ಮಠಗಳನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕು: ರಂಗಕರ್ಮಿ ಎಚ್‌.ಜನಾರ್ಧನ್‌

ಮೈಸೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಬಂಧಿತ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಂಗಕರ್ಮಿ ಎಚ್‌. ಜನಾರ್ಧನ್‌ ಅವರು, ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಆಗುವಂತೆ ನಿಷ್ಪಕ್ಷ್ಯಪಾತ ತನಿಖೆ ನಡೆಸಬೇಕು. ಅಕ್ಷರ ದಾಸೋಹ ನೀಡುವ ನೆಪದಲ್ಲಿ ದೌರ್ಜನ್ಯ ನಡೆಸುತ್ತಿರುವ ಮಠಗಳನ್ನು ಸರ್ಕಾರವು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಮೈಸೂರು ನಗರದ ಬಸವೇಶ್ವರ ಪ್ರತಿಮೆ ಎದುರು ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಂದುವರೆದು ಮಾತನಾಡಿದ ಎಚ್.ಜನಾರ್ಧನ್‌ ಅವರು, ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡಬೇಕಾದ ಮಠಗಳು ಅನೈತಿಕ ಹಾದಿಯತ್ತ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಈ ಪ್ರಕರಣದಲ್ಲಿ ಆರೋಪಿಸಲಾಗಿರುವ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನ್ಯಾಯಾಂಗ ತನಿಖೆ ಆಗಿ ತ್ವರಿತವಾಗಿ ಶಿಕ್ಷೆಯಾಗಬೇಕು ಎಂದರು.

ಚಿಂತಕ ಪ.ಮಲ್ಲೇಶ್‌ ಮಾತನಾಡಿ, ‘ಈ ಪ್ರಕರಣದಲ್ಲಿ ಮುರುಘಾ ಶರಣರ ವಿರುದ್ಧ ಗಂಭೀರವಾದ ಆರೋಪಗಳು ಕಣ್ಣೆದುರಿಗೆ ಇದ್ದರೂ ಸಹ ವಿರೋಧ ಪಕ್ಷಗಳು ಮೌನವಹಿಸಿರುವುದೇಕೆ? ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಪ್ರಭಾವಿಗಳ ಬಗ್ಗೆ ಮಾತನಾಡುತ್ತಿಲ್ಲವೇ? ತನಿಖೆ ವಿಳಂಬವಾಗಿ ಆರಂಭವಾಗಿರುವುದು ಅಕ್ಷಮ್ಯ’ ಎಂದರು.

ಹೋರಾಟಗಾರ್ತಿ ರತಿರಾವ್ ಮಾತನಾಡಿ ‘ಶೈಕ್ಷಣಿಕ ಉದ್ದೇಶಕ್ಕಾಗಿ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ಬಾಲಕಿಯರಿಗೆ ರಕ್ಷಣೆ ಇಲ್ಲವಾಗಿದೆ. ಬಾಲಕಿಯರ ಹಾಸ್ಟೆಲ್‌ಗಳಿಗೆ ಭದ್ರತೆ ಇಲ್ಲವಾಗಿದೆ. ಸಾವಿರಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಪೋಕ್ಸೊ ಪ್ರಕರಣ ದಾಖಲಾದ ವಾರದ ಬಳಿಕ ಆರೋಪಿ ಬಂಧನವಾಗಿರುವುದನ್ನು ಗಮನಿಸಿದರೆ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಹೊರೆಯಾಲ ದೊರೆಸ್ವಾಮಿ, ಜಿ.‍ಪಿ.ಬಸವರಾಜು, ರೈತಸಂಘದ ಹೊಸಕೋಟೆ ಬಸವರಾಜು, ಸ್ವರಾಜ್‌ ಇಂಡಿಯಾದ ಉಗ್ರ ನಗರಸಿಂಹೇಗೌಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜ್‌, ಲೇಖಕ ನಾ.ದಿವಾಕರ, ಅಖಿಲ ಭಾರತ ಮಹಿಳಾ ಒಕ್ಕೂಟದ ಮುಖಂಡರು ಸೀಮಾ, ಸಂಧ್ಯಾ, ಪಂಡಿತಾರಾಧ್ಯ, ದಸಂಸದ ಶಂಭುಲಿಂಗಸ್ವಾಮಿ, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ವಿಜಯ್‌ಕುಮಾರ್‌, ಸಂಗಯ್ಯ, ಮರಿದೇವಯ್ಯ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *