2023ರ ಬಜೆಟ್ ಅಧಿವೇಶನದ ವೇಳೆಯಲ್ಲಿ “ಮಜ್ದೂರ್ ಸಂಘರ್ಷ ರ್ಯಾಲಿ 2.0”ಗೆ ಕರೆ
ಸೆಪ್ಟೆಂಬರ್ 5, ರಾಷ್ಟ್ರ ರಾಜಧಾನಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ರೈತರು, ಕಾರ್ಮಿಕರು ಮತ್ತು ಕೃಷಿ ಕೂಲಿಕಾರರ “ಮಜ್ದೂರ್-ಕಿಸಾನ್ ಅಧಿಕಾರ್ ಮಹಾಧಿವೇಶನ” ಎಂಬ ಬೃಹತ್ ಸಮಾವೇಶ ನಡೆಯಿತು. ಸಿಐಟಿಯು, ಎಐಕೆಎಸ್(ಕಿಸಾನ್ ಸಭಾ) ಮತ್ತು ಎಐಎಡಬ್ಲ್ಯುಯು(ಕೃಷಿ ಕೂಲಕಾರರ ಸಂಘ) 4 ವರ್ಷಗಳ ಹಿಂದೆ ಇದೇ ದಿನದಂದು(ಸೆಪ್ಟಂಬರ್ 5, 2018) ನಡೆದ ಐತಿಹಾಸಿಕ ‘ಮಜ್ದೂರ್ ಕಿಸಾನ್ ಸಂಘರ್ಷ್ ರ್ಯಾಲಿ’ಯ ವಾರ್ಷಿಕೋತ್ಸವದಂದು ಈ ಸಮಾವೇಶಕ್ಕೆ ಕರೆ ನೀಡಿದ್ದವು. ದೇಶದ ಎಲ್ಲೆಡೆಗಳಿಂದ 5000ಕ್ಕೂ ಹೆಚ್ಚು ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ಇದರಲ್ಲಿ ಭಾಗವಹಿಸಿದರು ಎಂದು ತಿಳಿದು ಬಂದಿದೆ.
ದೇಶದ ದುಡಿಯುವ ವರ್ಗದ ಈ ಮೂರು ವಿಭಾಗಗಳ ಸಂಘಟನೆಗಳ ಐಕ್ಯತೆಯನ್ನು ಬಲಪಡಿಸಲು ಮತ್ತು ಆಳುವ ಶಕ್ತಿಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನವಿರೋಧಿ ನವ ಉದಾರವಾದಿ ನೀತಿಗಳ ವಿರುದ್ಧ ಜಂಟಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಈ ರಾಷ್ಟ್ರೀಯ ಸಮಾವೇಶ ಸರ್ವಾನುಮತದಿಂದ ನಿರ್ಧರಿಸಿತು. ದೇಶಾದ್ಯಂತ ಕೋಟ್ಯಂತರ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ಪರಸ್ಪರರ ಸ್ವತಂತ್ರ ಹೋರಾಟಗಳಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲ ಮತ್ತು ಸೌಹಾರ್ದವನ್ನು ನೀಡಬೇಕು ಮತ್ತು ಬಲಿಷ್ಠ ಜಂಟಿ ಕಾರ್ಯಾಚರಣೆಗಳನ್ನು ಕಟ್ಟಬೇಕು ಎಂದು ಸಮಾವೇಶವು ಕರೆ ನೀಡಿತು.
2023ರ ಸಂಸತ್ತಿನ ಬಜೆಟ್ ಅಧಿವೇಶನದ ವೇಳೆಯಲ್ಲಿ ‘ಮಜ್ದೂರ್ ಸಂಘರ್ಷ್ ರ್ಯಾಲಿಯ ಎರಡನೇ ಆವೃತ್ತಿಗೆ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ಸಮರಶೀಲ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸಬೇಕು ಎಂದೂ ಈ ಜಂಟಿ ಸಮಾವೇಶವು ನಿರ್ಧರಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಪತ್ತು ಉತ್ಪಾದಿಸುವ ವರ್ಗಗಳ ಅತಿ ದೊಡ್ಡ ಅಣಿನೆರಿಕೆಗೆ ರಾಷ್ಟ್ರೀಯ ರಾಜಧಾನಿ ಸಾಕ್ಷಿಯಾಗಲಿದೆ ಎಂದು ಸಮಾವೇಶವು ಪ್ರತಿಪಾದಿಸಿತು. ನವ ಉದಾರವಾದಿ ನೀತಿಯ ಆಕ್ರಮಣಗಳ ವಿರುದ್ಧ ನೇರ ಪ್ರತಿರೋಧದ ಹೋರಾಟಗಳನ್ನು ಹರಿಯ ಬಿಡಲಿಕ್ಕಾಗಿ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಿದ್ಧಗೊಳಿಸಲು ಅಕ್ಟೋಬರ್ 2022 ರಿಂದ ಫೆಬ್ರವರಿ 2023 ರವರೆಗೆ ವ್ಯಾಪಕ ಜಂಟಿ ಅಭಿಯಾನಗಳನ್ನು ನಡೆಸಲು ಈ ಜಂಟಿ ಸಮಾವೇಶವು ಸರ್ವಾನುಮತದಿಂದ ನಿರ್ಧರಿಸಿತು.
