ಬಿ ಎಸ್ ಯಡಿಯೂರಪ್ಪ ಕುಟುಂಬ-ಆಪ್ತರ ಭ್ರಷ್ಟಾಚಾರ ಆರೋಪ: ಮರು ವಿಚಾರಣೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಮರು ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿದೆ.

ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ,‌ ಶಶಿಧರ ಮರಡಿ, ಸಂಜಯ್​​ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್​.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಕೇಸ್ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಾಸಿಕ್ಯೂಷನ್​​ಗೆ ಪೂರ್ವಾನುಮತಿ ಸಿಗದಿದ್ದಕ್ಕೆ ಕೇಸ್ ವಜಾಗೊಂಡಿತ್ತು. ಸದ್ಯ ಇದೀಗ ಹೈಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ವಜಾಗೊಂಡಿರುವ ಆದೇಶ ರದ್ದುಪಡಿಸಿರುವ ಹಿನ್ನೆಲಯಲ್ಲಿ, ಪ್ರಕರಣ ಮರು ವಿಚಾರಣೆಗೆ ಆದೇಶಿಸಲಾಗಿದೆ.

ಮುಖ್ಯಮಂತ್ರಿಯಾಗಿದ್ದ ವೇಳೆ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಕ್ರಿಮಿನಲ್‌ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.

ಹೈಕೊರ್ಟಿಗೆ ದೂರುದಾರ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಅಮಿಕಸ್ ಕ್ಯೂರಿಯಾಗಿ ವೆಂಕಟೇಶ್ ಅರಬಟ್ಟಿ ವಾದಿಸಿದ್ದರು. ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ. ಕಾಲಾವಕಾಶದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಮಾನಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ತಿಳಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್​ನಲ್ಲಿ ಟಿ.ಜೆ.ಅಬ್ರಹಾಂ ವಿನಂತಿಸಿಕೊಂಡರು.  ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್​, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿದ್ದ ಹಿನ್ನೆಲೆ ಈಗಿನದನ್ನು ಪಿಐಎಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ತಿರಸ್ಕರಿಸಿತ್ತು.

ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ವಜಾ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲು ಅಥವಾ ತನಿಖೆಯ ವಿಚಾರವನ್ನು ವಿಶೇಷ ನ್ಯಾಯಾಲಯ ನಿರ್ಧರಿಸಲಿ ಎಂದು ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ, ಅರ್ಜಿಯನ್ನು ಮಾರ್ಪಡಿಸಿ ಸಂಬಂಧಿಸಿದ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಣೆ ಹಿನ್ನೆಲೆ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಹೀಗಾಗಿ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

Donate Janashakthi Media

Leave a Reply

Your email address will not be published. Required fields are marked *