ಪ್ರೋ.ಬಸವರಾಜ ಡೋಣುರ ಅಕ್ರಮ ನೇಮಕಾತಿ ವಿರುದ್ಧ ಕೇಂದ್ರೀಯ ವಿವಿ ಮುಂಭಾಗ ಪ್ರತಿಭಟನೆ

ಕಲಬುರಗಿ: ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೋ. ಬಸವರಾಜ ಡೋಣುರ, ಇಂಗ್ಲೀಷ್ ಸಹ ಪ್ರಾಧ್ಯಾಪಕರು, ಇವರ ನೇಮಕಾತಿ ಅಕ್ರಮವಾಗಿದ್ದು ಕೂಡಲೇ ಕೆಲಸದಿಂದ ವಜಾಗೊಳಿಸಿ, ಇವರು ನಡೆಸಿರುವ ಭ್ರಷ್ಟಚಾರ ಬಗ್ಗೆ ತನಿಖೆ ನಡೆಸಿ, ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಆಗಿರುವ ನಷ್ಟ ಭರಿಸಿಕೊಳ್ಳುವ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಒದಗಿಸಬೇಕೆಂದು ಪ್ರತಿಭಟನೆ ನಡೆದಿದೆ.

ಕೇಂದ್ರೀಯ ವಿವಿ ಮುಂಭಾಗ ನಡೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ ಮೇಲ್ಮನಿ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಸಹಪ್ರಾಧ್ಯಾಪಕ ಪ್ರೋ. ಬಸವರಾಜ ಡೋಣುರ ಅವರ ನೇಮಕಾತಿ ಯು.ಜಿ.ಸಿ. ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದೇ ಅಕ್ರಮವಾಗಿ ನೇಮಕವಾಗಿದೆ. ಮಾಹಿತಿ ಹಕ್ಕು ಕಾಯ್ದೆ 2005ರಡಿಯಲ್ಲಿ ಸಂಗ್ರಹಿಸಲಾದ ಮಾಹಿತಿಯಂತೆ ಪಿ.ಎಚ್‌.ಡಿ .ಹೊಂದಿಲ್ಲದಿದ್ದರೂ ಸಹ ಪ್ರಾಧ್ಯಾಪಕರನ್ನಾಗಿ ನೇಮಿಸಲಾಗಿದೆ. ಇಂಗ್ಲೀಷ್ ಸಹ ಪ್ರಾದ್ಯಾಪಕರ ಹುದ್ದೆಗೆ ಪ್ರೋ. ಬಸವರಾಜ ಡೋಣುರ ನೇಮಕಗೊಂಡಗೊಂಡಿದ್ದು ಅಕ್ರಮವಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಭ್ರಷ್ಟಾಚಾರ ನಡೆಸಿ ವಿಶ್ವವಿದ್ಯಾಲಯದ ಹಣವನ್ನು ಲೂಟಿಹೊಡೆಯಲು ಪ್ರಭಾರಿ ಕುಲಸಚಿವರಾಗಿ ನೇಮಕಗೊಂಡು ದೊಡ್ಡ ಮಟ್ಟದ ಅಕ್ರಮ ನಡೆಸುತ್ತಿದ್ದಾರೆ. ಅಲ್ಲದೆ, ಕುಲಸಚಿವರ ಸರ್ಕಾರಿ ಕಾರನ್ನು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಹಣ ವ್ಯರ್ಥ ವ್ಯಯವಾಗುತ್ತಿದೆ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಯನ್ನು ಮನೆ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಅಶ್ವಿನಿ ಮದನಕರ ಮಾತನಾಡಿ, ಬಸವರಾಜ ಡೋಣುರ ಅಧಿಕಾರ ವಹಿಸಿದ ನಂತರ ಜೆರುಶಾ ಸಂಜನಾಳ ಎಂಬ ವಿದ್ಯಾರ್ಥಿನಿಯನ್ನು ಬಿ.ಎ. ಪದವಿಯಲ್ಲಿ ವಿವಾದಾತ್ಮಕ ಅಂಶಗಳು ಕಂಡುಬಂದಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಪದವಿ ಪ್ರಮಾಣ ಪತ್ರವನ್ನು ನೀಡಲಾಗಿದೆ.  ಪದವಿಯಲ್ಲಿ ಉತ್ತೀರ್ಣರಾಗದೇ ಇಂಗ್ಲೀಷ್‌ ವಿಭಾಗದಲ್ಲಿ ಸ್ನಾತಕೋತರ ಪದವಿ ಪ್ರವೇಶ ನೀಡಲಾಗಿದೆ. ಹೀಗಾಗಿ ಅನೇಕ ಲೋಪದೋಷಗಳು ಕಂಡುಬಂದರೂ ಸಹ ಬಸವರಾಜ ಡೋಣುರ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿ ವಿಶ್ವವಿದ್ಯಾಲಯದ ಘನತೆಯನ್ನು ಮಣ್ಣು ಪಾಲುಮಾಡಿದ್ದಾರೆ. ಇದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಎಂದರು.