ಸಮಾವೇಶದ ಅಧ್ಯಕ್ಷ ಮಂಡಳಿಯಲ್ಲಿ ಸಿಐಟಿಯು ಅಧ್ಯಕ್ಷೆ ಕೆ ಹೇಮಲತಾ, ಎಐಕೆಎಸ್ ಅಧ್ಯಕ್ಷ ಅಶೋಕ್ ಢವಳೆ ಮತ್ತು ಎಐಎಡಬ್ಲ್ಯುಯು ಅಧ್ಯಕ್ಷ ಎ ವಿಜಯರಾಘವನ್ ಇದ್ದರು. ಸಿಐಟಿಯುನ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಮತ್ತು ಎಐಎಡಬ್ಲ್ಯುಯು ಪ್ರಧಾನ ಕಾರ್ಯದರ್ಶಿ ಬಿ ವೆಂಕಟ್ ಈ ಮೂರು ಸಂಘಟನೆಗಳ ಜಂಟಿ ಘೋಷಣೆಯನ್ನು ಬೆಂಬಲಿಸಿ ಜಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಬ್ಯಾಂಕ್, ವಿಮೆ, ಬಿಎಸ್ಎನ್ಎಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಒಕ್ಕೂಟಗಳು ಮತ್ತು ಇತರ ರೈತರು ಮತ್ತು ಕೃಷಿ ಸಂಘಟನೆಗಳ ಮುಖಂಡರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
“ಆರೆಸ್ಸೆಸ್ನಿಂದ ನಿಯಂತ್ರಿಸಲ್ಪಡುತ್ತಿರುವ ಈಗಿನ ಮೋದಿ ನೇತೃತ್ವದ ಬಿಜೆಪಿ ಆಡಳಿತವು ಕಳೆದ 75 ವರ್ಷಗಳಲ್ಲಿ ನಾವು, ಜನತೆ ನಮ್ಮ ಶ್ರಮದಿಂದ ಇಟ್ಟಿಗೆ-ಇಟ್ಟಿಗೆಗಳನ್ನು ಜೋಡಿಸಿ ನಿರ್ಮಿಸಿದ್ದನ್ನು ಮತ್ತು ನಮ್ಮ ಹೋರಾಟ ಮತ್ತು ತ್ಯಾಗದಿಂದ ನಾವು ಸಾಧಿಸಿದ್ದನ್ನು ನಾಶಪಡಿಸುತ್ತಿದೆ” ಎಂದು ಗಮನಿಸಿದ ಜಂಟಿ ಸಮಾವೇಶವು ಬ್ರಿಟೀಷ್ ವಸಾಹತುಶಾಹಿಯಿಂದ ಮಾತ್ರವಲ್ಲದೆ, ವರ್ಗ, ಜಾತಿ, ಪಂಥ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಎಲ್ಲಾ ರೀತಿಯ ದಬ್ಬಾಳಿಕೆ ಮತ್ತು ತಾರತಮ್ಯಗಳಿಂದ ಸ್ವಾತಂತ್ರ್ಯದ ಮತ್ತು ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕಬಹುದಾದ ದೇಶವನ್ನು ಕಟ್ಟುವ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ಅದು ತುಳಿದು ಹಾಕುತ್ತಿದೆ ಎಂದು ಹೇಳಿದೆ.
“ಇಂದಿನ ಹೋರಾಟವು ನಮ್ಮ ಜೀವನೋಪಾಯ ಮತ್ತು ಜೀವನ ಮತ್ತು ಕೆಲಸದ ಪರಿಸ್ಥಿತಿಗಳ ತಕ್ಷಣದ ಬೇಡಿಕೆಗಳಿಗಾಗಿ ಮಾತ್ರವಲ್ಲದೆ ದೇಶದ ಆರ್ಥಿಕತೆಯನ್ನು ಉಳಿಸಲು, ನಮ್ಮ ಸಮಾಜದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಈ ಕೋಮುವಾದಿ ಮತ್ತು ಸರ್ವಾಧಿಕಾರಿ ಬಿಜೆಪಿ-ಆರ್ಎಸ್ಎಸ್ ಆಳ್ವಿಕೆಯಿಂದ ಉಳಿಸಲು ನಡೆಸುವ ಹೋರಾಟವಾಗಿದೆ” ಎಂದು ಪ್ರತಿಪಾದಿಸಿದ ಸಮಾವೇಶ, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡಲು ಮತ್ತು ಬಿಜೆಪಿ-ಆರ್ಎಸ್ಎಸ್ನ ನವ-ಉದಾರವಾದಿ, ಕೋಮುವಾದಿ ಮತ್ತು ನಿರಂಕುಶ ಆಳ್ವಿಕೆಯ ಸೋಲಿಗೆ ಅವಿರತವಾಗಿ ಶ್ರಮಿಸಲು ದೇಶಾದ್ಯಂತ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ಒಗ್ಗಟ್ಟಿನಿಂದ ಎದ್ದು ನಿಲ್ಲಬೇಕೆಂದು ಕರೆ ನೀಡಿದೆ.
ಸಮಾವೇಶವು ಎಲ್ಲಾ ಕಾರ್ಮಿಕರಿಗೆ 26,000 ರೂ. ಕನಿಷ್ಠ ವೇತನ 10,000 ರೂ. ಪಿಂಚಣಿ, ಖಾತರಿ ಖರೀದಿಯೊಂದಿಗೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಸಿ2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆಯ ಗ್ಯಾರಂಟಿ, ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ 2020 ರ ರದ್ಧತಿ, ಮನರೇಗ ಸ್ಕೀಮಿನ ಅಡಿಯಲ್ಲಿ 200 ದಿನಗಳ ಕೆಲಸ ಮತ್ತು ದಿನಕ್ಕೆ 600ರೂ.ಕೂಲಿ ಒದಗಿಸುವುದು ಮತ್ತು ನಗರ ಪ್ರದೇಶಗಳಿಗೆ ಈ ಯೋಜನೆಯ ವಿಸ್ತರಣೆ ಮತ್ತು ಬಡ ಮತ್ತು ಮಧ್ಯಮ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಒಂದು ಬಾರಿ ಸಾಲ ಮನ್ನಾ ಮುಂತಾದ ಈ ದೇಶದ ದುಡಿಯುವ ಜನರ ಮೂಲಭೂತ ಬೇಡಿಕೆಗಳನ್ನು ಪುನರುಚ್ಚರಿಸಿತು ಹಾಗೂ ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣವನ್ನು ನಿಲ್ಲಿಸಬೇಕು, ರಾಷ್ಟ್ರೀಯ ಸೂತ್ತುಗಳ ನಗದೀಕರಣ ಯೋಜನೆಯನ್ನು, ಮತ್ತು ಅಗ್ನಿಪಥ್ ಕ್ರಮವನ್ನು ರದ್ದುಗೊಳಿಸಬೇಕು, ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಮತ್ತು ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಸಾರ್ವತ್ರಿಕಗೊಳಿಸಬೇಕು ಹಾಗೂ ಸೂಪರ್ ಶ್ರೀಮಂತರ ಮೇಲೆ ತರಿಗೆ ಹಾಕಬೇಕು ಎಂದು ಆಗ್ರಹಿಸಿತು.
ಈ ಬೇಡಿಕೆಗಳನ್ನು ದೇಶಾದ್ಯಂತ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ನಡುವೆ ಕೊಂಡೊಯ್ಯಲು, ಅಕ್ಟೋಬರ್ 2022 ರಿಂದ ಫೆಬ್ರವರಿ 2023 ರವರೆಗೆ ತೀವ್ರ ಮತ್ತು ವ್ಯಾಪಕವಾದ ಅಭಿಯಾನವನ್ನು ಕೈಗೊಳ್ಳಬೇಕೆಂದು ಈ ಸಮಾವೇಶವು ಎಲ್ಲಾ ಮೂರು ಸಂಘಟನೆಗಳ ಕೆಳ ಹಂತದವರೆಗಿನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ. ರಾಜ್ಯ ಮತ್ತು ಜಿಲ್ಲಾ ಜಂಟಿ ಸಭೆಗಳಲ್ಲಿ ಯೋಜಿಸಿದಂತೆ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಸ್ಥಳೀಯ ಬೇಡಿಕೆಗಳು ಸೇರಿದಂತೆ ದುಡಿಯುವ ಜನವಿಭಾಗಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಕರಪತ್ರಗಳು, ಭಿತ್ತಿಪತ್ರಗಳು, ಗೋಡೆ ಬರಹ, ಗುಂಪು ಸಭೆಗಳು, ಜಾಥಾಗಳು, ಮೆರವಣಿಗೆಗಳು ಇತ್ಯಾದಿಗಳ ಮೂಲಕ, ತಲುಪದವರನ್ನು ತಲುಪುವ ಗುರಿಯನ್ನು ಇಟ್ಟುಕೊಳ್ಳಬೇಕೆಂದೂ ಅದು ಕರೆ ನೀಡಿದೆ.
“ಭಾರತವನ್ನು ಉಳಿಸಲು ಮತ್ತು ಜನತೆಯನ್ನು ಉಳಿಸಲು” ಈ ರಾಷ್ಟ್ರವ್ಯಾಪಿ ಪ್ರಚಾರಾಂದೋಲನ ಮತ್ತು ಕಾರ್ಯಕ್ರಮಗಳಿಗೆ ಬೆಂಬಲ ಮತ್ತು ಸೌಹಾರ್ದವನ್ನು ನೀಡಬೇಕು ಎಂದು ದೇಶದ ಎಲ್ಲಾ ಪ್ರಗತಿಪರ, ಪ್ರಜಾಪ್ರಭುತ್ವವಾದಿ ಮತ್ತು ದೇಶಪ್ರೇಮಿ ಜನರಿಗೂ ಈ ಸಮಾವೇಶ ಕರೆ ನೀಡಿದೆ.