ಪವಿತ್ರ ಎಸ್
ಸಹಾಯಕ ಪ್ರಾಧ್ಯಾಪಕರು
ಸಾಮಾನ್ಯವಾಗಿ ಉನ್ನತ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿನಿಯರ ವಯಸ್ಸು 18 -22 ಇರುತ್ತದೆ. ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸಾಕಷ್ಟು ಆಗುವ ಹಂತದಲ್ಲಿ ಕಾಲೇಜಿಗೆ ಸೇರಿರುತ್ತಾರೆ. ಕಾಲೇಜಿನ ವಾತಾವರಣಕ್ಕೆ ಒಗ್ಗಿಕೊಳ್ಳುವ ಭರದಲ್ಲಿ ಸಾಕಷ್ಟು ಒತ್ತಡಗಳಿಗೆ, ಕೀಳರಿಮೆಗೆ ತುತ್ತಾಗುತ್ತಾರೆ. ಹಳ್ಳಿಯ ವಾತಾವರಣದಲ್ಲಿ ಬೆಳೆದಿರುವ ಮಕ್ಕಳು ನಗರ ಪ್ರದೇಶದ ಕಾಲೇಜಿಗೆ ಸೇರಿಕೊಂಡಾಗ ಸಾಮಾನ್ಯವಾಗಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಬಡ ಮಧ್ಯಮ ವರ್ಗದ ಮಕ್ಕಳ ಮಾನಸಿಕ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಕಾಲೇಜಿನ ವಾತಾವಾರಣಕ್ಕೆ, ಹೊಸ ಸ್ನೇಹಿತರ ಬಳಗಕ್ಕೆ ನಿಧಾನಾವಾಗಿ ತೆರೆದುಕೊಳ್ಳುವ ಮಕ್ಕಳು, ತಮ್ಮ ಬಗ್ಗೆ ತಾವೇ ಕೀಳಾಗಿ ನೋಡಿಕೊಳ್ಳಲು ಪ್ರಾರಂಭಿಸಿ ಬಿಡುತ್ತಾರೆ. ಇಲ್ಲಿಂದ ಇವರ ಆತ್ಮವಿಶ್ವಾಸ ಕುಗ್ಗುವುದಕ್ಕೆ ಪ್ರಾರಂಭವಾಗುವುದು. ಮುಂದೆ ಇದೆ ದೈತ್ಯಾಕಾರವಾಗಿ ನರ್ತಿಸಿ ಪರೀಕ್ಷೆಗಳಲ್ಲಿ ಸರಿಯಾದ ಅಂಕಗಳನ್ನು ಪಡೆಯುವಲ್ಲಿ ವಿಫಲಾರಾಗುವ ಹಂತಕ್ಕೆ ತಲುಪಿಸುತ್ತದೆ. ಹಾಕಿಕೊಳ್ಳುವ ಬಟ್ಟೆ, ಚಪ್ಪಲಿ, ಬ್ಯಾಗ್, ಕಪ್ಪು ವರ್ಣದ ಬಗ್ಗೆ ಕೀಳರಿಮೆ, ಇಂಗ್ಲೀಷ್ ಬರುವುದಿಲ್ಲ ಎಂಬ ಕೀಳರಿಮೆ, ಶ್ರೀಮಂತಿಕೆಯ ಹಂಬಲ, ತನ್ನ ದೇಹದ ಬಗ್ಗೆ ಕೀಳರಿಮೆ, ತನ್ನ ಮನೆಯ ವಾಸ್ತವದ ಸ್ಥಿತಿಯ ಬಗ್ಗೆ ಆಕ್ರೋಶ(ಬಡತನ, ಹಸಿವು, ಕೀಳರಿಮೆ, ಹೋಲಿಕೆ ಮಾಡಿಕೊಳ್ಳುವುದು) ಇವೆಲ್ಲಾ ಸಣ್ಣ ಸಣ್ಣ ಸಂಗತಿಗಳೇ ಆಗಿರಬಹುದು. ಆದರೆ ಬಹಳಷ್ಟು ವಿದ್ಯಾರ್ಥಿಗಳ ಜೀವನ ಹಾಳಾಗಲೂ ಮುಖ್ಯ ಸಂಗತಿಗಳು ಸಹ. ಇವುಗಳಿಂದ ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆ ಮಾಡುತ್ತಾ ಖಿನ್ನತೆಗೆ ಒಳಗಾಗುತ್ತಿರುವುದನ್ನು ಕಾಣಬಹುದಾಗಿದೆ.
ಎಷ್ಟೋ ವಿದ್ಯಾರ್ಥಿಗಳು ಒತ್ತಡದಲ್ಲಿ ಕಾಲೇಜಿಗೆ ಬಂದು ಪಾಠ ಕೇಳುವ ಸ್ಥಿತಿಯಲ್ಲಿರುತ್ತಾರೆ, ಕೆಲವು ವಿದ್ಯಾರ್ಥಿನಿಯರಂತೂ ಬೆಳಗ್ಗೆಯ ತಿಂಡಿಯನ್ನು ಮಾಡದೆ, ಮಧ್ಯಾಹ್ನದ ಊಟವನ್ನು ತರದೆ ಹಾಗೆ ಬಂದಿರುತ್ತಾರೆ, ಈ ಸ್ಥಿತಿಯಲ್ಲಿ ಅವರು ಪಾಠ ಕೇಳುವುದಾದರೂ ಹೇಗೆ? ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದಾದರೂ ಹೇಗೆ? ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಹಸಿವಿನಿಂದ ಸುಸ್ತಾಗಿ ಮಕ್ಕಳು ಮಲಗಿರುವುದನ್ನು ನೋಡಿದ ಉದಾಹರಣೆಗಳುಂಟು. ಮನೆಯಲ್ಲಿ ಬೆಳಿಗ್ಗೆ ಅಡುಗೆ ಮಾಡಲು ಸಾಧ್ಯವಾಗಲಿಲ್ಲವೆಂದರೆ ರಾತ್ರಿ ಉಳಿದ ಆಹಾರವನ್ನಾದರೂ ತಂದು ತಿನ್ನಿ ಎಂದರೆ ಅವರಿಗೆ ಮುಜುಗರ, ಎಲ್ಲಿ ನಮ್ಮನ್ನು ಸ್ನೇಹಿತರು ಹೀಯಾಳಿಸಿಬಿಡುತ್ತಾರೋ ಅಂತ. ಕೆಲವರಿಗೆ ಬುಧವಾರ ಬಂತೆಂದರೆ ಸಮವಸ್ತ್ರದಿಂದ ಬಿಡುಗಡೆಯಾದರೆ, ಇನ್ನೂ ಕೆಲವರಿಗೆ ಆ ದಿನದಷ್ಟು ಹಿಂಸೆ ಮತ್ತೊಂದು ಇಲ್ಲ. ಸರಿಯಾದ ಬಟ್ಟೆಗಳಿಲ್ಲ, ಹಾಕಿಕೊಂಡ ಬಟ್ಟೆಗಳನ್ನೆ ಹಾಕಿಕೊಂಡು ಬರುತ್ತಾನೆ/ಳೆ ಎಂದು ಹೀಯಾಳಿಸುತ್ತಾರೆಂಬ ಭಾವನೆ ಮಕ್ಕಳಲ್ಲಿ ಬೇರೂರಿದೆ.
