ಬಳ್ಳಾರಿ: ಜಿಲ್ಲೆಯ ಸಿರವಾರ ಗ್ರಾಮದ ಶೇಖರ್ ಹಾಗೂ ಗಂಗಮ್ಮಾ ಅವರ ಕಿರಿಯ ಮಗ 10 ವರ್ಷದ ಭಾಸ್ಕರ್ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದನು. ಕೆಲ ಸುಳ್ಳು ಸುದ್ದಿಗಳನ್ನು ನಂಬಿದ ಇಲ್ಲಿನ ಜನರು ಸತ್ತವವನ್ನು ಬದುಕಿಸಲು ವಿಲಕ್ಷಣ ಪ್ರಯೋಗ ಮಾಡಿದ ಘಟನೆ ನಡೆದಿದೆ.
ಆಧುನೀಕರಣ ಎಷ್ಟೇ ಮುಂದುವರೆದರೂ ಜನರು ಮೂಢನಂಬಿಕೆಗೆ ಬಲಿಯಾಗುವುದು ತಪ್ಪುತ್ತಿಲ್ಲ. ಮೌಢ್ಯತೆ, ಮೂಢನಂಬಿಕೆ ಎನ್ನುವುದು ಇನ್ನೂ ಜೀವಂತವಾಗಿಯೇ ಇದೆ. ಕೆಲವರು ಜನರನ್ನು ದಾರಿ ತಪ್ಪಿಸಲೆಂದೇ ಹಲವು ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಾರೆ.
ಈಜು ಬಾರದೆ ನೀರಿನಲ್ಲಿ ಮುಳುಗಿದ ಬಾಲಕ ಹೊಂಡದಲ್ಲಿ ಬಿದ್ದು ಮೃತಪಟ್ಟನು. ತಮ್ಮ ಮಗನನ್ನು ಉಪ್ಪು ಹಾಕಿ ಮುಚ್ಚಿ ಮಲಗಿಸಿದರೆ ಆತ ಬದುಕಿ ಬರುತ್ತಾನೆ ಎಂಬ ಮೌಢ್ಯಕ್ಕೆ ಬಲಿಯಾದ ಜನ ಎಂಟು ತಾಸುಗಳ ಕಾಲ ಮೃತದೇಹವನ್ನು ಉಪ್ಪಿನಲ್ಲಿ ಮಲಗಿಸಿದ್ದಾರೆ.
ಪೋಷಕರು ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತದೇಹದ ಶಿರ ಭಾಗವನ್ನು ಬಿಟ್ಟು ಉಳಿದ ದೇಹಕ್ಕೆ ಉಪ್ಪು ಸುರಿದಿದ್ದಾರೆ. ಮಗುವಿನ ಶವವನ್ನು ಸತತ ಎಂಟು ಗಂಟೆಗಳ ಕಾಲ ಉಪ್ಪಿನಲ್ಲಿಟ್ಟು ಮತ್ತೆ ಬದುಕುತ್ತಾನೆ ಎಂದು ಕಾದು ಕುಳಿತಿದ್ದರು. ಆತ ಬದುಕಿ ಬರಲಿಲ್ಲ. ಇದರಿಂದ ತಮ್ಮ ಮೌಢ್ಯತೆ ಅರಿತ ಪೋಷಕರು ದೇಹವನ್ನು ಕೊನೆಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಸುದ್ದಿಗಳನ್ನು ನಂಬಿದ ಇಲ್ಲಿನ ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸತ್ತವರನ್ನು 2 ಗಂಟೆಗಳ ಒಳಗೆ ಉಪ್ಪಿನಲ್ಲಿ ಹುದುಗಿಸಿಟ್ಟರೆ, ಅವರು ಮತ್ತೆ ಬದುಕುತ್ತಾರೆ ಎಂಬುದನ್ನು ನಂಬಿ ಅದೇ ರೀತಿ ಮಾಡಲು ಮುಂದಾಗಿದ್ದಾರೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಬರುವ ಅಸಂಬದ್ಧ ಸುದ್ದಿಗಳನ್ನು ನಂಬುವುದು ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಇಂತಹ ಮೂಢನಂಬಿಕೆಗಳಿಗೆ ಬಲಿಯಾಗದೆ ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.