ಪ್ರಭಾರಿ ಕುಲಸಚಿವರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವ ಅವರು, ಹೊರಗುತ್ತಿಗೆ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲು ಒಬ್ಬರಿಂದ ಸುಮಾರು 50 ರಿಂದ 60 ಸಾವಿರ ರೂಪಾಯಿಗಳು ಪಡೆದಿರುತ್ತಾರೆ ಹಾಗೂ ಅವರ ಕಛೇರಿಗೆ ಬರುವ ಹಣಕಾಸಿನ ಕಡತಗಳಿಗೆ ಕನಿಷ್ಠ 20 % ಪ್ರತಿಶತ ಕಮೀಷನ್‌ ಕಡ್ಡಾಯವಾಗಿ ನೀಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ. ನೇಮಕವಾಗಿರುವ ಗುತ್ತಿಗೆ ಆಧಾರದ ನೌಕರಸ್ಥರಲ್ಲಿ ಯಾವುದೇ “ರೋಷ್ಟರ್” ಮಾನದಂಡ ಪಾಲನೆ ಮಾಡಿರುವುದಿಲ್ಲ. ಆದ್ದರಿಂದ ಆ ನೇಮಕಾತಿಯನ್ನು ಮರುಪರಿಶೀಲಿಸಿ ಮತ್ತೊಮ್ಮೆ ಎಲ್ಲಾ ಜನ ಸಮುದಾಯಕ್ಕೂ ನ್ಯಾಯ ಸಿಗುವ ನಿಟ್ಟಿನಲ್ಲಿ ಮರು ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.