ಕಾಲೇಜಿಗೆ ಇಷ್ಟೆಲ್ಲಾ ಸಮಸ್ಯೆಯಿಂದ ಬರುವ ವಿದ್ಯಾರ್ಥಿಗಳೂ, ತರಗತಿಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದೆ ನಿಂತುಕೊಂಡೋ, ನೆಲದ ಮೇಲೆ ಕುಳಿತೋ ಪಾಠ ಕೇಳುತ್ತಾರೆ, ಇನ್ನು ಕೆಲವರು ಇಷ್ಟೇ ಸಾಕು ಅಂತ ಹೊರಗಡೆ ಹೋಗೆಬಿಡುತ್ತಾರೆ, ಹೆಣ್ಣು ಮಕ್ಕಳಿಗಂತೂ ಕೆಲವೊಂದು ಬಹಿರಂಗವಾಗಿ ಹೇಳದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾರೆ. ಮನೆಯಲ್ಲಿ ಇವರ ಸಂಬಂಧಿಕರು ದೈಹಿಕವಾಗಿ ಬಳಸಿಕೊಂಡು ಪ್ರತಿದಿನ ಹಿಂಸೆಯನ್ನು ನೀಡುತ್ತಾರೆ, ಕೆಲವೊಮ್ಮೆ ಅಕ್ಕನ ಗಂಡನಿಂದಲೇ ಗರ್ಭಿಣಿಯಾಗಿರುತ್ತಾರೆ. ೧೫-೩೦ ದಿನಗಳ ಕಾಲ ಕಾಲೇಜಿಗೆ ಬರದೆ ಇದ್ದಾಗ ಕೇಳಿದರೆ ಆರಾಮ ಇರಲಿಲ್ಲ. ಆಸ್ಪತ್ರೆಗೆ ಸೇರಿಸಿದ್ರೂ ಅಂತ ಹೇಳುತ್ತಾರೆ. ಇದರಿಂದ ವಿದ್ಯಾರ್ಥಿನೀಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ ಎಂಬ ಅರಿವಾದರೂ ಅವರಿಗೆ ಬರಲು ಹೇಗೇ ಸಾಧ್ಯ? ಇಂತಹ ವಿಷಯಗಳಿಗಾಗಿ ಕೆಲವು ವಿದ್ಯಾರ್ಥಿನೀಯರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಕಾರಣ ಕೇಳಿದರೆ ಮದುವೆಗೆ ಹುಡುಕಿದ ಗಂಡು ಇಷ್ಟ ಇರಲಿಲ್ಲ, ಅವಳು ಇನ್ನೊಂದು ಹುಡುಗನನ್ನು ಇಷ್ಟಪಡುತ್ತಿದ್ದಳು ಎಂಬ ಸಿದ್ದ ಮತ್ತು ಚಾರಿತ್ಯಹರಣದ ಉತ್ತರಗಳು ಸಿಗುತ್ತದೆ.
ಈಗ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯು ವಿದ್ಯಾರ್ಥಿಗಳಲ್ಲಿ ಹಲವಾರು ಗೊಂದಲಗನ್ನು ಹುಟ್ಟುಹಾಕಿದೆ. ಮೂರು ವರ್ಷದಲ್ಲಿ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿ ಈಗ ಇನ್ನೂ ಒಂದು ವರ್ಷ ಹೆಚ್ಚಿಗೆ ಒದಬೇಕು. ನೂತನ ಶಿಕ್ಷಣವು ಮುಂದೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಉದ್ಯೋಗವಕಾಶಗಳನ್ನು ಒದಗಿಸಬಲ್ಲದು? ವಿದ್ಯಾರ್ಥಿಗೆ ಹೇಗೆ ಉಪಯೋಗವಾಗುತ್ತದೆ ಎಂಬುದಕ್ಕೆ ಉತ್ತರ ವಿದ್ಯಾರ್ಥಿಗಳಲ್ಲಿ ಮಾತ್ರವೇ ಅಲ್ಲ, ಶಿಕ್ಷಕರಲ್ಲೂ ಇಲ್ಲ, ಅಷ್ಟೇ ಏಕೆ ಸರ್ಕಾರದ ಬಳಿಯೂ ಇಲ್ಲ. ಅಷ್ಟೇ ಅಲ್ಲದೆ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕಗಳು ಹೆಚ್ಚಳಗೊಂಡಿದೆ. ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಬರುತ್ತದೆ, ಇದರಲ್ಲಿ ಶಿಕ್ಷಣದ ಬಹುಪಾಲು ಖರ್ಚು ಕಡಿಮೆ ಆಗುತ್ತದೆ ಎಂದು ತಿಳಿದಿದ್ದರು. ಆದರೆ, ವಿದ್ಯಾರ್ಥಿ ವೇತನ ಅವಶ್ಯಕತೆ ಇರುವವರಿಗೆ ಮುಂದೆ ಸಿಗುವುದಿಲ್ಲ. ಇದರಿಂದಲೂ ಸಹ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವುದನ್ನು ಗಮನಿಸಬಹುದು.
ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಅರೆ ಉದ್ಯೋಗ ಮಾಡಿಕೊಂಡು ಕಾಲೇಜಿಗೆ ಬರುವುದಿದೆ, ಹೊಲದ ಕೆಲಸದ ಮೇಲೆ, ಸರ್ಕಾರಿ ಕಛೇರಿಗಳ ಕೆಲಸದ ಮೇಲೆ ಕಾಲೇಜಿಗೆ ಬಂದು ಮಧ್ಯಾಹ್ನದ ವರೆಗೂ ತರಗತಿ ಕೇಳಿ, ತಕ್ಷಣವೇ ಕೆಲಸಗಳ ಕಡೆಗೆ ಗಮನಕೊಡಬೇಕು, ಮುಂಜಾನೆ ತರಗತಿಗೆ ಬರಲು ಬಸ್ ಬರುವುದು ತಡವಾದರೆ ಪಾಠ ಕೇಳಲು ಆಗುವುದಿಲ್ಲ, ಶೌಚಾಲಯಕ್ಕೆ ಹೋದರೆ ವಿದ್ಯಾರ್ಥಿನೀಯರ ದಂಡೆ ಸಾಲಾಗಿ ನಿಂತಿರುತ್ತದೆ. ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ನೀರು ಕುಡಿಯದೇ ಕಿಡ್ನಿ ಸ್ಟೋನ್, ಮೂಲವ್ಯಾಧಿಯಂತಹ ಬೇರೆ ಬೇರೆ ಕಾಯಿಲೆಗೆ ತುತ್ತಾಗುತ್ತಾರೆ. ಇಂತಹ ಸಣ್ಣ ಪುಟ್ಟ ಕಾಯಿಗಳು ಬಂದರೂ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಕಾಲೇಜಿನಿಂದಲೇ ಬಿಡಿಸಿ ಮನೆಯಲ್ಲಿ ಕೆಲಸ ಮಾಡಿಕೊಂಡಿರಲು ಹೇಳುತ್ತಾರೆ. ಆದರಿಂದ ಪರಿಪೂರ್ಣ ಕಲಿಕೆ ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿಗಳು ಎಂದಾಕ್ಷಣ ನೆನಪಿಗೆ ಬರುವುದು ಖಾಸಗಿ ಕಾಲೇಜುಗಳಲ್ಲಿ ಓದುವ ಮಕ್ಕಳ ರೋಮ್ಯಾಂಟಿಕ್ ಆದ ಕಲ್ಪನೆ. ಮಾಲ್ ಗಳಲ್ಲಿ ಸುತ್ತಾಡುವ, ಪಬ್-ಕೆಫೆಗಳಲ್ಲಿ ಕುಡಿಯುವ ತಿನ್ನುವ, ಬ್ರಾಂಡೆಡ್ ಬಟ್ಟೆ ಹಾಕುವ, ಬೈಕ್-ಕಾರುಗಳಲ್ಲಿ ಸುತ್ತಾಡುವ ಕಾಲೇಜಿಗೆ ಹೋಗುವ, ವಾರಾಂತ್ಯದಲ್ಲಿ ಪ್ರವಾಸ, ಪಾರ್ಟಿಗಳನ್ನು ಮಾಡುವ ವಿದ್ಯಾರ್ಥಿಗಳು ಮಾತ್ರವಲ್ಲ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುವ ಮಕ್ಕಳ ಬಗ್ಗೆಯೂ ವಾಸ್ತವದ ಸಂಗತಿಗಳು ನಮಗೆ ಕಿಂಚಿತ್ತಾದರೂ ತಿಳಿದಿರಬೇಕು. ನಮ್ಮ ದುಡ್ಡಿನಲ್ಲಿ ಎಲ್ಲಾ ಫ್ರೀಯಾಗಿ ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ, ಅಂತ ಹೇಳುವ ನಾಲಗೆಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆಯಿಲ್ಲ, ಹೆಣ್ಣು ಮಕ್ಕಳಿಗಾಗಿ ವಿತರಿಸುತ್ತಿದ್ದ ಶುಚಿ ಪ್ಯಾಡ್ ಅನ್ನು ವಿತರಿಸುವುದು ನಿಂತು ಹೋಗಿದೆ, ಯಾಕೆ ಸರ್ಕಾರಿ ಕಾಲೇಜುಗಳಲ್ಲಿ ಡಿಜಿಟಲ್ ಬೊಧನೆ ಆಗುತ್ತಿಲ್ಲ. ಗ್ರಂಥಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ, ಮಕ್ಕಳು ಪಠ್ಯಪುಸ್ತಕಗಳನ್ನು ಯಾಕೆ ಕೊಂಡುಕೊಳ್ಳುತ್ತಿಲ್ಲ. ಡೆಸ್ಕ್ ಗಳು ಯಾಕೆ ಕಡಿಮೆ ಇವೆ ಎಂಬುದರ ಬಗ್ಗೆಯೂ ಮಾತನಾಡಬೇಕು.
ಕೋವಿಡ್ ಬಂದ ನಂತರದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಯಲ್ಲಿ ಮತ್ತಷ್ಟು ಬದಲಾಗಿದೆ. ಬಡತನ ಹೆಚ್ಚಾಗಿದೆ, ಓದಲು ಬರುವ ವಿದ್ಯಾರ್ಥಿಗಳ ಬಳಿ ಸಾಕಷ್ಟು ಅಂಕಗಳಿವೆ, ಆದರೆ ಸರಿಯಾಗಿ ಒಂದು ಪುಟವು ಓದಲು ಬರುವುದಿಲ್ಲ. ತರಗತಿಯಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆ ಆಗಿದೆ. ಸರಿಯಾಗಿ ಒಂದು ತಾಸು ಕುಳಿತು ಪಾಠ ಕೇಳುವ ಮನಸ್ಥಿತಿ ಇಲ್ಲ. ತರಗತಿಯಲ್ಲಿಯೂ ಮೊಬೈಲ್ ಬಳಕೆಯಿಂದ ಅವರ ಏಕಾಗ್ರತೆ ಕುಂಠಿತವಾಗಿದೆ.
ಮೇಲೆ ಹೇಳಿರುವ ವಿಷಯಗಳು ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಮಾನಸಿಕ ಸಮಸ್ಯೆ, ಮತ್ತೆ ಕೆಲವು ಭೌತಿಕ ಸಮಸ್ಯೆಗಳು ಆಗಿರುವುದರಿಂದ ಇದನ್ನು ಸುಲಭವಾಗಿ ಪರಿಹಾರ ಮಾಡುವುದು ಕಷ್ಟಸಾಧ್ಯ. ಮತ್ತು ಕೆಲವೊಂದು ಕಾಲೇಜಿನಲ್ಲಿ ಇಂತಹ ಸಮಸ್ಯೆಗಳಿಗೆ ಪರಿಹಾರ ಹೇಳಲೂ, ಅವರಿಗೆ ಕೌನ್ಸೆಲಿಂಗ್ ಮಾಡಲು ಅವಕಾಶವೂ ಇಲ್ಲ. ಸಮಯದ ಒತ್ತಡ, ಸಿಲೆಬಸ್ ಮುಗಿಸಲೇಬೇಕೆಂಬ ಧಾವಂತ, ಆಂತರಿಕ ಅಂಕಗಳ ಕಿರಿಕಿರಿಯಿಂದ ಪ್ರಾಧ್ಯಾಪಕರುಗಳು ಮಕ್ಕಳ ಇಂತಹ ಸಮಸ್ಯೆಗಳಿಗೆ ಪರಿಹಾರಕೊಡುವುದಿರಲಿ, ಆಲಿಸುವುದೂ ಇಲ್ಲ.