ತಿರುವನಂತಪುರ: ತಿರುವನಂತಪುರ ನಗರ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳ ಸಿಪಿಐ(ಎಂ) ಶಾಸಕ ಕೆ ಎಂ ಸಚಿನ್ ದೇವ್ ಸರಳ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಪಸ್ಥಿತರಿದ್ದರು.
ಕೇರಳದ ಆರ್ಯ ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದರೆ, ಸಚಿನ್ ದೇವ್ ಅತ್ಯಂತ ಕಿರಿಯ ಶಾಸಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರಿಬ್ಬರೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಅವರ ಕುಟುಂಬಗಳು ಕೆಲವು ತಿಂಗಳುಗಳ ಹಿಂದೆ ಮದುವೆಯನ್ನು ನಿಶ್ಚಯಿಸಿದ್ದಾರೆ.
ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಳಗೊಂಡು, ಸಿಪಿಐ(ಎಂ) ನಾಯಕರು ಮತ್ತು ಆರ್ಯ ಮತ್ತು ಸಚಿನ್ ದೇವ್ ಅವರ ನಿಕಟ ಸಂಬಂಧಿಗಳು ಉಪಸ್ಥಿತರಿದ್ದರು. ಜೊತೆಗೆ ತಮ್ಮ ಮದುವೆಗೆ ಉಡುಗೊರೆಗಳನ್ನು ನೀಡಲು ಬಯಸುವ ಯಾರಾದರೂ ಯಾವುದಾದರೂ ದತ್ತಿ ಚಟುವಟಿಕೆಗಳಿಗೆ ಕೊಡುಗೆ ನೀಡಬಹುದು ಎಂದು ದಂಪತಿಗಳು ಮನವಿ ಮಾಡಿದರು.
ಆರ್ಯ ರಾಜೇಂದ್ರನ್ ಮತ್ತು ಕೆ ಎಂ ಸಚಿಂದೇವ್ ವಿವಾಹ ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಅವರ ತಂದೆ ರಾಜೇಂದ್ರನ್ ಅವರು ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್ಐಸಿ ಏಜೆಂಟ್ ಆಗಿದ್ದಾರೆ.
ಆರ್ಯ ತಿರುವನಂತಪುರಂ ಮೂಲದವರಾಗಿದ್ದು, ಸಚಿನ್ ದೇವ್ ಕೋಯಿಕ್ಕೋಡ್ ಮೂಲದವರು. ಕಳೆದ ಸ್ಥಳೀಯ ಚುನಾವಣೆಯಲ್ಲಿ ಕೇರಳ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಅದರ ಮೂಲಕ ಅಧಿಕಾರಕ್ಕೆ ಬಂದವರು ಆರ್ಯ ರಾಜೇಂದ್ರನ್. ಆಲ್ ಸೇಂಟ್ಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ನಡೆಸುತ್ತಿರುವಾಗಲೇ ಮೇಯರ್ ಆಗಿ ನೇಮಕಗೊಂಡರು. ಡಿಸೆಂಬರ್ 2020ರಲ್ಲಿ, 21ನೇ ವಯಸ್ಸಿನ ಆರ್ಯ ರಾಜೇಂದ್ರನ್ ಕೇರಳದ ತಿರುವನಂತಪುರಂ ಕಾರ್ಪೊರೇಶನ್ನ ಉಸ್ತುವಾರಿ ವಹಿಸಿಕೊಂಡಾಗ, ಅವರು ಭಾರತದ ಅತ್ಯಂತ ಕಿರಿಯ ಮೇಯರ್ ಎಂಬ ಹೆಸರು ಪಡೆದಿದ್ದಾರೆ.
28 ಹರೆಯದ ಸಚಿನ್ ದೇವ್ ಇಂಗ್ಲಿಷ್ ಸಾಹಿತ್ಯ ಪದವೀಧರರಾಗಿದ್ದಾರೆ ಮತ್ತು ಅವರು ಎಲ್ಎಲ್ಬಿ ಪೂರ್ಣಗೊಳಿಸಿದ್ದಾರೆ. ಇವರು ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಆಗಿದ್ದಾರೆ. ಅವರು ಭಾರತೀಯ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ. ಜೊತೆಗೆ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಆಗಿದ್ದಾರೆ.
2020ರ ತಿರುವನಂತಪುರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಟ್ಟು 100 ವಾರ್ಡ್ಗಳಲ್ಲಿ 52 ವಾರ್ಡ್ಗಳನ್ನು ಸಿಪಿಐ(ಎಂ) ಪಕ್ಷ ಗೆದ್ದಿದೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳುಚೇರಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದ ಸಚಿನ್ ದೇವ್ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸದ್ಯ ದೇಶದ ಯುವ ಮೇಯರ್ ಮತ್ತು ಕೇರಳ ವಿಧಾನಸಭೆಯ ಯುವ ಶಾಸಕ ಇಬ್ಬರು ಮದುವೆಯಾಗಿದ್ದಾರೆ.
ಆರ್ಯ ಮತ್ತು ಸಚಿನ್ ದೇವ್ ಇಬ್ಬರೂ ಚಿಕ್ಕ ವಯಸ್ಸಿನಿಂದಲೂ ಭಾರತೀಯ ವಿದ್ಯಾರ್ಥಿ ಫೆಡರೇಷನ್ನಲ್ಲಿ ಬೆಳೆದವರು. ಹಾಗಾಗಿ ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಇಬ್ಬರೂ ಒಂದೇ ತತ್ವವನ್ನು ಹೊಂದಿದ್ದಾರೆಂದು ತಿಳಿದಿದೆ. ಇದರಿಂದಾಗಿ ಇಬ್ಬರನ್ನೂ ಜೋಡಿ ಮಾಡಲು ಅವರ ಮನೆಯವರು ನಿರ್ಧರಿಸಿದರು.