಲಿಯಲ್ಲಿಯೇ ಇರಬೇಕು ಮತ್ತು ದೆಹಲಿಯ ಪೊಲೀಸ್ ಠಾಣೆಗೆ ಹಾಜರಾಗಬೇಕು ನಂತರ ಕೇರಳದಲ್ಲಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಸಿದ್ದಿಕ್ ಕಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಹೇಳಿದ್ದಾರೆ.
ಸಿದ್ದಿಕ್ ಕಪ್ಪನ್ ಅವರ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಗಸ್ಟ್ 29 ರಂದು ಉತ್ತರ ಪ್ರದೇಶದ ಪ್ರತಿಕ್ರಿಯೆಯನ್ನು ಕೇಳಿತ್ತು. ಉತ್ತರ ಪ್ರದೇಶ ಸರ್ಕಾರ ಸಿದ್ದಿಕ್ ಕಪ್ಪನ್ ಉಗ್ರಗಾಮಿ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು, ಅದು ದೇಶ ವಿರೋಧಿ ಕಾರ್ಯಸೂಚಿಯನ್ನು ಹೊಂದಿದೆ ಮತ್ತು ಅವನ ಸಹ-ಆರೋಪಿಗಳೊಂದಿಗೆ (ಸಿಎಫ್ಐನ ಹಣಕಾಸು ಲಾಂಡರರ್ ಸೇರಿದಂತೆ ದೊಡ್ಡ ಪಿತೂರಿಯ ಭಾಗವಾಗಿದ್ದನು.) ಧಾರ್ಮಿಕ ಅಪಶ್ರುತಿಯನ್ನು ಹುಟ್ಟುಹಾಕಲು ಮತ್ತು ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಸಂಚು ರೂಪಿಸಿದ್ದಾರೆ ಎಂದು ವರದಿ ಸಲ್ಲಿಸಿತು.
ಸಿದ್ದಿಕ್ ಕಪ್ಪನ್ ಮತ್ತು ಇತರ ಸಹ-ಆರೋಪಿಗಳು ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ಹೋಗುತ್ತಿದ್ದಾಗ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಾಥಮಿಕ ಪ್ರಕರಣದ ಆಧಾರದ ಮೇಲೆ ಮಥುರಾ ನ್ಯಾಯಾಲಯವು ಜುಲೈ 2021 ರಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆರೋಪಿಗಳ ವಿರುದ್ಧ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸೆಕ್ಷನ್ 124 ಎ (ದೇಶದ್ರೋಹ), ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೆಕ್ಷನ್ 17 ಮತ್ತು 18 ರ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65, 72 ಮತ್ತು 75 ರ ಧಾರ್ಮಿಕ ಭಾವನೆಗಳ ಆಕ್ರೋಶ ದಾಖಲು ಮಾಡಲಾಗಿದೆ.
ಆರೋಪಿಗಳು ಆ ಪ್ರದೇಶದಲ್ಲಿ ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಹತ್ರಾಸ್ಗೆ ಪ್ರಯಾಣಿಸುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್ ಅವರ ವಾದ ಮಂಡಿಸಿದರು. ತಪ್ಪು ಮಾಹಿತಿಯಿಂದ ಕೂಡಿದ ವೆಬ್ಸೈಟ್ ನಡೆಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಅವರು ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮೇಲ್ವರ್ಗಕ್ಕೆ ಸೇರಿದ್ದ ನಾಲ್ವರು ಯುವಕರು 2020ರ ಸೆಪ್ಟೆಂಬರ್ 14ರಂದು 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ನವದೆಹಲಿಯ ಸಫ್ದಾರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಯುವತಿಯ ಅಂತ್ಯಕ್ರಿಯೆಯನ್ನು ರಾತ್ರೋರಾತ್ರಿ ನೆರವೇರಿಸಿದ್ದ ಉತ್ತರ ಪ್ರದೇಶ ಪೊಲೀಸರ ಕ್ರಮಕ್ಕೆ ದೇಶಾದ್ಯಂತ ಭಾರಿ ಟೀಕೆಗೆ ಒಳಗಾಗಿತ್ತು.