ಸುನೀಲ ಮಾನ್ಪಡೆ ಮಾತನಾಡಿ, ಕಲ್ಯಾಣ ಕರ್ನಾಟಕ(ಹೈದ್ರಾಬಾದ್‌ ಕರ್ನಾಟಕ) ಭಾಗದಲ್ಲಿ ಪ್ರೋ. ನಂಜುಂಡಪ್ಪ ವರದಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಸಬೇಕೆಂದು, ಆ ಮೂಲಕ ಈ ಪ್ರದೇಶದ ಜನರಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಬೇಕೆಂದು ಇಲ್ಲಿನ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಸಾಹಿತಿಗಳು ರಾಜಕೀಯ ಮತ್ತು ಸೈದ್ಧಾಂತಿಕ ಸಂಬಂಧಗಳನ್ನು ಬದಿಗಿಟ್ಟು ಹೋರಾಟ ನಡೆಸಿದರು. ಇದರ ಪರಿಣಾಮ 2009ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ಉನ್ನತ ಸಾಧನೆ ಸಾಧಿಸುವ ತತ್ವ ಆದರ್ಶಗಳೊಂದಿಗೆ ಸ್ಥಾಪನೆಯಾಯಿತು. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೊಂಡು ಶೈಕ್ಷಣಿಕವಾಗಿ ಹಿಂದುಳಿದಿರುವ ಭಾಗವನ್ನು ಮುಂದೆ ಬರಲು ಸಹಕಾರಿಯಾಗುತ್ತದೆಂದು ಬಲವಾಗಿ ನಂಬಲಾಗಿತ್ತು. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಎಲ್ಲಾ ರೀತಿಯ ಮೂಲಸೌಕರ್ಯ ಇದ್ದರೂ ಸಹ ನೇಮಕಾತಿ, ಆಡಳಿತ ವ್ಯವಸ್ಥೆಯಲ್ಲಿ, ಕಾಯ್ದೆ, ನಿಯಮಾವಳಿಗಳು, ಮಾರ್ಗಸೂಚಿಗಳು ಗಾಳಿಗೆ ತೂರಿ ಮನಸೋಇಚ್ಛೆ ಭೋದಕ ಹುದ್ದೆಗಳಿಗೆ ಅಸಮರ್ಥ ಅಯೋಗ್ಯ ಅಭ್ಯರ್ಥಿಗಳನ್ನು ಸಿಯುಕೆ ನೇಮಕಾತಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಅಕ್ರಮ ಚಟುವಟಿಕೆಗಳು, ಭ್ರಷ್ಟಾಚಾರ ನಡೆದು ಶೈಕ್ಷಣಿಕ ಹಿನ್ನಡೆಯಾಗಿ ವಿಶ್ವವಿದ್ಯಾಲಯು ತನ್ನ ಶೈಕ್ಷಣಿಕ ಮೌಲ್ಯಗಳನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಅನಿಲ ಟೆಂಗ್ಳಿ ಮಾತನಾಡಿ, ಬಸವರಾಜ ಡೋಣುರ ಅವರು ತಮ್ಮ ನೇಮಕಾತಿ ಅಕ್ರಮವಾಗಿದ್ದರೂ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ಮೌಲ್ಯ ಆಧಾರಿತ ಶಿಕ್ಷಣ ಎಲ್ಲರೂ ಸಮಾನರೆಂಬ ಸಾಮರಸ್ಯದ ಧೋರಣೆ ಅನುಸರಿಸದೇ ಜಾತಿ ಧರ್ಮದ ಹೆಸರಿನಲ್ಲಿ ವಿಧ್ಯಾರ್ಥಿಗಳ ಮನಸಲ್ಲಿ ವಿಷಬೀಜ ಬಿತ್ತುವ ಮತ್ತು ಮೂಢನಂಬಿಕೆ, ಕಂಧಾಚಾರ, ಮಾಟ – ಮಂತ್ರ, ಮೇಲು – ಕೀಳು, ಹೆಣ್ಣು – ಗಂಡು ಎಂಬ ಬೇದಭಾವದ ಅಸಹ್ಯವಾದ ಚಟುವಟಿಕೆಗಳು ನಡೆಸುವ ಮೂಲಕ ಸಂವಿಧಾನಿಕ ಮೌಲ್ಯಕ್ಕೆ, ಈ ನೆಲದ ಸಂಸ್ಕೃತಿಗೆ ಮತ್ತು ವಿಶ್ವವಿದ್ಯಾಲಯದ ಮೌಲ್ಯಗಳಿಗೆ ಅಪಮಾನ ಮಾಡುತ್ತಿದ್ದಾರೆ. ಆದ್ದರಿಂದ ಪ್ರೋ. ಬಸವರಾಜ ಡೋಣುರ ಅವರನ್ನು ಸಹ ಪ್ರಾಧ್ಯಾಪಕ ಹುದ್ದೆಯಿಂದ ಕೂಡಲೇ ವಜಾಗೊಳಿಸಿ, ಭ್ರಷ್ಟಾಚಾರದ ಬಗೆಗಿನ ಎಲ್ಲವನ್ನೂ ತನಿಖೆ ಕೈಗೊಂಡು ವಿಶ್ವವಿದ್ಯಾಲಯಕ್ಕೆ ಆಗಿರುವ ನಷ್ಟವನ್ನು ಮರುಪಾವತಿ ಮಾಡಿಕೊಳ್ಳಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಲ್ಲದೆ, ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಲಾಗಿದ್ದು, ಪ್ರೊ. ಬಸವರಾಜ ಡೋಣೂರ ಅವರ ವಜಾಗೊಳ್ಳಬೇಕು. ಭ್ರಷ್ಟಾಚಾರ ತನಿಖೆ ಒಳಪಡಿಸಬೇಕು ಮತ್ತು  ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯು ಶೈಕ್ಷಣಿಕ ಬೆಳವಣಿಗೆ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಒಂದು ಮುಖ್ಯ ಉದ್ದೇಶವಾಗಿದ್ದು, ಅದರಂತೆ ಖಾಲಿ ಇರುವ ಭೋಧನ ಮತ್ತು ಭೋದಕೇತರ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ನೌಕರರಿಗೆ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಆದೇಶಗಳು ಕಡಿಮೆ ವೇತನ, ಇ.ಎಸ್.ಐ ಮತ್ತು ಇ.ಪಿ.ಎಫ್ . ನೀಡದಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂತೋಷ ಮೇಲ್ಮನಿ, ಅಶ್ವಿನಿ ಮದನಕರ, ಸುನೀಲ ಮಾನ್ಪಡೆ, ಅನಿಲ ಟೆಂಗ್ಳಿ, ದತ್ತರಾಜ್, ಬಾಬು ಎಸ್, ಧರ್ಮಣ್ಣ ಕೋಣೆಕರ್, ಅಕ್ಷತಾ ನೆಲ್ಲೂರ್, ದಿಲೀಪ್ ಕಾಯಂಕರ್ ಗೌತಮ, ಪ್ರವೀಣ ಮದಲೆ, ಆಕಾಶ ದೆಗಾಂವ್, ಸಚಿನ್ ಕೊಚ್ಚಿ, ಆಕಾಶ ಕಾಂಬ್ಳೆ, ಚಂದಪ್ಪ ಹರಿಜನ, ಹರ್ಷವರ್ಧನ ಇದ್ದರು.

Donate Janashakthi Media

Leave a Reply

Your email address will not be published. Required fields are marked *