ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಹಾಗೂ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಅಂತಿಮ ಜಾಮೀನು ಅರ್ಜಿಯ ವಿಚಾರಕ್ಕೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಮಾಡಬೇಕೆಂದು ತಿಳಿಸಲಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ತೀಸ್ತಾ ಸೆಟಲ್ವಾಡ್ ಅವರನ್ನು ಸ್ಥಳೀಯ ಶ್ಯೂರಿಟಿಗೆ ಒತ್ತಾಯಿಸದೆ ಶನಿವಾರದೊಳಗೆ ಬಿಡುಗಡೆ ಮಾಡಬೇಕೆಂದು ಆದೇಶಿಸಲಾಗಿದ್ದು, ಅವರು ತನ್ನ ಪಾಸ್ಪೋರ್ಟ್ ಅನ್ನು ಒಪ್ಪಿಸಬೇಕು ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿದೆ. ಜಾಮೀನು ಕೋರಿ ಆಕೆಯ ಮೇಲ್ಮನವಿಯು ಹೈಕೋರ್ಟ್ನಲ್ಲಿ ಬಾಕಿ ಇರುವ ಸಂದರ್ಭದಲ್ಲಿ ಮಧ್ಯಂತರ ಜಾಮೀನನ್ನು ಪರಿಗಣಿಸುವ ದೃಷ್ಟಿಕೋನದಿಂದ ಈ ಆದೇಶವನ್ನು ಮಾಡಲಾಗಿದೆ ಮತ್ತು ಅದು ಪ್ರಕರಣದ ಅರ್ಹತೆಯ ಅಭಿವ್ಯಕ್ತಿಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನೆನ್ನೆಯಷ್ಟೇ ಸುಪ್ರೀಂ ಕೋರ್ಟ್ ನ್ಯಾಯಪೀಠ, ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ವಿಚಾರಕ್ಕೆ ಸಂಬಂಧಿಸಿ ಗುಜರಾತ್ ಉಚ್ಚ ನ್ಯಾಯಾಲಯವು ವಿಳಂಬಗೊಳಿಸಿದ ಕಾರಣವನ್ನು ತಿಳಿಯಲು ಬಯಸಿತು.
ತೀಸ್ತಾ ಸೆಟಲ್ವಾಡ್ ಅವರನ್ನು ಎರಡು ತಿಂಗಳಿಗೂ ಹೆಚ್ಚು ಕಾಲ ಗುಜರಾತ್ನಲ್ಲಿ ಬಂಧನದಲ್ಲಿ ಇರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಆರು ವಾರಗಳ ಕಾಲ ಜಾಮೀನು ಅರ್ಜಿ ವಿಚಾರಣೆ ಮುಂಡೂಡಿದ ಬಗ್ಗೆ ಗುಜರಾತ್ ಹೈಕೋರ್ಟ್ಗೆ ಪ್ರಶ್ನೆ ಮಾಡಿತು. ಅಲ್ಲದೆ, ಈ ಪ್ರಕರಣದಲ್ಲಿ ಜಾಮೀನು ನೀಡಲಾಗದ ಯಾವುದೇ ಅಪರಾಧವಿಲ್ಲ ಎಂದಿತು. ಅದು ಅಲ್ಲದೆ, ಮಹಿಳೆಗೆ ಎಂದು ಗಮನಿಸಿದೆ ನ್ಯಾಯಾಲಯ ತೀಸ್ತಾ ಸೆಟಲ್ವಾಡ್ ಎರಡು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರೂ ಯಾವುದೇ ಆರೋಪಪಟ್ಟಿ ಸಲ್ಲಿಸದಿರುವ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
ಇಷ್ಟು ದೀರ್ಘಕಾಲ ವಿಚಾರಣೆ ಮುಂದೂಡಿರುವುದು ಏಕೆ? ಗುಜರಾತ್ ಹೈಕೋರ್ಟ್ನಲ್ಲಿ ಅದು ಪ್ರಮಾಣಿತ ಅಭ್ಯಾಸವೇ?. ಅಂತಹ ಪ್ರಕರಣದಲ್ಲಿ ಮಹಿಳೆಯೊಬ್ಬರು ಭಾಗಿಯಾಗಿದ್ದರೇ ಹೈಕೋರ್ಟ್ ಹೀಗೆ ಜಾಮೀನು ಅರ್ಜಿಯನ್ನು ಮುಂದೂಡಿದ ಉದಾಹರಣೆಗಳನ್ನು ನಮಗೆ ನೀಡಿ” ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದರು.
“ಈ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ ಮತ್ತು ಭಯೋತ್ಪಾದನೆ ತಡೆ ಕಾಯ್ದೆಯಂತಹ ಜಾಮೀನು ನೀಡಲಾಗದ ಪ್ರಕರಣಗಳನ್ನು ಹಾಕುವ ಯಾವುದೇ ಅಪರಾಧವಿಲ್ಲ. ಇವು ಸಾಮಾನ್ಯ ಅಪರಾಧಗಳು ಮತ್ತು ಈ ಮಹಿಳೆಯನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು. ಆಕೆ ಅದಕ್ಕೆ ಅರ್ಹರು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಜೂನ್ 25 ರಿಂದ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲಾಗಿತ್ತು.